ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಮಶೇಖರರೆಡ್ಡಿಗೆ ಟಿಕೆಟ್‌ ನೀಡದಂತೆ ಪ್ರಧಾನಿಗೆ ಪತ್ರ’

Last Updated 2 ಫೆಬ್ರುವರಿ 2018, 9:11 IST
ಅಕ್ಷರ ಗಾತ್ರ

ಬಳ್ಳಾರಿ: ‘ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಜಿ.ಸೋಮಶೇಖರ ರೆಡ್ಡಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಪ್ರಧಾನಮಂತ್ರಿಗೆ ಪತ್ರ ಬರೆಯುವೆ’ ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ತಿಳಿಸಿದರು.

‘29 ಲಕ್ಷ ಟನ್‌ ಅದಿರು ಸಾಗಣೆ ಆರೋಪದ ಅಡಿ ರೆಡ್ಡಿ ಸಹೋದರರ ಗಣಿ ಕಂಪೆನಿಯನ್ನು ಮುಚ್ಚುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿತ್ತು. ಅದರ ವಿರುದ್ಧ ಸಹೋದರರು ಇದುವರೆಗೂ ಮಾತನಾಡಿಲ್ಲ. ಅಂಥವರಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಅವಕಾಶ ನೀಡಿದರೆ ಅವರ ವಿರುದ್ಧ ಪ್ರಚಾರ ನಡೆಸುವೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪರಿವರ್ತನಾ ಯಾತ್ರೆಯಲ್ಲಿ ಸೋಮಶೇಖರರೆಡ್ಡಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರಿಗೆ ನಾಚಿಕೆ ಇಲ್ಲ’ ಎಂದು ದೂರಿದರು.

‘ರೆಡ್ಡಿ ಸಹೋದರರ ವಿರುದ್ಧ ಮಾತನಾಡಿದ್ದಕ್ಕೆ ಕೆಲವು ವರ್ಷಗಳ ಹಿಂದೆ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್‌ ಕೊಲೆಯಾದರು. ಸೋಮಶೇಖರರೆಡ್ಡಿ ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಆ ಪ್ರಕರಣವನ್ನು ಸಿಬಿಐ ತನಿಖೆಗ ವಹಿಸುವಂತೆ ಒತ್ತಾಯಿಸಬೇಕು’ ಎಂದು ಪ್ರತಿಪಾದಿಸಿದರು.

‘ರಾಜ್ಯ ಸರ್ಕಾರ ನೆರವು ಕೇಳಿದರೆ ಎಡಗೈಯಲ್ಲಿ ನೆರವು ನೀಡುತ್ತೇನೆ ಎಂದು ಹೇಳಿಕೆ ನೀಡಿರುವ ಜನಾರ್ದನರೆಡ್ಡಿ ಅವರು ಬಲಗೈಯಿಂದ ಪಕ್ಷದ ಮುಖಂಡರಿಗೆ ಎಷ್ಟು ಜಣ ನೀಡಿದ್ದಾರೆ ಎಂಬುದನ್ನೂ ಬಹಿರಂಗಪಡಿಸಬೇಕು. ರೆಡ್ಡಿ ಅವರನ್ನು ಬಿಜೆಪಿ ಮುಖಂಡ ಎಂದೇ ಇಂದಿಗೂ ಜಿಲ್ಲೆಯಲ್ಲಿ ಆ ಪಕ್ಷದ ಮಂದಿ ಕರೆಯುತ್ತಿದ್ದಾರೆ. ಹಾಗೆ ಅವರನ್ನು ಪರಿಗಣಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಮತ್ತು ಪ್ರಧಾನಿ ಅನುಮತಿ ನೀಡಿದ್ದಾರೆಯೇ’ ಎಂದು ಪ್ರಶ್ನಿಸಿದರು. ’ಬರಲಿರುವ ವಿಧಾನಸಭೆ ಚುನಾವಣೆಲ್ಲಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT