ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂಷೆಯ ಒಡಲು ಮಲಿನಗೊಂಡಿತೆ?

Last Updated 2 ಫೆಬ್ರುವರಿ 2018, 6:44 IST
ಅಕ್ಷರ ಗಾತ್ರ

ಭಾರತೀನಗರ: ಸಮೀಪದ ಪಕ್ಷಿಧಾಮ ಕೊಕ್ಕರೆಬೆಳ್ಳೂರು ಗ್ರಾಮದಲ್ಲಿ ಸಂಭವಿಸುತ್ತಿರುವ ಕೊಕ್ಕರೆಗಳ ಸರಣಿ ಸಾವಿಗೆ ಶಿಂಷಾ ನದಿ ನೀರು ಕಾರಣ ಇರಬಹುದೇ..?

ಪರಿಸರಪ್ರಿಯರಿಗೆ ಹೀಗೊಂದು ಅನುಮಾನ ಕಾಡುತ್ತಿದೆ. ಸಾಹಿತಿ ತೈಲೂರು ವೆಂಕಟಕೃಷ್ಣ, ಉಪನ್ಯಾಸಕ ಡಾ.ಬೆಳ್ಳೂರು ವೆಂಕಟಪ್ಪ, ಬೆಳ್ಳೂರು ಸ್ವಾಮಿ, ಸಾಮಾಜಿಕ ಕಾರ್ಯಕರ್ತ ಬ್ಯಾಡರಹಳ್ಳಿ ಶಿವಕುಮಾರ್‌ ಸೇರಿದಂತೆ ಹಲವರು ಶಿಂಷೆಯ ಒಡಲು ಮಲಿನಗೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ‘ಮಲಿನ ನೀರೇ ಕೊಕ್ಕರೆಗಳ ಸಾವಿಗೆ ಕಾರಣವಾಗುತ್ತಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೊಪ್ಪದ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರು ನೇರವಾಗಿ ಹರಿದು ಬಂದು ಶಿಂಷಾ ನದಿಯನ್ನು ಸೇರುತ್ತಿದೆ. ಇದರಿಂದ ನದಿ ಕಲುಷಿತಗೊಂಡಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಬ್ಯಾಡರಹಳ್ಳಿ ಶಿವಕುಮಾರ್.

‘ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರೂ ಶಿಂಷಾ ನದಿಯನ್ನು ಸೇರುತ್ತಿದೆ. ಇದರಿಂದ ನದಿಯಲ್ಲಿನ ಮೀನುಗಳು ಕೂಡ ಸಾವನ್ನಪ್ಪುತ್ತಿವೆ. ರಾಸಾಯನಿಕ ನೀರಿನಿಂದಾಗಿ ನದಿಯಂಚಿನ ಮರಗಿಡಗಳು ಕೂಡ ಒಣಗುತ್ತಿವೆ’ ಎಂದು ಮುತ್ತುರಾಜು ಹೇಳುತ್ತಾರೆ.
‘ಮದ್ದೂರು ಪಟ್ಟಣದ ಬಹುತೇಕ ತ್ಯಾಜ್ಯ ನೀರು ಈ ನದಿಯ ಒಡಲು ಸೇರುತ್ತಿದೆ. ಇದು ಅಮೂಲ್ಯ ಜೀವರಾಶಿಯನ್ನು ಬಲಿ ತೆಗೆದುಕೊಳ್ಳುತ್ತಿದೆ’ ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ಕಳವಳ ವ್ಯಕ್ತಪಡಿಸುತ್ತಾರೆ.

‘ಮದ್ದೂರು ಪುರಸಭೆ ಮಲಿನ ನೀರಿನ ಶುದ್ಧೀಕರಣವನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುತ್ತಿಲ್ಲ. ಮಲಿನ ನೀರು ನೇರವಾಗಿ ನದಿಯನ್ನು ಸೇರಿ ಪಕ್ಷಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಅಲ್ಲದೇ ಮಂಡ್ಯ ನಗರದ ಒಳಚರಂಡಿ ನೀರು ಕೂಡ ಸೂಳೆಕೆರೆಯನ್ನು ಸೇರುತ್ತಿದೆ. ಇದೂ ಕೂಡ ಕೊಕ್ಕರೆಗಳ ಸಾವಿಗೆ ಮುಖ್ಯ ಕಾರಣ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಮದ್ದೂರು ಪಟ್ಟಣದ ಒಳಚರಂಡಿ ನೀರನ್ನು ಪಟ್ಟಣದ ಹೊಳೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಪುರಸಭೆಯು ಲಕ್ಷಾಂತರ ಹಣ ವ್ಯಯಿಸುತ್ತಿದೆ. ಈ ನೀರನ್ನು ರೈತರು ಕೂಡ ವ್ಯವಸಾಯಕ್ಕೆ ಬಳಸಿ ಕೊಳ್ಳುತ್ತಿದ್ದಾರೆ’ ಎಂದು ಪುರಸಭೆಯ ಪರಿಸರ ಎಂಜಿನಿಯರ್‌ ಎಸ್‌.ಮೀನಾಕ್ಷಿ ಹೇಳಿದರು.

ಒಂದು ಕೊಕ್ಕರೆ ಅಸ್ವಸ್ಥ : ಗ್ರಾಮದಲ್ಲಿ ಕೊಕ್ಕರೆಗಳು ಅಸ್ವಸ್ಥವಾಗುವುದು ಮುಂದುವರಿದಿದೆ. ಗುರುವಾರ ಮತ್ತೊಂದು ಹೆಜ್ಜಾರ್ಲೆ ಅಸ್ವಸ್ಥಗೊಂಡು ಮರದಿಂದ ಕೆಳಕ್ಕುರುಳಿದೆ. ಔಷಧ ಸಿಂಪಡಿಸಿದರೂ ಕೊಕ್ಕರೆಗಳು ಅಸ್ವಸ್ಥಗೊಳ್ಳುತ್ತಿರುವುದಕ್ಕೆ ಆತಂಕ ಪಡುವಂತಾಗಿದೆ.

* * 

ಮದ್ದೂರು ಪಟ್ಟಣದ ಒಳಚರಂಡಿ ನೀರನ್ನು ಪಟ್ಟಣದ ಹೊಳೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿದೆ ಎಸ್‌.ಮೀನಾಕ್ಷಿ, ಪರಿಸರ ಎಂಜಿನಿಯರ್‌, ಪುರಸಭೆ, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT