ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಗಡಿಯಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಲು ಮುಂದಾದ ಪೊಲೀಸ್‌ ಇಲಾಖೆ

Last Updated 1 ಫೆಬ್ರುವರಿ 2018, 10:05 IST
ಅಕ್ಷರ ಗಾತ್ರ

ಬೆಳಗಾವಿ: ಯಾವುದೇ ಮುನ್ಸೂಚನೆ ನೀಡದೆ ರಾಜ್ಯದೊಳಗೆ ಪ್ರವೇಶಿಸಿ, ಖಾನಾಪುರ ತಾಲ್ಲೂಕಿನ ಕಳಸಾ ನಾಲಾ ಸ್ಥಳಕ್ಕೆ ಗೋವಾ ಜನಪ್ರತಿನಿಧಿಗಳು ಭೇಟಿ ನೀಡಿದ್ದರ ಹಿನ್ನೆಲೆಯಲ್ಲಿ ಗಡಿಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಕಳೆದ ಒಂದು ತಿಂಗಳಿನಲ್ಲಿ ಮೂರು ಬಾರಿ ಗೋವಾದ ಜನಪ್ರತಿನಿಧಿಗಳಾದ ಸಚಿವ ವಿನೋದ ಪಾಲ್ಯೇಕರ್‌, ವಿಧಾನಸಭಾಧ್ಯಕ್ಷ ಪ್ರಮೋದ ಸಾವಂತ ಸೇರಿದಂತೆ ಕೆಲವರು ಭೇಟಿ ನೀಡಿದ್ದರು. ಅವರು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಜಿಲ್ಲಾಡಳಿತಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಮುನ್ಸೂಚನೆ ನೀಡಿರಲಿಲ್ಲ. ದಿಢೀರನೇ ಆಗಮಿಸಿದ್ದರು. ಜನಪ್ರತಿನಿಧಿಗಳಲ್ಲದೇ ಮಹದಾಯಿ ಬಚಾವ್‌ ಆಂದೋಲನದ ಸದಸ್ಯರು ಕೂಡ ಇದೇ ರೀತಿ ಬಂದುಹೋಗಿದ್ದರು. ಈ ಘಟನೆಗಳಿಂದ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಕ್ಷಣಕಾಲ ತಬ್ಬಿಬ್ಬಾಗಿತ್ತು.

ಮಹದಾಯಿ ವಿಷಯವು ದಿನೇದಿನೇ ಉಲ್ಬಣವಾಗುತ್ತಿದೆ. ರಾಜಕೀಯ ವಿದ್ಯಮಾನಗಳಿಗೆ ಕಾರಣವಾಗುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಹೊಸ್ತಿಲಲ್ಲಿ ಇರುವುದರಿಂದ ಮುಂದೆ ಕೂಡ ಇಂತಹ ಅನಿರೀಕ್ಷಿತ ಭೇಟಿಗಳು ನಡೆಯುವ ಸಾಧ್ಯತೆ ಇರುವುದರಿಂದ ಚೆಕ್‌ ಪೋಸ್ಟ್‌ ತೆರೆಯಲು ಪೊಲೀಸರು ಮುಂದಾಗಿದ್ದಾರೆ.

ಮಹದಾಯಿ ನ್ಯಾಯಾಧೀಕರಣದ ಎದುರು ಈಗಾಗಲೇ ಕರ್ನಾಟಕ ಹಾಗೂ ಗೋವಾ ರಾಜ್ಯಗಳು ತಮ್ಮ ವಾದ ಮಂಡಿಸಿವೆ. ಇನ್ನು ಅಂತಿಮ ತೀರ್ಪು ಬರುವುದಷ್ಟೇ ಬಾಕಿ. ತೀರ್ಪು ಬಂದ ಮೇಲೆ ಯಾವುದೇ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಡಬಾರದು. ಗಡಿಯ ಮೂಲಕ ಯಾವುದೇ ಸಮಾಜ ಘಾತುಕ ಶಕ್ತಿಗಳು ರಾಜ್ಯದೊಳಗೆ ಪ್ರವೇಶಿಸುವುದನ್ನು ತಡೆಗಟ್ಟುವ ಉದ್ದೇಶ ಇಲಾಖೆ ಹೊಂದಿದೆ.

ಗೋವಾ ಗಡಿಗೆ ಸಂಪರ್ಕ ಕಲ್ಪಿಸುವ ಜಾಂಬೋಟಿ, ಲೋಂಡಾ– ರಾಮನಗರ ಹಾಗೂ ಬೆಳಗುಂದಿ ರಸ್ತೆಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸುವ ಸಾಧ್ಯತೆ ಇದೆ. ನೈಸರ್ಗಿಕ ಜಲಮೂಲ ಇರುವ ಹಾಗೂ ಯಥ್ಚೇವಾಗಿ ಬೆಳಕು ಲಭ್ಯವಾಗುವಂತಹ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾರೆ. ಇದರ ಜೊತೆ ಮೊಬೈಲ್‌ ನೆಟ್‌ವರ್ಕ್‌ ಹಾಗೂ ವೈರ್‌ಲೆಸ್‌ ಸಿಗ್ನಲ್‌ ಲಭ್ಯವಾಗುವಂತಹ ಪ್ರದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ಶೀಘ್ರ ಚೆಕ್‌ಪೋಸ್ಟ್‌ ಸ್ಥಾಪನೆ: ಮಹದಾಯಿ ಹೋರಾಟ ತೀವ್ರತೆ ಪಡೆಯುತ್ತಿದೆ. ನ್ಯಾಯಾಧೀಕರಣದ ತೀರ್ಪು ಸದ್ಯದಲ್ಲಿಯೇ ಹೊರಬೀಳುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ನಿಗಾವಹಿಸಲು ಚೆಕ್‌ ಪೋಸ್ಟ್‌ ನಿರ್ಮಿಸಲಾಗುತ್ತಿದೆ. ರಾಜ್ಯದೊಳಗೆ ಬರುವ ಹಾಗೂ ಹೊರಹೋಗುವ ವಾಹನಗಳು ಹಾಗೂ ಜನರ ಮೇಲೆ ನಿಗಾ ವಹಿಸಲಾಗುವುದು ಎಂದು ಉತ್ತರ ವಲಯದ ಐಜಿಪಿ ಅಲೋಕ್‌ ಕುಮಾರ್‌ ’ಪ್ರಜಾವಾಣಿ’ಗೆ ತಿಳಿಸಿದರು.

ಗೋವಾ ಗಡಿಗೆ ಸಂಪರ್ಕ ಕಲ್ಪಿಸುವ ಜಾಂಬೋಟಿ ಅರಣ್ಯ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಿಗೆ ಫೆಬ್ರುವರಿ 4ರಂದು ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದೇವೆ. ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ಸೇರಿ ಇತರ ಹಲವು ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ನಮ್ಮೊಂದಿಗೆ ಇರಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT