ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೆ ಉದ್ಯೋಗದ ವಿಶ್ವಾಸ ಮೂಡಿಸಿ

Last Updated 31 ಜನವರಿ 2018, 7:09 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘ಕನ್ನಡ ಅನ್ನದ ಭಾಷೆ. ಕನ್ನಡ ಕಲಿತರೆ ಉದ್ಯೋಗ ದಕ್ಕಿಸಿಕೊಳ್ಳಬಹುದು ಎಂಬ ಆತ್ಮ ವಿಶ್ವಾಸವನ್ನು ಸರ್ಕಾರ ಹಾಗೂ ಸಾರ್ವಜನಿಕ ವ್ಯವಸ್ಥೆ ಮೂಡಿಸಿದರೆ ಮಾತ್ರ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ’ ಎಂದು 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಶಿವಣ್ಣ ಬೆಳವಾಡಿ ಅಭಿಪ್ರಾಯ ಪಟ್ಟರು.

ಪಟ್ಟಣದ ಕನ್ನಡ ಸಂಘದ ವೇದಿಕೆ ಸೀಮೆಎಣ್ಣೆ ಕೃಷ್ಣಯ್ಯ ಮಹಾಮಂಟಪದಲ್ಲಿ ಆರಂಭವಾದ 2 ದಿನಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

‘ಕನ್ನಡದ ಬೆಳವಣಿಗೆಯನ್ನು 3 ಆಯಾಮಗಳಲ್ಲಿ ನೋಡಬಹುದು. ಸಾಹಿತ್ಯ, ಸಂವಹನ ಹಾಗೂ ತಂತ್ರಜ್ಞಾನದ ಮೂಲಕ ಕನ್ನಡ ಬೆಳೆಯುತ್ತಿರುವ ಪರಿಯನ್ನು ಅರಿತರೆ ಕನ್ನಡ ಭಾಷೆ ಅಮರ ಎಂಬುದು ತಿಳಿಯುತ್ತದೆ’ ಎಂದರು.

‘ಸಾಹಿತ್ಯಿಕ ಚಟುವಟಿಕೆಗಳನ್ನು ಗಡುಸು ಧ್ವನಿಯಿಂದ ಪ್ರಶ್ನಿಸುವ ಕೆಲಸ ನಡೆಯುತ್ತಿದೆ. ಇದು ಆತಂಕದ ಬೆಳವಣಿಗೆ. ನವ ಮಾಧ್ಯಮಗಳಾದ ವಾಟ್ಸ್ ಆ್ಯಪ್‌, ಈ ಮೇಲ್‌, ಫೆಸ್‌ಬುಕ್, ಟ್ವಿಟರ್‌ ಮೂಲಕ ತಂತ್ರಜ್ಞಾನಗಳಿಗೆ ಒಗ್ಗಿಕೊಂಡು ಕನ್ನಡ ಬೆಳೆಯುತ್ತಿದೆ. ಕನ್ನಡ ಸಂಘಟನೆಗಳು, ಆಟೊ ಚಾಲಕರು, ದುಡಿಯುವ ವರ್ಗ ಭಾಷೆ ಬೆಳೆಸುತ್ತಿರುವ ಪರಿ ಅನನ್ಯವಾಗಿದೆ’ ಎಂದರು.

‘ಜಾತೀಯತೆ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಎಷ್ಟೇ ಪ್ರಶ್ನೆ ಮಾಡಿದರೂ ಜಾತಿಯ ಬಂಧ ಬೆಳೆಯುತ್ತಲೇ ಇದೆ’ ಎಂದರು. ‘ಜಾತಿ, ಧರ್ಮಗಳು ನಮ್ಮ ಹಿಡಿತದಲ್ಲಿರಬೇಕೇ ಹೊರತು ಜಾತಿ ಹಿಡಿತದಲ್ಲಿ ಮನುಷ್ಯ ಇರಬಾರದು. ದೇಹದ ಕೊಲಸ್ಟ್ರಾಲ್‌ಗಿಂತ ಮನಸ್ಸಿನ ಕೊಲಸ್ಟ್ರಾಲ್ ಅಪಾಯಕಾರಿ’ ಎಂದರು.

‘ಜಾತಿ, ಧರ್ಮಗಳು ಮನಸ್ಸಿನ ಕೊಲಸ್ಟ್ರಾಲ್ ಹೆಚ್ಚಿಸುವ ಕೆಲಸ ಮಾಡುತ್ತಿವೆ. ರಾಜ್ಯಮಟ್ಟಕ್ಕೆ ಸೌಹಾರ್ದದ ಪಾಠ ಹೇಳುವ ಭೂಮಿಕೆ ಚಿಕ್ಕನಾಯಕನಹಳ್ಳಿಯಲ್ಲಿ ಇದೆ ಎಂಬುದು ಹೆಮ್ಮೆಯ ವಿಚಾರ’ ಎಂದರು.

ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ‘ಕನ್ನಡ ಶ್ರೇಷ್ಠತೆ ಮರೆಯುವಂತಿಲ್ಲ. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸ ಇದೆ. ಕನ್ನಡದ ಪರಿಚಾರಿಕೆ ಮುಂದುವರೆಸಿರುವ ಕನ್ನಡ ಸಾಹಿತ್ಯ ಪರಿಷತ್‌ ಶತಮಾನದ ಸಂಭ್ರಮದಲ್ಲಿದೆ’ ಎಂದರು.

‘ಇತ್ತೀಚೆಗೆ ಶಿಕ್ಷಣ ಮಾಧ್ಯಮದ ಆಯ್ಕೆ ಪೋಷಕರ ಹಕ್ಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದು ಕನ್ನಡದ ಹಿನ್ನೆಡೆಗೆ ಕಾರಣವಾಗಿದೆ. ಕನ್ನಡವನ್ನು ಸರ್ಕಾರ ಕಡ್ಡಾಯ ಆಡಳಿತ ಭಾಷೆಯನ್ನಾಗಿ  ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿದ್ದು ಆಡಳಿತದಲ್ಲಿ ಹಾಗೂ ನ್ಯಾಯಾಲಯದಲ್ಲಿ ಕನ್ನಡದ ಬಳಕೆ ಹೆಚ್ಚುತ್ತಿದೆ’ ಎಂದರು.

‘ಚಿಕ್ಕನಾಯಕನಹಳ್ಳಿ ಸತತವಾಗಿ 13 ವರ್ಷಗಳಿಂದ ಬರಗಾಲದ ದವಡೆಗೆ ಸಿಕ್ಕಿದೆ. ಅಂತರ್ಜಲ ಅಪಾಯದ ಮಟ್ಟ ತಲುಪಿದೆ. ತಾಲ್ಲೂಕು ಕೃಷ್ಣ ಹಾಗೂ ಕಾವೇರಿ ಜಲಾನಯನ ಪ್ರದೇಶಕ್ಕೆ ಸೇರಿದ್ದು ಹೇಮಾವತಿ, ಭದ್ರ ಮೇಲ್ದಂಡೆ ಯೋಜನೆ ಹಾಗೂ ಕುಡಿಯುವ ನೀರಿನ ಉದ್ದೇಶದಿಂದ ಎತ್ತಿನಹೊಳೆ ಯೋಜನೆಗಳನ್ನು ಸರ್ಕಾರ ತಾಲ್ಲೂಕಿನಲ್ಲಿ ಅನುಷ್ಠನಗೊಳಿಸುತ್ತಿದೆ’ ಎಂದರು.

‘ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕುಗಳಿಗೆ ಭದ್ರಾ ಮೇಲ್ದಂಡೆಯೋಜನೆಯನ್ನು ವಿಸ್ತರಿಸಲು ಯೋಜನಾ ವೆಚ್ಚವನ್ನು ₹6.5 ಸಾವಿರ ಕೋಟಿಯಿಂದ ₹12,340 ಕೋಟಿಗೆ ಹೆಚ್ಚಿಸಲಾಗಿದೆ.ತುಮಕೂರು ನಾಲೆಗೆ ಈಗಾಗಲೆ ಶಿಲಾನ್ಯಾಸ ನೆರವೇರಿದ್ದು 20 ದಿನಗಳಲ್ಲಿ ಸರ್ವೆ ಕಾರ್ಯ ಮುಗಿಯಲಿದೆ’ ಎಂದರು.

ಕವಿಯತ್ರಿ ಎಚ್.ಎಲ್.ಪುಷ್ಪಾ ದಿಕ್ಸೂಚಿ ಮಾತುಗಳನ್ನಾಡಿ, ‘ಸಾಹಿತ್ಯ ಸಮ್ಮೇಳನ ಕೇವಲ ಜಾತ್ರೆ ಆಗದೆ. ನೆಲದ ನಡೆ ನುಡಿ ಚರ್ಚೆಗೆ ವೇದಿಕೆ ಆಗಬೇಕು ಎಂಬುದಕ್ಕೆ ಈ ಸಮ್ಮೇಳನದಲ್ಲಿ ನಿಗಧಿಯಾಗಿರುವ ವಿಷಯಗಳು ತೋರಿಸಿ ಕೊಡುತ್ತಿವೆ. ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಮನಾಗಿ ತಾಲ್ಲೂಕು ಸಮ್ಮೇಳನ ನಡೆಯುತ್ತಿರುವುದು ಮೆಚ್ಚುವ ವಿಷಯ’ ಎಂದರು.

ನಿಕಟ ಪೂರ್ವಅಧ್ಯಕ್ಷ ಕಂಟಲಗೆರೆ ಸಣ್ಣಹೊನ್ನಯ್ಯ, ಸಮ್ಮೇಳನದ ಅಧ್ಯಕ್ಷರಾದ ಡಾ.ಶಿವಣ್ಣ ಬೆಳವಾಡಿ ಅವರಿಗೆ ಕನ್ನಡ ಬಾವುಟ ಹಸ್ತಾಂತರಿಸಿದರು.

ಪುರಸಭೆ ಅಧ್ಯಕ್ಷ ಮೊಹಮದ್ ಖಲಂದರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಸಿ.ಡಿ.ಚಂದ್ರಶೇಖರ್, ಮುಖಂಡ ಬಿ.ಲಕ್ಕಪ್ಪ, ಬಿಇಒ ಕೃಷ್ಣಮೂರ್ತಿ, ತಹಶಿಲ್ದಾರ್ ಶಿವಲಿಂಗಮೂರ್ತಿ, ಸಿಡಿಪಿಒ ತಿಪ್ಪಯ್ಯ, ಆರ್.ಪರಶಿವಮೂರ್ತಿ, ನಾರಾಯಣಪ್ಪ, ಸಿದ್ದರಾಜ್ ನಾಯಕ್, ಎಂ.ಎಸ್.ಈಶ್ವರಪ್ಪ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹುಳಿಯಾರ್ ಕುಮಾರ್, ತಾಲ್ಲೂಕು ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಕಾರ್ಯದರ್ಶಿಗಳಾದ ಕಂಟಲಗೆರೆ ಗುರುಪ್ರಸಾದ್, ನಾಗಕುಮಾರ್ ಚೌಕಿಮಠ, ಖಜಾಂಚಿ ರಾಮಕೃಷ್ಣಪ್ಪ, ಹೋಬಳಿ ಘಟಕದ ಅಧ್ಯಕ್ಷರಾದ ಯಲ್ಲಪ್ಪ, ಆರ್.ಧನಂಜಯಮೂರ್ತಿ, ಎಚ್.ಅನಂತಮೂರ್ತಿ, ಟಿ.ಪಿ.ಆನಂದಕೃಷ್ಣ ಹಾಗೂ ಬಿ.ಎಸ್.ರಾಧಾಕೃಷ್ಣ ಇದ್ದರು.

ಬರವಣಿಗೆ ಮೇಲೆ ಎಕ್ಸ್-ರೇ ಕಣ್ಣು
‘ಇಂದು ಎಲ್ಲ ಮಾತುಗಳು ಹಾಗೂ ಬರವಣಿಗೆಗಳು ಎಕ್ಸ್-ರೇ ಕಣ್ಣಿನಿಂದ ನೋಡಲ್ಪಡುತ್ತಿವೆ. ವೈಚಾರಿಕ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿವೆ’ ಎಂದು ಎಚ್.ಎಲ್.ಪುಷ್ಪಾ ಹೇಳಿದರು. ‘ಮಾನವೀಯತೆ ಹಾಗೂ ಸವಾರ್ದತೆ ಮೇಲೆ ಒತ್ತಡ ಬೀಳುತ್ತಿದೆ. ಆಹಾರ ಪದ್ಧತಿ ಹೆಣ್ತನ ಹಾಗೂ ಗಾಂಧಿ ಮೌಲ್ಯಗಳು ಮಸುಕಾಗುತ್ತಿವೆ’ ಎಂದರು.

‘ನಡೆ-ನುಡಿ ಬೇರೆಯಾದ ಬದುಕು ಇಂದಿನ ಎಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ. ರಾಜಕಾರಣ, ಧರ್ಮ ಹಾಗೂ ಮಠಗಳು ಸಹಜ ಬದುಕನ್ನು ಹಿಗ್ಗಾಮಗ್ಗ ಎಳೆದಾಡುತ್ತಿವೆ’ ಎಂದರು.

ಅದ್ಧೂರಿ ಮೆರವಣಿಗೆ

ಕಾರ್ಯಕ್ರಮಕ್ಕೂಮುನ್ನ ನಡೆದ ಅಧ್ಯಕ್ಷರ ಮೆರವಣಿಗೆಯನ್ನು ಶೆಟ್ಟಿಕೆರೆ ಜನಪದ ಕಲಾವಿದೆ ಸೋಬಾನೆ ಲಕ್ಷ್ಮಜ್ಜಿ ಚಾಲನೆ ನೀಡಿದರು. ಪಟ್ಟಣದ ಹಳೆಯೂರು ಆಂಜನೇಯ ದೇವಸ್ಥಾನದಿಂದ ಕನ್ನಡ ಸಂಘದ ವೇದಿಕೆಯ ವರೆಗೂ ಸಮ್ಮೇಳನದ ಅಧ್ಯಕ್ಷರನ್ನು ಸಿಂಗಾರಗೊಂಡ ಎತ್ತಿನ ಗಾಡಿಯಲ್ಲಿ ಕರೆತರಲಾಯಿತು.

ವಿವಿಧ ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಶಾಲಾ ಮಕ್ಕಳು ಜಾನಪದ ಕಲೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮೆರವಣಿಗೆ ಉಸ್ತುವಾರಿ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT