ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರ ಜಾತ್ರೆ: ಬಂಡಿಗಳ ಸೊಬಗು

Last Updated 1 ಫೆಬ್ರುವರಿ 2018, 9:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ಫೆ. 3ರಂದು ಮೈಲಾರಲಿಂಗ ಸ್ವಾಮಿಯ ಕಾರಣಿಕ ಮಹೋತ್ಸವ ಜರುಗಲಿದೆ. ಈ ಭಾಗದ ರೈತರು ಸಿಂಗರಿಸಿದ ಸವಾರಿ ಬಂಡಿಯಲ್ಲಿ ಸುಕ್ಷೇತ್ರಕ್ಕೆ ತೆರಳುತ್ತಿದ್ದು, ಮೈಲಾರ–ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಕೃಷಿ ಪರಿವಾರಗಳ ಜಾತ್ರೆಯ ಸೊಬಗು ಕಣ್ಮನ ಸೆಳೆಯುತ್ತಿದೆ.

ತಾಲ್ಲೂಕು ಹಾಗೂ ನೆರೆಯ ಹಾವೇರಿ ಜಿಲ್ಲೆಯ ರೈತರು ಪರಿವಾರದೊಡನೆ ಬುಧವಾರದಿಂದಲೇ ಮೈಲಾರ ಸುಕ್ಷೇತ್ರದತ್ತ ಮುಖ ಮಾಡಿದ್ದಾರೆ. ಹಾರ, ತುರಾಯಿ, ಬಣ್ಣ ಬಣ್ಣದ ರಿಬ್ಬನ್‌ಗಳಿಂದ ಅಲಂಕೃತಗೊಂಡ ಎತ್ತುಗಳ ಗೆಜ್ಜೆಯ ಸದ್ದಿನೊಂದಿಗೆ ರಸ್ತೆಯುದ್ದಕ್ಕೂ ಸಾಲು ಸಾಲು ಸವಾರಿ ಬಂಡಿಗಳ ಭರಾಟೆಯ ಓಟ ಆಕರ್ಷಣೀಯವಾಗಿ ಕಾಣಸುತ್ತಿದೆ.

ವಿಶೇಷವಾಗಿ ಗ್ರಾಮೀಣ ಜನರೇ ಪಾಲ್ಗೊಳ್ಳುವ ಜಾನಪದ ಸೊಗಡಿನ ಮೈಲಾರ ಜಾತ್ರೆಯಲ್ಲಿ ರೈತರ ಕುಟುಂಬ ಸದಸ್ಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಆರ್ಥಿಕವಾಗಿ ಅನುಕೂಲವಿದ್ದವರು ಸಹ ಸಂಪ್ರದಾಯದಂತೆ ಬಂಡಿಗಳಲ್ಲೇ ತೆರಳಿ ಬಿಡಾರ ಹೂಡಿ, ನಾಲ್ಕಾರು ದಿನ ಉತ್ಸಾಹದಿಂದ ಜಾತ್ರೆ ಮಾಡುತ್ತಾರೆ. ಧಾರ್ಮಿಕ ಇಷ್ಟಾರ್ಥ ಪೂರೈಸುವ ಜೊತೆಗೆ ಕೃಷಿಕರು ಮುಂದಿನ ವರ್ಷದ ತಮ್ಮ ಬೇಸಾಯದ ಸಿದ್ಧತೆ ಮಾಡಿಕೊಳ್ಳುವುದು ಕೂಡ ಮೈಲಾರ ಜಾತ್ರೆಯ ವೈಶಿಷ್ಟ್ಯತೆಯಾಗಿದೆ.

ಜ.24ರ ರಥಸಪ್ತಮಿಯಂದು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ಪಡೆದುಕೊಂಡಾಗಿನಿಂದ ಮೈಲಾರ ಸುಕ್ಷೇತ್ರದಲ್ಲಿ ಧಾರ್ಮಿಕ ಆಚರಣೆ, ಉತ್ಸವಗಳು ನಿರಂತರವಾಗಿ ಜರುಗುತ್ತಿವೆ. ಬುಧವಾರ ಸುಕ್ಷೇತ್ರದಲ್ಲಿ ಭಾರತ ಹುಣ್ಣಿಮೆಯ ಆಚರಣೆಗೆ ನಾಡಿನ ಮೂಲೆ ಮೂಲೆಗಳಿಂದ ಭಕ್ತ ಸಮೂಹ ಬಂದದ್ದರಿಂದ ಕ್ರಮೇಣ ಜನಸಂದಣಿ ಹೆಚ್ಚಾಗ ತೊಡಗಿದೆ.

ಜಾತ್ರೆಯ ಕೇಂದ್ರ ಬಿಂದುವಾಗಿರುವ ಕಾರಣಿಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ತಾಲ್ಲೂಕಿಗೆ ಜನಸಾಗರ ಹರಿದು ಬರುತ್ತಿದೆ. ಅಪಾರ ಭಕ್ತರು ಪಾದಯಾತ್ರೆಯಲ್ಲಿ ತೆರಳುತ್ತಿದ್ದು, ಮಾರ್ಗದುದ್ದಕ್ಕೂ ಯಾತ್ರಾರ್ಥಿಗಳಿಗೆ ಭಕ್ತರು ಊಟ, ಉಪಾಹಾರ, ತಂಪು ಪಾನೀಯ ವ್ಯವಸ್ಥೆ ಮಾಡಿದ್ದಾರೆ.

ಜಾತ್ರೆಗೆ ಬರುವ ಭಕ್ತಾದಿಗಳಿಗೆ ಜಿಲ್ಲಾಡಳಿತ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಿದೆ. ಜಾತ್ರೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು, ತಾತ್ಕಾಲಿಕ ಆಸ್ಪತ್ರೆ, ಪಶು ಚಿಕಿತ್ಸಾಲಯ, ನೈರ್ಮಲ್ಯ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT