ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಇಲಾಖೆ ವೈಫಲ್ಯ: ಆರೋಪ

Last Updated 3 ಫೆಬ್ರುವರಿ 2018, 7:00 IST
ಅಕ್ಷರ ಗಾತ್ರ

ಮಡಿಕೇರಿ: ಬೆಂಗಳೂರಿನ ನಡೆದ ಸಂತೋಷ್ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತ, ಗಾಂಧಿ ಮೈದಾನದ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅಲ್ಲಿ ರಾಜ್ಯದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್‌ ಮಾತನಾಡಿ, ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಅತ್ಯಾಚಾರ, ಕೊಲೆಗಳು, ಅಧಿಕಾರಿಗಳ ಮೇಲೆ ಒತ್ತಡಗಳು ಹೆಚ್ಚಾಗಿ ನಡೆಯುತ್ತಿವೆ. ರಾಜ್ಯದಲ್ಲಿ ಇಂದು ಪ್ರಭಾವಶಾಲಿ ನಾಯಕರು, ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಮುಗಿಸುವ ಯತ್ನ ನಡೆಯುತ್ತಿದ್ದು, ಇದಕ್ಕೆ ರಾಜ್ಯ ಗೃಹ ಇಲಾಖೆಯ ವೈಫಲ್ಯವೇ ಕಾರಣವಾಗಿದೆ ಎಂದು ದೂರಿದರು.

‘ಕೇರಳದ ಸಂಸದ ಕೆ.ಎಸ್‌. ವೇಣುಗೋಪಾಲ್‌ ರಾಜ್ಯದಲ್ಲಿ ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡ ಬಳಿಕ ನಿರಂತರ ಹತ್ಯೆಗಳು ನಡೆಯುತ್ತಿವೆ. ಬಿಜೆಪಿ ಪರಿವರ್ತನಾ ಯಾತ್ರೆಯ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದ ಸಂದರ್ಭದಲ್ಲಿ ಸಂತೋಷನನ್ನು ಹಿಂದೂ ವಿರೋಧಿಗಳು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಇಂತಹ ಹಲವು ಘಟನೆಗಳು ನಡೆಯುತ್ತಿದ್ದರೂ ವೋಟ್‌ಬ್ಯಾಂಕ್‌ ರಾಜಕಾರಣಕ್ಕೆ ಸರ್ಕಾರವು ಕ್ರಮ ಕೈಗೊಳ್ಳದೇ ಮೌನ ವಹಿಸಿದೆ’ ಎಂದು ಆಪಾದಿಸಿದರು.

‘ಗೃಹಸಚಿವ ರಾಮಲಿಂಗಾರೆಡ್ಡಿ ಅವರು ಕೊಲೆ ಆಕಸ್ಮಿಕವಾಗಿ ನಡೆದಿದೆ ಎನ್ನುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತೋಷ್‌ ಮನೆಗೆ ತೆರಳಿ ಸಾಂತ್ವನ ಹೇಳುವ ಬದಲಿಗೆ ಸಚಿವ ಯು.ಟಿ.ಖಾದರ್‌ ಜೊತೆಗೂಡಿ ಭೂರಿ ಭೋಜನ ಮಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲದಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲಾ ಮುಕ್ತಿ ಹಾಡಬೇಕಾದರೆ ಕಾಂಗ್ರೆಸ್‌ಮುಕ್ತ ಕರ್ನಾಟಕವಾಗಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಜನವಿರೋಧಿ ಧೋರಣೆಯ ಜತೆಗೆ, ಗೂಂಡಾ ಪ್ರವೃತ್ತಿ ಅನುಸರಿಸುತ್ತಿದೆ. ಸಂಘ– ಸಂಸ್ಥೆಗಳ ಪ್ರಮುಖರ ಕೊಲೆಗಳು ನಡೆಯುತ್ತಿದ್ದರೂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದಕ್ಕೆಲ್ಲಾ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ ಎಚ್ಚರಿಸಿದರು.

ಕಾಂಗ್ರೆಸ್‌ ಆಡಳಿತ ವಿರುದ್ಧ ರಾಜ್ಯದ ಜನರು ಬೇಸತ್ತು ಹೋಗಿದ್ದು, ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ‌ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಪ್ರತಿಭಟನೆಯ ನೇತೃತ್ವವನ್ನು ವಿಧಾನಪರಿಷತ್‌ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ನಗರ ಘಟಕದ ಅಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಯುಮುನಾ ಚಂಗಪ್ಪ, ನಗರಸಭೆ ಸದಸ್ಯೆ ಅನಿತಾ ಪೂವಯ್ಯ, ಬಿ.ಕೆ. ಜಗದೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT