ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾಪೂರ್ವ ಬಜೆಟ್ ಕ್ಲಿಷ್ಟಕರ ಕಸರತ್ತು

Last Updated 2 ಜುಲೈ 2019, 16:39 IST
ಅಕ್ಷರ ಗಾತ್ರ

ಬಹುಶಃ ಯಾರಿಗೂ ಹೆಚ್ಚೇನೂ ಸಂತಸ ನೀಡದ ಬಜೆಟ್ ಇದು ಎಂಬುದು ಮೇಲ್ನೋಟದ ಅನಿಸಿಕೆ. 2019ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿರುವುದರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದ ಪೂರ್ಣಾವಧಿಯ ಕಡೆಯ ಬಜೆಟ್ ಇದು. ಈ ವರ್ಷ ಎಂಟು ರಾಜ್ಯಗಳಲ್ಲೂ ಚುನಾವಣೆಗಳು ನಡೆಯಲಿವೆ. ಹೀಗಾಗಿ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಜನಸಾಮಾನ್ಯರಲ್ಲಿ ಇದ್ದದ್ದು ಸಹಜವೇ ಆಗಿತ್ತು. ಆದರೆ ಹಣಕಾಸು ಶಿಸ್ತು ಕಾಪಾಡಿಕೊಳ್ಳುತ್ತಲೇ ಗ್ರಾಮೀಣ ಸಂಕಷ್ಟ ಪರಿಹಾರ ಹಾಗೂ ಆರ್ಥಿಕ ಅಭಿವೃದ್ಧಿಗೆ ಕ್ರಮಗಳನ್ನು ರೂಪಿಸಲು ಕಸರತ್ತು ನಡೆಸಿರುವುದು ವೇದ್ಯ. ಕೃಷಿಗೆ ಸಂಬಂಧಿಸಿದಂತೆ ಅನೇಕ ಪ್ರಕಟಣೆಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಡಿದ್ದಾರೆ. ಮುಂಗಾರು ಬೆಳೆಗಳಿಗೆ ಬೆಳೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ಪ್ರಕಟಿಸಲಾಗಿದೆ. ಇದು ಸಂಕಷ್ಟದಲ್ಲಿದ್ದ ರೈತರ ಪ್ರಮುಖ ಬೇಡಿಕೆ ಆಗಿತ್ತು. ಕಳೆದ ವರ್ಷವಂತೂ ರಾಷ್ಟ್ರದಲ್ಲಿ ರೈತರ ಚಳವಳಿ ವ್ಯಾಪಕವಾಗಿತ್ತು. ರಾಷ್ಟ್ರದ ಅರ್ಧದಷ್ಟು ಉದ್ಯೋಗ ಹಾಗೂ ಮೂರನೇ ಎರಡರಷ್ಟು ಮತಗಳು ಕೃಷಿ ಕ್ಷೇತ್ರದಲ್ಲಿವೆ ಎಂಬುದನ್ನು ಮರೆಯಲಾಗದು. ಹೀಗಾಗಿ ಅವರ ಬೇಡಿಕೆಗಳಿಗೆ ಕಿವಿಗೊಡುವುದು ಸರ್ಕಾರಕ್ಕೆ ಅನಿವಾರ್ಯವೂ ಆಗಿತ್ತು. ಬೆಳೆದ ಬೆಳೆಗೆ ಮಾರುಕಟ್ಟೆ ಲಭ್ಯತೆ ಹಾಗೂ ಬೆಲೆ ಏರಿಳಿತಗಳಿಂದ ರಕ್ಷಣೆಯ ಸವಾಲು ರೈತರನ್ನು ಅನುದಿನವೂ ಕಾಡುವ ಸಂಗತಿ. ದಮನಕಾರಿ ಎಪಿಎಂಸಿಗಳಿಂದ ವಿಮೋಚನೆಗೊಳಿಸುವ ಸರ್ಕಾರದ ಬದ್ಧತೆಯನ್ನು ಜೇಟ್ಲಿ ಪುನರುಚ್ಚರಿಸಿರುವುದು ಸಮಾಧಾನಕರ.

ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಪಾಲನೆ ಹಾಗೂ ಸಾಮಾಜಿಕ ವಲಯಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಪ್ರಸ್ತಾವಗಳು ಈ ಬಜೆಟ್‌ನ ಮುಖ್ಯಾಂಶಗಳು ಎನ್ನಬಹುದು. ಅದರಲ್ಲೂ ‘ಆಯುಷ್ಮಾನ್ ಭಾರತ’ ಯೋಜನೆ ಅಡಿ 10 ಕೋಟಿ ಬಡ ಕುಟುಂಬಗಳನ್ನು ಆರೋಗ್ಯ ರಕ್ಷಣೆ ವಿಮೆ ವ್ಯವಸ್ಥೆಗೆ ಒಳಪಡಿಸುತ್ತಿರುವುದು ಅದ್ಭುತ ಹೆಜ್ಜೆ ಎನ್ನಬಹುದು. ಬಜೆಟ್ ಮಂಡನೆ ನಂತರ ನೀಡಿದ ಸಂದರ್ಶನದಲ್ಲಿ ಈ ಯೋಜನೆಯನ್ನು ‘ಮೋದಿ ಕೇರ್’ ಎಂದು ಜೇಟ್ಲಿ ಕರೆದಿದ್ದಾರೆ. ಆದರೆ ಈ ಯೋಜನೆ ಅನುಷ್ಠಾನದ ಬಗ್ಗೆ ಸ್ಪಷ್ಟತೆ ಬೇಕು. ಇದಕ್ಕಾಗಿ ವೃತ್ತಿಪರ ವೈದ್ಯಕೀಯ ಸೇವಾ ವ್ಯವಸ್ಥೆ ರೂಪಿಸಲು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ.

ಪ್ರತಿ ತಿಂಗಳು ವೇತನ ಪಡೆಯುವ ಮಧ್ಯಮ ವರ್ಗಕ್ಕೆ ಈ ಬಜೆಟ್ ನಿರಾಶಾದಾಯಕವಾಗಿದೆ. ಬಿಜೆಪಿಯನ್ನು ಹೆಚ್ಚು ಬೆಂಬಲಿಸಿದ ವರ್ಗ ಇದು. ಆದಾಯ ತೆರಿಗೆ ದರ ಮತ್ತು ಹಂತಗಳಲ್ಲಿ ಭರ್ಜರಿ ಕೊಡುಗೆಗಳು ಇರಬಹುದು ಎನ್ನುವ ಈ ವರ್ಗದ ಲೆಕ್ಕಾಚಾರ ತಲೆಕೆಳಗಾಗಿದೆ. ಅನೇಕ ವರ್ಷಗಳ ನಂತರ ವಾರ್ಷಿಕ ₹ 40 ಸಾವಿರದವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತೆ ಆರಂಭವಾಗಲಿದೆ. ಆದರೆ ಇದೇನೂ ಹೆಚ್ಚು ಉತ್ಸಾಹ ಮೂಡಿಸುವಂತಹದ್ದಲ್ಲ. ಬರೀ ಸಾಂಕೇತಿಕ ಕೊಡುಗೆ ಅಷ್ಟೆ. ಹಾಗೆಯೇ, ಮ್ಯುಚುವಲ್ ಫಂಡ್ ಡಿವಿಡೆಂಡ್ ಮೇಲೆ ಶೇ 10ರ ತೆರಿಗೆಯು ಮಧ್ಯಮವರ್ಗದ ಜನರಿಗೆ ತೆರಿಗೆ ಹೊರೆ ಹೆಚ್ಚಿಸುವಂತಹದ್ದಾಗಿದೆ. ಆದರೆ, ಠೇವಣಿಗಳ ಮೇಲಿನ ಬಡ್ಡಿ, ವೈದ್ಯಕೀಯ ವೆಚ್ಚ ವಿನಾಯ್ತಿ ಮಿತಿ ಹೆಚ್ಚಳವು ನಿವೃತ್ತರ ಮೊಗದಲ್ಲಿ ನಗು ಅರಳಿಸುವಲ್ಲಿ ಸಫಲವಾಗಿದೆ. ಆರೋಗ್ಯ ವೆಚ್ಚದಲ್ಲಿನ ಏರಿಕೆ ಕಾರಣಕ್ಕೆ ಈ ವಿನಾಯ್ತಿಯ ಅಗತ್ಯ ಹೆಚ್ಚಿತ್ತು.

ಶೇ 30ರಿಂದ ಶೇ 25ರವರೆಗೆ ಕಾರ್ಪೊರೇಟ್ ತೆರಿಗೆ ದರ ಕಡಿತ ₹ 250 ಕೋಟಿಗಿಂತ ಹೆಚ್ಚಿನ ವಹಿವಾಟು ಇರುವವರಿಗಷ್ಟೇ ಅನುಕೂಲಕರ. ಈವರೆಗೆ ಇದು ₹ 50 ಕೋಟಿ ವಹಿವಾಟು ನಡೆಸುವವರಿಗಷ್ಟೇ ಇತ್ತು. ಎಲ್ಲಾ ಕಾರ್ಪೊರೇಟ್‍‍ ಸಂಸ್ಥೆಗಳಿಗೂ ಈ ತೆರಿಗೆ ದರ ಕಡಿತ ವಿಸ್ತರಣೆ ಆಗದಿರುವುದು ಹೂಡಿಕೆದಾರರಿಗೆ ಒಳ್ಳೆಯ ಸುದ್ದಿಯಲ್ಲ. ಕಾರ್ಪೊರೇಟ್ ಪರ ಸರ್ಕಾರ ಎಂದು ಬಿಂಬಿತವಾಗುವುದು ಚುನಾವಣಾ ವರ್ಷದಲ್ಲಿ ಬೇಡ ಎಂಬುದು ಬಹುಶಃ ಇದಕ್ಕೆ ಕಾರಣವಿರಬಹುದು. ಹಾಗೆಯೇ ₹ 1 ಲಕ್ಷದಷ್ಟು ಷೇರು ಗಳಿಕೆಯ ಮೇಲೆ ಶೇ 10ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯನ್ನು ಶುರುಮಾಡಿರುವುದೂ ಹೂಡಿಕೆದಾರರಿಗೆ ತಣ್ಣೀರೆರಚುವಂತಹದ್ದು. ಷೇರು ವಿಕ್ರಯ ಗುರಿ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಇತರ ಕ್ಷೇತ್ರಗಳಲ್ಲಿ ಆದಾಯ ಕೊರತೆಗೆ ಪರಿಹಾರ ಒದಗಿಸಬಹುದು. ಸರ್ಕಾರಿ ಸ್ವಾಮ್ಯದ ಮೂರು ದೊಡ್ಡ ವಿಮಾ ಸಂಸ್ಥೆಗಳ ವಿಲೀನದ ಯೋಜನೆ ಬಹುಶಃ ಬಹು ಲೆಕ್ಕಾಚಾರದ ನಡೆ ಎನ್ನಬಹುದು.

ಮೂಲ ಸೌಕರ್ಯ ವಲಯವನ್ನು ಆರ್ಥಿಕ ಪ್ರಗತಿಯ ಚಾಲಕಶಕ್ತಿಯಾಗಿ ಬಜೆಟ್ ಗುರುತಿಸಿರುವುದು ಸರಿಯಾದುದು. ರಸ್ತೆ ಹಾಗೂ ರೈಲ್ವೆ ವಲಯಕ್ಕೆ ಭಾರಿ ಹೂಡಿಕೆ ತೋರಿಸಲಾಗಿದೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಈ ಅಂಶಗಳನ್ನು ಗಮನಿಸಿದಲ್ಲಿ ವೆಚ್ಚದ ಬಜೆಟ್ ಆಗಿಯೇ ಇದು ಕಂಡು ಬರುತ್ತದೆ. ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬುದು ಸ್ಪಷ್ಟವಿಲ್ಲ. ಈ ಪ್ರಕ್ರಿಯೆಯಲ್ಲಿ ಆರ್ಥಿಕ ಶಿಸ್ತನ್ನು ಬಲಿಕೊಡಲಾಗಿದೆ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.2ಕ್ಕೆ ವಿತ್ತೀಯ ಕೊರತೆ ನಿಗದಿಗೊಳಿಸುವ ಗುರಿ ಕೈಬಿಟ್ಟಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT