ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 5–2–1968

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಗೋಲಿಬಾರ್; ಇಬ್ಬರ ಸಾವು

ಬೆಂಗಳೂರು, ಫೆ. 4– ಇಂದು ನಗರದ ವಯ್ಯಾಳಿಕಾವಲ್ ಪೊಲೀಸ್ ಸ್ಟೇಷನ್ನನ್ನು ಮುತ್ತಲು ಯತ್ನಿಸಿದ ಸುಮಾರು ಐದು ಸಾವಿರ ಮಂದಿಯ ಕೋಪೋದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಏಳು ಬಾರಿ ಗುಂಡು ಹಾರಿಸಿದಾಗ ಇಬ್ಬರು ಸ್ಥಳದಲ್ಲೇ ಸತ್ತು ಐದು ಮಂದಿ ಗಾಯಗೊಂಡರು.

ಕಳವು ಪ್ರಕರಣ ಒಂದರಲ್ಲಿ ಬಂಧಿಸಲ್ಪಟ್ಟಿದ್ದ ಮುನಿಚಂದ್ರನ ಸಾವಿನ ರೀತಿ ಬಗ್ಗೆ ಜನರಲ್ಲಿ ಉಂಟಾದ ಸಂಶಯ ಘಟನೆಗೆ ಕಾರಣ.

**

ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ಪೌರ ಹಕ್ಕುಗಳ ಅಪಚಾರ: ಕೇರಳದಲ್ಲಿ ಎಸ್ಸೆನ್ ಆರೋಪ 

ಕೊಚ್ಚಿನ್, ಫೆ. 4– ತಮ್ಮ ಉತ್ಕರ್ಷ ಮತ್ತು ಸಂಪೂರ್ಣ ಹಾಗೂ ಸಂಪದ್ಭರಿತ ಜೀವನ ಸಾಧಿಸುವ ಆಕಾಂಕ್ಷೆಗಳನ್ನು ವಿವಿಧ ರಾಜ್ಯಗಳಲ್ಲಿ ಆಡಳಿತ ನಿರ್ವಹಿಸುತ್ತಿರುವ ಕಾಂಗ್ರೆಸ್ಸೇತರ ಸರಕಾರಗಳು ಪೂರೈಸಿಲ್ಲವೆಂದು ರಾಷ್ಟ್ರದಲ್ಲೀಗ ‘ಹೆಚ್ಚು ಹೆಚ್ಚಾಗಿ ಮನವರಿಕೆ’ ಆಗುತ್ತಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿ, ಕೇರಳವೇನೂ ಇದಕ್ಕೆ ಹೊರತಲ್ಲ ಎಂದರು.

**

ಶ್ರದ್ಧೆಯಿಂದ ಹಿಂದಿ ಕಲಿತರೆ ಇನ್ನು 10 ವರ್ಷಗಳಲ್ಲಿ ದಕ್ಷಿಣಕ್ಕೇ ಪ್ರಥಮ ಹತ್ತು ರ‍್ಯಾಂಕ್: ಎಸ್ಸೆನ್

ಕೊಚ್ಚಿನ್, ಫೆ. 4– ಹಿಂದಿಯನ್ನು ರಾಷ್ಟ್ರದ ಸಂಪರ್ಕ ಭಾಷೆಯಾಗಿ ಬೆಳೆಸುವ ವಿರುದ್ಧ ಬೊಬ್ಬೆಯಿಟ್ಟು ಕಷ್ಟಗಳನ್ನು ಸೃಷ್ಟಿಸದೆ ಭಾಷಾ ಸಮಸ್ಯೆ ಬಗ್ಗೆ ರಾಷ್ಟ್ರೀಯ ಧೋರಣೆ ಅನುಸರಿಸಿರುವುದಕ್ಕೆ ಕೇರಳದ ಜನತೆಯನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಅಭಿನಂದಿಸಿದರು.

**

ಭಾರತದ ರೈಲು ಕಂಬಿ, ವ್ಯಾಗನ್ ಕೊಳ್ಳಲು ರಷ್ಯ ಸಿದ್ಧ

ನವದೆಹಲಿ, ಫೆ. 4– ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ತಯಾರಾಗುವ ರೈಲ್ವೆ ಕಂಬಿಗಳು ಮತ್ತು ವ್ಯಾಗನ್‌ಗಳನ್ನು ಕೊಳ್ಳಲು ರಷ್ಯ ಸಿದ್ಧವೆಂದು ರಷ್ಯದ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಅವರು ಶ್ರೀಮತಿ ಇಂದಿರಾಗಾಂಧಿಯವರೊಡನೆ ಇತ್ತೀಚೆಗೆ ಮಾತುಕತೆ ನಡೆಸಿದಾಗ ತಿಳಿಸಿದರೆಂದು ಗೊತ್ತಾಗಿದೆ.

ರಷ್ಯದ ನೆರವಿನಿಂದ ನಿರ್ಮಿತವಾಗಿರುವ ಭಿಲೈ ಉಕ್ಕು ಕಾರ್ಖಾನೆಗೆ ಇದರಿಂದ ಸಹಾಯಕವಾಗುವುದಲ್ಲದೆ, ರೈಲ್ವೆ ವ್ಯಾಗನ್‌ಗಳನ್ನು ನಿರ್ಮಿಸುತ್ತಿರುವ ಕೆಲವು ಎಂಜಿನಿಯರಿಂಗ್ ಸಂಸ್ಥೆಗಳಿಗೂ ಸಹಾಯಕವಾಗುವುದು.

**

ಖಾದಿ ಷರತ್ತು 

ಮುಂಬಯಿ, ಫೆ. 4– ಹಸ್ತಾಕ್ಷರ ಬೇಕೆ, ಹಾಗಿದ್ದಲ್ಲಿ ಖಾದಿ ತೊಡಿ. ಇದು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿಯವರ ಷರತ್ತು.

ಶ್ರೀ ಮುರಾರಜಿ ದೇಸಾಯಿಯವರು ತಾವು ಹಿಂದೆ ವ್ಯಾಸಂಗ ಮಾಡುತ್ತಿದ್ದ ಇಲ್ಲಿನ ವಿಲ್ಸನ್ ಕಾಲೇಜಿಗೆ ಇಂದು ಭೇಟಿ ಕೊಟ್ಟಾಗ ಕೆಲವರು ಹಸ್ತಾಕ್ಷರ ನೀಡುವಂತೆ ಅವರನ್ನು ಕೇಳಿದರು.

ಇನ್ನೊಂದು ವಾರದಲ್ಲಿ ಖಾದಿ ಉಡುಪು ಧರಿಸುವುದಾಗಿ ಆಶ್ವಾಸನೆ ಕೊಡುವವರಿಗೆ ಮಾತ್ರ ಹಸ್ತಾಕ್ಷರ ನೀಡುವುದಾಗಿ ಶ್ರೀ ಮುರಾರಜಿ ತಿಳಿಸಿದರು.

ಶ್ರೀ ಮುರಾರಜಿಯವರ ಈ ಷರತ್ತನ್ನು ಒಪ್ಪಿಕೊಂಡು ಹಸ್ತಾಕ್ಷರ ಪಡೆಯಲು ಯಾರೂ ಮುಂದೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT