ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಚಿದೇವರನ್ನು ಪರಿಚಯಿಸುವ ಪಠ್ಯ ಅಗತ್ಯ

Last Updated 5 ಫೆಬ್ರುವರಿ 2018, 10:04 IST
ಅಕ್ಷರ ಗಾತ್ರ

ಕೊಪ್ಪ: ಬಸವಣ್ಣನವರ ಸೇನಾಧಿಪತಿ ಯಾಗಿದ್ದ ವೀರಪುರುಷ, ಅನುಭವ ಮಂಟಪದ ಪ್ರಮುಖ ವಚನಕಾರರಾಗಿ ಸಮಾನತೆಯನ್ನು ಸಾರಿದ ಮಹಾನ್ ಚೇತನ ಮಡಿವಾಳ ಮಾಚಿದೇವರ ಬಗ್ಗೆ ಬಯಲು ಸೀಮೆ ಹೊರತುಪಡಿಸಿ ರಾಜ್ಯದ ಇತರ ಭಾಗದ ಜನತೆಗೆ ತಿಳಿದಿಲ್ಲ. ಆದ್ದರಿಂದ ಇಂತಹ ಮಹಾತ್ಮರನ್ನು ಪರಿಚಯಿಸುವ ಪಠ್ಯಗಳನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು. ಪಟ್ಟಣದ ಪುರಭವನದಲ್ಲಿ ಶನಿವಾರ ತಾಲ್ಲೂಕು ಆಡಳಿತ ಏರ್ಪಡಿ ಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಚಿದೇವ ಇತಿಹಾಸ ಪುರುಷ ನಾದರೂ ಜನ ಅವರನ್ನು ‘ಮೂಲ ವೀರಭದ್ರ’ನೆಂದು ನಂಬಿದ್ದಾರೆ. ದಕ್ಷನನ್ನು ಸಂಹರಿಸಿದ ಉಮೇದಿನಲ್ಲಿದ್ದ ವೀರಭದ್ರ, ಶಿವನಿಗೆ ಸುದ್ದಿ ತಿಳಿಸಲು ಹೋಗು ವಾಗ ಹೆಗಲಿನ ವಸ್ತ್ರ ಶಿವಭಕ್ತ ರಿಗೆ ತಾಕಿದ್ದರಿಂದ ಕೋಪಾವಿಷ್ಠನಾದ ಶಿವ ‘ನೀನು ಭೂಲೋಕಕ್ಕೆ ಹೋಗಿ ಶಿವಶರಣರ ಬಟ್ಟೆ ತೊಳೆದು ಪಾಪವಿಮೋಚನೆ ಮಾಡಿಕೊಂಡು ಬಾ’ ಎಂದು ಶಾಪವಿತ್ತಿದ್ದನಂತೆ. ಅಂತಹ ಮಾಚಿದೇವ ಮಡಿವಾಳರಿಗೆ ಮಾತ್ರವಲ್ಲ, ಮನುಕುಲಕ್ಕೇ ದೇವರು. ತಾಲ್ಲೂಕಿನ ಜನಸಂಖ್ಯೆಯಲ್ಲಿ ಚಿಕ್ಕದಾದರೂ ಗೌರವದಿಂದ ಬದುಕುತ್ತಿರುವ ಮಡಿವಾಳ ಸಮುದಾಯದ ಮೂವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ, ಒಬ್ಬರನ್ನು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ರಾಜಕೀಯ ಶಕ್ತಿ ಕೊಡುವಲ್ಲಿ ಸಾಧ್ಯವಾದ ಪ್ರಯತ್ನ ನಡೆಸಿದ್ದೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ‘ನಾಡಿನ ಕಲ್ಯಾಣಕ್ಕೆ ಶ್ರಮಿಸಿದ ನಾರಾಯಣಗುರು, ವಿಶ್ವಕರ್ಮ, ಕನಕದಾಸ, ಕೆಂಪೇಗೌಡ, ಟಿಪ್ಪು ಸುಲ್ತಾನ್, ವಾಲ್ಮೀಕಿ, ಮಡಿವಾಳ ಮಾಚಿದೇವರಂತಹ ಮಹಾಪುರುಷರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವ ಮೂಲಕ ಸಣ್ಣಪುಟ್ಟ ಸಮುದಾಯಗಳನ್ನೂ ಗುರುತಿಸಿ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ಗ್ರಾಮೀಣ ಭಾಗದ ಯಾವುದೇ ಶುಭ ಕಾರ್ಯಗಳಿಗೆ ಮಡಿವಾಳರನ್ನು ಅವಲಂಬಿಸುವ ಸಂಪ್ರದಾಯ ಈಗಲೂ ಇದೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ ಮಾತನಾಡಿ, ದೀಪಾವಳಿ ವೇಳೆ ಬಲೀಂದ್ರ ಪೂಜೆಯ ದೀಪದ ಕೋಲಿಗೆ ಮಡಿವಾಳರು ಕೊಡುವ ಬಟ್ಟೆಯನ್ನೇ ಸುತ್ತುವ ಮೂಲಕ ಆ ಸಮುದಾಯಕ್ಕೆ ವಿಶೇಷ ಗೌರವ ನೀಡುವ ಸಂಪ್ರದಾಯ ಹಿಂದೂ ಸಂಸ್ಕೃತಿಯಲ್ಲಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಣಿ ಸತೀಶ್ ಮಾತನಾಡಿ, ‘ಅರಸನಾಗಲೀ, ಅಗಸನಾಗಲೀ ಕಾಯಕ ನಿಷ್ಠೆಯಿಂದ ಗುರಿ ಸಾಧಿಸಲು ಸಾಧ್ಯ, ಹುಟ್ಟು ದರಿದ್ರವಾದರೂ ಸಾವು ಚರಿತ್ರೆಯಾಗಬೇಕು ಎಂಬುದನ್ನು ಮಡಿವಾಳ ಮಾಚಿದೇವ ತೋರಿಸಿಕೊಟ್ಟಿದ್ದಾರೆ’ ಎಂದರು.

ಉಪನ್ಯಾಸಕ ಬಸವರಾಜ್ ಉಪನ್ಯಾಸ ನೀಡಿದರು. ತಹಶೀಲ್ದಾರ್ ತನುಜಾ ಟಿ.ಎಸ್., ಬಿಇಒ ಗಣಪತಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಿ.ಕೆ. ಮಾಲತಿ, ಸುಬ್ರಹ್ಮಣ್ಯ ಶೆಟ್ಟಿ, ವಿಜಯಕುಮಾರ್, ಭುವನಕೋಟೆ ಪಂಚಾಯಿತಿ ಅಧ್ಯಕ್ಷೆ ಸುಜಾತ ವಿಜೇಂದ್ರ, ತಾಲ್ಲೂಕು ಕಸಾಪ ಅಧ್ಯಕ್ಷ ಎಚ್.ಎಂ. ರವಿಕಾಂತ್, ಮಡಿವಾಳ ಸಂಘದ ಕ್ಷೇತ್ರಾಧ್ಯಕ್ಷ ಬಿ.ಜಿ. ರಮೇಶ್, ಕಾರ್ಯದರ್ಶಿ ಕೆ.ಜಿ. ಪ್ರಕಾಶ್ ಇದ್ದರು. ಕೆ.ಪಿ. ಕೃಷ್ಣಮೂರ್ತಿ ಸ್ವಾಗತಿಸಿ ಪ್ರಾಸ್ತಾವನೆಗೈದರು. ಸುಚಿತ್‍ಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನಿತರು

ಮಡಿವಾಳ ಸಮುದಾಯದ ಸಾಧಕರಾದ ನಿವೃತ್ತ ತಹಶೀಲ್ದಾರ್ ಸಿ.ಆರ್. ಶ್ರೀನಿವಾಸ್, ಪತ್ರಕರ್ತ ಅರುಣ್‍ಸಾಗರ್, ವಿದ್ಯಾರ್ಥಿ ಪ್ರತಿಭೆ ರಕ್ಷಿತ್‍ನ ಪೋಷಕರಾದ ಅರುಣ್ ಮತ್ತು ಸುಶೀಲ, ಮನು ಪೋಷಕರಾದ ಕೇಶವ ಮತ್ತು ಶೀಲ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT