ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೆಯ ಹಾದಿಯಲ್ಲಿ...

Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘1972ರಲ್ಲಿ ಭೀಕರ ಬರ ಆವರಿಸಿತ್ತು. ತಾಂಡಾದಲ್ಲಿದ್ದ ಏಕೈಕ ಬಾವಿ ಬತ್ತಿ ಹೋಯಿತು. ಪಕ್ಕದ ಹಳ್ಳಿಗಳಿಗೆ ನೀರಿಗಾಗಿ ಹೋದರೆ ‘ನಮಗೇ ಹನಿ ನೀರಿಲ್ಲ, ಬರಬೇಡಿ’ ಎಂದು ಅಲ್ಲಿಯವರು ಬೇಡಿಕೊಂಡರು. ಅನ್ನದ ಮಾತು ಬಿಡಿ, ಹನಿ ನೀರು ಸಿಕ್ಕರೆ ಸಾಕು ಎನ್ನುವಂತಹ ಸ್ಥಿತಿ ಇತ್ತು...’ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಗೆದ್ದಲಮರಿ ತಾಂಡಾದ 72ರ ವಯೋಮಾನದ ರಾಮು ರಾಠೋಡ ಅವರು ಗುಳೆಯ ಆರಂಭದ ಅನಿವಾರ್ಯವನ್ನು ತೆರೆದಿಟ್ಟಿದ್ದು ಹೀಗೆ.

‘ಸರ್ಕಾರ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಪ್ರಾರಂಭಿಸಿತು. ನೀರಿಗಾಗಿ ದಿನವೂ ಜಗಳ. ಇಂತಹ ಸಂಕಷ್ಟದ ದಿನಗಳಲ್ಲಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ನಾನು ತಾಂಡಾ ಬಿಟ್ಟು ಮುಂಬೈ ಸೇರಿಕೊಂಡೆ. ಹೆಂಡತಿ ಭೀಮ್ಲಿಬಾಯಿ ಕಾಯಿಲೆ ಬಿದ್ದಳು. ಅಮ್ಮ ಸತ್ತ ಮೇಲೆ ಮಕ್ಕಳು ಸೊರಗತೊಡಗಿದವು. ಮತ್ತೆ ತಾಂಡಾಕ್ಕೆ ಹಿಂದಿರುಗಿದೆ. ಊರಲ್ಲಿ ಪ್ಲೇಗು ಹರಡಿತ್ತು. ಇದ್ದ ಮಕ್ಕಳೂ ಸತ್ತರೆ ಎಂಬ ಭಯದಿಂದ ಹೈದರಾಬಾದ್ ಸೇರಿದೆ. ಅಲ್ಲಿ ಕಟ್ಟಡ ನಿರ್ಮಾಣ ಮೇಸ್ತ್ರಿ ದಿನಾಲೂ ಹೊಡೆಯಲು ಆರಂಭಿಸಿದ್ದರಿಂದ ಬೇಸತ್ತು ತಾಂಡಾಕ್ಕೆ ಮರಳಿದೆ. ಇಲ್ಲೇ ಏನಾದರೂ ಮಾಡಬೇಕು ಎಂಬ ನಿರ್ಧಾರ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಗುಳೆ ಸಂಸ್ಕೃತಿಯಲ್ಲೇ ಬೆಳೆದ ಮಕ್ಕಳು ಈಗ ಅದನ್ನೇ ಅವಲಂಬಿಸಿದ್ದಾರೆ. ಅದರ ಸಹವಾಸವೇ ಬೇಡ ಎಂದರೂ ಅದು ನಮ್ಮನ್ನು ಬಿಟ್ಟಿಲ್ಲ’ ಎಂದು ವೇದನೆ ಹೊರಹಾಕಿದರು.

‘ಬರ ಬಂದಾಗಲೆಲ್ಲ ತಾಂಡಾ ಬಿಡುತ್ತಿದ್ದೆವು. ಆಗ ಈಗಿನಷ್ಟು ಸಾರಿಗೆ ಸೌಕರ್ಯ ಇರಲಿಲ್ಲ. 300 ಕಿ.ಮೀ. ದೂರದ ಹೈದರಾಬಾದ್‌ಗೆ ನಡೆದೇ ಹೋಗುತ್ತಿದ್ದೆವು. ಒಣ ರೊಟ್ಟಿ ದಾರಿಯುದ್ದಕ್ಕೂ ನಮ್ಮ ಹೊಟ್ಟೆಗೆ ಆಧಾರವಾಗುತ್ತಿತ್ತು. ದಾರಿಯುದ್ದಕ್ಕೂ ಸಿಗುವ ಹಳ್ಳಿಗಳ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಅಂಥಾ ಕಷ್ಟದ ದಿನಗಳವು’ ಎಂದು ಅವರು ನೆನಪಿನಾಳಕ್ಕೆ ಜಾರಿದರು.

‘ಗುಳೆ ಹೋಗುವುದು ಎಂದರೆ ಅದು ಸವಾಲೇ ಆಗಿರುತ್ತದೆ. ಎಲ್ಲಿ ಏನಾಗುತ್ತದೆಯೋ, ಎಂಥಾ ಸಮಸ್ಯೆಗಳಿಗೆ ಸಿಲುಕುತ್ತೇವೆಯೋ ಎಂಬ ಆತಂಕ ಇರುತ್ತದೆ. ಅಲ್ಲಿಗೆ ಹೋದ ಮೇಲೆ ಇಂಥದ್ದೇ ಕೆಲಸ ಎಂದೇನೂ ಇರುವುದಿಲ್ಲ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ನಮಗೆ ಕೆಲಸ ಸಿಗುತ್ತಿತ್ತು. ತಾತ್ಕಾಲಿಕ ಟೆಂಟ್‌ಗಳನ್ನು ಅವರೇ ಕಟ್ಟಿಕೊಡುತ್ತಿದ್ದರು. ಮೇಸ್ತ್ರಿಗಳ, ಕಟ್ಟಡ ಮಾಲೀಕರ ದೌರ್ಜನ್ಯ ನೆನಪಾದರೆ ಕಣ್ಣಲ್ಲಿ ಈಗಲೂ ನೀರು ಬರುತ್ತದೆ. ನನ್ನ ಕೊನೆಯ ಮಗನ ಕೈಮುರಿದೇ ಬಿಟ್ಟರು. ಸಿಟ್ಟಿಗೇರಿದ್ದಕ್ಕೆ ಕೆಲಸ ಬಿಡಿಸಿದರು’ ಎಂದು ತಾವು ಅನುಭವಿಸಿದ ಸಂಕಷ್ಟದ ಸರಮಾಲೆ ಬಿಚ್ಚಿಟ್ಟರು.

‘ಮೂರು ಮಕ್ಕಳನ್ನು (ಎರಡು ಗಂಡು, ಒಂದು ಹೆಣ್ಣು) ಕರೆದುಕೊಂಡು ಹೈದರಾಬಾದ್‌ನ ಬಂಜಾರ ಹಿಲ್ಸ್‌ ಸೇರಿದೆ. ಅಲ್ಲಿ ಕಟ್ಟಡ ಕಾಯುವ ಕೆಲಸ ಸಿಕ್ಕಿತು. ಸಮೀಪದಲ್ಲಿ ಬಾಗಲಕೋಟೆಯ ಗಂಡ–ಹೆಂಡತಿ ಬೃಹತ್‌ ಕಟ್ಟಡ ಕಾಯುತ್ತಿದ್ದರು. ಅದೇ ಕಟ್ಟಡದ ಮಾಲೀಕ ರಾಕ್ಷಸನಂತೆ ವರ್ತಿಸಿ ಗಂಡನನ್ನು ಹೊಡೆದು ಕೂಡಿಹಾಕಿ ಹೆಂಡತಿ ಮೇಲೆ ಅತ್ಯಾಚಾರ ಮಾಡಿದ ಸುದ್ದಿ ತಿಳಿಯಿತು. ಸಿಮೆಂಟ್ ಚೀಲಗಳನ್ನು ಕದ್ದು ಮಾರಿಕೊಂಡಿರುವುದಾಗಿ ಮಾಲೀಕ ದೂರು ನೀಡಿ ಆ ಬಡ ದಂಪತಿಯನ್ನು ಜೈಲಿಗಟ್ಟಿದ ಎಂಬುದಾಗಿ ಅಲ್ಲಿನ ಜನ ಮಾತನಾಡಿಕೊಂಡರು. 8 ವರ್ಷದ ಮಗಳು ನನ್ನ ಕಣ್ಣುಮುಂದೆ ನಿಂತಳು. ಯಾರಿಗೂ ಹೇಳದೆ ತಾಂಡಾ ಸೇರಿದೆ. ಹಸಿದುಕೊಂಡು ಊರಲ್ಲೇ ಪ್ರಾಣಬಿಟ್ಟರೂ ಪರವಾಗಿಲ್ಲ, ಎಲ್ಲಿಗೂ ಹೋಗಬಾರದು ಎಂದುಕೊಂಡು ಮಕ್ಕಳನ್ನು ಊರಲ್ಲೇ ಕೂಲಿ ಕೆಲಸಕ್ಕೆ ಹಚ್ಚಿದೆ. ಮಕ್ಕಳು ಅಕ್ಷರ ಕಲಿಯಲಿಲ್ಲ. ಕೂಲಿ ಸಿಗುವುದು ಕಷ್ಟವಾದಾಗಲೆಲ್ಲ ಸೌದೆ ಕಡಿದು ಮಾರಾಟ ಮಾಡಿದೆ. ಐದಾರು ರೂಪಾಯಿ ಸಿಗುತ್ತಿತ್ತು. ಹೊಟ್ಟೆಯೂ ತುಂಬದ ಬಟ್ಟೆಯೂ ಬರದ ಸ್ಥಿತಿ ಆಗಿನದು...’ ಎಂದು ಹೇಳುವಾಗ ಅವರ ಕಣ್ಣಂಚಿನಲ್ಲಿ ನೀರಾಡುತ್ತಿತ್ತು.

‘ಗುಳೆ ಹೋಗುವ ಊರಿನ ಬಗೆಗೆ ಮಾಹಿತಿ ಮತ್ತು ಅಲ್ಲಿ ಕೆಲಸ ಕೊಡಿಸುವ ಸಾಮರ್ಥ್ಯ ಇರುವವರ ಜೊತೆಯಲ್ಲಿ ಗುಂಪಾಗಿ ಹೋಗುವ ಪರಿಪಾಟ ಆರಂಭಗೊಂಡಿತು. ಮುಂಬೈ, ಹೈದರಾಬಾದ್, ಸೊಲ್ಲಾಪುರಗಳಿಗೆ ಹೆಚ್ಚಾಗಿ ಹೋಗುತ್ತಿದ್ದೆವು. ಸೊಲ್ಲಾಪುರ, ಮುಂಬೈಗೆ ಹೋದ ಕೆಲವರು ಏಡ್ಸ್‌ಗೆ ಬಲಿಯಾದರು. ಗುಳೆ ಹೋದವರು ಹಸಿವು ಇಂಗಿಸಿಕೊಳ್ಳುವುದಕ್ಕಿಂತ ಅನಾಹುತಕ್ಕೆ ಈಡಾಗುವುದೇ ಹೆಚ್ಚು’ ಎಂದು ರಾಮು ರಾಠೋಡ ಮಾತು ಮುಗಿಸುತ್ತಿದ್ದಂತೆ ಅಲ್ಲಿಗೆ ಬಂದ ಗೆದ್ದಲಮರಿ ತಾಂಡಾದ ವಕೀಲ ಶಾಂತೂ ಪವಾರ ಪರಿಚಯಿಸಿಕೊಂಡರು.

‘ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆ ಅತಿ ದೊಡ್ಡದು. ಇದರಿಂದ ನೀರಾವರಿಗೊಳಪಟ್ಟಿರುವ ಪ್ರದೇಶದಲ್ಲಿ ಈಗ ಆಂಧ್ರಪ್ರದೇಶ, ತೆಲಂಗಾಣದ ವಲಸಿಗರೇ ತುಂಬಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ತುಂಬಿರುವ ಭ್ರಷ್ಟಾಚಾರದಿಂದಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವೈಫಲ್ಯ ಕಂಡಿದೆ. ಒಣಬೇಸಾಯದ ಕೃಷಿಯಲ್ಲಿ ಕೂಲಿ ಸಿಗುವುದಿಲ್ಲ. ಗದ್ದೆಗಳಲ್ಲಿ ಆಂಧ್ರ–ತೆಲಂಗಾಣ ವಲಸಿಗರು ಸ್ಥಳೀಯರಿಗೆ ಅವಕಾಶ ನೀಡುವುದಿಲ್ಲ. ಅನಿಶ್ಚಿತ ಮಳೆ. ಅಧಿಕ ಬಿಸಿಲು ಇವೆಲ್ಲಾ ಕಾರಣಗಳಿಂದ ಈ ಭಾಗದಲ್ಲಿ ಈಗಲೂ ಗುಳೆ ನಿಂತಿಲ್ಲ’ ಎಂದರು ಶಾಂತೂ ಪವಾರ.

‘ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನ ವಿಳಂಬವಾಯಿತು. ಈ ಕಾರಣದಿಂದಾಗಿಯೂ ಈ ಭಾಗದಲ್ಲಿ ಬರಗಾಲ ಮೈಚಾಚಿತ್ತು. ಆಲಮಟ್ಟಿ, ನಾರಾಯಣಪುರ ಅಣೆಕಟ್ಟೆ ಪೂರ್ಣಗೊಂಡ ನಂತರ ಸ್ವಲ್ಪಮಟ್ಟಿಗೆ ನೀರಾವರಿ ಪ್ರದೇಶ ವಿಸ್ತರಿಸಿದೆ. ಆದರೂ, ಗುಳೆ ಏಕೆ ನಿಂತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ’ ಎಂದೂ ಅವರು ಅಚ್ಚರಿ ವ್ಯಕ್ತಪಡಿಸಿದರು.

‘ಅನ್ನ, ನೀರಿನ ಹುಡುಕಾಟದಲ್ಲಿ ಶುರುವಾದ ಗುಳೆ, ಈಗ ನಗರ ಆಕರ್ಷಣೆಯ ಸ್ವರೂಪ ಪಡೆದಿದೆ. ಆಕರ್ಷಕ ಕೂಲಿ, ಸೆಳೆಯುವ ನಗರ ಜನಜೀವನಕ್ಕೆ ಮಾರು ಹೋಗಿರುವ ಹಳ್ಳಿ ಜನರು ಗುಳೆ ಪೋಷಿಸುತ್ತಿದ್ದಾರೆ. ಕಾರ್ಮಿಕರ ಅಭಾವ ಅನುಭವಿಸುತ್ತಿರುವ ಕಟ್ಟಡ ನಿರ್ಮಾಣ ಮೇಸ್ತ್ರಿಗಳು ಇವರನ್ನು ಸೆಳೆಯುವಲ್ಲಿ ನಿರತರಾಗಿದ್ದಾರೆ. ಉಳಿದಂತೆ ಗೋವಾ ಸಂಸ್ಕೃತಿಗೆ ಮರುಳಾಗಿರುವ ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳ ಲಂಬಾಣಿಗರು ಗೋವಾದಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಗುಳೆ ಜೀವಂತವಾಗಿದೆ’ ಎನ್ನುವುದು ಅವರ ವ್ಯಾಖ್ಯಾನ.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಕೊಪ್ಪಳಕ್ಕೆ ಬಂದಾಗ ಇಂಥದ್ದೇ ಮಾತನ್ನು ಹೇಳಿದ್ದರು. ‘ಗುಳೆ ಹೋಗುವುದು ಈ ಭಾಗದವರಿಗೆ ಫ್ಯಾಷನ್‌’ ಎಂದಿದ್ದರು. ‘ಯಾವುದೇ ಗ್ರಾಮದಲ್ಲಿ ಅನ್ನಕ್ಕೆ ಕೊರತೆ ಇಲ್ಲ. ಆದರೂ ಗುಳೆ ತಪ್ಪುತ್ತಿಲ್ಲ’ ಎನ್ನುವುದು ಅಧಿಕಾರಸ್ಥರು ಹೇಳುವ ಮಾತು.

ಆದರೆ, ‘ನಗರ ಜೀವನದ ಮೋಹಕ್ಕೆ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಗುಳೆ ಹೋಗುತ್ತಾರೆ’ ಎಂಬುದನ್ನು ಕಲಬುರ್ಗಿಯ ಮಾರುತಿ ಮಾನ್ಪಡೆ ಒಪ್ಪುವುದಿಲ್ಲ. ಶ್ರಮಿಕ ವರ್ಗದ ಪರ ಹೋರಾಡುತ್ತಿರುವ ಅವರು, ‘ದುಡಿಯುವವರ ಕೈಯಲ್ಲಿ ಭೂಮಿ ಇಲ್ಲ, ಭೂಮಿ ಇದ್ದವರು ದುಡಿಯುತ್ತಿಲ್ಲ. ಈ ವೈರುಧ್ಯವೇ ಗುಳೆಗೆ ಕಾರಣ’ ಎಂಬ ವಿವರಣೆ ಮುಂದಿಟ್ಟರು.

‘ಕೃಷಿ ಕೂಲಿಕಾರರಿಗೆ ಹೊಟ್ಟೆ ತುಂಬುವಷ್ಟು ಕೆಲಸ ಮತ್ತು ಶ್ರಮಕ್ಕೆ ತಕ್ಕಷ್ಟು ಕೂಲಿ ಇಲ್ಲಿ ಸಿಗುತ್ತಿಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಂದು ಎಕರೆ ಜಮೀನಿದ್ದ ರೈತರೂ ಉತ್ತಮ ಬದುಕು ನಡೆಸಲು ಸಾಧ್ಯ ಇದೆ. ತೆಂಗು, ಅಡಿಕೆಗೆ ಉತ್ತಮ ಬೆಲೆ ಇದೆ. ನಮ್ಮಲ್ಲಿ ರೈತರ ಆದಾಯವೂ ಕಡಿಮೆ. ಹೀಗಾಗಿ ಅವರು ಕೃಷಿ ಕೂಲಿಕಾರರಿಗೆ ಕೂಲಿ ಕೊಡಲೂ ಚೌಕಾಶಿ ಮಾಡುತ್ತಾರೆ. ಹಿಂದೆ ಕೃಷಿ ಕಾರ್ಮಿಕರು ಪಾಲುದಾರಿಕೆಯಲ್ಲಿ ಜಮೀನು ಪಡೆದು ದುಡಿಯುತ್ತಿದ್ದರು. ಈಗ ಪಟ್ಟಣಕ್ಕೆ ವಲಸೆ ಹೋಗುತ್ತಾರೆ. ಅಲ್ಲಿ ಸಿಗುವ ಕೂಲಿಯೇ ಅವರ ಪ್ರಮುಖ ಆಕರ್ಷಣೆ’ ಎಂದರು.

‘ಹಳೆ ಮೈಸೂರು, ಕರಾವಳಿ ಭಾಗದಲ್ಲಿ ಭೂ ಸುಧಾರಣೆ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಆದರೆ ಈ ಭಾಗದಲ್ಲಿ ದುಡಿಯುವವರಿಗೆ ಭೂಮಿ ಸಿಗಲಿಲ್ಲ. ಇಲ್ಲಿಯ ಪ್ರಗತಿಪರ ರಾಜಕೀಯ ನಾಯಕರು ಪರಿಣಾಮಕಾರಿ ಹೋರಾಟ–ತ್ಯಾಗ ಮಾಡಲಿಲ್ಲ. ಹೀಗಾಗಿ ಇಲ್ಲಿ ಜಮೀನು ಹಂಚಿಕೆ ಆಗಲಿಲ್ಲ. ಕೆಲವೇ ಜನರ ಶ್ರೀಮಂತಿಕೆಯ ವೈಭವ ಕುಗ್ಗಲಿಲ್ಲ. ಗೇಣಿದಾರರನ್ನು ಓಡಿಸಲಾಯಿತು. ರಾಜ್ಯದಲ್ಲಿ ಕೃಷಿ ಕೂಲಿಕಾರರ ಪ್ರಮಾಣ ಅಂದಾಜು ಶೇ 25ರಷ್ಟಿದ್ದರೆ, ಈ ಭಾಗದಲ್ಲಿ ಅದು ಶೇ 40ಕ್ಕಿಂತ ಹೆಚ್ಚಾಗಿದೆ’ ಎನ್ನುವುದು ಅವರ ವಾದ.

‘ಕೃಷ್ಣಾ ಮತ್ತು ಭೀಮಾ ತೀರದ ಜಮೀನುಗಳನ್ನು ಆಂಧ್ರ, ತೆಲಂಗಾಣದವರು ಲೀಸ್‌ಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಕೃಷಿ ಯಂತ್ರೋಪಕರಣಗಳು ದುಡಿಯುವ ಕೈಗಳಿಂದ ಕೆಲಸ ಕಿತ್ತುಕೊಂಡಿವೆ. ಸ್ವಾತಂತ್ರ್ಯಾನಂತರ ನಮ್ಮಲ್ಲಿ ವರ್ಷಕ್ಕೆ ಅಂದಾಜು 140 ಕೂಲಿ ದಿನಗಳು ಇದ್ದವು. ಈಗ ಆ ಪ್ರಮಾಣ 65 ದಿನಗಳಿಗೆ ಇಳಿದಿದೆ’ ಎಂದರು.

ಕಲಬುರ್ಗಿ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಜೋಡಿಸಿರುವ ಹೋರಾಟಗಾರ್ತಿ ಕೆ.ನೀಲಾ, ‘ಕೆಲಸ ಸಿಗದ ಕಾರಣಕ್ಕೆ ಗುಳೆ ಹೋಗುವುದು ಬಹಳ ಕಷ್ಟದ್ದು ಮತ್ತು ಅನಾಹುತಕಾರಿ. ಇದು ಕುಟುಂಬದ ವಿಘಟನೆಗೆ ಕಾರಣವಾಗುತ್ತದೆ. ಅವರ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡುತ್ತದೆ. ಹಾಸ್ಟೆಲ್‌ಗಳಲ್ಲಿ ಮಕ್ಕಳನ್ನು ಬಿಟ್ಟು ಹೋದರೂ, ಸುರಕ್ಷತೆಯ ಕಾರಣಕ್ಕಾಗಿ ಹೆಣ್ಣು ಮಕ್ಕಳನ್ನು ಅವರು ತಮ್ಮೊಟ್ಟಿಗೇ ಕರೆದೊಯ್ಯುತ್ತಾರೆ. ಹೀಗಾಗಿ ಶಾಲೆಯಿಂದ ಹೊರಗುಳಿಯುವ ಹೆಣ್ಣು ಮಕ್ಕಳ ಪ್ರಮಾಣ ಹೆಚ್ಚುತ್ತಿದೆ’ ಎಂದು ಆತಂಕಪಟ್ಟರು.

ಈ ಮಾತನ್ನು ಯಾದಗಿರಿಯ ಡಿಡಿಪಿಐ ಬಸವರಾಜ ಸಿ.ಗವನಹಳ್ಳಿ ಸಹ ಒಪ್ಪುತ್ತಾರೆ. ‘ಹಿಂದೆ ಅವಿಭಕ್ತ ಕುಟುಂಬ ವ್ಯವಸ್ಥೆ ಇರುತ್ತಿತ್ತು. ಮನೆಯಲ್ಲಿ ಒಂದಿಬ್ಬರನ್ನು ಬಿಟ್ಟು ಉಳಿದವರು ದುಡಿಯಲು ಹೋಗುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬೇರೆ ಇದೆ. ವಿಭಕ್ತ ಕುಟುಂಬಗಳು ಹೆಚ್ಚಾಗಿವೆ. ದನಕರುಗಳನ್ನೂ ಮಾರಿ ಗುಳೆ ಹೋಗುವವರಿದ್ದಾರೆ. 2017–18ನೇ ಸಾಲಿನಲ್ಲಿ ಗುಳೆಯಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 635 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅದರಲ್ಲಿ 326 ಮಕ್ಕಳಿಗೆ ಚಿಣ್ಣರ ಅಂಗಳ ಯೋಜನೆಯ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಉಳಿದ ಮಕ್ಕಳು ಸಿಕ್ಕಿಲ್ಲ’ ಎನ್ನುತ್ತಾರೆ ಅವರು.

ಗುಳೆಯಿಂದಾಗಿ ಶಿಕ್ಷಣ ವಂಚಿತರಾಗುವ ಮಕ್ಕಳಿಗಾಗಿಯೇ ಸರ್ಕಾರ ವಸತಿಯುತ ವಿಶೇಷ ತರಬೇತಿ (ಆರ್‌ಎಸ್‌ಟಿ), ಋತುಮಾನ ವಸತಿಯುತ ವಿಶೇಷ ತರಬೇತಿ (ಎನ್‌ಆರ್‌ಎಸ್‌ಟಿ), ಟೆಂಟ್‌ ಶಾಲೆಗಳು... ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ, ಶಿಕ್ಷಣವಂಚಿತ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿಲ್ಲ.

‘ಇದ್ದರೆ ಒಂದು ರೊಟ್ಟಿ ಕೊಡಿ; ಸತ್ತರೆ ಮಣ್ಣು ಹಾಕಿ ಎಂದು ಮನಸ್ಸು ಕಲ್ಲು ಮಾಡಿಕೊಂಡು ವೃದ್ಧ ತಂದೆ– ತಾಯಿಯರನ್ನು ಊರಲ್ಲೇ ಬಿಟ್ಟು ಗುಳೆ ಹೋಗುವ ಮಕ್ಕಳೂ ಇದ್ದಾರೆ. ವಲಸೆ ಕಾರ್ಮಿಕರಿಗೆ ಸೌಲಭ್ಯಗಳಿದ್ದರೂ ಅವು ಅವರಿಗೆ ದೊರೆಯುತ್ತಿಲ್ಲ. ಇಲಾಖೆಗಳ ಮಧ್ಯೆ ಸಮನ್ವಯ ಇಲ್ಲ. ಇನ್ನು ವಲಸೆ ಎಂಬುದು ಸಾವು ಮತ್ತು ಅಸುರಕ್ಷತೆಯ ಬದುಕನ್ನು ಆಹ್ವಾನಿಸುತ್ತದೆ. ಅವರು ಕ್ಷಣಕ್ಷಣಕ್ಕೂ ಅಭದ್ರತೆಯನ್ನು ಅನುಭವಿಸುತ್ತಿರುತ್ತಾರೆ. ಶಿಕ್ಷಣ, ಆರೋಗ್ಯ, ಸೌಲಭ್ಯ ಮತ್ತು ಸುರಕ್ಷಿತ ಬದುಕು ಇಲ್ಲವಾಗಿಸುತ್ತದೆ. ದುಡಿಮೆ ಮತ್ತು ಸಾವು ಈ ಎರಡೇ ಆಯ್ಕೆಗಳು ಅವರಿಗೆ ಇರುತ್ತವೆ’ ಎಂದು ನೀಲಾ ವಿಷಾದಿಸಿದರು.

ಹೈದರಾಬಾದ್‌ ಕರ್ನಾಟಕದಲ್ಲಿ ಪ್ರಕೃತಿಯ ಮುನಿಸು ಶಾಶ್ವತ ಎಂಬ ಸ್ಥಿತಿ ಇದೆ. ಔದ್ಯಮಿಕ ಅಭಿವೃದ್ಧಿ ಇಲ್ಲದ ಕಾರಣ ವಾಣಿಜ್ಯ ಮತ್ತು ಸೇವಾ ಕ್ಷೇತ್ರ ಅಷ್ಟಾಗಿ ಬೆಳವಣಿಗೆ ಹೊಂದಿಲ್ಲ. ಹೀಗಾಗಿ ಕೆಲಸ ಅರಿಸಿ ಹೋಗುವವರ ಪ್ರಮಾಣ ಹೆಚ್ಚಿದೆ. ‘ಇಲ್ಲಿ ದುಡಿಯದವ ಅಲ್ಲಿ ದುಡಿದಾನು’ ಎಂಬ ಆಶಾಭಾವದೊಂದಿಗೆ ಮನೆಯ ಇತರರನ್ನೂ ದುಡಿಮೆಗೆ ಕರೆದೊಯ್ಯುವ ಮನೋಭಾವವೂ ಇದೆ.

ರಾಜ್ಯ ಸರ್ಕಾರ ‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್‌ ಪಡಿತರ ಚೀಟಿದಾರರಿಗೆ ತಲಾ 5 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿಯನ್ನು ಉಚಿತವಾಗಿ ಹಾಗೂ 1 ಕೆ.ಜಿ. ತೊಗರಿ ಬೇಳೆಯನ್ನು ₹ 38 ದರದಲ್ಲಿ ನೀಡುತ್ತಿದೆ. ಸಕ್ಕರೆ, ಎಣ್ಣೆ, ಉಪ್ಪು ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಜೋಳದ ರೊಟ್ಟಿ ಈ ಭಾಗದ ಪ್ರಮುಖ ಆಹಾರ. ಪಡಿತರದಲ್ಲಿ ಜೋಳ ನೀಡಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.

‘ಅನ್ನಭಾಗ್ಯ ಬಡವರಿಗೆ ನೆಮ್ಮದಿ ತಂದುಕೊಟ್ಟಿದೆ ಎಂಬುದು ಭ್ರಮೆ. ಈ ಪಡಿತರಧಾನ್ಯ ಹೊಟ್ಟೆ ತುಂಬಿಸಬಹುದು. ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗೆ ವೆಚ್ಚ ಮಾಡಬೇಕಾಗುತ್ತದೆ. ಬಟ್ಟೆ–ಬರೆ ಖರೀದಿ, ಮಕ್ಕಳ ಮದುವೆ–ಮುಂಜಿವೆಗೆ ಹಣ ಬೇಕು. ಬದುಕು ಸಾಗಿಸಲು ಬೇಕಿರುವ ಹಣ ಹೊಂದಿಸಲು ಬಹುಪಾಲು ಜನ ಗುಳೆ ಹೋಗುತ್ತಾರೆ’ ಎಂದರು ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ. ‘ಅನ್ನಭಾಗ್ಯದ ಧಾನ್ಯಗಳನ್ನು ಬಡವರು ಮಾರಾಟ ಮಾಡುವುದಿಲ್ಲ. ಉಳ್ಳವರು ಮಾತ್ರ ಹಾಗೆ ಮಾಡಬಹುದು’ ಎಂಬುದು ಅವರ ಅನಿಸಿಕೆ.

ಇನ್ನು ಬಸ್‌ಗಳಲ್ಲಿ ಸಾರಿಗೆ ವೆಚ್ಚ, ಲಗೇಜ್‌ ದರ ದುಬಾರಿ ಎಂಬ ಕಾರಣಕ್ಕೆ ಗುಳೆ ಹೋಗುವವರು ಯಾವುದೋ ಬಾಡಿಗೆ ವಾಹನಗಳಲ್ಲಿ ಪ್ರಯಾಣಿಸುವುದು ರೂಢಿ. ಎಷ್ಟೋ ಸಲ ಇವು ಅಪಘಾತಕ್ಕೀಡಾಗಿ ಕಾರ್ಮಿಕರು ಸಾವಿಗೀಡಾಗುವ ದುರಂತಗಳು ಪ್ರತಿವರ್ಷವೂ ಸಾಮಾನ್ಯ ಎನ್ನುವಂತಾಗಿದೆ.

2016ರಲ್ಲಿ ಭೀಕರ ಬರ ಆವರಿಸಿತ್ತು. ಆಗ, ಗುಳೆ ಹೋಗುವವರ ಪ್ರಮಾಣವೂ ಹೆಚ್ಚಿತ್ತು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗುಳೆ ಹೋಗುವವರಿಗೆ ತಲಾ 50 ಕೆ.ಜಿ.ವರೆಗಿನ ಲಗೇಜ್‌ಗೆ ರಿಯಾಯಿತಿ ನೀಡಿತ್ತು. ಅಷ್ಟೇ ಅಲ್ಲ, ಹೆಚ್ಚಿನ ಪ್ರಯಾಣಿಕರು ಮಹಾನಗರಗಳಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸುವಂತೆ ಕೋರಿದರೆ ತಲಾ ₹ 5 ರಿಂದ ₹ 10 ಹೆಚ್ಚಿನ ಪ್ರಯಾಣದರ ಪಡೆದು ಅವರನ್ನು ಅಲ್ಲಿಗೆ ತಲುಪಿಸುವ ವ್ಯವಸ್ಥೆ ಮಾಡಿತ್ತು. ‘ಈ ಸುರಕ್ಷಿತ ಸಾರಿಗೆ’ ವ್ಯವಸ್ಥೆಗೆ ಈ ಭಾಗದವರೇ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ವಿರೋಧ ವ್ಯಕ್ತಪಡಿಸಿದ್ದರು. ‘ಗುಳೆ ಹೋಗುವವರ ಲಗೇಜ್‌ಗೆ ರಿಯಾಯಿತಿ ನೀಡಿದ್ದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಅವಿವೇಕಿ ನಿರ್ಧಾರ’ ಎಂದು ಅವರು ಕಿಡಿಕಾರಿದ್ದರು!

‘ಗುಳೆ ಹೋಗುವವರಿಗೆ ಈ ಸೌಲಭ್ಯ ಕಲ್ಪಿಸಿದ್ದರಿಂದಾಗಿ ಸಂಸ್ಥೆಯ ಆದಾಯ ಶೇ 35ರಷ್ಟು ಹೆಚ್ಚಿದೆ’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು. ಈಗ ಈ ಸೌಲಭ್ಯವೂ ಇಲ್ಲವಾಗಿದೆ.

ದುಡಿಯುವ ಕೈಗಳಿಗೆ ತಮ್ಮೂರಿನಲ್ಲಿಯೇ ಉದ್ಯೋಗ ಕಲ್ಪಿಸಲು ನರೇಗಾ ಯೋಜನೆ ಜಾರಿಯಲ್ಲಿದೆ. ‘ಯೋಜನೆ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಕೂಲಿಕಾರರಿಗೆ ನಿತ್ಯ ವಹಿಸುವ ಕೆಲಸವನ್ನು ಸರಿಯಾಗಿ ಅಳತೆ ಮಾಡಬೇಕು. ಕೆಲಸದ ಸ್ಥಳದಲ್ಲಿ ನೀಡಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಸಕಾಲಕ್ಕೆ ಕೂಲಿ ಪಾವತಿಸಬೇಕು. ಹೀಗಾದರೆ ನರೇಗಾ ಕೆಲಸಕ್ಕೆ ಜನ ಬರುತ್ತಾರೆ. ನಾವು ಆಳಂದ ಮತ್ತು ಅಫಜಲಪುರ ತಾಲ್ಲೂಕುಗಳ ಕೆಲ ಹಳ್ಳಿಗಳಲ್ಲಿ ಇದನ್ನು ಮಾಡಿ ತೋರಿಸಿದ್ದೇವೆ. ಕಳೆದ ವರ್ಷ ಕೈಗೊಂಡ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಅದೆಷ್ಟೋ ಕುಟುಂಬದವರು ಗುಳೆಯಿಂದ ವಾಪಸಾಗಿ ಇಲ್ಲೇ ದುಡಿದರು. ಶಾಸಕರು–ಸಂಸದರು ಮನಸ್ಸು ಮಾಡಿದರೆ ಎಲ್ಲ ಕ್ಷೇತ್ರಗಳಲ್ಲಿಯೂ ನರೇಗಾವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬಹುದು. ಇದು ದುಡಿಯುವ ಕೈಗಳಿಗೆ ಕೆಲಸ ನೀಡುವುದು ಅಷ್ಟೇ ಅಲ್ಲದೆ, ಗ್ರಾಮೀಣ ಆರ್ಥಿಕತೆಯ ಸುಧಾರಣೆಗೂ ಕಾರಣವಾಗುತ್ತದೆ’ ಎಂದರು ನೀಲಾ.

‘ಬೋಗಸ್‌ ಬಿಲ್‌ಗೆ ಪೀಡಿಸುವುದು ಮತ್ತು ಬೆದರಿಕೆ ಹಾಕುವುದನ್ನು ನಿಲ್ಲಿಸಿದರೆ ಅಧಿಕಾರಿಗಳೂ ನಮ್ಮೊಂದಿಗೆ ಸ್ಪಂದಿಸಿ ಉತ್ತಮ ಕೆಲಸ ಮಾಡುತ್ತಾರೆ. ರಾಜಕೀಯ ಇಚ್ಛಾಶಕ್ತಿ ಇಲ್ಲ, ಕೂಲಿ ಸರಿಯಾಗಿ ಪಾವತಿಯಾಗುತ್ತಿಲ್ಲ. ಇದು ನರೇಗಾ ಅನುಷ್ಠಾನದಲ್ಲಿಯ ಪ್ರಮುಖ ಸಮಸ್ಯೆ’ ಎಂಬುದು ಅವರ ಅಭಿಪ್ರಾಯ.

ಇವರ ಮಾತನ್ನು ಸಮರ್ಥಿಸುವ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ‘ನರೇಗಾ ಕೂಲಿಗಾಗಿ ನಾಲ್ಕಾರು ತಿಂಗಳು ಅಲೆಯುವ, ಕೂಲಿ ಮಾಡಿದವರ ಬದಲು ಬೇರೆಯವರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುವ ಪ್ರಸಂಗಗಳೂ ಇವೆ. ದುಡಿಯುವ ಕೈಗಳಿಗೆ ವರ್ಷಕ್ಕೆ 200 ದಿನಗಳಾದರೂ ಕೆಲಸ ಕೊಡಬೇಕು ಮತ್ತು ವಾರಕ್ಕೊಮ್ಮೆ ಕೂಲಿ ಪಾವತಿಯಾಗಬೇಕು’ ಎಂದರು.

‘ಮಹಾನಗರಗಳಲ್ಲಿ ಹೆಚ್ಚಿನ ಕೂಲಿ ಕೊಡುತ್ತಾರೆ. ಕೂಲಿಯ ಆಕರ್ಷಣೆ ಕಡಿಮೆಯಾಗುವವರೆಗೂ ಗುಳೆ ನಿಯಂತ್ರಣ ಅಸಾಧ್ಯ’ ಎಂಬುದು ನರೇಗಾ ಮೇಲ್ವಿಚಾರಣಾ ಅಧಿಕಾರಿಯೂ ಆಗಿರುವ ಯಾದಗಿರಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ ಅವರ ಅಸಹಾಯಕತೆ.

‘ಇಲ್ಲಿಯ ಜನರು ಮುಂಬೈಗೆ ಹೆಚ್ಚಾಗಿ ಗುಳೆ ಹೋಗುತ್ತಿದ್ದರು. ಹೈದರಾಬಾದ್‌ನಲ್ಲಿ ಅಲ್ಲಿಯವರೇ ಹೆಚ್ಚು ಕೂಲಿಕಾರ್ಮಿಕರು ಇದ್ದಾರೆ. ಬೆಂಗಳೂರಿನ ಕಟ್ಟಡ ನಿರ್ಮಾಣ ಕ್ಷೇತ್ರವು ಮಾನವ ಸಂಪನ್ಮೂಲದ ತೀವ್ರ ಕೊರತೆ ಎದುರಿಸುತ್ತಿದೆ. ಹೀಗಾಗಿ ಉದಾರವಾಗಿ ಕೂಲಿ ನೀಡುತ್ತಾರೆ. ಊರಿನಿಂದ ಒಂದು ಚೀಲ ಜೋಳದ ಹಿಟ್ಟು ತೆಗೆದುಕೊಂಡು ಹೋದರೆ ಸಾಕು ರೊಟ್ಟಿಯ ವ್ಯವಸ್ಥೆ ಆಗುತ್ತದೆ. ಇನ್ನು ನಿತ್ಯ ಈ ಭಾಗದಿಂದ ಬೆಂಗಳೂರಿಗೆ ರೈಲುಗಳು ಸಂಚರಿಸುತ್ತಿವೆ. ವಸತಿ, ನೀರು ಉಚಿತವಾಗಿ ಸಿಕ್ಕು ಕನಿಷ್ಠ ₹800ರಿಂದ ₹1,000 ದಿನಗೂಲಿ ಸಿಗುತ್ತದೆ. ಕೃಷಿ ಕಾರ್ಮಿಕರು ಅಷ್ಟೇ ಅಲ್ಲ, ಒಂದು–ಎರಡು ಎಕರೆ ಜಮೀನು ಹೊಂದಿರುವ ಸಣ್ಣ ರೈತರೂ ಗುಳೆಯನ್ನೇ ನೆಚ್ಚಿಕೊಂಡು ಬದುಕುತ್ತಾರೆ’ ಎಂದು ಅವರು ಕೂಲಿಯ ಲೆಕ್ಕಾಚಾರ ಮುಂದಿಟ್ಟರು.

‘ಗುಳೆ ಹೋದವರು ಗಾರೆ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಾರೆ. ಗುಳೆ ಬದುಕಿನಿಂದ ಮುಕ್ತಿ ಕೊಡಿಸಲು ಕಾರ್ಮಿಕ ಇಲಾಖೆ ಮೂಲಕ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೂ ಅನಕ್ಷರಸ್ಥರು ಪಟ್ಟಣಕ್ಕೆ ಹೋಗುವುದು ನಿಂತಿಲ್ಲ. ಕಾರ್ಮಿಕ ಕಲ್ಯಾಣ ಮಂಡಳಿಯು ಅವರ ಮನವೊಲಿಸಿ ಸೌಲಭ್ಯ ಕಲ್ಪಿಸಿಕೊಡುತ್ತಿದೆ. 90ರ ದಶಕಕ್ಕೆ ಹೋಲಿಸಿದರೆ ಈಗ ಗುಳೆ ಪ್ರಮಾಣ ಕಡಿಮೆ’ ಎನ್ನುವುದು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮಜಾಯಿಷಿ.

‘ಗುಳೆಯಿಂದ ಮುಖ್ಯವಾಗಿ ಮಕ್ಕಳು ಅನಕ್ಷರಸ್ಥರಾಗುತ್ತಿದ್ದಾರೆ. ಅನಕ್ಷರತೆ ಅವರನ್ನು ಮತ್ತೆ ಗುಳೆ ಅವಲಂಬಿಸುವಂತೆ ಮಾಡುತ್ತದೆ. ಇದರಿಂದ ವೃದ್ಧರು ಅನಾಥರಾಗುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳ ಸಾಮೀಪ್ಯದಿಂದ ದೂರ ಉಳಿಯುವುದು ಎಂಥಾ ನೋವು ತರುತ್ತದೆ ಎಂಬುದನ್ನು ಮಾತಲ್ಲಿ ಹೇಳಲಿಕ್ಕಾಗುವುದಿಲ್ಲ. ಈ ಸ್ಥಿತಿ ಯಾರಿಗೂ ಬರಬಾರದು’ ಎಂಬ ಗೆದ್ದಲಮರಿ ತಾಂಡಾದ ರಾಜು ರಾಠೋಡ ಅವರ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.

‘ದಶಕದ ಹಿಂದೆ ಸಂಸಾರ ಸಮೇತ ಹೈದರಾಬಾದ್‌ಗೆ ದುಡಿಯಲು ಹೋಗಿದ್ದೆವು. ಆರ್‌ಸಿಸಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಘಟಿಸಿದ ದುರಂತಕ್ಕೆ ಮಗ, ಹೆಂಡತಿ ಬಲಿಯಾದರು. ದೂರು ದಾಖಲಾದರೂ ಪರಿಹಾರ ಸಿಗಲಿಲ್ಲ. ವೃದ್ಧ ತಂದೆ– ತಾಯಿಯೂ ತೀರಿಹೋದರು. ಈಗ ಊರಲ್ಲೇ ಉಳಿದಿದ್ದೇನೆ. ನಮಗೆ ಇಲ್ಲೇ ಕೂಲಿ ಸಿಕ್ಕಿದ್ದರೆ ಮಗ, ಹೆಂಡತಿ ಬದುಕಿರುತ್ತಿದ್ದರು...’ ಎಂಬ ತೆಲಂಗಾಣ ಗಡಿಯಲ್ಲಿರುವ ಚಂಡ್ರಕಿ ಗ್ರಾಮದ ಹಣಮಂತ ಅವರ ದುರಂತದ ಕತೆ ಕಣ್ಣೀರು ತರಿಸುತ್ತದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT