ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಲೀಗ್ ಸಾಕೆ..?

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅದು 2014ರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಸಮಯ. ಬೆಂಗಳೂರಿನ ಶ್ರೀರಾಮಪುರದಲ್ಲಿ ಹಬ್ಬದ ಸಂಭ್ರಮ. ತವರಿನ ತಂಡವೇ ಪಂದ್ಯವಾಡುತ್ತಿದೆ ಎನ್ನುವ ಖುಷಿಯಲ್ಲಿದ್ದ ಅಲ್ಲಿನ ಫುಟ್‌ಬಾಲ್‌ ಪ್ರೇಮಿಗಳು ರಸ್ತೆ ಬದಿ ದೊಡ್ಡ ಸ್ಕ್ರೀನ್‌ ಹಾಕಿ ವಿಶ್ವಕಪ್‌ ವೀಕ್ಷಿಸುತ್ತಿದ್ದರು.

ವಿಶ್ವಕಪ್‌ನಲ್ಲಿ ಭಾರತ ತಂಡ ಇಲ್ಲದಿದ್ದರೂ ಅವರೆಲ್ಲರ ಪ್ರೀತಿ ಮತ್ತು ಅಭಿಮಾನ ಕಾಲ್ಚೆಂಡಿನ ಸೊಬಗಿನ ಮೇಲಿತ್ತು. ಜರ್ಮನಿ, ಚಿಲಿ, ಫ್ರಾನ್ಸ್‌, ಇಂಗ್ಲೆಂಡ್‌, ಅರ್ಜೆಂಟೀನಾದಲ್ಲಿ ನಡೆಯುವಷ್ಟು ಫುಟ್‌ಬಾಲ್‌ ಚಟುವಟಿಕೆಗಳು ನಮ್ಮ ದೇಶದಲ್ಲಿ ನಡೆಯುವುದಿಲ್ಲ. ಆದರೂ ಭಾರತದಲ್ಲಿ ಫುಟ್‌ಬಾಲ್‌ ನೋಡುಗರ ಸಂಖ್ಯೆ ದೊಡ್ಡದಿದೆ. ಆದ್ದರಿಂದ ನಿರಂತರವಾಗಿ ಫುಟ್‌ಬಾಲ್‌ ಟೂರ್ನಿಗಳು ನಡೆಯುತ್ತಿರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಹಳೆಯ ಟೂರ್ನಿಗಳಾದ ಡುರಾಂಡ್ ಕಪ್‌, ಫೆಡರೇಷನ್‌ ಕಪ್‌, ಸಂತೋಷ್‌ ಟ್ರೋಫಿ ಟೂರ್ನಿಗಳನ್ನು ಈಗಲೂ ಮೊದಲಿನಷ್ಟೇ ಆಸಕ್ತಿಯಿಂದ ನೋಡುವವರೂ ಇದ್ದಾರೆ.

ಲೀಗ್‌ಗಳ ಕಾಲ ಶುರುವಾದ ಬಳಿಕ ಇಂಡಿಯನ್‌ ಸೂಪರ್‌ ಲೀಗ್‌ ಭಾರತದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸೆಳೆದಿದೆ. ಈ ಟೂರ್ನಿ ಐದು ವರ್ಷಗಳ ಹಿಂದೆಯಷ್ಟೇ ಆರಂಭವಾಗಿದೆ. 2007ರಿಂದ ನಡೆಯುತ್ತಿರುವ ದೇಶದ ಪ್ರತಿಷ್ಠಿತ ಐ ಲೀಗ್‌ ಟೂರ್ನಿಯಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಆದ್ದರಿಂದ ಎರಡೂ ಟೂರ್ನಿಗಳಿಗೂ ಬೇಡಿಕೆಯಿದೆ.

ಎರಡೂ ಟೂರ್ನಿಗಳ ವೇಳಾಪಟ್ಟಿ ಬಹುತೇಕ ಒಂದೇ ಸಮಯದಲ್ಲಿ ಇರುವುದರಿಂದ ಕೆಲವು ಆಟಗಾರರು ಲಭ್ಯವಾಗುತ್ತಿಲ್ಲ. ಆದ್ದರಿಂದ ಐ ಲೀಗ್‌ ಮತ್ತು ಐಎಸ್‌ಎಲ್‌ ಟೂರ್ನಿಯಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಚರ್ಚಿಸುತ್ತಿದೆ. ಕೇಂದ್ರ ಕ್ರೀಡಾಸಚಿವ ರಾಜ್ಯವರ್ಧನ್‌ ಸಿಂಗ್ ರಾಠೋಡ್ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ.

ಎರಡೂ ಟೂರ್ನಿಗಳ ಬದಲು ಒಂದನ್ನು ಮಾತ್ರ ನಡೆಸಿದರೆ ಭಾರತದಲ್ಲಿ ಆಟಗಾರರ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಬೇರೆಯೇ ಆಗುತ್ತದೆ ಎಂದು ಫುಟ್‌ಬಾಲ್‌ ಫೆಡರೇಷನ್‌ ಲೆಕ್ಕಾಚಾರ ಹಾಕಿದೆ.

ಹತ್ತು ವರ್ಷಗಳಿಂದ ನಡೆಯುತ್ತಿರುವ ಐ ಲೀಗ್‌ನಲ್ಲಿ ಪ್ರತಿ ವರ್ಷ ಹತ್ತು ತಂಡಗಳು ಪಾಲ್ಗೊಳ್ಳುತ್ತಿವೆ. ಕೋಲ್ಕತ್ತದ ಈಸ್ಟ್ ಬೆಂಗಾಲ್‌, ಚರ್ಚಿಲ್‌ ಬ್ರದರ್ಸ್‌, ಶಿಲ್ಲಾಂಗ್‌ ಲಜಾಂಗ್‌, ಮೋಹನ್‌ ಬಾಗನ್‌ ತಂಡಗಳ ಅನೇಕ ಆಟಗಾರರು ಐ ಲೀಗ್‌ ವೇದಿಕೆಯಿಂದ ಗುರುತಿಸಿಕೊಂಡಿದ್ದಾರೆ. ಐ ಲೀಗ್‌ ಟೂರ್ನಿಯ ಎರಡನೇ ಡಿವಿಷನ್‌ ಕೂಡ ಪ್ರತಿ ವರ್ಷ ನಡೆಯುತ್ತದೆ. ಇದರಿಂದ ತಳಮಟ್ಟದಿಂದ ಕ್ರೀಡೆಯನ್ನು ಬೆಳೆಸಲು ಸಾಧ್ಯವಾಗುತ್ತದೆ.

ಫ್ರಾಂಚೈಸ್ ಆಧಾರಿತ ಟೂರ್ನಿಯಾಗಿರುವ ಐಎಸ್‌ಎಲ್‌ನಲ್ಲೂ ಹತ್ತು ತಂಡಗಳು ಭಾಗವಹಿಸುತ್ತವೆ. ಈ ಟೂರ್ನಿಯಲ್ಲಿ ವಿದೇಶಿ ಆಟಗಾರರ ಸಂಖ್ಯೆ ಹೆಚ್ಚಿದೆ. ಅಂತರರಾಷ್ಟ್ರೀಯ ಮತ್ತು ವಿದೇಶಿ ಕ್ಲಬ್‌ಗಳಲ್ಲಿ ಆಡಿದ ಪ್ರಮುಖ ಆಟಗಾರರಿಗೆ ಮಾತ್ರ ಐಎಸ್‌ಎಲ್‌ನಂಥ ಪ್ರತಿಷ್ಠಿತ ಟೂರ್ನಿಯಲ್ಲಿ ಅವಕಾಶ ಪಡೆಯಲು ಸಾಧ್ಯವಾಗುತ್ತಿದೆ. ಒಂದೇ ಟೂರ್ನಿ ನಡೆಸಿದರೆ ಯುವ ಆಟಗಾರರಿಗೆ ಹೆಚ್ಚು ಫುಟ್‌ಬಾಲ್‌ ಪಂದ್ಯಗಳಲ್ಲಿ ಆಡುವ ಅವಕಾಶ ತಪ್ಪಿ ಹೋಗುತ್ತದೆ.

ನಿರಂತರ ಟೂರ್ನಿಗಳು ನಡೆಯುವುದು ಮತ್ತು ಕಾಲಕ್ಕೆ ತಕ್ಕಂತೆ ಹೊಸ ಟೂರ್ನಿಗಳನ್ನು ಆಯೋಜಿಸುವುದರಿಂದ ಕ್ರೀಡೆ ಬೆಳೆಯತ್ತದೆ. ಐಪಿಎಲ್‌ ಇದಕ್ಕೆ ಉತ್ತಮ ಉದಾಹರಣೆ. ಟೆಸ್ಟ್, ಏಕದಿನ ಮಾದರಿಗೆ ಮಾತ್ರ ಸೀಮಿತವಾಗಿದ್ದ ಕ್ರಿಕೆಟ್‌ ಐಪಿಎಲ್‌ ಆರಂಭವಾದ ಬಳಿಕ ಬೇರೆಯೇ ಸ್ವರೂಪ ಪಡೆದುಕೊಂಡಿತು. ನೋಡುಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮನೆಮಾತಾಯಿತು.

ಅದೇ ರೀತಿ ಫುಟ್‌ಬಾಲ್‌ನಲ್ಲಿಯೂ ವರ್ಷಪೂರ್ತಿ ಟೂರ್ನಿಗಳು ನಡೆಯಬೇಕು. ಇದರಿಂದ ಹೊಸ ಆಟಗಾರರಿಗೆ ಅವಕಾಶ ಸಿಗುತ್ತದೆ. ಇದನ್ನು ಬಿಟ್ಟು ಇರುವ ಎರಡು ಮಹತ್ವದ ಟೂರ್ನಿಗಳನ್ನು ಒಂದೇ ಮಾಡುವ ಅಗತ್ಯವಾದರೂ ಏನಿದೆ? ಸೂಪರ್‌ ಡಿವಿಷನ್‌, ‘ಎ’ ಡಿವಿಷನ್‌ ಟೂರ್ನಿಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರರಿಗೆ ಐ ಲೀಗ್‌ ದೊಡ್ಡ ವೇದಿಕೆಯಾಗಿದೆ. ಒಂದೇ ಟೂರ್ನಿ ನಡೆದರೆ ಈ ಅವಕಾಶ ಕೂಡ ತಪ್ಪಿ ಹೋಗಲಿದೆ.

ಐ ಲೀಗ್‌ ಮತ್ತು ಐಎಸ್‌ಎಲ್‌ ಎರಡೂ ಟೂರ್ನಿಗಳನ್ನು ನೋಡಲು ಕ್ರೀಡಾಂಗಣಕ್ಕೆ ಸಾಕಷ್ಟು ಜನ ಬರುತ್ತಾರೆ. ಜಾಹೀರಾತು, ಪ್ರಾಯೋಜಕತ್ವ ಹೀಗೆ ವಿವಿಧ ಮೂಲಗಳಿಗೆ ಫುಟ್‌ಬಾಲ್‌ ಫೆಡರೇಷನ್‌ಗೆ ಉತ್ತಮ ಆದಾಯ ಕೂಡ ಬರುತ್ತಿದೆ. ಇದರಲ್ಲಿ ಒಂದು ಟೂರ್ನಿ ಮಾತ್ರ ಆಯೋಜಿಸಿದರೆ ಆದಾಯಕ್ಕೂ ಪೆಟ್ಟು ಬೀಳುತ್ತದೆ.

ಭಾರತದ ದಬ್ಜಿತ್‌ ಮಜಮದಾರ್‌, ಸುನಿಲ್‌ ಚೆಟ್ರಿ, ಜೆಜೆ ಲಾಲ್‌ಪೆಕ್ಲುವಾ, ಪ್ರೀತಮ್‌ ಕೊಟಾಲ್‌, ಕೇನ್‌ ಲೆವಿಸ್‌, ಮೆಹತಾಬ್‌ ಹುಸೇನ್‌, ಸಿ.ಕೆ. ವಿನೀತ್‌, ಬಲ್ವಂತ್‌ ಸಿಂಗ್‌ ಸೇರಿದಂತೆ ಹಲವು ಪ್ರಮುಖ ಆಟಗಾರರು ಮಾತ್ರ ಐಎಸ್‌ಎಲ್‌ನಲ್ಲಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ವಿದೇಶಿ ಆಟಗಾರರ ಸಂಖ್ಯೆ ಹೆಚ್ಚಿರುವಾಗ ಭಾರತದ ಆಟಗಾರರಿಗೆ ಹೆಚ್ಚು ಅವಕಾಶ ಸಿಗುವುದಾದರೂ ಹೇಗೆ? ಒಂದು ಟೂರ್ನಿ ರದ್ದಾದರೆ ಉಳಿದ ಆಟಗಾರರು ಪಂದ್ಯಗಳಿಗಾಗಿ ಜಾತಕ ಪಕ್ಷಿಗಳಂತೆ ಕಾಯಬೇಕಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT