ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಅಪೂರ್ವವಾದ ಪಾಣೆ ಗ್ರಹಣ ಸಮಾರಂಭ

ಪ್ರಜ್ಞಾ ಕೌನ್ಸಿಲ್‌ನ ರಾಜೇಶ್ವರಿಗೆ ಆರ್ಯಸಮಾಜದಲ್ಲಿ ಮದುವೆ
Last Updated 26 ಜೂನ್ 2018, 17:27 IST
ಅಕ್ಷರ ಗಾತ್ರ

ಸ್ನೇಹ ಮತ್ತು ಮದುವೆಗಳಲ್ಲಿ ಆಕಸ್ಮಿಕಗಳ ಪಾತ್ರ ಹೆಚ್ಚು. ಹಾಗೆಯೇ ಅದೃಷ್ಟದ ಪಾತ್ರವೂ ವಿಶೇಷವಾಗಿದೆ. ಎಲ್ಲೋ ಇದ್ದ ಕುಟುಂಬದ ಹೆಣ್ಣು ಮಗಳನ್ನು ಇನ್ನೆಲ್ಲೋ ಇದ್ದ ಕುಟುಂಬದ ಗಂಡು ಮಗನೊಂದಿಗೆ ಪಾಣಿಗ್ರಹಣ ಮಾಡಿಸಿ ದಾಂಪತ್ಯದ ದೀಕ್ಷೆ ತೊಡಿಸುವ ಕೆಲಸ ಪವಿತ್ರ ಕಾರ್ಯವೆಂದೇ ಸಮಾಜ ಸ್ವೀಕರಿಸಿದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಹೆಣ್ಣು ಹೆತ್ತವರಿಗಾಗಲೀ, ಗಂಡು ಹೆತ್ತವರಿಗಾಗಲೀ ಇದೊಂದು ದಿಗ್ವಿಜಯ ಮಾಡಿದಷ್ಟು ಸಾಹಸದ ಕೆಲಸ. ಸಂಭ್ರಮಿಸುವ ಕೆಲಸವೂ ಹೌದು. ವರದಕ್ಷಿಣೆ, ಜಾತಕ ಮುಂತಾದ ಎಡರು ತೊಡರುಗಳನ್ನು ದಾಟಿ ವಧೂ ವರರನ್ನು ದಂಪತಿಗಳಾಗಿ ಬೆಸೆಯುವ ಶುಭ ಗಳಿಗೆಯು ಪ್ರತಿಯೊಬ್ಬ ಮಾನವನಿಗೆ ಅವಿಸ್ಮರಣೀಯವಾಗಿದೆ. ಹೆಣ್ಣು ಹೆತ್ತವರು ವರನನ್ನು ಸಂತುಷ್ಟಗೊಳಿಸಲು ಸಾಲ ಸೋಲ ಮಾಡಿ ಹತಾಶರಾದ ಸಂದರ್ಭಗಳೆಷ್ಟೋ ಇವೆ.

ಇಂತಹ ಪರಿಸ್ಥಿತಿಗಳೇ ಹೆಚ್ಚಿರುವ ಈ ಕಾಲದಲ್ಲಿ ಹೂ ಎತ್ತಿದಷ್ಟು ಸುಲಭದಲ್ಲಿ ಮದುವೆ ನಡೆಸುವ ಭಾಗ್ಯ ಲಭಿಸಿದ್ದು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರಿನ ನಿರ್ದೇಶಕರಾದ ಪ್ರೊ.ಹಿಲ್ಡಾ ರಾಯಪ್ಪನ್ ಅವರಿಗೆ.ಶೋಷಿತರಾದ, ಅನಾಥರಾದ ಹೆಣ್ಮಕ್ಕಳಿಗೆ ಆಶ್ರಯವಿತ್ತು ಅವರ ಬಾಳಲ್ಲಿ ಭರವಸೆಯನ್ನು ತುಂಬಿದ ಸಂಸ್ಥೆ ಮೂವತ್ತು ವರ್ಷಗಳಿಂದ ಈ ಕೆಲಸ ಮಾಡುತ್ತಿದೆ. ಈ ಸಂಸ್ಥೆಯಲ್ಲಿ ಬೆಳೆದ ಹೆಣ್ಮಕ್ಕಳು ಸುಸಂಸ್ಕೃತರಾಗಿ ಆತ್ಮವಿಶ್ವಾಸವನ್ನು ತುಂಬಿಕೊಂಡು ಗಟ್ಟಿ ಹೆಜ್ಜೆಗಳನ್ನೂರಿ ಬಾಳ ಪಯಣವನ್ನು ಸಾಗಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ.

ಅಂತಹ ಹೆಣ್ಣು ಮಗಳೊಬ್ಬಳಿಗೆ ಭಾನುವಾರ (ಜೂ.25) ಕೇರಳದ ಗುರುವಾಯೂರಿನ ಸಮೀಪದ ಹುಡುಗನೊಂದಿಗೆ ಆರ್ಯಸಮಾಜದಲ್ಲಿ ವಿವಾಹ ಮಾಡಿಕೊಡುವ ಭಾಗ್ಯ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಲಭಿಸಿತು.

ಇದು ಈ ಸಂಸ್ಥೆ ನಡೆಸಿಕೊಟ್ಟ ಮದುವೆಗಳಲ್ಲಿ 29ನೆಯ ಮದುವೆ.ಎಷ್ಟೋ ಹೆಣ್ಣು ಮಕ್ಕಳಿಗೆ ಪ್ರಜ್ಞಾ ಸಲಹಾ ಕೇಂದ್ರ ತವರು ಮನೆಯಾಗಿ ಆಶ್ರಯ ನೀಡಿದೆ. ತ್ರಿಶ್ಶೂರು – ಗುರುವಾಯೂರು ಮಧ್ಯದಲ್ಲಿರುವ ಕರುವಂದಲ ಶ್ರೀ ಭಗವತೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಜಯನ್ ನಂಬೂದಿರಿ ಅವರ ಮಗ ಸನುಪ್ ಎಂಬ ವರನುಪ್ರಜ್ಞಾದ ರಾಜೇಶ್ವರಿಯನ್ನು ಮದುವೆಯಾಗಿದ್ದಾನೆ.

22 ವರ್ಷಗಳ ಹಿಂದೆ ರೈಲು ನಿಲ್ದಾಣದಲ್ಲಿ ಅನಾಥವಾಗಿ ಸಿಕ್ಕ ಮಗು ರಾಜೇಶ್ವರಿ. ಪೋಲೀಸರ ಮೂಲಕಪ್ರಜ್ಞಾದ ಆಶ್ರಯಕ್ಕೆ ಬಂದು ಇಲ್ಲಿಯೇ ಬೆಳೆದು ದೊಡ್ದವಳಾದ ಹುಡುಗಿ. ಕಾಸಿಯಾ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಓದಿದ್ದಾರೆ. ಚಿತ್ರಕಲೆ , ಕಸೂತಿ,ಟೈಲರಿಂಗ್ , ಕುಶಲ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಆಕೆ ಎರಡು ವರ್ಷ ಡಿ. ಎಡಿಕ್ಷನ್ ಸೆಂಟರ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಆ ಬಳಿಕ ಬೆಳುವಾಯಿಯಲ್ಲಿ ಸ್ಥಾಪನೆಯಾಗಿರುವ ಪ್ರಜ್ಜಾದ ಹೊಸ ಆಶ್ರಯಧಾಮದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ಇದೇ ರೀತಿಯ ಹಿನ್ನೆಲೆಉಳ್ಳ ಸುಮಾರು 50 ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳುವ ಹಿರಿಯಕ್ಕನಾಗಿ ಕೆಲಸ ಮಾಡುತ್ತಿದ್ದರು. ಈಕೆಯನ್ನು ಅರಸಿಕೊಂಡು ಗುರುವಾಯೂರಿನಿಂದ ಬಂದಿರುವ ಸನೂಪ್ ಗೆ ಸಾಕಷ್ಟು ಕೃಷಿ ಭೂಮಿಯಿದೆ. ಪದವೀಧರನಾದರೂ ಬೇಸಾಯವನ್ನೆ ವೃತ್ತಿಯಾಗಿ ನೆಚ್ಚಿಕೊಂಡು ಸಂತೃಪ್ತನಾಗಿದ್ದಾನೆ. ಕಟ್ಟಾ ಸಂಪ್ರದಾಯವಾದಿಗಳಾದ ನಂಬೂದಿರಿಗಳು ವರ್ಣ,ವರ್ಗ ಭೇದ ಮರೆತು ರಾಜೇಶ್ವರಿಯನ್ನು ಸೊಸೆಯಾಗಿ ಸ್ವೀಕರಿಸಿದ್ದು ಅಭಿಮಾನದ ವಿಷಯ. ಪ್ರಜ್ಞಾಕ್ಕೆ ಒಂದು ಗೌರವದ ವಿಷಯವಾಗಿದೆ. ಸಂಸ್ಕೃತಿ, ಸಂಪ್ರದಾಯಗಳು ಚಲನಶೀಲವಾಗುತ್ತಿರುವುದರ ದ್ಯೋತಕವಿದು. ಮದುವೆಗಳು ಸ್ವರ್ಗದಲ್ಲೇ ನಡೆಯುತ್ತದೆ. ಅದು ಹೃದಯ ಸಂಬಂಧಿಯಾಗಿ ಆತ್ಮ ಸಂಗಾತವನ್ನು ಆಶಿಸುವುದರಿಂದ ಮನುಷ್ಯ ಪ್ರಯತ್ನಕ್ಕೂ ವಿಷಯವಾಗಿ ವಿಧಿಯಿಂದ ಪ್ರೇರಿತವೂ ಪರಮಾತ್ಮನಿಂದ ಅನುಗ್ರಹೀತವು ಆಗಿದೆ ಎಂಬ ನಂಬಿಕೆ ನಿಜವಾಗಿದೆ.

ಈ ಹಿಂದೆ ಪ್ರಜ್ಞಾ ಸಂಸ್ಥೆಯಿಂದ ಮದುವೆಯಾಗಿ ಹೋದ 28 ಮಂದಿಯೂ ಸುಮಧುರವಾದ ದಾಂಪತ್ಯದಲ್ಲಿ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಮಾತೃಸ್ಥಾನದಲ್ಲಿರುವ ಹಿಲ್ಡಾ ರಾಯಪ್ಪನ್‌ ಅವರಿಗೆ ಇದು ಧನ್ಯತೆಯ ಭಾವ ಮೂಡಿಸಿದೆ. ಯಶಸ್ವೀ ದಾಂಪತ್ಯದ ಕಟ್ಟಡವನ್ನು ಇಬ್ಬರೂ ಪ್ರತಿದಿನ ಕಟ್ಟಬೇಕಾಗುತ್ತದೆ. ಯಜಮಾನ, ಯಜಮಾನಿ ಎಂಬ ಪಟ್ಟವನ್ನು ಬಯಸದೇ ಇಬ್ಬರೂ ಆಳುಗಳೆಂದು ಭಾವಿಸಿ ಕುಟುಂಬದ ಸೌಧವನ್ನು ಭದ್ರಗೊಳಿಸಬೇಕು ಎಂದು ಈ ತಾಯಿ ಹರಸುತ್ತಾರೆ. ಗಾಳಿ ಮತ್ತು ಅಲೆಗಳು ಯಾವಾಗಲೂ ದಕ್ಷರಾದ ನಾವಿಕರ ಕಡೆಗೇ ಇರುತ್ತದೆ ಎಂಬ ನಂಬಿಕೆ ವರನಾತ ಸನೂಪ್‌ಗೂ ಇದೆ. ರಾಜೇಶ್ವರಿಗೆ ಸಮರ್ಥವಾದ ಸಾಂಗತ್ಯ ಲಭಿಸಲಿ ಎಂದು ಪ್ರಜ್ಞಾ ಸಲಹಾ ಕೇಂದ್ರದ ಎಲ್ಲ ಸಿಬ್ಬಂದಿ ವರ್ಗ ಹಾರೈಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT