ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂಗೆ ತೊಡಕಾದ ಸಿಬ್ಬಂದಿ ಕೊರತೆ

ಕಾರವಾರ ವಿಭಾಗದಲ್ಲಿ ಶೇ 40ರಷ್ಟು ಹುದ್ದೆಗಳು ಖಾಲಿ; ಶೇ 50ರಷ್ಟು ಲೈನ್‌ಮನ್‌ಗಳ ಕೊರತೆ
Last Updated 26 ಜೂನ್ 2018, 17:09 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಹೆಸ್ಕಾಂ ವಿಭಾಗದಲ್ಲಿ ಶೇ 40ರಷ್ಟು ಹುದ್ದೆಗಳು ಖಾಲಿ ಇರುವುದು ವಿದ್ಯುತ್ ಸಂಬಂಧಿತ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ತೊಡಕಾಗಿ ಪರಿಣಮಿಸಿದೆ.

ನಗರದಲ್ಲಿ ಇತ್ತೀಚಿಗೆ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವಿದ್ಯುತ್ ವ್ಯತ್ಯಯ ಸೇರಿದಂತೆ ಇನ್ನಿತರ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿರಲು ಸಿಬ್ಬಂದಿ ಕೊರತೆಯೇ ಕಾರಣ ಎನ್ನುತ್ತಿದ್ದಾರೆ ಅಧಿಕಾರಿಗಳು.

ಕಾರವಾರ ಹಾಗೂ ಅಂಕೋಲಾ ಉಪ ವಿಭಾಗಗಳನ್ನು ಒಳಗೊಂಡ ಕಾರವಾರ ವಿಭಾಗದಲ್ಲಿ 1.12 ಲಕ್ಷ ಗ್ರಾಹಕರಿದ್ದಾರೆ. ಅವರ ಕುಂದು– ಕೊರತೆಗಳನ್ನು ಸಮಯಕ್ಕೆ ಸರಿಯಾಗಿ ಆಲಿಸಿ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಇದು ಅಧಿಕಾರಿ ಹಾಗೂ ಸಿಬ್ಬಂದಿಗೆ ತಲೆನೋವಾಗಿದೆ.

108 ಹುದ್ದೆಗಳು ಖಾಲಿ: ಕಾರವಾರ ವಿಭಾಗದಲ್ಲಿ ಒಟ್ಟು 108 ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಸರ್ಕಾರದಿಂದ ಮಂಜೂರಾದ 274 ಸಿಬ್ಬಂದಿಯಲ್ಲಿ 166 ಮಂದಿ ಸದ್ಯ ಕಾರ್ಯನಿರ್ವಹಿಸುತ್ತಿದ್ದು, ಇರುವವರ ಮೇಲೆಯೇ ಕೆಲಸದ ಒತ್ತಡ ಹೆಚ್ಚಿದೆ.

ಶೇ 50ರಷ್ಟು ಲೈನ್‌ಮನ್‌ ಕೊರತೆ: ವಿಭಾಗದಲ್ಲಿ 57 ಮಂದಿ ಲೈನ್‌ಮನ್‌ಗಳ ಮಂಜೂರಾಗಿದೆ. ಆದರೆ, ಸದ್ಯ 29 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 28 ಹುದ್ದೆಗಳು ಖಾಲಿ ಇವೆ. ಅಂದರೆ, ಶೇ 50ರಷ್ಟು ಲೈನ್‌ಮನ್‌ಗಳ ಕೊರತೆಯಿದೆ.

ಇನ್ನು ಮಂಜೂರಾದ 32 ಸಹಾಯಕ ಲೈನ್‌ಮನ್‌ಗಳಲ್ಲಿ 18 ಮಂದಿ ಕಾರ್ಯನಿರ್ವಹಿಸುತ್ತಿದ್ದು, 14 ಭರ್ತಿಯಾಗಬೇಕಿದೆ. 84 ಮಂಜೂರಾದ ಕಿರಿಯ ಲೈನ್‌ಮನ್‌ಗಳ ಹುದ್ದೆಗಳ ಪೈಕಿ 48 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 26 ಹುದ್ದೆಗಳು ಖಾಲಿ ಇವೆ.

ನಿರ್ವಹಣೆಗೆ ಸಿಬ್ಬಂದಿ ಇಲ್ಲ: ‘ವಿಭಾಗದಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಸರ್ಕಾರಕ್ಕೆ ಈ ಬಗ್ಗೆ ಪ್ರತಿ ವರ್ಷವೂ ಸಿಬ್ಬಂದಿ ಬೇಡಿಕೆ ವರದಿಯನ್ನು ಕಳುಹಿಸುತ್ತಿದ್ದೇವೆ. ಆದರೆ, ಈವರೆಗೂ ಎಲ್ಲ ಹುದ್ದೆಗಳಿಗೆ ನೇಮಕಾತಿ ಪೂರ್ಣಗೊಂಡಿಲ್ಲ’ ಎನ್ನುತ್ತಾರೆ ಹೆಸ್ಕಾಂ ವಿಭಾಗೀಯ ಅಧಿಕಾರಿ ರೋಶ್ನಿ ಪೆಡ್ನೇಕರ್.

‘ತುರ್ತಾಗಿ ನಮ್ಮಲ್ಲಿ ಲೈನ್‌ಮನ್‌ ಹುದ್ದೆಗಳು ಭರ್ತಿಯಾಗಬೇಕಿದೆ. ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಗಳು ಅವರಿಂದಲೇ ಆಗಬೇಕಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಅವರು.

‘ಅರ್ಜಿ ಹಾಕುವವರಿಲ್ಲ’

ಹೆಸ್ಕಾಂ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ‘ಹುಬ್ಬಳ್ಳಿ, ಶಿರಸಿ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕಗೊಳ್ಳುತ್ತಾರೆ. ಆದರೆ, ಕರಾವಳಿ ಭಾಗದಲ್ಲಿ ಕೆಲಸ ಖಾಲಿ ಇದೆ ಎಂದರೂ ಅರ್ಜಿ ಹಾಕುವವರಿಲ್ಲ. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ನೇಮಕಗೊಳ್ಳುವವರು ವರ್ಷದಲ್ಲಿಯೇ ವರ್ಗಾವಣೆ ಬಯಸಿ ತೆರಳುತ್ತಾರೆ. ಇದು ಕೂಡ ಸವಾಲಾಗಿ ಪರಿಣಮಿಸಿದೆ’ ಎನ್ನುತ್ತಾರೆ.

ಉಪ ವಿಭಾಗ;ಮಂಜೂರು;ಕಾರ್ಯನಿರ್ವಹಣೆ;ಖಾಲಿ

ಕಾರವಾರ;108;78;30
ಅಂಕೋಲಾ;94;61;33
ಸದಾಶಿವಗಡ (ಸೆಕ್ಷನ್‌);72;27;45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT