ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದೂ ಮುಗಿಯದ ಕಥೆಗಳ ಕಥೆ

Last Updated 31 ಜುಲೈ 2018, 11:20 IST
ಅಕ್ಷರ ಗಾತ್ರ

ತಿಣಿಕಿದನು ಫಣಿರಾಯ ರಾಮಾ–
ಯಣದ ಕವಿಗಳ ಭಾರದಲಿ ತಿಂ–
ತಿಣಿಯ ರಘುವರಚರಿತದಲಿ ಕಾಲಿಡಲು ತೆರಪಿಲ್ಲ ।।

ರಾಮಾಯಣದ ಬಗ್ಗೆ ಮಾತನಾಡುವ ಹೆಚ್ಚಿನ ಸಂದರ್ಭದಲ್ಲಿ ಕುಮಾರವ್ಯಾಸನ ಈ ಮಾತನ್ನು ಉಲ್ಲೇಖಿಸುವುದು ರೂಢಿಯಾಗಿದೆ. ಅವನು ನೂರಾರು ರಾಮಾಯಣಗಳನ್ನು ನೋಡಿರುವುದಕ್ಕೂ ಕೇಳಿರುವುದಕ್ಕೂ ಇದೊಂದು ಐತಿಹಾಸಿಕ ದಾಖಲೆಯಾಗಿದೆ ಎಂದು ಇದನ್ನು ಸ್ವೀಕರಿಸಬಹುದು ಎನಿಸುತ್ತದೆ. ಆದಿಶೇಷನು ಭೂಮಿಯನ್ನು ಹೊತ್ತಿದ್ದಾನೆ ಎನ್ನುವುದು ಪುರಾಣದಲ್ಲಿಯ ಒಂದು ನಂಬಿಕೆ. ಸುಲಭವಾಗಿ ಅದನ್ನು ಹೊತ್ತಿರುವ ಅವನಿಗೆ ರಾಮಾಯಣದ ಕವಿಗಳ ಭಾರ ಅವನ ಹೆಜ್ಜೆಗಳನ್ನು ಅಲುಗಾಡಿಸಿದವಂತೆ! ಹಾಗಾದರೆ ಎಷ್ಟು ಮಂದಿ ರಾಮಾಯಣವನ್ನು ಬರೆದಿದ್ದಾರೆ? ನಮಗೆ ಇಂದು ಖಚಿತವಾದ ಮಾಹಿತಿ ಲಭ್ಯವಿಲ್ಲ. ಆದರೆ ಆದಿಶೇಷನೇ ತಿಣುಕಾಡುವಷ್ಟು ಸಂಖ್ಯೆಯಲ್ಲಿ ಅವರಿದ್ದರು ಎಂಬ ಉತ್ಪ್ರೇಕ್ಷೆಯಲ್ಲಿ ಈ ಸಂಖ್ಯೆಯ ಅಪಾರತೆಯ ಸೂಚನೆಯಿದೆ. ಎಂದರೆ ಈ ನಾಡಿನಲ್ಲಿ ಸಾವಿರಾರು ವರ್ಷಗಳಿಂದಲೂ ರಾಮಾಯಣದ ದೊಡ್ಡ ಪರಂಪರೆಯೇ ಇದ್ದಿತು ಎನ್ನುವುದು ಸ್ಪಷ್ಟ. ರಾಮಾಯಣ ಪರಂಪರೆಯಲ್ಲಿ ಸಂಸ್ಕೃತರಾಮಾಯಣಗಳಿವೆ; ಕನ್ನಡ, ಬೆಂಗಾಳಿ, ತೆಲುಗು, ತಮಿಳು, ಹಿಂದಿ, ಗುಜರಾತಿ, ಮರಾಠಿ ಮೊದಲಾದ ದೇಶೀಯ ಭಾಷೆಗಳಲ್ಲೂ ಈ ಪರಂಪರೆ ಮುಂದುವರೆದಿದೆ; ಜೈನ–ಬೌದ್ಧ ಪರಂಪರೆಯಲ್ಲೂ ರಾಮಾಯಣಗಳಿವೆ; ಮಾತ್ರವಲ್ಲ, ವಿದೇಶದಲ್ಲೂ ಚೀನಾ, ಥಾಯ್ಲೆಂಡ್, ಕಾಂಬೋಡಿಯಾ ಮುಂತಾದ ಹಲವು ದೇಶಗಳಲ್ಲಿಯೂ ರಾಮಾಯಣಪರಂಪರೆ ಹಬ್ಬಿದೆ. ಬಹುಶಃ ಮಹಾಕಾವ್ಯವೊಂದು ಹೀಗೆ ಹಲವು ಸಂಸ್ಕೃತಿಗಳಲ್ಲಿಯೂ ರೂಪಗಳಲ್ಲಿಯೂ ಆವಿರ್ಭವಿಸುತ್ತಲೇ ಸಾಗಿರುವ ಉದಾಹರಣೆಗಳು ವಿರಳಾತಿವಿರಳ.

ಹೀಗಿರುವಾಗ ರಾಮಾಯಣದಲ್ಲಿ ಯಾವುದು ಪ್ರಕ್ಷಿಪ್ತ, ಯಾವುದು ಮೂಲ – ಎಂದು ನಿಖರವಾಗಿ ಹೇಳಲಾದೀತೆ? ಆದರೆ ಒಂದನ್ನಂತೂ ಹೇಳಬಹುದು. ಎಲ್ಲ ರಾಮಾಯಣಗಳಿಗೂ ಮೂಲವಾಗಿದ್ದುದು ಮಾತ್ರ ‘ವಾಲ್ಮೀಕಿ ರಾಮಾಯಣ’ವೇ ಹೌದು. ಆದರೆ ವಾಲ್ಮೀಕಿ ರಾಮಾಯಣಕ್ಕಿಂತ ಹೊರತಾದ ಮತ್ತೊಂದು ರಾಮಾಯಣಧಾರೆಯೂ ಇತ್ತೆಂದು ಆಗ್ರಹದಿಂದ ಪ್ರತಿಪಾದಿಸುವವರೂ ಕೆಲವರಿದ್ದಾರೆ. ರಾಮಾಯಣಪರಂಪರೆಯಲ್ಲಿರುವ ಕೃತಿಗಳಲ್ಲಿ ಕಾಣುವ ಕಥೆಯಲ್ಲಿಯ ಬದಲಾವಣೆಗಳು, ಪಾತ್ರಗಳ ಆಯ್ಕೆಯಲ್ಲಿ ನಡೆದಿರುವ ವ್ಯತ್ಯಾಸಗಳು – ಇಂಥವು ಈ ಗುಂಪಿನವರು ಬಳಸಿಕೊಳ್ಳುತ್ತಿರುವ ಸಾಕ್ಷ್ಯಗಳು. ಸಂಸ್ಕೃತದಲ್ಲಿರುವ ರಾಮಾಯಣಪರಂಪರೆಯಲ್ಲಿ ಬಂದಿರುವ ಕಾಲಿದಾಸ, ಭವಭೂತಿ, ಭಾಸ ಮುಂತಾದವರ ಕೃತಿಗಳು ಈ ಸಾಕ್ಷ್ಯಗಳಿಗಿಂತಲೂ ಹಿಂದಿನವು. ಅವುಗಳಲ್ಲಿಯೂ ಮೂಲರಾಮಾಯಣಕ್ಕಿಂತಲೂ ದೂರ ಸರಿದ ಹಲವು ವಿವರಗಳನ್ನು ಕಾಣಬಹುದು. ಆದರೆ ಈ ಕೃತಿಗಳಲ್ಲಿ ವಾಲ್ಮೀಕಿರಾಮಾಯಣದ ಕಥೆಯನ್ನೇ ಆಧಾರವಾಗಿಟ್ಟುಕೊಂಡಿರುವುದೂ, ವಾಲ್ಮೀಕಿಯನ್ನೇ ಗೌರವಿಸಿರುವುದೂ ಎದ್ದುಕಾಣುವ ವಿವರ. ವಾಲ್ಮೀಕಿರಾಮಾಯಣದಲ್ಲಿ ಇಲ್ಲದ ವಿವರವನ್ನು ಹೇಳುತ್ತಿದ್ದಾರೆ ಎಂದ ಮಾತ್ರಕ್ಕೆ, ಅಂಥ ಕೃತಿಯ ಮೂಲವನ್ನು ಇನ್ನೊಂದು ಭಿನ್ನ ಪರಂಪರೆಗೇ ಸೇರಿಸುವುದು ದುಡುಕಿನ ತೀರ್ಮಾನವಾಗುತ್ತದೆ; ಅಂಥ ವಿವರಗಳು ವಾಲ್ಮೀಕಿಗೆ ಗೊತ್ತಿರಲಿಲ್ಲ ಎಂದು ಸಂಭ್ರಮಿಸುವುದು ಬಾಲಿಶತನವಾಗುತ್ತದೆಯಷ್ಟೆ. ರಾಮಾಯಣಪರಂಪರೆಯಲ್ಲಿ ಬಂದಿರುವ ಕೃತಿಗಳ ಉದ್ದೇಶ ವಾಲ್ಮೀಕಿರಾಮಾಯಣದ ಮರುಕಥನಗಳು, ಅನುವಾದಗಳು ಅಥವಾ ಸಂಗ್ರಹಗಳು ಮಾತ್ರವೇ ಆಗಿವೆ ಎಂದು ಹೇಳುವುದು ಸಾಹಸದ ಮಾತಾಗುತ್ತದೆ; ಈ ಎಲ್ಲ ಕೃತಿಗಳು ಕೂಡ ಒಂದಲ್ಲ ಒಂದು ವಿಧದಲ್ಲಿ ವಾಲ್ಮೀಕಿರಾಮಾಯಣದ ವಿಮರ್ಶೆಯೂ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ. ವಾಲ್ಮೀಕಿರಾಮಾಯಣವನ್ನಷ್ಟೆ ಅಲ್ಲ, ಇಡಿಯ ರಾಮನ ವಂಶವನ್ನೇ ಕಾಲಿದಾಸನ ’ರಘುವಂಶ’ದಷ್ಟು ಸೂಕ್ಷ್ಮವಾಗಿ ಮತ್ತೊಂದು ಕೃತಿ ವಿಮರ್ಶಿಸಿಲ್ಲ ಎನ್ನುವುದು ಸುಳ್ಳಲ್ಲ. ‘ರಾಮಾಯಣ–ಮಹಾಭಾರತಗಳು ಭಾರತೀಯರ ಎರಡು ಭಾಷೆಗಳು’ ಎಂದಿದ್ದರು ಕೆ. ವಿ. ಸುಬ್ಬಣ್ಣ. ಭಾಷೆಯಿಲ್ಲದೆ ಮನುಷ್ಯನ ಬದುಕು ಇಲ್ಲ; ಅವನ ನಡೆ, ನುಡಿ, ಅರಿವು, ಆಲೋಚನೆ, ಕಲ್ಪನೆ – ಈ ಎಲ್ಲವೂ ಭಾಷೆಯ ಮೂಲಕವೇ ನಡೆಯುವಂಥ ವಿದ್ಯಮಾನಗಳು. ರಾಮಾಯಣ–ಮಹಾಭಾರತಗಳು ಈ ಕೆಲಸವನ್ನು ಮಾಡುತ್ತಬಂದಿವೆ. ಸಾವಿರಾರು ವರ್ಷಗಳಿಂದ ಈ ನೆಲದ ಹಲವು ಒತ್ತಡಗಳನ್ನೂ ಚಿಂತನೆಗಳನ್ನೂ ಆಶಯಗಳನ್ನೂ ಅಸಮಾಧಾನಗಳನ್ನೂ ಸಂತೋಷಗಳನ್ನೂ ಕಲೆಯ ಬೇರೆ ಬೇರೆ ಮಾಧ್ಯಮಗಳಲ್ಲಿ ‘ರಾಮಾಯಣ–ಮಹಾಭಾರತ’ ಎಂಬ ಎರಡು ಭಾಷೆಗಳ ಮೂಲಕ ಜನರೂ ಕವಿ–ಕಲಾವಿದರೂ ಅಭಿವ್ಯಕ್ತಪಡಿಸುತ್ತಲೇ ಇದ್ದಾರೆ ಎಂಬ ದೃಷ್ಟಿಯಿಂದ ನೋಡಿದರೆ ನಮಗಾಗುವ ಲಾಭ ಹೆಚ್ಚು. ಹೀಗಲ್ಲದೆ, ಮುದ್ದಣನ ರಾಮಾಯಣದಲ್ಲಿಯೋ ವೀರಪ್ಪ ಮೊಯಿಲಿಯವರ ರಾಮಾಯಣದಲ್ಲಿಯೋ ಅಥವಾ ಎಸ್‌. ಎಲ್‌. ಭೈರಪ್ಪನವರ ರಾಮಾಯಣದಲ್ಲಿಯೋ ವಾಲ್ಮೀಕಿರಾಮಾಯಣದ ವಿವರಗಳಿಗಿಂತಲೂ ಬೇರೆಯೇ ಆದ ವಿವರಗಳು ಇವೆ ಎಂಬ ತಥ್ಯವನ್ನು ‘ವಾಲ್ಮೀಕಿಗೆ ಆ ವಿವರಗಳು ತಿಳಿದಿರಲಿಲ್ಲ; ಆದುದರಿಂದ ಈ ರಾಮಾಯಣಗಳು ವಾಲ್ಮೀಕಿಪರಂಪರೆಗೆ ಸೇರಿಲ್ಲ’ ಎಂದು ವಾದ ಮಾಡಿದರೆ ಏನು ತಾನೆ ಮಾಡಲಾದೀತು? ‘In India and in Southeast Asia, no one ever reads the Ramayana or the Mahabharata for the first time. The stories are there "always already" (ಭಾರತದಲ್ಲಾಗಲೀ ಆಗ್ನೇಯ ಏಷ್ಯಾದಲ್ಲಿಯಾಗಲೀ ರಾಮಾಯಣ ಅಥವಾ ಮಹಾಭಾರತವನ್ನು ಯಾರೂ ಕೂಡ ಮೊದಲ ಬಾರಿಗೆ ಓದುವುದಿಲ್ಲ; ಈ ಕಥೆಗಳು ಮೊದಲಿನಿಂದಲೂ ಸಿದ್ಧವಿರುವಂಥವೇ ಹೌದು) – ಎಂದ ಎ. ಕೆ. ರಾಮಾನುಜನ್‌ ಅವರ ಮಾತು ರಾಮಾಯಣ–ಮಹಾಭಾರತಗಳ ಅಂತಃಸತ್ತ್ವದ ಇನ್ನೊಂದು ಆಯಾಮವನ್ನು ಎತ್ತಿತೋರಿಸುತ್ತಿದೆ.

ವಾಲ್ಮೀಕಿ ರಾಮಾಯಣದಲ್ಲಿಯೇ ‘ಪ್ರಕ್ಷಿಪ್ತ’ಗಳು ಇವೆ ಎಂದು ಒಪ್ಪಿಕೊಂಡರೂ, ಯಾವುದು ಪ್ರಕ್ಷಿಪ್ತ ಹೌದು, ಯಾವುದು ಅಲ್ಲ – ಎನ್ನುವುದನ್ನು ನಿರ್ಧರಿಸುವುದು ಸುಲಭವಲ್ಲ. ರಾಮಾಯಣದಲ್ಲಿರುವ ಕಾಂಡಗಳನ್ನೂ ಶ್ಲೋಕಗಳ ಸಂಖ್ಯೆಗಳನ್ನೂ ಸೂಚಿಸುವ ವಾಲ್ಮೀಕಿಯ ಮಾತಿಗೂ ಇಂದು ನಮಗೆ ಸಿಕ್ಕಿರುವ ವಾಲ್ಮೀಕಿರಾಮಾಯಣಕ್ಕೂ ಹೊಂದಾಣಿಕೆ ಆಗುತ್ತಿಲ್ಲ ಎನ್ನುವುದೂ ದಿಟವೇ.

‘ಏಳು ಕಾಂಡಗಳು, ಐದುನೂರು ಸರ್ಗಗಳು ಮತ್ತು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳ ರಾಮಾಯಣ’ ಎಂದಿದೆಯಷ್ಟೆ. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡ – ಇವೇ ಏಳು ಕಾಂಡಗಳು. ಏಳು ಕಾಂಡಗಳು ಸರಿ; ಆದರೆ ಸರ್ಗಗಳ ಸಂಖ್ಯೆಯಲ್ಲೂ ಶ್ಲೋಕಗಳ ಸಂಖ್ಯೆಯಲ್ಲೂ ಈ ಮಾತು ಸಮನ್ವಯವಾಗುವುದಿಲ್ಲ. ರಾಮಾಯಣಕ್ಕೆ ವ್ಯಾಖ್ಯಾನವನ್ನು ಬರೆದಿರುವವರಲ್ಲಿ ಗೋವಿಂದರಾಜ ಕೂಡ ಒಬ್ಬ. ಅವನ ಎಣಿಕೆಯನ್ನು ಎನ್‌. ರಂಗನಾಥಶರ್ಮಾ ಅವರು ಸಂಗ್ರಹಿಸಿಕೊಟ್ಟಿದ್ದಾರೆ. ಆ ಪ್ರಕಾರ ಉತ್ತರಕಾಂಡವನ್ನೂ ಸೇರಿಸಿ, 647 ಸರ್ಗಗಳೂ, 24,753 ಶ್ಲೋಕಗಳೂ ಆಗುತ್ತವೆ; ಉತ್ತರಕಾಂಡವನ್ನು ಬಿಟ್ಟರೆ 547 ಸರ್ಗಗಳೂ, 21,019 ಶ್ಲೋಕಗಳೂ ಆಗುತ್ತವೆ. ಎರಡು ರೀತಿಯ ಎಣಿಕೆಯಿಂದಲೂ ಮೇಲಣ ಮಾತಿಗೆ ಸರಿಹೋಗದು.

ಇಷ್ಟು ಮಾತ್ರವಲ್ಲ, ಇಲ್ಲಿ ಇನ್ನೂ ಒಂದು ತೊಡಕುಂಟು. ಬಾಲಕಾಂಡದ ಆ ಶ್ಲೋಕವೇ ಪ್ರಕ್ಷಿಪ್ತ ಎನ್ನುವವರೂ ಇದ್ದಾರೆ; ಕೆಲವರು ಉತ್ತರಕಾಂಡವನ್ನು ಪ್ರಕ್ಷಿಪ್ತ ಎಂದರೆ, ಮತ್ತೆ ಕೆಲವರು ಬಾಲಕಾಂಡ ಕೂಡ ಪ್ರಕ್ಷಿಪ್ತ ಎನ್ನುತ್ತಾರೆ. ಗಾಯತ್ರೀಛಂದಸ್ಸಿನ 24 ಅಕ್ಷರಗಳಿಗೂ ರಾಮಾಯಣದ ಶ್ಲೋಕಗಳಿಗೂ ನಂಟಿದೆ ಎಂದೂ ಮತ್ತೊಬ್ಬ ರಾಮಾಯಣವ್ಯಾಖ್ಯಾನಕಾರರು ಸೂಚಿಸಿದ್ದಾರಂತೆ. ‘ಗಾಯತ್ರ್ಯಾಶ್ಚ ಸ್ವರೂಪಂ ಯದ್ರಾಮಯಣಮನುತ್ತಮಾಮ್‌’ ಎಂಬ ಮಾತು ಉತ್ತರಕಾಂಡದಲ್ಲಿಯೇ ಇದೆಯೆನ್ನಿ! ಆದರೆ ಈ ಎಣಿಕೆಯೂ ಪೂರ್ಣವಾಗಿ ಹೊಂದಾಣಿಕೆಯಾಗದು. ಇನ್ನು, ಬರೋಡದ ‘ಓರಿಯೆಂಟಲ್‌ ಇನ್‌ಸ್ಟಿಟ್ಯೂಟ್‌’ ಎಂಬತ್ತಕ್ಕೂ ಹೆಚ್ಚು ಆಕರಗಳ ಸಂಪಾದನೆಯೊಂದಿಗೆ ಪ್ರಕಟಿಸಿರುವ ‘ವಿಮರ್ಶಾತ್ಮಕ ರಾಮಾಯಣ’(ಕ್ರಿಟಿಕಲ್‌ ಎಡಿಷನ್‌ ಆಫ್‌ ರಾಮಾಯಣ)ದಲ್ಲಿರುವುದು 606 ಸರ್ಗಗಳು ಮತ್ತು 18,766 ಶ್ಲೋಕಗಳು ಮಾತ್ರ. ಈ ಸಂಖ್ಯೆಯ ಗೊಂದಲವಲ್ಲದೆ ಕಥೆಯ ಓಟದಲ್ಲೂ ಕೆಲವೊಂದು ಅಸಾಂಗತ್ಯಗಳಿವೆ. ಹಾಗಾದರೆ ಈ ಸಮಸ್ಯೆಗಳಿಗೆ ಪರಿಹಾರ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT