ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹೋಟೆಲ್‌ ಊಟಕ್ಕಿದೆ ದೇವಾಲಯದ ರುಚಿ

Last Updated 31 ಜನವರಿ 2018, 19:40 IST
ಅಕ್ಷರ ಗಾತ್ರ

ಅಷ್ಟೊಂದು ವಿಶಾಲವಲ್ಲದಿದ್ದರೂ ಸ್ವಚ್ಚವಾಗಿರುವ ಪ್ರಾಂಗಣ, ದೇವಾಲಯಗಳಲ್ಲಿ ಊಟಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಂತೆ ಕಾಯುತ್ತಿರುವ ಜನರು, ಅಡುಗೆಯ ಘಮದೊಂದಿಗೆ ಕಿವಿಗೆ ಇಂಪಾಗಿ ಕೇಳಿಸುವ ಗಂಟೆಯ ನಿನಾದ, ಪ್ರಾಂಗಣದ ಅಂದವನ್ನು ಹೆಚ್ಚಿಸುವಂತೆ ಅಲ್ಲಲ್ಲಿ ಜೋಡಿಸಿರುವ ಯಕ್ಷಗಾನದ ಮುಖವರ್ಣಿಕೆಗಳು, ಸಹಪಂಕ್ತಿ ಭೋಜನವನ್ನು ಸಂಭ್ರಮಿಸುತ್ತಿರುವ ಸಾರ್ವಜನಿಕರು... ಇದು ಯಾವುದೊ ದೇವಾಲಯದ ಚಿತ್ರಣವಲ್ಲ. ನಗರದ ‘ಟೆಂಪಲ್‌ ಮೀಲ್ಸ್‌’ ಹೋಟೆಲ್‌ನಲ್ಲಿ ಕಂಡುಬರುವ ಊಟದ ಸಂಭ್ರಮವಿದು.

ಮಲ್ಲೇಶ್ವರದ 7ನೇ ಅಡ್ಡರಸ್ತೆಯಲ್ಲಿರುವ ಈ ಹೋಟೆಲ್‌ನಲ್ಲಿ ಹೆಸರಿಗೆ ತಕ್ಕಂತೆ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ನೀಡುವ ಊಟದ ರುಚಿಯನ್ನು ಸವಿಯಬಹುದು. ಈರುಳ್ಳಿ ಹಾಗೂ ಬೆಳ್ಳುಳ್ಳಿಗಳ ಬಳಕೆಯಿಲ್ಲದ ಶುಚಿ ರುಚಿಯಾದ ಆಹಾರ, ನಗರದ ಆಹಾರಪ್ರಿಯರ ಮನಸೂರೆಗೊಂಡಂತಿದೆ.

ಮಲ್ಲೇಶ್ವರದ ಬೈಟೂ ಕಾಫಿ ಮಳಿಗೆಯಲ್ಲಿ ₹ 90 ನೀಡಿ ಟೋಕನ್‌ ಪಡೆದು ಒಂದನೇ ಮಹಡಿಯಲ್ಲಿರುವ ಊಟದ ಕೋಣೆಯನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಊಟದ ಕೋಣೆಯನ್ನು ಹೋಲುವ ಪ್ರಾಂಗಣ ಸ್ವಾಗತಿಸುತ್ತದೆ.

ಊಟಕ್ಕೆ ಅಣಿಯಾಗಿ ಕುಳಿತಂತೆ ಉಪ್ಪು, ಉಪ್ಪಿನಕಾಯಿ, ಕೋಸಂಬರಿ ಹಾಗೂ ಪಲ್ಯ ಬಾಳೆಎಲೆಯನ್ನು ಅಲಂಕರಿಸಿದವು. ಕೋಸಂಬರಿ ಹಾಗೂ ಪಲ್ಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಂತಹ ದೇವಸ್ಥಾನಗಳ ಸಾಂಪ್ರದಾಯಿಕ ರುಚಿಯನ್ನು ನೆನಪಿಸುವಂತಿತ್ತು. ಗೋಡಂಬಿ, ದ್ರಾಕ್ಷಿಗಳಿಂದ ಸಮೃದ್ಧಗೊಂಡ ಪಾಯಸವನ್ನು ಸವಿಯುತ್ತಿರುವಾಗಲೇ ಬಾಳೆಎಲೆ ಸೇರಿದ ಮೈಸೂರ್ ಪಾಕ್ ನೋಡುತ್ತಿದ್ದಂತೆ ನಾಲಿಗೆಯ ರುಚಿಮೊಗ್ಗುಗಳು ಅರಳಿದವು.

ಬಿಸಿಯಾದ ಅಕ್ಕಿರೊಟ್ಟಿಯೊಂದಿಗೆ ಕೊಬ್ಬರಿ ಚಟ್ನಿ ಅಮ್ಮನ ಕೈರುಚಿಯನ್ನು ನೆನಪಿಸುತ್ತಿತ್ತು. ಅಕ್ಕಿಹಿಟ್ಟಿಗೆ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ ತೆಳುವಾಗಿ ಲಟ್ಟಿಸಿದ ರೊಟ್ಟಿಗೆ ಸ್ವಲ್ಪವೇ ಅಡುಗೆ ಎಣ್ಣೆ ಬಳಸಿ ಬೇಯಿಸಲಾಗಿತ್ತು. ಅತ್ತ ಸಂಪೂರ್ಣ ಮೃದುವೂ ಅಲ್ಲದ ಇತ್ತ ಗರಿಗರಿಯೂ ಅಲ್ಲದ ರೊಟ್ಟಿಯನ್ನು ಸಾಸಿವೆಯ ಒಗ್ಗರಣೆಯ ಚಟ್ನಿಯೊಂದಿಗೆ ಸವಿದಾಗ ಸಬ್ಬಸ್ಸಿಗೆ ಸೊಪ್ಪಿನ ಘಮ ಬಾಯಿಯನ್ನು ಆವರಿಸಿತ್ತು.

ರೊಟ್ಟಿ ತಿಂದು ಮುಗಿಸುತ್ತಿದ್ದಂತೆ ‘ತೊವ್ವೆಗೆ ಅನ್ನ’ ಎಂದು ಪಂಕ್ತಿಯಲ್ಲಿ ಬಡಿಸುತ್ತಾ ಬಂದರು. ಬಿಸಿಯಾದ ಅನ್ನದ ಮೇಲೆ ಘಮಿಸುವ ತುಪ್ಪ ಜೊತೆಗೆ ತೊವ್ವೆಯನ್ನು ಕಲಸಿ ಬಾಯಿಗಿಡ್ಡುತ್ತಿದ್ದಂತೆ ಹೊಸರುಚಿಯೊಂದು ಅನುಭವಕ್ಕೆ ಬಂತು. ಜೀರಿಗೆ ಹಾಗೂ ತೊಗರಿಬೇಳೆಯ ಘಮ ವಿಭಿನ್ನ ಸ್ವಾದವನ್ನು ನೀಡಿತ್ತು. ಇದುವರೆಗೂ ಸವಿದ ತೊವ್ವೆಯ ರುಚಿಯನ್ನೆಲ್ಲಾ ಮರೆಸಿ ಇದೇ ರುಚಿ ನೆನಪಿನಲ್ಲಿರುವಂತೆ ಅನುಭವವಾಯಿತು. ಅಷ್ಟರಲ್ಲಿಯೇ ಮತ್ತೆ ‘ಸಾಂಬಾರ್‌ ಅನ್ನ’ ಎನ್ನುತ್ತಾ ಬಡಿಸಿದ ಮಂಗಳೂರು ತೊಂಡೆಕಾಯಿ ಸಾಂಬಾರ್ ಉಪ್ಪು, ಖಾರ, ಹುಳಿಯ ಹದಪಾಕದಂತಿತ್ತು. ಸಾಂಬಾರ್‌ನೊಂದಿಗೆ ಅನ್ನವನ್ನು ಸವಿದು ಮುಗಿಸುವ ಮುನ್ನವೇ ರಸಂ ಪರಿಮಳ ಮತ್ತೊಮ್ಮೆ ಅನ್ನ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿತು. ಹೊಟ್ಟೆಯಲ್ಲಿ ಜಾಗವಿಲ್ಲದಿದ್ದರೂ ರಸಂ ಸವಿಯುವಂತೆ ನಾಲಿಗೆ ಉತ್ತೇಜಿಸುತ್ತಿತ್ತು. ಹಿಂಗು ಹಾಗೂ ಜೀರಿಗೆ ಘಮ, ಸ್ವಾದ ಅದ್ಭುತವಾಗಿತ್ತು. ಕೊನೆಯಲ್ಲಿ ಮತ್ತೆ ಮೊಸರು ಮತ್ತು ಅನ್ನವನ್ನು ಉಪ್ಪಿನಕಾಯಿಯೊಂದಿಗೆ ಸವಿದು ಊಟಕ್ಕೆ ಸಮಾಪ್ತಿ ಹಾಡಿದೆ. ಎಲ್ಲಿಯೂ ಈರುಳ್ಳಿ ಬೆಳ್ಳುಳ್ಳಿಗಳ ಕೊರತೆ ಕಾಣುತ್ತಿರಲಿಲ್ಲ.

ಹೋಟೆಲ್‌ ಮಾಲೀಕರಾದ ಗಣೇಶ್‌ ಕುಮಾರ್ ಅವರು ಕುಂದಾಪುರದ ಪಡುಕೋಣೆಯವರು. ವಿಪ್ರೊ ಸೇರಿದಂತೆ ವಿವಿಧ ಐಟಿ ಕಂಪೆನಿಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸಮಾಡಿದ ಅನುಭವ ಪಡೆದಿದ್ದಾರೆ. ಚಿಕ್ಕಂದಿನಿಂದಲೂ ದೇವಾಲಯಗಳ ಊಟದ ವಿಭಿನ್ನ ರುಚಿಗೆ ಮಾರುಹೋದ ಅವರು ನಗರದ ಜನತೆಗೂ ಅಂತಹದೇ ಊಟವನ್ನು ಊಣಬಡಿಸುವ ಆಸಕ್ತಿಯಿಂದ ಕಳೆದ 5 ತಿಂಗಳ ಹಿಂದೆ ‘ಟೆಂಪಲ್‌ ಮೀಲ್ಸ್‌’ ಹೋಟೆಲ್ ಆರಂಭಿಸಿದ್ದಾರೆ.

‘ಸದ್ಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ವಿವಿಧೆಡೆಗಳಲ್ಲಿ ಹೋಟೆಲ್ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ಗುಣಮಟ್ಟದ ಆಹಾರವನ್ನು ಪೂರೈಸುವುದು ನಮ್ಮ ಆದ್ಯತೆ. ಹೋಟೆಲ್‌ ಎನ್ನುವುದು ಉದ್ಯಮವಲ್ಲ ಅದೊಂದು ಸೇವೆ ಎಂದು ಪರಿಗಣಿಸಿರುವ ಸಲುವಾಗಿಯೇ ನಮಗೆ ಇಂದಿಗೂ ₹ 90ರಲ್ಲಿ ಹೊಟ್ಟೆ ತುಂಬಾ ಸಾಂಪ್ರದಾಯಿಕ ಆಹಾರವನ್ನು ಪೂರೈಸಲು ಸಾಧ್ಯವಾಗುತ್ತಿದೆ’ ಎನ್ನುವುದು ಗಣೇಶ್‌ ಅವರ ಮಾತು.

‘ತರಕಾರಿ, ಅಕ್ಕಿ ಹಾಗೂ ವಿವಿಧ ಧಾನ್ಯಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ರೈತರಿಂದಲೇ ನೇರವಾಗಿ ಖರೀದಿಸುತ್ತೇವೆ. ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳಿಗೆ ಪ್ರಾಮುಖ್ಯತೆ ನೀಡುತ್ತೇವೆ. ನುರಿತ ಬಾಣಸಿಗರ ಅನುಭವ ಅಡುಗೆ ರುಚಿಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ರುಚಿಯ ಗುಟ್ಟನ್ನು ಗಣೇಶ್‌ ಬಿಚ್ಚಿಡುತ್ತಾರೆ.

ವಾರಾಂತ್ಯ, ಹಬ್ಬಗಳಿಗೆ ವಿಶೇಷ ಬೋಜನ

ಪ್ರತಿ ಶನಿವಾರ ಹಾಗೂ ಭಾನುವಾರಗಳಲ್ಲಿ ಹೋಳಿಗೆ ಊಟ ನೀಡಲಾಗುತ್ತದೆ. ಹಬ್ಬದ ದಿನಗಳಲ್ಲಿ ವಿಶಿಷ್ಟ ಮೆನು ಇರುತ್ತದೆ.

ಅಪ್ಪೆಮಿಡಿಯ ಉಪ್ಪಿನಕಾಯಿ ಹಬ್ಬದೂಟದ ವಿಶೇಷ. ನಿತ್ಯದ ಆಹಾರದ ಮೆನುವಿನಲ್ಲಿಯೂ ಬದಲಾವಣೆ ಇರುತ್ತದೆ. ಖರ್ಜೂರ, ಸಬ್ಬಕ್ಕಿ, ಗೋಧಿ ಕಡಿ, ಶಾವಿಗೆ, ಅಂಜೂರ ಹೀಗೆ ದಿನಕ್ಕೊಂದು ರೀತಿಯ ಪಾಯಸಗಳು ಇರುತ್ತವೆ. ಹಲಸಿನ ಹಣ್ಣಿನ ಪಾಯಸ ಟೆಂಪಲ್‌ಮೀಲ್ಸ್‌ನ ವಿಶೇಷ ಖಾದ್ಯ. ಬುಧವಾರ ಹಾಗೂ ಗುರುವಾರಗಳಂದು ಜೈನರಿಗಾಗಿಯೇ ಗೆಡ್ಡೆಗಳನ್ನು ಬಳಸದೆ ಅಡುಗೆ ಮಾಡಲಾಗುತ್ತದೆ.

ಇಲ್ಲಿದೆ ಕ್ಯಾರಿಯರ್ ವ್ಯವಸ್ಥೆ

ದೇವಾಲಯಗಳ ಸಾಂಪ್ರದಾಯಿಕ ಅಡುಗೆಯನ್ನು ಮನೆಯಲ್ಲಿಯೇ ಸವಿಯಬೇಕು ಅಥವಾ ಮನೆಗೆ ಅತಿಥಿಗಳು ಬಂದಾಗ ಶುಚಿ ರುಚಿಯಾದ ಆರೋಗ್ಯಕರ ಅಡುಗೆ ಬಡಿಸಬೇಕು ಎಂದಾದರೆ ಟೆಂಪಲ್‌ ಮೀಲ್ಸ್‌ನಿಂದ ಊಟವನ್ನು ಕೊಂಡೊಯ್ಯಬಹುದು. ಅದಕ್ಕಾಗಿ ಹೋಟೆಲ್‌ನಲ್ಲಿ ವಿಶೇಷವಾದ ಕ್ಯಾರಿಯರ್‌ ವ್ಯವಸ್ಥೆ ಇದೆ. ಈ ಕ್ಯಾರಿಯರ್‌ಗಳಿಗೆ ಮುಂಗಡ ಹಣ ನೀಡಬೇಕು. ಕ್ಯಾರಿಯರ್ ಮರಳಿಸಿ ಮುಂಗಡ ಹಣ ಹಿಂಪಡೆಯಬಹುದು. ಬಾಳೆ ಎಲೆಯಿಂದ ಹಿಡಿದು ಮೊಸರಿನವರೆಗೆ ಎಲ್ಲಾ ಖಾದ್ಯಗಳು ಈ ಕ್ಯಾರಿಯರ್‌ನಲ್ಲಿರುತ್ತವೆ.

ಹೋಟೆಲ್‌ ವಿವರ

ಟೆಂಪಲ್‌ ಮೀಲ್ಸ್

ಬೆಲೆ– ಒಂದು ಊಟಕ್ಕೆ ₹90

ಸಮಯ– ಮಧ್ಯಾಹ್ನ 12 ರಿಂದ 3.30

ಸ್ಥಳ–#151, 3ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಮಲ್ಲೇಶ್ವರ

ಸಂಪರ್ಕ– 96322 03201

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT