ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಗೆ ವೈವಿಧ್ಯ ತರುವ ಸಿರಿಧಾನ್ಯ: ಪಾಟೀಲ

Last Updated 31 ಜನವರಿ 2018, 10:14 IST
ಅಕ್ಷರ ಗಾತ್ರ

ಕೊಪ್ಪಳ: ಸಿರಿಧಾನ್ಯಗಳು ಪ್ರಕೃತಿಗೆ ವೈವಿಧ್ಯತೆ ತಂದುಕೊಡುತ್ತವೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೆಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆಶ್ರಯದಲ್ಲಿ ನಗರದ ಶಿವಶಾಂತವೀರ ಮಂಗಲಭವನದ ಆವರಣದಲ್ಲಿ ನಡೆದ ಮಹಿಳಾ ಸಮಾವೇಶ ಹಾಗೂ ಸಿರಿಧಾನ್ಯ ಆಹಾರ ಮೇಳದಲ್ಲಿ ಸಿರಿಧಾನ್ಯ ಸಂವಾದ ಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿದರು.

ನಮ್ಮ ಹೊಲದ ಒಂದೇ ಪ್ರದೇಶದಲ್ಲಿ ಬೇರೆಬೇರೆ ಬಗೆಯ ಬೆಳೆಗಳನ್ನು ಬೆಳೆಯಬೇಕು. ಸಿರಿಧಾನ್ಯದ ಸಸಿಗಳು ದ್ರವಸಾರ, ಅಣುಜೀವಿಗಳನ್ನು ಬೇರಿನ ಮೂಲಕ ಮಣ್ಣಿಗೆ ತಲುಪಿಸಿ ಅದರ ಆರೋಗ್ಯ ವೃದ್ಧಿಸುತ್ತದೆ. ಹೀಗೆ ಸುಧಾರಣೆಗೊಳಗಾದ ಮಣ್ಣಿನ ಸತ್ವಾಂಶಗಳು ಬೇರೆ ಬೆಳೆಗಳಿಗೂ ತಲುಪಿ ಅವುಗಳನ್ನೂ ಸತ್ವಯುತವಾಗಿಸುತ್ತವೆ. ಹೀಗೆ ಅತ್ಯುತ್ತಮ ಗುಣಮಟ್ಟದ ಫಸಲು ಪಡೆಯಲು ಸಾಧ್ಯ ಎಂದರು.

ಕೃಷಿ ಎಂದರೆ ಕೇವಲ ಬೀಜ ಬಿತ್ತಿ ಬೆಳೆ ಬೆಳೆದು, ಮಾರುಕಟ್ಟೆಗೆ ಕೊಟ್ಟು ಹಣ ಪಡೆಯುವುದಷ್ಟೇ ಅಲ್ಲ. ಅದಕ್ಕೂ ಮೀರಿದ ಸಾಧ್ಯತೆಗಳ ಬಗ್ಗೆ ಆಲೋಚಿಸಬೇಕು. ಸಿರಿಧಾನ್ಯಗಳಿಗೆ ಕೇವಲ 200 ಮಿಲಿಮೀಟರ್‌ ನೀರಿನ ಪ್ರಮಾಣ ಸಾಕು. ಸಿರಿಧಾನ್ಯದ ಸಸಿಗಳು ಇಂಗಾಲ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿವೆ. ಮಿತವೆಚ್ಚದಲ್ಲಿ ಈ ಬೆಳೆಗಳು ಬೆಳೆಯುತ್ತವೆ. ಈ ಧಾನ್ಯಗಳು ನಮ್ಮ ಆಹಾರಪದ್ಧತಿಯಲ್ಲಿ ಇರಬೇಕು. ಸಿರಿಧಾನ್ಯ ಬೆಳೆಯಲು ಸರ್ಕಾರದ ನೆರವೂ ಸಿಗುತ್ತದೆ ಎಂದು ಅವರು ಹೇಳಿದರು.

ಕಾನೂನುಬದ್ಧ ಕೃಷಿ–ಎಚ್ಚರಿಕೆ: ನೀರನ್ನು ಬೇಕಾಬಿಟ್ಟಿಯಾಗಿ ಬಳಸಿ ಕೃಷಿ ಮಾಡಿದರೆ ಮುಂದೊಂದು ದಿನ ಕಾನೂನುಬದ್ಧ ಕೃಷಿ ವ್ಯವಸ್ಥೆ ಬರುವ ಸಾಧ್ಯತೆಯೂ ಇದೆ. ಇಂತಿಷ್ಟೇ ಪ್ರದೇಶದಲ್ಲಿ ನಿರ್ದಿಷ್ಟ ಬೆಳೆಯನ್ನು ಮಾತ್ರ ಬೆಳೆಯಬೇಕು ಎಂಬ ನಿಯಮ ಬಂದರೆ ಎಲ್ಲ ರೈತರೂ ತೊಂದರೆಗೊಳಗಾಗಲಿದ್ದಾರೆ. ಬೆಳೆಗೆ ಸಿಗಬೇಕಾದ ಸೌಲಭ್ಯ, ಮಾರುಕಟ್ಟೆ ಸಿಗದಿರಬಹುದು.

ಆದ್ದರಿಂದ ಕೃಷಿ ಬದುಕಿನಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು. ವಿಪರೀತ ನೀರು, ರಸಗೊಬ್ಬರ ಬಳಕೆಯಿಂದ ಒಂದೆಡೆ ಸಂಪನ್ಮೂಲ ಪೋಲಾಗುತ್ತದೆ.ಮತ್ತೊಂದೆಡೆ ಭೂಮಿ ಸಾರ ಕಳೆದುಕೊಳ್ಳುತ್ತಿದೆ ಎಂದು ಎಚ್ಚರಿಸಿದರು.

ಮಣ್ಣಿಗೇ ರೋಗ ಬಂದರೆ ಗುಣಪಡಿಸಲು ಅಸಾಧ್ಯ. ವಿಪರೀತ ರಾಸಾಯನಿಕ, ಕೀಟನಾಶಕ ಬಳಸಿ ಮಣ್ಣನ್ನು ಈಗಾಗಲೇ ವಿಷಮಯಗೊಳಿಸಿದ್ದೇವೆ. ಈ ಪ್ರವೃತ್ತಿ ನಿಲ್ಲಬೇಕು ಎಂದು ಆಶಿಸಿದರು.

ಜಿಲ್ಲೆಯಲ್ಲಿ ಎಲ್ಲ ರೈತರು ಮೆಕ್ಕೆಜೋಳ ಬೆಳೆಯತ್ತ ಆಸಕ್ತಿ ವಹಿಸಿದ್ದಾರೆ. ಅದನ್ನು ಬೆಳೆದವರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತು. ಮೆಕ್ಕೆಜೋಳ ಬೆಳೆಗಾರರು ಉದ್ಧಾರ ಆಗಿಲ್ಲ. ಮಾರಾಟಗಾರರು ಉದ್ಧಾರವಾಗಿದ್ದಾರೆ.ಆದ್ದರಿಂದ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಬೆಳೆಯುವ ಚಿಂತನೆ ಮಾಡಬೇಕು ಎಂದು ಅವರು ಹೇಳಿದರು.

ಕೃಷಿ ಇಲಾಖೆಯ ಸಂಪನ್ಮೂಲ ವ್ಯಕ್ತಿ ಎಸ್‌.ಬಿ.ಕೋಣಿ,  ಸಿರಿಧಾನ್ಯ ಕಾರ್ಯಕ್ರಮ ಯೋಜನಾಧಿಕಾರಿ ಮಹಾಬಲೇಶ್ವರ್‌, ಸಿರಿಧಾನ್ಯ ಬೆಳೆಗಾರ ಕಲ್‌ತಾವರಗೇರಾದ ಗುಂಡೂರಾವ್‌ ಕುಲಕರ್ಣಿ ಇದ್ದರು.

ಕಾನೂನುಬದ್ಧ ಕೃಷಿ: ಎಚ್ಚರಿಕೆ

ನೀರನ್ನು ಬೇಕಾಬಿಟ್ಟಿಯಾಗಿ ಬಳಸಿ ಕೃಷಿ ಮಾಡಿದರೆ ಮುಂದೊಂದು ದಿನ ಕಾನೂನುಬದ್ಧ ಕೃಷಿ ವ್ಯವಸ್ಥೆ ಬರುವ ಸಾಧ್ಯತೆಯೂ ಇದೆ. ಇಂತಿಷ್ಟೇ ಪ್ರದೇಶದಲ್ಲಿ ನಿರ್ದಿಷ್ಟ ಬೆಳೆಯನ್ನು ಮಾತ್ರ ಬೆಳೆಯಬೇಕು ಎಂಬ ನಿಯಮ ಬಂದರೆ ಎಲ್ಲ ರೈತರೂ ತೊಂದರೆಗೊಳಗಾಗಲಿದ್ದಾರೆ. ಬೆಳೆಗೆ ಸಿಗಬೇಕಾದ ಸೌಲಭ್ಯ, ಮಾರುಕಟ್ಟೆ ಸಿಗದಿರಬಹುದು. ಆದ್ದರಿಂದ ಕೃಷಿ ಬದುಕಿನಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು. ವಿಪರೀತ ನೀರು, ರಸಗೊಬ್ಬರ ಬಳಕೆಯಿಂದ ಒಂದೆಡೆ ಸಂಪನ್ಮೂಲ ಪೋಲಾಗುತ್ತದೆ. ಮತ್ತೊಂದೆಡೆ ಭೂಮಿ ಸಾರ ಕಳೆದುಕೊಳ್ಳುತ್ತಿದೆ ಎಂದು ಎಚ್ಚರಿಸಿದರು.

* * 

ಕೊಪ್ಪಳದ ಹವಾಮಾನ ಕ್ಯಾಲಿಫೋರ್ನಿಯಾ ಮಾದರಿಯಲ್ಲಿ ಇದೆ. ಇದನ್ನು ರೈತರು ಕ್ಯಾಲಿಫೋರ್ನಿಯಾ ಆಗಿ ಪರಿವರ್ತಿಸ ಬಹುದು ಡಾ.ಎಂ.ಬಿ.ಪಾಟೀಲ್‌, ವಿಸ್ತರಣಾ ಮುಂದಾಳು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT