ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರುವುದೇ ‘ಸಾಂಸ್ಕೃತಿಕ ನಗರ’ದ ಕನಸು

Last Updated 5 ಫೆಬ್ರುವರಿ 2018, 11:07 IST
ಅಕ್ಷರ ಗಾತ್ರ

ಹಾವೇರಿ: ಐತಿಹಾಸಿಕ ಹಿನ್ನೆಲೆ, ಅಪಾರ ಸಂಪನ್ಮೂಲ ಹೊಂದಿದರೂ ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಂಸ್ಥಿಕ ವೇದಿಕೆಗಳಿಲ್ಲ ಎಂಬ ಕೊರಗು ಉಳಿದುಕೊಂಡಿದೆ. 20 ವರ್ಷಗಳ ಬಳಿಕವಾದರೂ, ‘ಸಾಂಸ್ಕೃತಿಕ ನಗರ’ದ ಕನಸು ಈಡೇರುವುದೇ? ಎಂಬ ಪ್ರಶ್ನೆ ಮೂಡಿದೆ.

ಮಹಾತ್ಮ ಗಾಂಧೀಜಿ ನಡೆದಾಡಿದ ನೆಲ, ಮೈಲಾರ, ಸಂಗೂರ, ಮಡಿವಾಳರ ಮತ್ತಿತರರ ಹೋರಾಟದ ಭೂಮಿ, 64 ಮಠಗಳ ಅಧ್ಯಾತ್ಮ ಕೇಂದ್ರ, ಗೋಕಾಕ, ಪಾಪು, ಚಂಪಾರ ಸಾಹಿತ್ಯದ ಚಿಲುಮೆ, ರಂಗ, ಕಲೆ, ನೃತ್ಯ ಪ್ರಯೋಗಗಳ ವೇದಿಕೆ ಎಂಬಿತ್ಯಾದಿ ಸಾಂಸ್ಕೃತಿಕ ಹಿರಿಮೆಯು ಹಾವೇರಿಗೆ ಇದೆ. ಆದರೆ, ಪ್ರಸ್ತುತ ‘ನಾಟಕ’ವಾಡಲೂ ವೇದಿಕೆ ಇಲ್ಲ ಎಂಬ ಸೊರಗಿದೆ.

‘ಇಲ್ಲಿ ಕೇವಲ ಇತಿಹಾಸ ಮಾತ್ರ ವಲ್ಲ, ಸಾಂಸ್ಕೃತಿಕ ಸಂಪನ್ಮೂಲವೂ ಅಪಾರವಾಗಿದೆ. ಯುವಜನತೆಯಲ್ಲಿ ಸಾಹಿತ್ಯ, ನೃತ್ಯ, ಕಲೆ ರಂಗ ಚಟುವಟಿಕೆಗಳ ಹುರುಪಿದೆ. ಅದರೆ, ಅವುಗಳಿಗೆ ಸಾಂಸ್ಥಿಕ ರೂಪ ನೀಡುವ ವೇದಿಕೆ ಇಲ್ಲ’ ಎನ್ನುತ್ತಾರೆ ಸಾಹಿತಿ ಸತೀಶ ಕುಲಕರ್ಣಿ ಹಾಗೂ ಗೆಳೆಯರು.

ಕಲಾ ಸಮುಚ್ಚಯ ನಿರ್ಮಾಣಕ್ಕೆ ಅಪಾರ ಅವಕಾಶ, ಗುಡಿ–ಮಠ ಮಾನ್ಯಗಳ ಐತಿಹಾಸಿಕ ಬೇರು, ನಿಸರ್ಗ ರಮಣೀಯ ಹೆಗ್ಗೇರಿ ಮತ್ತಿತರ ಕೆರೆಗಳು, ಪ್ರಕೃತಿದತ್ತ ಪ್ರವಾಸಿ ತಾಣ ಗಳಿವೆ. ಆದರೆ. ಯಾವುದೂ ಅಭಿವೃದ್ಧಿ ಕಂಡಿಲ್ಲ. ಸಾಂಸ್ಕೃತಿಕ ನಗರದ ರೂಪು ಪಡೆದಿಲ್ಲ.

‘ಜಿಲ್ಲೆಯಲ್ಲಿ ಕೆಲವೊಂದು ಸಾಂಸ್ಕೃತಿಕ ಕೇಂದ್ರಗಳಿವೆ. ಆದರೆ, ಚದುರಿ ಹೋಗಿದ್ದು, ಜಿಲ್ಲಾ ಕೇಂದ್ರದಲ್ಲಿ ಇಲ್ಲದ ಕಾರಣ ಪೂರ್ಣ ಪ್ರಮಾಣದ ಪ್ರಯೋಜನ ಲಭ್ಯವಾಗಿಲ್ಲ’ ಎನ್ನುತ್ತಾರೆ ಯುವ ಕಲಾವಿದರು.

‘ಇತರ ಜಿಲ್ಲಾ ಕೇಂದ್ರಗಳಲ್ಲಿ ರಂಗಮಂದಿರ, ವಿಜ್ಞಾನ ಕೇಂದ್ರ, ಸಿನಿಮಾ ಸಮಾಜ, ಆರ್ಟ್ ಗ್ಯಾಲರಿ ಇತ್ಯಾದಿ ಕಾಣುತ್ತೇವೆ. ಇವು ನಿರಂತರ ಚಟುವಟಿಕೆಗಳಿಗೆ ಹಾಗೂ ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ಪ್ರೇರಣೆಯಾಗಿವೆ. ಹಾವೇರಿಯಲ್ಲಿ ಉತ್ಸಾಹಿ ತರುಣರಿದ್ದರೂ ಸೂಕ್ತ ‘ಸೂರು’ ಇಲ್ಲ’ ಎನ್ನುತ್ತಾರೆ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ವೈದ್ಯ ಡಾ. ಗುಹೇಶ್ವರ ಪಾಟೀಲ್.

ಇಲ್ಲಗಳು ಹಲವು: ನಗರದಲ್ಲಿ ರಂಗ ಮಂದಿರ ಅಥವಾ ಕಲಾ ಸಮುಚ್ಛಯ ನಿರ್ಮಾಣಗೊಂಡಿಲ್ಲ. ಹೆಗ್ಗೇರಿ ಕೆರೆ, ಪುರಸಿದ್ಧೇಶ್ವರ ಗುಡಿ, ಮಠಗಳ ಹಿರಿಮೆ ಇದ್ದರೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಕಂಡಿಲ್ಲ. ಜಿಲ್ಲೆಯ ಉತ್ಸಾಹಿ ಸಾಹಿತಿ, ಕಲಾವಿದರು, ರಂಗಕರ್ಮಿಗಳು ಸ್ವಯಂ ಪ್ರಯತ್ನದಿಂದ
ನಡೆಸಿಕೊಂಡು ಕಾರ್ಯಕ್ರಮಗಳನ್ನು ಹೊರತು ಪಡಿಸಿ, ಜಿಲ್ಲಾ ಕೇಂದ್ರದಲ್ಲಿ ತನ್ನದೇ ಅನನ್ಯತೆಯ ಜಿಲ್ಲಾ ಉತ್ಸವದಂತಹ ಸಾಂಸ್ಕೃತಿಕ ಮೇಳಗಳು ಇಲ್ಲದಾಗಿವೆ.

ಶೀಘ್ರವೇ ತಲೆ ಎತ್ತಲಿದೆ: ‘ಈ ಸರ್ಕಾರವು ನಗರದ ಗೂಗಿಕಟ್ಟಿಯಲ್ಲಿ ₹5ಕೋಟಿ ವೆಚ್ಚದಲ್ಲಿ ರಂಗ ಮಂದಿರ ನಿರ್ಮಿಸಲಿದೆ. ಸುಮಾರು ₹ 8ಕೋಟಿ ವೆಚ್ಚದಲ್ಲಿ ಹೆಗ್ಗೇರಿ ಕೆರೆಯಲ್ಲಿ ಗಾಜಿನ ಮನೆ ಮತ್ತು ಉದ್ಯಾನ ನಿರ್ಮಾಣ ಗೊಳ್ಳಲಿದೆ. ಗಾಂಧಿ ಭವನವೂ ಶೀಘ್ರವೇ ಆರಂಭಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮುತುವರ್ಜಿ ವಹಿಸಿ, ಮಂಜೂರು ಮಾಡಿಸಿದ್ದಾರೆ’ ಎನ್ನುತ್ತಾರೆ ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ.

‘ಅಲ್ಲದೇ, ಮುನ್ಸಿಪಲ್ ಹೈಸ್ಕೂಲ್ ಮುಂಭಾಗದ ಮೈದಾನಕ್ಕೆ ಬೇಲಿ ಹಾಕಿ, ಒಂದು ಭಾಗದಲ್ಲಿ ತೆರೆದ ವೇದಿಕೆ ನಿರ್ಮಿಸಲಾಗುವುದು. ಸರ್ಕಾರಿ ಶಾಲೆ ಸಂಖ್ಯೆ 2ರಲ್ಲಿ ಮೈಲಾರ ಭವನವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ವಿವರಿಸಿದರು.

ಜಿಲ್ಲಾ ಮಟ್ಟದ ಉತ್ಸವ: ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರಾದೇಶಿಕ ವಿಜ್ಞಾನ ಉಪಕೇಂದ್ರ, ಜಿಲ್ಲಾ ವಸ್ತು ಸಂಗ್ರಹಾಲಯ ಸ್ಥಾಪನೆಗೊಳ್ಳುತ್ತಿದೆ. ಇದು ಜಿಲ್ಲೆಯ ಯುವಜನತೆ ಪ್ರೇರಣೆಯಾಗಲಿದೆ. ಅಲ್ಲದೇ, ಜಿಲ್ಲಾ ಮಟ್ಟದ ಉತ್ಸವ ನಡೆಸುವ ಚಿಂತನೆ ಇದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ.

‘ಕೈಲಾಗದವರು ಎನ್ನಬಹುದು’

ಇಲ್ಲಿ ಸಮೃದ್ಧವಾದ ಸಾಂಸ್ಕೃತಿಕ ಸೊಗಡಿದೆ. ಆದರೆ, ಅದಕ್ಕೆ ನೆಲೆ ಇಲ್ಲ. ರಸ್ತೆ ಬದಿ– ಬೀದಿಯಲ್ಲಿ ಕಾರ್ಯಕ್ರಮ ಮಾಡುವ ಸ್ಥಿತಿ ಇದೆ. ಇಲ್ಲಿನ ರಾಜಕೀಯ ವ್ಯಕ್ತಿಗಳಿಗೆ ತಮ್ಮ ನೆಲದ ಬಗ್ಗೆ ಸಾಂಸ್ಕೃತಿಕ ಇಚ್ಛಾಶಕ್ತಿ ಇಲ್ಲ. ಸಾಹಿತಿಗಳು, ಕಲಾವಿದರು, ವರ್ತಕರು, ಉದ್ಯಮಿಗಳಿಗೂ ಅಂತಹ ಬದ್ಧತೆ ಬರಬೇಕಾಗಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮನ್ನು ‘ಕೈಲಾಗದವರು’ ಎಂದೇ ಗುರುತಿಸುವ ಅಪಾಯ ಇದೆ ಎನ್ನುತ್ತಾರೆ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್.

* * 

ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಕೇಂದ್ರದ ನಿರ್ಮಾಣ ಅವಶ್ಯವಾಗಿದೆ
–ಸತೀಶ ಕುಲಕರ್ಣಿ
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT