ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಐ: ಪಾಲಿಸಬೇಕಾದ ಮುನ್ನೆಚ್ಚರಿಕೆ

ಆಸ್ಪತ್ರೆಗಳಲ್ಲಿನ ಎಂಆರ್‌ಐ ಯಂತ್ರದ ಗುಣವಿಶೇಷ ಮತ್ತು ಅದರ ಕಾರ್ಯವಿಧಾನದ ವಿವರಣೆ
Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈನ ಆಸ್ಪತ್ರೆಯೊಂದರಲ್ಲಿ ಈಚೆಗೆ ಎಂಆರ್‌ಐ (ಮ್ಯಾಗ್ನೆಟಿಕ್‌ ರೆಸನನ್ಸ್‌ ಇಮೇಜಿಂಗ್‌) ಯಂತ್ರ ಇರುವ ಕೊಠಡಿಗೆ ರಾಜೇಶ್‌ ಮರು ಎಂಬುವರು ಹೋದಾಗ ಯಂತ್ರ ಅವರನ್ನು ಸೆಳೆದುಕೊಂಡಿತು. ಅದರಿಂದ ಅವರು ಮೃತಪಟ್ಟ ಘಟನೆ ದೇಶದಾದ್ಯಂತ ಆತಂಕ ಸೃಷ್ಟಿಸಿದೆ. ಯಂತ್ರವು ಸೆಳೆದುಕೊಂಡ ರಭಸಕ್ಕೆ ಸಿಲಿಂಡರ್‌ನ ಕೊಳವೆ ತುಂಡಾಯಿತು. ದ್ರವರೂಪದ ಆಮ್ಲಜನಕ ಸೋರಿಕೆಯಾಗಿದೆ. ದ್ರವ ಆಮ್ಲಜನಕವನ್ನು ಉಸಿರಾಡಿದ್ದರಿಂದ ರಾಜೇಶ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.ಈ ದುರದೃಷ್ಟಕರ ಘಟನೆಯ ನಂತರ, ಎಂಆರ್‌ಐ ಯಂತ್ರದ ಗುಣಲಕ್ಷಣಗಳೇನು? ಪಾಲಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬ ಬಗ್ಗೆ ಸಂಗ್ರಹಿಸಿದ ವಿವರಗಳು ಇಲ್ಲಿವೆ.

ಎಂಆರ್‌ಐ ಎಂದರೇನು?

ಮ್ಯಾಗ್ನೆಟಿಕ್‌ ರೆಸನನ್ಸ್‌ ಇಮೇಜಿಂಗ್‌ (ಎಂಆರ್‌ಐ) ಅಂದರೆ ಅಯಸ್ಕಾಂತೀಯ ಅಲೆಗಳನ್ನು ಬಳಸಿ ದೇಹದೊಳಗಿನ ಅಂಗಾಂಶದ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ಅಂಗಾಂಶಗಳಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಸಮಸ್ಯೆಗಳಿದ್ದರೂ ಅದನ್ನು ಎಂಆರ್‌ಐ ಸ್ಕ್ಯಾನಿಂಗ್‌ ಮೂಲಕ ಪತ್ತೆ ಮಾಡಬಹುದು.

ಎಂಆರ್‌ಐ ಇಮೇಜಿಂಗ್‌ ಸುರಕ್ಷಿತ ವಿಧಾನವೇ?

ಹೌದು, ಮಾನವ ದೇಹದೊಳಗಿನ ಅಂಗಾಂಶಕ್ಕೆ (tissue) ಅಯಸ್ಕಾಂತೀಯ ಕ್ಷೇತ್ರದಿಂದ (magnetic field) ತೊಂದರೆ ಇಲ್ಲ. ಇತರ ಕಿರಣಗಳಿಗಿಂತ ಸುರಕ್ಷಿತ ಎಂಬುದು ತಜ್ಞರ ಅಭಿಪ್ರಾಯ. ಯಂತ್ರ ಆನ್‌ ಮಾಡಿ ಇಟ್ಟಾಗ ಅಲ್ಲಿಗೆ ಯಾವುದೇ ಬಗೆಯ ಲೋಹ ಒಯ್ಯುವುದು ಅಪಾಯಕಾರಿ. ಹೃದಯದಲ್ಲಿ ಪೇಸ್‌ಮೇಕರ್‌ ಅಥವಾ ದೇಹದ ಯಾವುದೇ ಭಾಗದಲ್ಲಿ ಲೋಹದ ರಾಡ್‌ ಅಳವಡಿಕೆ ಮಾಡಿದ್ದರೆ, ಅಂತಹವರಿಗೆ ಎಂಆರ್‌ಐ ಸ್ಕ್ಯಾನಿಂಗ್‌ ಮಾಡುವುದಿಲ್ಲ.

ಎಂಆರ್‌ಐ ಹೇಗೆ ಕಾರ್ಯನಿರ್ವಹಿಸುತ್ತದೆ?

ಯಂತ್ರದಲ್ಲಿ ಅತ್ಯಂತ ಶಕ್ತಿಶಾಲಿ ಅಯಸ್ಕಾಂತಗಳನ್ನು ಅಳವಡಿಸಲಾಗಿರುತ್ತದೆ. ಇದರ ಮೂಲಕ ಅಯಸ್ಕಾಂತೀಯ ಕ್ಷೇತ್ರ ಸೃಷ್ಟಿಸಲಾಗುತ್ತದೆ. ಇದು ಸಾಮಾನ್ಯ ರೆಫ್ರಿಜರೇಟರ್‌ಗಳಲ್ಲಿ ಬಳಸುವ ಅಯಸ್ಕಾಂತಕ್ಕಿಂತ 1,000 ಪಟ್ಟು ಅಧಿಕ ಕಾಂತ ಕ್ಷೇತ್ರ ಹೊಂದಿರುತ್ತದೆ. ದೇಹದ ಮೃದು ಅಂಗಾಂಶದಲ್ಲಿ ಜಲಜನಕದ ಅಣುಗಳು ಇರುತ್ತವೆ. ಇವುಗಳು ಬೀಜವನ್ನು ಹೊಂದಿರುತ್ತವೆ. ಇದರಲ್ಲಿ ಪ್ರೋಟಾನ್‌ಗಳಿರುತ್ತವೆ. ಇವು ಧನಾತ್ಮಕವಾಗಿ ವಿದ್ಯುದಾವೇಶಗೊಂಡಿರುತ್ತವೆ. ಅಯಸ್ಕಾಂತದ ಕಾಂತ ಕ್ಷೇತ್ರ ದೇಹದಲ್ಲಿ ಪ್ರವಹಿಸಿದಾಗ ಇಂತಹ ಪ್ರೋಟಾನ್‌ಗಳು ಏಕಪ್ರಕಾರವಾಗಿ ನಿಲ್ಲುತ್ತವೆ. ಮೃದುವಾದ ಅಂಗಾಂಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಲಜನಕ ಅಣುಗಳಿರುತ್ತವೆ. ಅಂಗಾಂಶಗಳೂ ನೀರಿನಿಂದ ಕೂಡಿರುತ್ತವೆ. ಚರ್ಮದಲ್ಲಿ ಶೇ 64, ಶ್ವಾಶಕೋಶದಲ್ಲಿ ಶೇ 83ರಷ್ಟು ನೀರಿನ ಅಂಶ ಇರುತ್ತದೆ. ಅಯಸ್ಕಾಂತದ ಪ್ರವಾಹ ಈ ಯಂತ್ರದಲ್ಲಿ ಬೀಸಲಾರಂಭಿಸಿದಾಗ, ಪ್ರೋಟಾನುಗಳು ಸಾಲಾಗಿ ನಿಲ್ಲುತ್ತವೆ. ಈ ಸಂದರ್ಭದಲ್ಲಿ ರೇಡಿಯೊ ಅಲೆಗಳನ್ನು ಬಳಸಿ ಕಾಂತ ಕ್ಷೇತ್ರದಲ್ಲಿ ಏರುಪೇರು ಮಾಡಲಾಗುತ್ತದೆ. ಇದರಿಂದ ಸಾಲಾಗಿ ನಿಂತ ಪ್ರೋಟಾನುಗಳ ಶಿಸ್ತು ಭಂಗವಾಗುತ್ತದೆ. ಕಾಂತ ಕ್ಷೇತ್ರವನ್ನು ಸ್ಥಗಿತಗೊಳಿಸಿದ ಬಳಿಕ ಪ್ರೋಟಾನುಗಳು ಯಥಾಸ್ಥಿತಿಗೆ ಬರುತ್ತವೆ. ಇದರಿಂದ ರೇಡಿಯೊ ಸಂಕೇತ ಹೊಮ್ಮುತ್ತದೆ. ಯಂತ್ರ ಅದನ್ನು ಸುಲಭವಾಗಿ ಮಾಪನ ಮಾಡುತ್ತದೆ. ಪ್ರೋಟಾನುಗಳು ಸಹಜ ಸ್ಥಿತಿಗೆ ಮರಳುವ ಕ್ರಿಯೆ ದೇಹದೊಳಗಿನ ಒಂದು ಅಂಗಾಂಶದಿಂದ ಮತ್ತೊಂದು ಅಂಗಾಂಶಕ್ಕೆ ಭಿನ್ನವಾಗಿರುತ್ತದೆ. ಪ್ರೋಟಾನುಗಳು ಸಹಜ ಸ್ಥಿತಿಗೆ ಮರಳುವಾಗ ಸ್ನಾಯು, ಅಂಗಾಂಗ ಮತ್ತು ಇತರ ರಚನೆಗಳಲ್ಲಿ ಆಗುವ ಬದಲಾವಣೆಗಳನ್ನು ರೇಡಿಯೊ ಸಂಕೇತಗಳು ಚಿತ್ರ ರೂಪದಲ್ಲಿ ದಾಖಲಿಸುತ್ತವೆ.

ಮುಂಬೈನಲ್ಲಿ ದುರ್ಘಟನೆಗೆ ಕಾರಣವೇನು?

ರಾಜೇಶ್‌ ಅವರು ಲೋಹದ ಸಿಲಿಂಡರನ್ನು ಒಳಗೆ ಒಯ್ದ ಸಂದರ್ಭದಲ್ಲಿ ಎಂಆರ್‌ಐ ಯಂತ್ರವು ಚಾಲಿತವಾಗಿತ್ತು. ಸಾಮಾನ್ಯವಾಗಿ ಯಂತ್ರ ಚಾಲನೆಗೊಂಡ ಸಂದರ್ಭದಲ್ಲಿ ಅಯಸ್ಕಾಂತದ ಕಾಂತ ಪ್ರವಾಹ ಪ್ರಬಲವಾಗಿರುತ್ತದೆ. ಈ ಸಂದರ್ಭದಲ್ಲಿ ಕೊಠಡಿಯಲ್ಲಿ ಯಾವುದೇ ಲೋಹಗಳು ಇದ್ದರೂ ಅತ್ಯಂತ ಅಪಾಯಕಾರಿ. ಯಂತ್ರವು ಲೋಹವನ್ನು ಸೆಳೆದುಬಿಡುತ್ತದೆ. 2014ರಲ್ಲಿ ಮುಂಬೈನ ಬೇರೊಂದು ಆಸ್ಪತ್ರೆಯಲ್ಲಿ ಸಹಾಯಕನೊಬ್ಬ ಆಕಸ್ಮಿಕವಾಗಿ ಸಿಲಿಂಡರ್‌ ತಂದಿದ್ದ. ಯಂತ್ರವು ಸಿಲಿಂಡರನ್ನು ಸೆಳೆಯಿತು. ಆಗ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಂತ್ರಜ್ಞ ನಾಲ್ಕು ಗಂಟೆಗಳ ಕಾಲ ಸ್ಕ್ಯಾನರ್‌ ಯಂತ್ರದೊಳಗೆ ಸಿಕ್ಕಿಹಾಕಿಕೊಂಡರು. ಇದರಿಂದ ತಂತ್ರಜ್ಞರ ದೇಹದ ಅಂಗಾಂಗಕ್ಕೆ ಪೆಟ್ಟಾಗಿ, ಆಂತರಿಕ ರಕ್ತಸ್ರಾವವಾಗಿತ್ತು. ಸೊಂಟದ ಕೆಳಗಿನ ಭಾಗ ತಾತ್ಕಾಲಿಕವಾಗಿ ಪಾರ್ಶ್ವವಾಯುವಿಗೆ ಒಳಗಾಗಿತ್ತು. 2001ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆರು ವರ್ಷದ ಬಾಲಕ ಇದೇ ರೀತಿಯ ಅವಘಡಕ್ಕೆ ಸಿಲುಕಿದ್ದ. ಬ್ರೈನ್‌ ಟ್ಯೂಮರ್‌ ಪರೀಕ್ಷೆಗಾಗಿ ಬಂದಿದ್ದ ಬಾಲಕನ ತಲೆಗೆ ತಗಡಿನ ಡಬ್ಬಿಯೊಂದು ಹಾರಿ ಬಂದು ಬಡಿದಿತ್ತು.

ಎಂಆರ್‌ಐ ಕೊಠಡಿಗೆ ಏನೆಲ್ಲ ಒಯ್ಯಬಾರದು?

ಕತ್ತರಿ, ಗುಂಡು ಸೂಜಿ, ಪಿನ್ನುಗಳು, ಮೊಬೈಲ್‌, ಸ್ಟೆತಾಸ್ಕೋಪ್‌, ಸಿಲಿಂಡರ್‌, ತಗಡಿನ ಡಬ್ಬಿಗಳು, ಕೀ ಬಂಚ್, ಕೈಗಡಿಯಾರ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT