ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ಚರ್ಚೆ ನಡೆಸಿದ ಮಠಾಧೀಶರು

Last Updated 2 ಫೆಬ್ರುವರಿ 2018, 7:17 IST
ಅಕ್ಷರ ಗಾತ್ರ

ಉಡುಪಿ:ನಕಲಿ ರಸೀದಿ ಪುಸ್ತಕ ಮುದ್ರಿಸಿ ಕೃಷ್ಣ ಮಠದ ವಾಹನ ನಿಲುಗಡೆ ಸ್ಥಳದಲ್ಲಿ ವಸೂಲಿಯಾದ ಹಣವನ್ನು ದುರುಪಯೋಗ ಮಾಡುತ್ತಿರುವ ಬಗ್ಗೆ ಶಿರೂರು ಮಠದ ಲಕ್ಷ್ಮಿವರ ಸ್ವಾಮೀಜಿ ಅವರು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಗುರುವಾರ ಚರ್ಚೆ ನಡೆಸಿದರು.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ ಅವರು, ‘ಪಾರ್ಕಿಂಗ್‌ ಹಣ ಸಂಗ್ರಹದ ವಿಷಯವನ್ನು ಕೃಷ್ಣ ಮಠ ಪರಿಸರ ಅಭಿವೃದ್ಧಿ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಶಿರೂರು ಸ್ವಾಮೀಜಿ ಅವರು ಅವ್ಯವಹಾರ ಆಗಿರುವ ಬಗ್ಗೆ ದಾಖಲೆ ನೀಡಿದ್ದಾರೆ. ಮೇಲ್ನೋಟಕ್ಕೆ ಅದು ನಿಜ ಅನಿಸುತ್ತಿರುವುದರಿಂದ ಅದರ ಜವಾಬ್ದಾರಿ ಹೊತ್ತಿದ್ದ ಉದಯ್ ಸುಬ್ರಹ್ಮಣ್ಯ ಎಂಬುವರನ್ನು ಅವರ ಸ್ಥಾನದಿಂದ ತೆಗೆದು ಹಾಕಲಾಗಿದೆ’ ಎಂದರು.

‘ವಾಹನ ನಿಲುಗಡೆಗೆ ಸಂಬಂಧಿಸಿದ ಜವಾಬ್ದಾರಿಯನ್ನು ಲಕ್ಷ್ಮೀವರ ಸ್ವಾಮೀಜಿ ಅವರಿಗೇ ವಹಿಸಲಾಗಿದೆ. ಅವರೇ ಇನ್ನು ಮುಂದೆ ಅದನ್ನು ನೋಡಿಕೊಳ್ಳುತ್ತಾರೆ. ನಮ್ಮ ಮಠದ ವಿಷ್ಣು ಅವರಿಗೆ ಸೇರಿದ ಎರಡು ಅಂಗಡಿಯನ್ನೂ ಸಹ ಬಿಟ್ಟುಕೊಡುವಂತೆ ಸೂಚನೆ ನೀಡಲಾಗಿದೆ’ ಎಂದರು.

ಟ್ರಸ್ಟ್‌ಗೆ ನಷ್ಟವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹಾಗೇನಿಲ್ಲ, ಅದರಿಂದ ಬಂದ ಹಣದಿಂದಲೇ ₹50 ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದೆ. ಮಠದ ವತಿಯಿಂದಲೂ ₹2.50 ಕೋಟಿ ವೆಚ್ಚದ ಇನ್ನೊಂದು ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದೆ’ ಎಂದರು.

‘ಕೃಷ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 5.50 ಎಕರೆ ಜಾಗವನ್ನು ಖರೀದಿಸಿ ಅಲ್ಲಿ ಪಾರ್ಕಿಂಗ್ ಮುಂತಾದ ವ್ಯವಸ್ಥೆ ಮಾಡಲಾಗಿದೆ. ಆದರೆ ಅಲ್ಲಿ ಭಕ್ತರಿಗೆ ತೊಂದರೆ ನೀಡುತ್ತಿದ್ದ ಕಾರಣ ಆ ವಿಷಯವನ್ನು ಸ್ವಾಮೀಜಿ ಅವರ ಗಮನಕ್ಕೆ ತಂದೆ. ಮುಂದೆ ಒಳ್ಳೆಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಲಕ್ಷ್ಮೀವರ ಸ್ವಾಮೀಜಿ ಹೇಳಿದರು.

‘ರಥಬೀದಿ ಸಹ ವಾಹನ ಮತ್ತು ವಾಣಿಜ್ಯ ಮುಕ್ತ ಆಗಬೇಕು ಎಂಬುದು ನಮ್ಮ ಅಭಿಲಾಷೆ. ಈಗ ವಾಹನ ಮುಕ್ತವಾಗಿದೆ. ಆದರೆ ವಾಣಿಜ್ಯ ಮುಕ್ತವಾಗಿಲ್ಲ’ ಎಂದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ, ಅದಮಾರು ಕಿರಿಯ ಈಶಪ್ರಿಯ ಸ್ವಾಮೀಜಿ ಇದ್ದರು.

* * 

ಬೆನ್ನು ನೋವು ಜಾಸ್ತಿ ಇರುವ ಕಾರಣ ಮಾತ್ರೆ ತೆಗೆದುಕೊಳ್ಳುತ್ತಿದ್ದೇವೆ. ಇನ್ನು ನಾಲ್ಕು ವಾರಗಳಲ್ಲಿ ಆರೋಗ್ಯ ಸುಧಾರಿಸಲಿದೆ.
ವಿಶ್ವೇಶತೀರ್ಥ ಸ್ವಾಮೀಜಿ
ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT