ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ಬದಲಾವಣೆ ಮಾತು ನಮ್ಮದಲ್ಲ’

Last Updated 3 ಫೆಬ್ರುವರಿ 2018, 8:56 IST
ಅಕ್ಷರ ಗಾತ್ರ

ಧಾರವಾಡ: ‘ಸಂವಿಧಾನವನ್ನು ಬದಲಾಯಿಸಬೇಕು ಎಂದು ಎಡಪಂಥೀಯ ಸಿದ್ಧಾಂತದಲ್ಲಿ ನಂಬಿಕೆಯುಳ್ಳವರು ಹೇಳುತ್ತಿದ್ದಾರೆಯೇ ಹೊರತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಾಗಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಲಿ ಹೇಳುತ್ತಿಲ್ಲ’ ಎಂದು ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಬಿ.ವಿ.ವಸಂತಕುಮಾರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಆರಂಭವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 37ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೇರಳದ ನಂಬೂದರಿ ಪಾಡ್‌ ಅವರಿಂದ ಹಿಡಿದು, ಇಂದಿನ ಕನ್ಹಯ್ಯ ಕುಮಾರ್‌ವರೆಗೆ ಎಡಪಂಥೀಯ ಸಿದ್ಧಾಂತದವರೇ ಸಂವಿಧಾನ ಬದಲಿ
ಸುವ ಮಾತುಗಳನ್ನು ಆಡುತ್ತಿದ್ದಾರೆ’ ಎಂದ ಅವರು, ‘ಮೇಲು–ಕೀಳು ಇರಬಾರದು. ಹಿಂದೂ ಕೋಡ್ ಬಿಲ್ ಜಾರಿಯಾಗಬೇಕು ಎಂದು ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರಿಂದ ಪ್ರೇರಣೆ ಪಡೆದ ಎಬಿವಿಪಿ ಎಂದಿಗೂ ಅಂಥ ಹೇಳಿಕೆಯನ್ನು ನೀಡದು’ ಎಂದರು.

‘ಕೇರಳದಂತೆ ಈಗ ಕರ್ನಾಟಕದಲ್ಲೂ ಜಾತಿ, ಧರ್ಮ, ಜನರ ನಡುವೆ ಸಂಘರ್ಷದ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಬಲಪಂಥೀಯ ವಿದ್ಯಾರ್ಥಿಗಳ ಹತ್ಯೆಗೆ ಕುಮ್ಮಕ್ಕು ನೀಡುವ ಮೂಲಕ ಕೇರಳದ ಎಡಪಂಥೀಯ ಸರ್ಕಾರವು ದೇಶ ಕಟ್ಟುವ ಹೋರಾಟವನ್ನು ಹತ್ತಿಕ್ಕುತ್ತಿದೆ. ಎಪಿಬಿವಿ ರಾಷ್ಟ್ರ ನಿರ್ಮಾಣದ ಮಾತುಗಳನ್ನಾಡುತ್ತಿದ್ದರೆ, ದೆಹಲಿಯ ಜೆಎನ್‌ಯುನಲ್ಲಿ ಇರುವ ಎಡಪಂಥೀಯರು ದೇಶವನ್ನು ತುಂಡು ತುಂಡಾಗಿಸುವ ಮಾತಾಡುತ್ತಿದ್ದಾರೆ. ಇಂಥ ಹೇಳಿಕೆಗಳಿಗೆ ವಿದ್ಯಾರ್ಥಿಗಳು ಕಿವಿಗೊಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.

‘ಡಾ. ಬಿ.ಆರ್‌.ಅಂಬೇಡ್ಕರ್‌ ಹೇಳುವಂತೆ ಮಾರ್ಕ್ಸ್‌ ಸಿದ್ಧಾಂತದ ಸಮಾನತೆಗಿಂತ, ಬುದ್ಧನ ಸಿದ್ಧಾಂತದ ಸೋದರತ್ವ ಹಾಗೂ ಸಮಬಾಳಿನಲ್ಲಿ ನಮಗೆ ನಂಬಿಕೆ ಇದೆ’ ಎಂದು ವಸಂತಕುಮಾರ್‌ ಹೇಳಿದರು.

ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ ಅಂಬೇಕರ್ ಮಾತನಾಡಿ, ‘ಅತೀ ಹೆಚ್ಚು ಜ್ಞಾನಪೀಠ ಪಡೆದ ಈ ನಾಡಿನಲ್ಲಿ ವಿದೇಶಿಯರ ಆಣತಿಯಂತೆ ಪ್ರಶಸ್ತಿ ಹಿಂದಿರುಗಿಸುವ ಪ್ರಸಂಗಗಳು ನಡೆದಿರುವುದು ವಿಪರ್ಯಾಸ’ ಎಂದರು.

‘ಇಲ್ಲಿ ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಅಧಿಕಾರ ಹಿಡಿಯಲು ಯತ್ನಿಸುವ ಕೆಲಸ ನಡೆಯುತ್ತಿದೆ. ಆದರೆ ಯುವಕರು ಜಾಗೃತರಾಗಿದ್ದು, ಇಂಥ ಹಗಲುಗನಸು ಕಾಣುವುದು ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT