ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು, ನನ್ನ ಮತ ಮಾರಾಟಕ್ಕಿಲ್ಲ’

Last Updated 1 ಫೆಬ್ರುವರಿ 2018, 7:19 IST
ಅಕ್ಷರ ಗಾತ್ರ

ಬೈಂದೂರು: ರಾಜ್ಯಶಾಸ್ತ್ರ ಪ್ರಾಧ್ಯಾಪಕ ಶಿವಕುಮಾರ್ ಅವರಿಂದ ಜನತಂತ್ರ ವ್ಯವಸ್ಥೆಯಲ್ಲಿ ಮತದಾನದ ಮಹತ್ವದ ಕುರಿತು ಮೊದಲ ನುಡಿಯೇ ಮಕ್ಕಳಲ್ಲಿ ಆಸಕ್ತಿ ಕೆರಳಿಸಿತು.

‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನದ ಮೂಲಕ ರಾಜ್ಯದ ಗಮನ ಸೆಳೆದಿರುವ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂ ದೋಲನದ ಸಂಚಾಲಕರಲ್ಲಿ ಒಬ್ಬ ರಾದ, ಕನ್‌ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ದಾಮೋದರ ಆಚಾರ್ಯ ಅವರಿಂದ ಅಪೇಕ್ಷಿತ ರಾಜಕೀಯ, ಸಾಮಾಜಿಕ ಬದಲಾವಣೆ ಸಹಭಾಗಿತ್ವ ಗಣತಂತ್ರದ ಮೂಲಕ ಸಾಧ್ಯ ಮತ್ತು ಯುವಜನತೆ ಹೇಗೆ ಬದಲಾವಣೆಯ ವೇಗವರ್ಧಕಗಳಾಗಬಹುದು ಎನ್ನುವು ದರ ವಿಶ್ಲೇಷಣಾತ್ಮಕ ವಿಷಯ ಮಂಡನೆ, ಹತ್ತಾರು ವಿದ್ಯಾರ್ಥಿಗಳಿಂದ ದೇಶದ ಪ್ರಸಕ್ತ ರಾಜಕೀಯ ಸ್ಥಿತಿ ಮತ್ತು ಅದರ ಸಕಾರಾತ್ಮಕ ಬದಲಾವಣೆಗೆ ತಾವೂ ಸೇರಿದಂತೆ ಸಮುದಾಯ ನಿರ್ವಹಿ ಸಬೇಕಾದ ಪಾತ್ರದ ಪ್ರಬಲ ಪ್ರತಿಪಾದನೆ.

ಚರ್ಚೆಯ ನಡುವೆ ಮೂಡಿದ ಸಂಶಯ ನಿವಾರಣೆಗಾಗಿ ಎಸೆಯಲ್ಪಟ್ಟ ಪ್ರಶ್ನೆಗಳು, ವಿಷಯ ಸಮೀಕ್ಷಿಸಿದ ಪ್ರಾಚಾರ್ಯ ಬಿ. ಎ. ಮೇಳಿ ಅವರಿಂದ ‘ಪ್ರಜಾವಾಣಿ’ಯ ಅಭಿಯಾನದ ಬಗೆಗೆ ಮೆಚ್ಚುಗೆಯ ಮಾತು. ಇವಿಷ್ಟು ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪತ್ರಿಕೆ ಆಯೋಜಿಸಿದ್ದ ‘ವೋಟ್ ಮಾಡೋಣ ಬನ್ನಿ’ ಯುವ ಅಭಿಯಾನದ ಪಕ್ಷಿನೋಟ.

ಆರಂಭದಲ್ಲಿ ಮಾತನಾಡಿದ ದಾಮೋದರ ಆಚಾರ್ಯ, ‘ಪ್ರಜಾ ತಂತ್ರವು ನಾವು ರಚಿಸಿ, ನಮಗೆ ಅರ್ಪಿಸಿಕೊಂಡ ಸಂವಿಧಾನ ಕಲ್ಪಿಸಿದ ಆಡಳಿತ ವಿಧಾನ. ಚುನಾವಣೆ ಅಂದರೆ ಜನರು ತಾವೇ ತಮ್ಮನ್ನು ಆಳಿಕೊಳ್ಳಲು ಹೊಂದಿರುವ ಅಧಿಕಾರವನ್ನು ಅವರ ಪ್ರತಿನಿಧಿಗಳಿಗೆ ತಾತ್ಕಾಲಿಕ ನೆಲೆಯಲ್ಲಿ ವರ್ಗಾಯಿಸುವ ಶಾಸನಬದ್ಧ ಪ್ರಕ್ರಿಯೆ. ಮತದಾನವು ಮುಂದಿನ ಒಂದು ಅವಧಿಯಲ್ಲಿ ಏನಾಗಬೇಕು, ಏನು ಮಾಡಬೇಕು ಎಂದು ಜನರು ಪ್ರತಿನಿಧಿ ಗಳಿಗೆ ನೀಡುವ ಆದೇಶ. ಹಾಗಾಗಿ ಅದು ನಮ್ಮ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಸಾಧನ. ಅದರ ಚಲಾವಣೆ ಆಗದಿದ್ದರೆ, ಚಲಾವಣೆಯ ಪ್ರಕ್ರಿಯೆ ಭ್ರಷ್ಟಗೊಂಡರೆ, ಅಸ್ತಿತ್ವಕ್ಕೆ ಬರುವ ಆಡಳಿತ ಪ್ರಜಾತಂತ್ರದ ಅಣಕು ರೂಪವಾಗಿರುತ್ತದೆ ಮತ್ತು ಅದರಿಂದ ಸಂವಿಧಾನದ ಅವಹೇಳನ ಆಗುತ್ತದೆ’ ಎಂದರು.

ನಮ್ಮ ಎಲ್ಲ ಪ್ರಾಚೀನ ಸ್ಮೃತಿಗಳು ಆಯಾ ಕಾಲದ ಸಂವಿಧಾನಗಳು. ನಮ್ಮ ಪ್ರಸಕ್ತ ಸಂವಿಧಾನವು ನಮ್ಮ ಕಾಲದ ಸ್ಮೃತಿ. ಅದರ ಅವಹೇಳನ ಸಲ್ಲದು. ಅದಕ್ಕೆ ಗೌರವ ಸಲ್ಲಿಸುವುದರ ಮೊದಲ ಹೆಜ್ಜೆ ಚುನಾವಣೆಯಲ್ಲಿ ವಿವೇ ಚನೆಯಿಂದ, ಆಮಿಷಮುಕ್ತವಾಗಿ, ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸುವುದು. ಆ ಮೂಲಕ ನಮ್ಮ ಆದೇಶಕ್ಕೆ ಬದ್ಧರಾಗುವಂತಹ ಪ್ರತಿನಿ ಧಿಗಳನ್ನು ಆಯ್ಕೆ ಮಾಡುವುದು.

ಈಗ ತಮ್ಮ ಸಂಖ್ಯಾಬಲದ ಮೂಲಕ ನಿರ್ಣಾಯಕರಾಗುತ್ತಿರುವ ಯುಜನರು ಚುನಾವಣೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವುದರ ಮೂಲಕ ಪ್ರಬುದ್ಧತೆ ಮೆರೆಯಬೇಕು ಎಂದು ಹೇಳಿ ವಿದ್ಯಾರ್ಥಿಗಳ ಚಿಂತನೆ, ಸ್ಪಂದನೆಗೆ ಚಾಲನೆ ನೀಡಿದರು. ಅವರು ಮುಂದಿರಿಸಿದ ವಿಚಾರಗಳನ್ನು ಆಸಕ್ತಿಯಿಂದ ಆಲಿಸಿದ ವಿದ್ಯಾರ್ಥಿ ಗಳು ತಮ್ಮ ನಿಲುವುಗಳನ್ನು ಸೇರಿಸಿದರು. ‌

‘ಜನಸಹಭಾಗಿತ್ವವು ಪ್ರಜಾ ತಂತ್ರದ ಮೂಲ ನೆಲೆ. ಗರಿಷ್ಠ ಗಾತ್ರದ ಜನಸಹಭಾಗಿತ್ವಕ್ಕೆ ಇರುವ ಅವಕಾಶ ಮತದಾನ. ವಿವೇಚನಾಯುಕ್ತ ಮತದಾನದ ಮೂಲಕ ಅಪೇಕ್ಷಿತ ಬದಲಾವಣೆ ಸಾಧ್ಯ. ಸುಶಿಕ್ಷಿತರು. ನಗರವಾಸಿಗಳು ಮತದಾನದಿಂದ ವಿಮುಖರಾಗುತ್ತಿರುವುದು ಸತ್ಯ. ಮತಸೆಳೆಯಲು ಭ್ರಷ್ಟ ವಿಧಾನಗಳ ಬಳಕೆ ಯಾಗುತ್ತಿದೆ. ಯುವಜನರು ಇದಕ್ಕೆ ಉತ್ತರವಾಗಬೇಕು; ಬದಲಾವಣೆಗೆ ಮೊದಲಾಗಬೇಕು.

ಅನ್ಯರಿಗೂ ಅರಿವು ನೀಡಬೇಕು. ಚುನಾವಣೆಯಲ್ಲಿ ಪ್ರತಿ ಮತವೂ ನಿರ್ಣಾಯಕ. ಯುವಜನರು ಎಚ್ಚರಗೊಂಡರಷ್ಟೆ ದೇಶದ ಪ್ರಜಾ ತಂತ್ರ ಭದ್ರವಾಗುತ್ತದೆ. ಕೇಂದ್ರ, ರಾಜ್ಯಗಳ ಚುನಾವಣೆ ಏಕ ಕಾಲದಲ್ಲಿ ನಡೆಯಬೇಕು ಎಂಬ ವಿಚಾರಗಳ ಜತೆಗೆ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಬೇಕು, ಮನೆಮನೆ ಪ್ರಚಾ ರದ ಬದಲಿಗೆ ಆಧುನಿಕ ಪ್ರಚಾರ ಸಾಧನದ ಬಳಕೆಯಾಗಬೇಕು’ ಎಂಬ ವಿಚಾರಪೂರಿತ ಅನಿಸಿಕೆಗಳು ವಿದ್ಯಾರ್ಥಿಗಳಿಂದ ವ್ಯಕ್ತವಾದವು.

ಅರುಣ, ಮಹೇಶ್, ನರೇಂದ್ರ, ಕವಿತಾ ಎತ್ತಿದ ಸಂಶಯಗಳಿಗೆ, ಪ್ರಶ್ನೆಗಳಿಗೆ ದಾಮೋದರ ಆಚಾರ್ಯ ಪರಿಹಾರ, ಉತ್ತರ ನೀಡಿದರು. ಶಬರಿ ಸ್ವಾಗತಿಸಿ, ವಿನೋದಾ ವಂದಿಸಿ ದರು. ಸುಧಾ ನಿರೂಪಿಸಿದರು. ಸಿಡಬ್ಲ್ಯೂಸಿಯ ಶ್ರೀನಿವಾಸ ಗಾಣಿಗ, ಕನ್ನಡ ಪ್ರಾಧ್ಯಾಪಕ ನಾಗರಾಜ ಶೆಟ್ಟಿ ಇದ್ದರು.

ಯುವಜನತೆಯೇ ಭರವಸೆಯ ಬೆಳಕು

ದೇಶದ ಪ್ರಜಾಪ್ರಭುತ್ವ ಒಂದು ಸಾಗರವಾದರೆ ನಾವು ಅದರಲ್ಲಿ ಲೀನವಾದ ತೊರೆಗಳು. ದೇಶದ ಇಂದಿನ ರಾಜಕೀಯ ಸ್ಥಿತಿ, ಪ್ರಜಾತಂತ್ರ ಸಾಗುತ್ತಿರುವ ದಾರಿ ಗಮನಿಸಿದಾಗ ಮೂಡುವ ನಿರಾಸೆಯ ನಡುವೆ ಯುವಜನತೆ ಮಾತ್ರ ಭರವಸೆಯ ಬೆಳಕಿನಂತೆ ಕಂಡುಬರುತ್ತಾರೆ. ಮುಂದಿನ ಎರಡು ದಶಕ ಅವರದಾಗಲಿದೆ. ಅವರು ಹೊಸದಿಕ್ಕಿನಲ್ಲಿ ಸಾಗಬಲ್ಲರು.

ಅವರು ಮಾಡುವ ಮತದಾನ ನಾಯಕರನ್ನು ಸೃಷ್ಟಿಸುವ ಬದಲು ಪ್ರತಿನಿಧಿಗಳನ್ನು ಸೃಷ್ಟಿಸುವಂತಾಗಬೇಕು. ಯುವಜನರಲ್ಲಿ ಪ್ರಸಕ್ತ ಸ್ಥಿತಿಯ ಬಗೆಗೆ ರೋಷ ಇದೆ. ಆದರೆ ಅದರಿಂದ ಉದ್ದೇಶ ಸಾಧನೆಯಾಗದು. ಅವರ ರೋಷ ಆಗಬೇಕಾದ ಬದಲಾವಣೆಯ ಬಗೆಗಿನ ಚಿಂತನೆಯಾಗಿ ಪರಿವರ್ತನೆಯಾಗಬೇಕು. ಎಲ್ಲರನ್ನು ಒಳಗೊಂಡು ಬದಲಾವಣೆಯತ್ತ ಹೆಜ್ಜೆಹಾಕುವ ನಿರ್ಧಾರವಾಗಿ, ಕ್ರಿಯೆಯಾಗಿ ಮಾರ್ಪಡಬೇಕು. ಎಲ್ಲ ಭವಿಷ್ಯಚಿಂತಕ ಹಿರಿಯರು, ಹೊಣೆಯರಿತು ವರ್ತಿಸುವ ಮಾಧ್ಯಮಗಳು ಅವರಲ್ಲಿ ಈ ನಿಟ್ಟಿನ ಪ್ರೇರಣೆ, ಸ್ಫೂರ್ತಿ ತುಂಬಬೇಕು.
ಬಿ. ದಾಮೋದರ ಆಚಾರ್ಯ, ರಾಜ್ಯ ಸಂಚಾಲಕ, ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ

* * 

ನಾಗರಿಕನ ಹಕ್ಕುಗಳಲ್ಲೆಲ್ಲ ಮತದಾನದ ಹಕ್ಕು ಅತ್ಯಂತ ಮಹತ್ವದ್ದು. ಅದನ್ನು ಮಾರಿಕೊಂಡರೆ ಸಿಗುವ ಹಣ ಎಷ್ಟು ದಿನಕ್ಕೆ ಸಾಲುತ್ತದೆ? ಭ್ರಷ್ಟಾಚಾರ ಮುಕ್ತ, ಶುಭ್ರ ಆಯ್ಕೆಯ ನೆಲಗಟ್ಟಿನ ಮೇಲೆ ಮಾತ್ರ ಪ್ರಾಮಾಣಿಕ ಸರ್ಕಾರದ ಸೌಧ ನಿರ್ಮಾಣವಾಗುತ್ತದೆ.
ಕೀರ್ತನಾ

ಮತ ಮಾರಾಟದ ಸರಕಲ್ಲ. ಅದನ್ನು ಹಣನೀಡಿ ಕೊಂಡವರು ಗಳಿಸಿದ ಸ್ಥಾನವನ್ನು ಹಣ ಸಂಗ್ರಹಕ್ಕೆ ಬಳಸುವುದು ಅನಿವಾರ್ಯ ಮತ್ತು ಖಚಿತ. ಬದಲಾವಣೆ ನಮ್ಮಿಂದ ಆರಂಭವಾಗಬೇಕು.
ಪಲ್ಲವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT