ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರ ಸಾಮುದಾಯಿಕ ಹಕ್ಕಿಗೆ ಮಾನ್ಯತೆ

Last Updated 5 ಫೆಬ್ರುವರಿ 2018, 9:51 IST
ಅಕ್ಷರ ಗಾತ್ರ

ಹನೂರು: ಗಿರಿಜನರಿಗೆ ಸಮುದಾಯದ ಹಕ್ಕು ನೀಡಬೇಕು ಒಂದು ಒತ್ತಾಯಿಸಿ ದಶಕಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಹನೂರು ತಾಲ್ಲೂಕಿನ ಮೂರು ಅಭಯಾರಣ್ಯಗಳನ್ನು ಒಳಗೊಂಡ 39 ಹಾಡಿಗಳಲ್ಲಿನ ಗಿರಿಜನರಿಗೆ ಅರಣ್ಯ ಇಲಾಖೆ ಇತ್ತೀಚೆಗೆ ಗಿರಿಜನರ ಸಾಮುದಾಯಿಕ ಹಕ್ಕಿಗೆ ಮಾನ್ಯತೆ ನೀಡಿದೆ.

ಬಹುತೇಕ ಅರಣ್ಯದಿಂದಲೇ ಆವೃತವಾಗಿರುವ ಹನೂರು ಕ್ಷೇತ್ರದಲ್ಲಿ ಶತಮಾನಗಳಿಂದಲೂ ಅಡವಿಯೊಳಗೆ ಬದುಕಿನ ಬಂಡಿ ಸಾಗಿಸುತ್ತಿರುವ ಸಾವಿರಾರು ಗಿರಿಜನರಿಗೆ ಅಲ್ಲಿ ಸಿಗುವ ಕಿರು ಉತ್ಪನ್ನಗಳೇ ಜೀವನಾಧಾರ. ಈಚೆಗೆ ಇಲ್ಲಿನ ಅರಣ್ಯಗಳು ವನ್ಯಧಾಮಗಳಾಗಿ ಪರಿವರ್ತನೆಯಾದ ಮೇಲೆ ಅರಣ್ಯ ಕಿರು ಉತ್ಪನ್ನ ಸಂಗ್ರಹಣೆಗೆ ನಿರ್ಬಂಧ ಹೇರಲಾಯಿತು. ಇದರಿಂದ ಕಂಗಾಲಾದ ಅರಣ್ಯವಾಸಿಗಳು ಮರಳಿ ಗಿರಿಜನರಿಗೆ ಸಾಮುದಾಯಿಕ ಹಕ್ಕು ನೀಡಬೇಕು ಎಂದು ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಲೇ ಬಂದಿದ್ದರು.

ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಕಾರಣ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಈ ಯೋಜನೆಯ ಬಗ್ಗೆ ಸಮಗ್ರ ವರದಿ ರೂಪಿಸಿ ಜಮೀನುಗಳಿಗೆ ಹಕ್ಕು ಪತ್ರ ನೀಡುವಂತೆ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯದಲ್ಲಿ ಕಿರುಅರಣ್ಯ ಉತ್ಪನ್ನ ಸಂಗ್ರಹಣೆಗಾಗಿ ಸಾಮುದಾಯಿಕ ಹಕ್ಕನ್ನು ನೀಡಲು ಮುಂದಾಗಿವೆ.

ಹನೂರು ತಾಲ್ಲೂಕಿನ 39 ಹಾಡಿಗಳಿಗೆ ಸಾಮುದಾಯಿಕ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, 2,779 ಗಿರಿಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ 2006-07ರಂತೆ 2005ಕ್ಕೂ ಮೊದಲು ತಮ್ಮ ಸ್ವಾಧೀನದಲ್ಲಿದ್ದು, ವ್ಯವಸಾಯ ಮಾಡುತ್ತಿದ್ದ ಗಿರಿಜನರ ಅರಣ್ಯ ಭೂಮಿಗೆ ವೈಯಕ್ತಿಕ ಭೂಮಿ ಹಕ್ಕು ಹಾಗೂ ಸಮುದಾಯ ಅರಣ್ಯ ಸಂಪನ್ಮೂಲಗಳ ಒಡೆತನದ ಹಕ್ಕು, ಮತ್ತಿತರ ಹಕ್ಕುಗಳನ್ನು ಕಲ್ಪಿಸಲು ಅವಕಾಶ ನೀಡಲಾಗಿದೆ.

ಬಿಳಿಗಿರಿರಂಗನಾಥ ಹುಲಿ ರಕ್ಷಿತಾರಣ್ಯದಲ್ಲಿ 2012ರಲ್ಲಿಯೇ 25 ಅರಣ್ಯ ಹಕ್ಕು ಸಮಿತಿಗಳಿಗೆ ಸಮುದಾಯ ಸಂಪನ್ಮೂಲಗಳ ಹಕ್ಕು ಪತ್ರಗಳನ್ನು ನೀಡಲಾಗಿದೆ. ಈ ಭಾರಿ ಬಿಆರ್‌ಟಿ ಹುಲಿ ರಕ್ಷಿತಾರಣ್ಯದಲ್ಲಿನ 10 ಕುಟುಂಬ, ಮಲೆ ಮಹದೇಶ್ವರ ವನ್ಯಧಾಮದ 25 ಕುಟುಂಬ ಹಾಗೂ ಕಾವೇರಿ ವನ್ಯಧಾಮದಲ್ಲಿ 4 ಕುಟುಂಬಗಳಿಗೆ ಕಿರು ಅರಣ್ಯ ಉತ್ಪನ್ನ ಸಂಗ್ರಹಣೆಗೆ ಮಾನ್ಯತೆ ನೀಡಲಾಗಿದೆ.

ಯಾವ್ಯಾವ ಹಕ್ಕುಗಳು?: ಅರಣ್ಯ ಹಕ್ಕು ಸಮಿತಿಯ ಗ್ರಾಮಸಭಾ ಸದಸ್ಯರ ಹೆಸರಿಗೆ ನೀಡಲಾಗುವ ಸಮುದಾಯ ಅರಣ್ಯ ಸಂಪನ್ಮೂಲಗಳ ಹಕ್ಕುಪತ್ರಗಳು ಕೆಲವು ಸ್ವರೂಪಗಳನ್ನು ಒಳಗೊಂಡಿವೆ. ಅರಣ್ಯ ಹಕ್ಕು ಕಾಯ್ದೆಯ ಪರಿಚ್ಛೇಧ 2 (ಐ) ಹಾಗೂ ನಿಯಮ 3(1) (ಸಿ) ನಿಯಮಗಳಲ್ಲಿರುವಂತೆ ಕಾಡಿನಲ್ಲಿ ಸಣ್ಣಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದು, ಬಳಸುವುದು ಮತ್ತು ವಿಲೇವಾರಿ ಮಾಡುವುದು (ಮಾಗಳಿ ಬೇರು, ಧೂಪ, ಔಷಧಿ ಸಸ್ಯಗಳು, ಸೀಗೆಪಟ್ಟೆ, ಬಿದಿರು, ಮೀನು, ಆಡು/ಕುರಿಗಳನ್ನು ಮೇಯಿಸುವುದನ್ನು ಹೊರತುಡಿಸಿ). ಪಾರಂಪರಿಕ ಜ್ಞಾನದ ರಕ್ಷಣೆ ಹಾಗೂ ಕಾಡಿನಲ್ಲಿರುವ ಸೋಲಿಗರ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದು, ಪೂಜಿಸುವುದು,ಆರಾಧಿಸುವುದು ಮುಂತಾದ ಹಕ್ಕುಗಳನ್ನು ಮಾನ್ಯ ಮಾಡಿದೆ.

ಕಾಡಿನ ರಕ್ಷಣೆಯ ಹೊಣೆಯೂ: ಫಲಾನುಭವಿಗಳಿಗೆ ನೀಡಲಾಗುವ ಹಕ್ಕುಪತ್ರದೊಂದಿಗೆ ಸುತ್ತಲೂ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ಅದರ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಹಾಡಿಯ ಜನತೆಗೆ ವಹಿಸುವುದು ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದು.

ವನ್ಯಜೀವಿಗಳನ್ನು, ಅರಣ್ಯವನ್ನು, ಜೈವಿಕ ವೈವಿಧ್ಯವನ್ನು ರಕ್ಷಿಸುವುದು ಮತ್ತು ಅರಣ್ಯ ಸಂಪನ್ಮೂಲಗಳ ಬಳಕೆಯನ್ನು ನಿಯಂತ್ರಿಸುವುದು. ಬೇಟೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು. ಅರಣ್ಯ ಮತ್ತು ಜೈವಿಕ ವೈವಿಧ್ಯಗಳಿಗೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುವ ಯಾವುದೇ ಚಟುವಟಿಕೆಗಳ ವಿರುದ್ಧ ಗ್ರಾಮಸಭೆಯು ನಿರ್ಣಯವನ್ನು ಕೈಗೊಳ್ಳುವಂತಹ ಷರತ್ತುಗಳೊಂದಿಗೆ, ಹಕ್ಕುಗಳ ಮಾನ್ಯತೆಯನ್ನು ಅಧಿಕೃತಗೊಳಿಸಲಾಗಿದೆ.

* * 

ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ ಹನೂರು ತಾಲ್ಲೂಕಿನಲ್ಲಿರುವ ಎಲ್ಲ ಗಿರಿಜನರಿಗೂ ಹಕ್ಕು ಪತ್ರ ವಿತರಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿಯೂ ಸಾಮುದಾಯಿಕ ಹಕ್ಕು ಪತ್ರ ನೀಡುವಂತೆ ಬೇಡಿಕೆಯಿದ್ದು, ಶೀಘ್ರದಲ್ಲೇ ಅವರಿಗೂ ವಿತರಿಸಲಾಗುವುದು.
ಎಸ್. ಕೃಷ್ಣಪ್ಪ,
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT