ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗ ತಂದ ಸಾಲ

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಒಂದು ಮಂಗಕ್ಕೆ ಮದುವೆಯಾಯಿತು. ಮಕ್ಕಳಾದವು. ಹರಕು–ಮುರುಕು ಮನೆಯೊಂದನ್ನು ಕಟ್ಟಿತು. ಮಳೆಗಾಲದಲ್ಲಿ ರಭಸದಿಂದ ಮಳೆ ಸುರಿಯುವಾಗ ಮನೆಯಿಡೀ ಸೋರುತ್ತಿತ್ತು. ಹೆಣ್ಣು ಮಂಗ ಸಿಟ್ಟಿನಿಂದ, ‘ಎಂಥ ಸೋಮಾರಿ ನೀನು! ಒಳ್ಳೆಯ ಮನೆಯನ್ನೂ ಕಟ್ಟಲಿಲ್ಲ. ಮಳೆಗೆ ನೆನೆಯುವ ಶಿಕ್ಷೆಯ ಜೊತೆಗೆ ತಿನ್ನಲು ಆಹಾರವೂ ಇಲ್ಲ. ಏನಾದರೂ ಸಂಪಾದಿಸಿ ತರದಿದ್ದರೆ ಮಕ್ಕಳೊಂದಿಗೆ ನಾನು ಉಪವಾಸ ಸಾಯುತ್ತೇನೆ. ಹೋಗು, ಎಲ್ಲಿಂದಾದರೂ ಅಕ್ಕಿಯಿದ್ದರೆ ತೆಗೆದುಕೊಂಡು ಬಾ’ ಎಂದು ಹೇಳಿತು.

ಗಂಡು ಮಂಗನಿಗೆ ದುಡಿಯಲು ಮನಸ್ಸಿಲ್ಲ. ರೈತರು ಬೆಳೆದ ಕಾಯಿಪಲ್ಲೆಯೋ ಹಣ್ಣೋ ಸಿಗುವುದೇ ಎಂದು ಹುಡುಕಿಕೊಂಡು ಹೊರಟಿತು. ಏನೂ ಸಿಗಲಿಲ್ಲ. ಆಗ ಅದಕ್ಕೆ ಕೋಳಿಯ ನೆನಪಾಯಿತು. ಬೇಸಿಗೆ ಕಾಲದಲ್ಲಿ ಕೋಳಿ ತಿಪ್ಪೆಯನ್ನು ಕೆದಕಿ ಕೆದಕಿ ಒಂದೊಂದೇ ಕಾಳು ಆರಿಸಿ ಮಳೆಗಾಲದಲ್ಲಿ ಮಕ್ಕಳು ಮರಿಗಳಿಗೆ ತಿನ್ನಲು ಜೋಪಾನ ಮಾಡುತ್ತದೆ. ಅದರ ಬಳಿಗೆ ಹೋಗಿ ಸಾಲ ಕೇಳಿ ತರುವುದೆಂದು ಕೋಳಿಯ ಮನೆಗೆ ಹೋಯಿತು. ‘ಕೋಳಿಯಕ್ಕಾ, ಒಂದು ಸೇರು ಅಕ್ಕಿ ಸಾಲ ಕೊಡುತ್ತೀಯಾ?’ ಎಂದು ಅಂಗಲಾಚಿತು.

ಕೋಳಿಯು, ‘ಸಾಲ ಕೊಡುತ್ತೇನೆ. ಆದರೆ ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ನಿನ್ನ ಮನೆಗೆ ಬಂದು ಕೇಳಿದಾಗ ಬಡ್ಡಿ ಸಹಿತ ಮರಳಿ ಕೊಡಬೇಕು, ಆಗಬಹುದೆ?’ ಎಂದು ಕೇಳಿತು. ‘ಅಯ್ಯೋ ದೇವರೇ, ಹೇಳಿದ ಮಾತಿಗೆ ತಪ್ಪುವುದುಂಟೆ? ನಾನು ಕೊಟ್ಟ ಸಾಲದ ಅಕ್ಕಿ ಬೇಕಾದಷ್ಟು ಇದೆ. ಮೂಟೆಗಟ್ಟಲೆ ಅಕ್ಕಿ ಈ ದಿನ ಸಂಜೆಯೊಳಗೆ ನನ್ನ ಮನೆಗೆ ಮರಳಿ ಬರುತ್ತದೆ’ ಎಂದು ಮಂಗ ಮೀಸೆ ತಿರುವಿತು. ಕೋಳಿ ಕೊಟ್ಟ ಅಕ್ಕಿಯ ಗಂಟನ್ನು ಮನೆಗೆ ಸಾಗಿಸಿತು. ಬಳಿಕ ನರಿಯ ಮನೆಗೆ ಹೋಯಿತು. ನರಿ ಬೇಸಿಗೆಯಲ್ಲಿ ಹೊಲಗಳಿಗೆ ಹೋಗಿ ಕದ್ದು ಗಳಿಸಿದ ಅಕ್ಕಿಯನ್ನು ಜೋಪಾನ ಮಾಡುವುದು ಅದಕ್ಕೆ ಗೊತ್ತಿತ್ತು.

‘ನರಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುವೆಯಾ?’ ಎಂದು ಕೇಳಿತು.

‘ಸಾಲ ಕೊಡುತ್ತೇನೆ. ಆದರೆ ಬಡ್ಡಿ ಕೊಡಬೇಕು. ಈಗಿನ ಕಾಲದಲ್ಲಿ ಯಾರನ್ನಾದರೂ ನಂಬುವುದು ಕಷ್ಟ. ನಾಳೆ ಮಧ್ಯಾಹ್ನ ಹನ್ನೆರಡೂವರೆ ಗಂಟೆಗೆ ನಿನ್ನ ಮನೆಗೆ ವಸೂಲಿಗೆ ನಾನು ಬರುತ್ತೇನೆ. ಆಗ ಮರಳಿ ಕೊಡದೆ ಇರಬಾರದು’ ಎಂದಿತು ನರಿ.

‘ಛೇ ಛೇ, ಹಾಗೆ ಮೋಸ ಮಾಡುವುದುಂಟೆ? ಒಂದಕ್ಕೆರಡು ಪಾಲು ಕೊಡುತ್ತೇನೆ. ಈ ದಿನ ಸಂಜೆ ನನ್ನ ಮನೆಗೆ ಎಷ್ಟು ಅಕ್ಕಿ ಬರುತ್ತದೋ ನೀನೇ ನೋಡು’ ಎಂದು ಮಂಗವು ನರಿಗೆ ಹೇಳಿತು. ಅದು ಕೊಟ್ಟ ಅಕ್ಕಿಯನ್ನು ಮನೆಗೆ ತಂದಿತು.

ಮಂಗ ಮತ್ತೆ ನಾಯಿಯ ಮನೆಗೆ ಸಾಗಿತು. ನಾಯಿ ಕುರಿಗಳನ್ನು ತೋಳಗಳಿಂದ ರಕ್ಷಿಸಲು ಕಾವಲು ಕಾದು ಯಜಮಾನ ಕೊಟ್ಟ ಅಕ್ಕಿಯನ್ನು ಸಂಗ್ರಹಿಸಿಡುವುದು ಅದಕ್ಕೆ ಗೊತ್ತಿತ್ತು. ‘ನಾಯಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುತ್ತೀಯಾ? ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದು ಗಂಟೆಗೆ ತಂದು ಕೊಡುತ್ತೇನೆ’ ಎಂದು ಬೇಡಿತು. ನಾಯಿಯು ಅಕ್ಕಿ ಕೊಟ್ಟಿತು. ‘ನೀನು ತಂದು ಕೊಡುವೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ನಾಳೆ ಒಂದು ಗಂಟೆಗೆ ನಾನೇ ನಿನ್ನ ಮನೆಗೆ ಬರುತ್ತೇನೆ’ ಎಂದಿತು.

ಮಂಗ ಅಕ್ಕಿಯನ್ನು ತಂದು ಹೆಂಡತಿಗೆ ಕೊಟ್ಟು ಹುಲಿಯ ಗುಹೆಗೆ ಹೋಯಿತು. ‘ಹುಲಿಯಣ್ಣ, ಮರ್ಯಾದೆ ಹೋಗುತ್ತದೆ. ಒಂದು ಸೇರಕ್ಕಿ ಸಾಲ ಬೇಕಿತ್ತು. ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದೂವರೆ ಗಂಟೆಗೆ ವಾಪಸು ಕೊಡುತ್ತೇನೆ’ ಎಂದು ಕೇಳಿತು. ದಾರಿಯಲ್ಲಿ ಹೋಗುವ ವ್ಯಾಪಾರಿಗಳನ್ನು ಹೆದರಿಸಿ ಹುಲಿ ಮಳೆಗಾಲಕ್ಕಾಗಿ ಅಕ್ಕಿಯನ್ನು ಸಂಗ್ರಹಿಸಿ ಇಡುತ್ತಿತ್ತು. ಅದರಿಂದ ಮಂಗನಿಗೆ ಸಾಲ ಕೊಟ್ಟಿತು.

‘ನಾಳೆ ಮಧ್ಯಾಹ್ನ ನಿನ್ನ ಮನೆಗೆ ಬರುತ್ತೇನೆ. ಆಗ ಏನೂ ನೆಪ ಹೇಳದೆ ಮರಳಿ ಕೊಡದಿದ್ದರೆ ಕೊಂದು ಹಾಕಿಯೇನು’ ಎಂದು ಎಚ್ಚರಿಸಿತು. ಮಂಗ ಅಕ್ಕಿಯನ್ನು ಮನೆಗೆ ತಂದಿತು. ಹೆಂಡತಿ ಮಕ್ಕಳೊಂದಿಗೆ ಹಬ್ಬದ ಊಟ ಮಾಡಿತು.

ಮರುದಿನ ಮಂಗ ಹೆಂಡತಿಗೆ ಮಕ್ಕಳೊಂದಿಗೆ ತವರುಮನೆಗೆ ಹೋಗಿ ಬರಲು ಕಳುಹಿಸಿತು. ತಾನು ಒಂದು ಕಂಬಳಿ ಹೊದ್ದುಕೊಂಡು ಮಂಚದ ಮೇಲಿನ ಹಾಸಿಗೆಯಲ್ಲಿ ನರಳುತ್ತ ಕುಳಿತುಕೊಂಡಿತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸಾಲ ವಸೂಲಿಗೆ ಕೋಳಿ ಬಂದಿತು. ಹೊರಗಿನಿಂದ, ‘ಮಂಗಣ್ಣಾ ಮಂಗಣ್ಣಾ, ಸಾಲ ಮರಳಿ ತಾ’ ಎಂದು ಕರೆಯಿತು. ಮಂಗ ನರಳುತ್ತ, ‘ನನಗಿಲ್ಲಿ ಜ್ವರದಿಂದ ಪ್ರಾಣ ಹೋಗುತ್ತಿದೆ. ಸಾಲವೂ ಇಲ್ಲ, ಗೀಲವೂ ಇಲ್ಲ. ಹೋಗಾಚೆ’ ಎಂದು ಗದರಿಸಿತು. ಕೋಳಿಗೆ ಕೋಪ ಬಂತು. ‘ಏನಂದೆ! ಕೊಟ್ಟ ಮಾತಿಗೆ ತಪ್ಪಿದರೆ ಬಿಡುತ್ತೇನಾ?’ ಎನ್ನುತ್ತ ಒಳಗೆ ಬಂದಿತು. ಆಗ ಹೊರಗಿನಿಂದ, ‘ಮಂಗಣ್ಣಾ, ನನ್ನ ಸಾಲ ಹಿಂದೆ ಕೊಡು’ ಎಂದು ನರಿಯ ಧ್ವನಿ ಕೇಳಿಸಿತು. ನರಿ ಬಂದಿರುವುದು ಕೋಳಿಗೆ ಗೊತ್ತಾಯಿತು.

‘ಅಯ್ಯೋ, ನೀನು ಸಾಲ ಮರಳಿ ಕೊಡುವುದು ಬೇಡ. ನರಿಯಿಂದ ನನ್ನನ್ನು ಬಚಾವು ಮಾಡು’ ಎಂದು ಕೋರಿತು. ಮಂಗ ಕೋಳಿಯನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿತು. ‘ಸಾಲ ಮರಳಿ ಕೊಡೋದಿಲ್ಲ. ನನಗೆ ಜ್ವರ ಬರುತ್ತಿದೆ’ ಎಂದು ಕೂಗಿ ಹೇಳಿತು. ‘ಕೊಡದಿದ್ದರೆ ಸುಮ್ಮನೆ ಬಿಡುತ್ತೇನಾ?’ ಎಂದು ನರಿ ಒಳಗೆ ಬಂದಿತು.

ಆಗ ಹೊರಗೆ ನಾಯಿ ಕರೆಯುವ ಧ್ವನಿ ನರಿಗೆ ಕೇಳಿಸಿತು. ‘ಅಯ್ಯೋ ದೇವರೇ, ನಾಯಿ ಬಂದ ಹಾಗಿದೆ. ನೀನು ಸಾಲ ಮರಳಿಸಬೇಕಾಗಿಲ್ಲ. ನನ್ನ ಜೀವ ಕಾಪಾಡು’ ಎಂದಿತು ನರಿ. ಮಂಗ ನರಿಯನ್ನು ಹಾಸಿಗೆಯ ಕೆಳಗೆ ಅಡಗಿಸಿತು. ನಾಯಿಗೆ, ‘ಹೋಗೋ, ನಿನ್ನ ಸಾಲ ಮರಳಿಸೋದೇ ಇಲ್ಲ’ ಎಂದಿತು.

ನಾಯಿ ಒಳಗೆ ಬರುವಾಗ ಹೊರಗೆ ಹುಲಿಯ ಕರೆ ಕೇಳಿಸಿತು. ನಾಯಿ, ‘ಹುಲಿ ಬಂದ ಹಾಗಿದೆ. ನನ್ನ ಜೀವ ಕಾಪಾಡು. ನೀನು ಸಾಲ ಮರಳಿಸಬೇಕಾಗಿಲ್ಲ’ ಎಂದು ಕೇಳಿತು. ಮಂಗ ನಾಯಿಯನ್ನು ಹಾಸಿಗೆಯ ಕೆಳಗೆ ಅಡಗಿಸಿಟ್ಟಿತು. ‘ಲೋ ಹುಲಿ, ನಿನ್ನ ಅಕ್ಕಿ ಮರಳಿಸೋದಿಲ್ಲ. ಒಳಗೆ ಬಾ. ಇಲ್ಲಿರುವ ನನ್ನ ಸ್ನೇಹಿತರು ನಿನ್ನನ್ನು ಸೀಳಿ ಹಾಕುತ್ತಾರೆ’ ಎಂದು ಅಬ್ಬರಿಸಿತು. ಹುಲಿಯನ್ನು ಸೀಳುವ ಸ್ನೇಹಿತರು ಯಾರು ಎಂದು ನೋಡಲು ಹುಲಿ ಒಳಗೆ ಬಂದು ಮಂಚದ ಮೇಲೆ ನೆಗೆಯಿತು. ಮಂಚ ಮುರಿದು ಬಿದ್ದಿತು. ಅದರೊಳಗಿದ್ದ ಕೋಳಿ ಹೊರಗೆ ಬಂದಿತು. ಕೋಳಿಯನ್ನು ಬೆನ್ನಟ್ಟಿ ನರಿ ಓಡಿತು. ನರಿಯನ್ನು ಕಂಡು ನಾಯಿ ಬೆಂಬತ್ತಿತು.

ಮಂಗ ಸದ್ದಿಲ್ಲದೆ ಮನೆಯಿಂದ ಹೊರಗೆ ಜಿಗಿದು ಮರವೇರಿ ಕುಳಿತಿತು. ಹುಲಿಯ ಭಯದಿಂದಾಗಿ ಅದು ಮತ್ತೆ ಮನೆ ಕಟ್ಟಿಕೊಳ್ಳದೆ ಮರವನ್ನೇ ಮನೆ ಮಾಡಿಕೊಂಡು ಅಲ್ಲೇ ವಾಸಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT