ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ: ಡಾ. ಅರವಿಂದ್ ನಿಷ್ಣೋಯ್

Last Updated 2 ಫೆಬ್ರುವರಿ 2018, 7:16 IST
ಅಕ್ಷರ ಗಾತ್ರ

ಉಡುಪಿ: ಹೃದಯ ದೊಡ್ಡ ರಕ್ತನಾಳಗಳ ಸ್ಥಾನ ಪಲ್ಲಟದಿಂದ ಬಳಲುತ್ತಿದ್ದ 11 ದಿನದ ಮಗುವಿಗೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಹೃದ್ರೋಗ ವಿಭಾಗದ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಮಗು ಚೇತರಿಸಿಕೊಂಡಿದ್ದು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಸ್ಪತ್ರೆಯ ಹೃದ್ರೋಗ ವಿಭಾಗದ ಶಸ್ತ್ರ ಚಿಕಿತ್ಸಕ ಡಾ. ಅರವಿಂದ ಬಿಷ್ಣೋಯ್, ‘ಮಗು ಜನಿಸಿದಾಗ ಹೃದಯ ಸಮಸ್ಯೆ ಇರುವುದು ಗೊತ್ತಾಗಿತ್ತು. ಅಳುವಾಗ ದೇಹ ನೀಲಿ ಬಣ್ಣಕ್ಕೆ ತಿರುಗುತ್ತಿತ್ತು ಹಾಗೂ ಅದು ತಣ್ಣಗಿರುತ್ತಿತ್ತು. ಹೃದಯ ಸಂಬಂಧಿಸಿ ಸಮಸ್ಯೆ ಎಂದು ಗೊತ್ತಾದ ನಂತರ ಮಗುವಿನ ಪೋಷಕರು ಆಸ್ಪತ್ರೆಗೆ ಬಂದರು. 24 ಗಂಟೆಯೊಳಗೆ ತಪಾಸಣೆ ನಡೆಸಿ ದೊಡ್ಡ ರಕ್ತನಾಳಗಳ ಸ್ಥಾನ ಪಲ್ಲಟ ನ್ಯೂನತೆ (ಟ್ರಾನ್ಸ್‌ಪೋಸಿಷನ್ ಆಫ್ ದಿ ಗ್ರೇಟ್ ಆರ್ಟರಿಸ್‌) ಎಂದು ಖಚಿತಪಡಿಸಿಕೊಳ್ಳಲಾಯಿತು. ಪೋಷಕರ ಒಪ್ಪಿಗೆ ಪಡೆದು ಶಸ್ತ್ರ ಚಿಕಿತ್ಸೆ ನಡೆಸಲಾಯಿತು’ ಎಂದು ಮಾಹಿತಿ ನೀಡಿದರು.

‘ಸಾವಿರಕ್ಕೆ ಒಂದು ಮಗುವಿನಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ನ್ಯೂನತೆ ಇದ್ದಾಗ ಪರಿಸ್ಥತಿ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಪ್ರಕರಣದಲ್ಲಿ ಮಗುವಿನ ತೂಕ ಹೆಚ್ಚಾಗಿದ್ದದು ಅನುಕೂಲವಾಯಿತು. ಈ ಹಿಂದೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾತ್ರ ಈ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಈಗ ಕಸ್ತೂರಬಾ ಆಸ್ಪತ್ರೆಯಲ್ಲಿಯೇ ಎಲ್ಲ ರೀತಿ ಸೌಕರ್ಯ ಇರುವುದರಿಂದ ಹೊರಗೆ ಹೋಗಬೇಕಿಲ್ಲ’ ಎಂದು ಹೇಳಿದರು.

ಮಕ್ಕಳ ತಜ್ಞ ಲೆಸ್ಲಿ ಲೆವಿಸ್ ಮಾತನಾಡಿ, ಈ ಹಿಂದೆಯೂ ಇಂತಹ ಹಲವಾರು ಪ್ರಕರಗಣಗಳು ಆಸ್ಪತ್ರೆಗೆ ಬಂದಿದ್ದವು. ಆದರೆ ಆ ವಿಷಯದಲ್ಲಿ ಪರಿಣತಿ ಇರುವ ಸರ್ಜನ್ ಇಲ್ಲದ ಕಾರಣ ಮಾಡಲು ಆಗುತ್ತಿರಲಿಲ್ಲ. ಬೆಂಗಳೂರಿನ ಕಳುಹಿಸಲಾಗುತ್ತಿತ್ತು. ಪ್ರಯಾಣದ ಅವಧಿಯೂ ಅಪಾಯಕ್ಕೆ ಕಾರಣವಾಗುವ ಸಂದರ್ಭ ಸಹ ಇರುತ್ತಿತ್ತು. ಈಗ ಇಂತಹ ಪ್ರಕರಣಗಳನ್ನು ಬಗೆಹರಿಸಲು ಆಸ್ಪತ್ರೆ ಸಿದ್ಧವಿದೆ’ ಎಂದರು. ಡಾ. ಟಾಮ್ ಇದ್ದರು.

ಶಸ್ರ್ರ ಚಿಕಿತ್ಸೆಯಿಂದ ಪರಿಹಾರ ಸಾಧ್ಯ

ಫೀಟಲ್ ಎಕೋ ಮಾಡುವ ಮೂಲಕ ಮಗುವಿನ ಹೃದಯದ ನ್ಯೂನತೆ ತಿಳಿದುಕೊಳ್ಳಲು ಅವಕಾಶ ಇದೆ. ಆದರೆ ಆ ಸೌಲಭ್ಯ ಎಲ್ಲ ಆಸ್ಪತ್ರೆಗಳಲ್ಲಿ ಇಲ್ಲ. ಅದಕ್ಕೂ ಮುಖ್ಯ ವಿಷಯ ಎಂದರೆ ಎಲ್ಲ ಸಂದರ್ಭದಲ್ಲಿಯೂ ಇದನ್ನು ಮಾಡುವ ಅಗತ್ಯ ಇರುವುದಿಲ್ಲ. ಮೊದಲ ಮಗುವಿಗೆ ಅಂತಹ ಸಮಸ್ಯೆಗಳು ಇದ್ದರೆ ಮಾತ್ರ ಮಾಡಬಹುದು.

ಪತ್ತೆಯಾದರೆ ಅದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಇಲ್ಲವೇ ಜನನದ ನಂತರ ಶಸ್ತ್ರ ಚಿಕಿತ್ಸೆ ನಡೆಸಬಹುದು. ಇದೊಂದು ಕಾಯಂ ಪರಿಹಾರವಾಗಿದ್ದು ಮಗುವಿಗೆ ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗದು ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಹೇಳುತ್ತಾರೆ.

* * 

ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತು, ತೊಂದರೆ ಇದೆ ಎಂದು ಗೊತ್ತಾದ ತಕ್ಷಣ ಅಲ್ಲಿನ ವೈದ್ಯರು ನಮಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚನೆ ನೀಡಿದರು. ಅಲ್ಲದೆ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಹ ಸಹಾಯ ಮಾಡಿದರು.
ಹರೀಶ್
ಮಗುವಿನ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT