ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ ಕೈ ನಾಯಕರ ಮುಸುಕಿನ ಗುದ್ದಾಟ

Last Updated 6 ಫೆಬ್ರುವರಿ 2018, 7:13 IST
ಅಕ್ಷರ ಗಾತ್ರ

ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಗೆ ಕಾರ್ಕಳ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದರೆ, ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ನಲ್ಲಿ ಮುಖಂಡರ ಭಿನ್ನಾಭಿಪ್ರಾಯ ಜೋರಾಗಿ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ಉದಯ ಶೆಟ್ಟಿ ಮುನಿಯಾಲು ಅವರು ಬಿಜೆಪಿ ವಿರುದ್ಧ ಇಂದು (ಫೆ.7) ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಅವರು ಕೆಂಪು ದೀಪ ತೋರಿಸಿದ್ದಾರೆ. ‘ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸದೆ ಪ್ರತಿಭಟನೆ ಮಾಡಲು ನಿರ್ಧರಿಸುವುದು ಸರಿಯಲ್ಲ. ಮುಂದೆ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಿರಿ’ ಎಂದು ಅವರು ಸೂಚನೆ ನೀಡಿದ್ದಾರೆ. ಆದರೆ ರಾಜಕೀಯ ಕಾರಣಕ್ಕಾಗಿಯೇ ಉದಯ ಕುಮಾರ್ ಶೆಟ್ಟಿ ಅವರನ್ನು ತಡೆಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಉದ್ಯಮಿಯೂ ಆಗಿರುವ ಉದಯ ಶೆಟ್ಟಿ ಅವರು ಕಾರ್ಕಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅದಕ್ಕಾಗಿ ಅವರು ಕಳೆದ ಆರು ತಿಂಗಳಿನಿಂದ ಸಿದ್ಧತೆಯಲ್ಲಿ ತೊಡಗಿದ್ದಾರೆ. ತಮ್ಮದೇ ಟ್ರಸ್ಟ್‌ ಮೂಲಕ ಬಡ ಜನರಿಗೆ ನೆರವು ನೀಡುತ್ತಿದ್ದಾರೆ. ಕ್ಷೇತ್ರದ ಯುವಜನರ ಬೆಂಬಲ ಹಾಗೂ ಮತದಾರರ ಒಲವು ತಮ್ಮ ಪರವಾಗಿ ಇದೆ ಎಂದು ಅವರು ಬಿಂಬಿಸಿಕೊಳ್ಳುತ್ತಿದ್ದಾರೆ. ಇದೇ ಮಾಜಿ ಶಾಸಕ ಕೆ. ಗೋಪಾಲ ಭಂಡಾರಿ ಹಾಗೂ ಶೆಟ್ಟರ ಮಧ್ಯೆ ಪೈಪೋಟಿಗೆ ಕಾರಣವಾಗಿದೆ.

ವೀರಪ್ಪ ಮೊಯಿಲಿ ಮತ್ತು ಕೆ. ಗೋಪಾಲ ಭಂಡಾರಿ ಅವರು ಕೇವಲ ಶಿಲಾನ್ಯಾಸ ಮಾಡುತ್ತಾರೆ, ಆದರೆ ಕಾಮಗಾರಿ ಪೂರ್ಣ ಮಾಡುವುದಿಲ್ಲ ಎಂದು ಆರೋಪಿಸಿದ್ದ ಶಾಸಕ ವಿ. ಸುನಿಲ್ ಕುಮಾರ್‌ ‘ಇನ್ನೆಷ್ಟು ಶಿಲಾನ್ಯಾಸ’ ಎಂಬ ಹೋರಾಟವನ್ನು ಇತ್ತೀಚೆಗೆ ನಡೆಸಿದ್ದರು. ಶಿಲಾನ್ಯಾಸ ಮಾಡಿ ಬಿಟ್ಟ ಕಾಮಗಾರಿಗಳ ವಿವರಗಳನ್ನು ಕ್ಷೇತ್ರದ ಜನರ ಮುಂದಿಟ್ಟು ಕಾಂಗ್ರೆಸ್‌ ಮುಜುಗೊರಕ್ಕೆ ಒಳಗಾಗುವಂತೆ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಲು ಉದಯ ಶೆಟ್ಟಿ ಅವರು 7ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಬಿಜೆಪಿ ಮುಖಂಡರು ಅಪಮಾನ ಮಾಡಿದ್ದಾರೆ ಎಂದು ಹೇಳುವುದು ಹಾಗೂ ಮೊಯಿಲಿ ಅವರ ಕಾಲದಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು ಎಂಬುದು ಶೆಟ್ಟರ ಬೆಂಬಲಿಗರ ವಾದ. ಆದರೆ ಇನ್ನೊಂದು ಉದ್ದೇಶವೂ ಇತ್ತು ಎನ್ನಲಾಗಿದೆ.

ಶಕ್ತಿ ಪ್ರದರ್ಶನ: ಹಿರಿಯ ಮುಖಂಡರಿಗೆ ಅಪಮಾನವಾಗಿದೆ ಎಂದು ಪ್ರತಿಭಟನೆ ಮಾಡುವ ಅವಕಾಶವನ್ನು ಶಕ್ತಿ ಪ್ರದರ್ಶನಕ್ಕೆ ಬಳಸಿಕೊಳ್ಳಲು ಶೆಟ್ಟಿ ತೀರ್ಮಾನಿಸಿದ್ದರು. ಸುಮಾರು 10–15 ಸಾವಿರ ಜನರನ್ನು ಸೇರಿಸಿ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಏನು ಎಂದು ತೋರಿಸುವುದು ಇನ್ನೊಂದು ಉದ್ದೇಶವಾಗಿತ್ತು. ಈ ವಿಷಯ ಅರಿತ ಪ್ರತಿಸ್ಪರ್ಧಿಗಳು ಪ್ರತಿಭಟನೆಯೇ ಆಗದಂತೆ ನೋಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಆ ಮೂಲಕ ‘ಅತಿವೇಗ’ ಬೇಡ ಎಂಬ ಸಂದೇಶವನ್ನು ರವಾನಿಸಲಾಗಿದೆ.

ಅದು ನೋಟಿಸ್ ಅಲ್ಲ

ಯಾವುದೇ ಕ್ಷೇತ್ರದಲ್ಲಿ ಕಾರ್ಯಕ್ರಮ ಅಥವಾ ಪ್ರತಿಭಟನೆ ನಡೆಸುವಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಉದಯ ಶೆಟ್ಟಿ ಮುನಿಯಾಲು ಅವರು ಆ ಕೆಲಸ ಮಾಡಿರಲಿಲ್ಲ. ಆದ್ದರಿಂದ ಅವರಿಗೆ ತಿಳಿಹೇಳಲಾಗಿದೆಯೇ ಹೊರತು, ನೋಟಿಸ್ ನೀಡಿಲ್ಲ. ಅವರು ಮಾಡಲು ಹೊರಟ್ಟಿದ್ದು ಬಿಜೆಪಿ ವಿರುದ್ಧ ಪ್ರತಿಭಟನೆಯೇ ಹೊರತು ಬೇರೇನೂ ಅಲ್ಲ.

ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ನೂರಕ್ಕೆ ನೂರರಷ್ಟು ಸುಳ್ಳು ಎನ್ನುತ್ತಾರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ. ಪ್ರತಿಭಟನೆಯನ್ನು ನಿಲ್ಲಿಸಿಲ್ಲ. ಕಾರ್ಕಳದ ಯುವ ಕಾಂಗ್ರೆಸ್ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಇಂದು (ಫೆ.7) ಪ್ರತಿಭಟನೆ ನಡೆಯಲಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT