ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ತಾಲ್ಲೂಕಿನಲ್ಲೊಂದು ‘ಹಳೆತಾಲ್ಲೂಕು’

Last Updated 6 ಫೆಬ್ರುವರಿ 2018, 8:54 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಪೊನ್ನಂಪೇಟೆ ಹಾಗೂ ಕುಶಾಲನಗರವನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ, ಇಲ್ಲೊಂದು ತಾಲ್ಲೂಕು ಇರುವುದು ಸ್ಥಳೀಯರಿಗಷ್ಟೇ ಗೊತ್ತು. ಅದೇ ಹಳೆ ತಾಲ್ಲೂಕು. ಇದು ಸ್ಥಳೀಯರಿಗಷ್ಟೇ ಚಿರಪರಿಚಿತ. ಗೊತ್ತಿಲ್ಲದವರೂ ಇದೊಂದು ತಾಲ್ಲೂಕು ಕೇಂದ್ರ ಎಂದುಕೊಂಡರೆ ಅಚ್ಚರಿಯಿಲ್ಲ!

ನಾಪೋಕ್ಲು ಪೇಟೆಯಿಂದ ಒಂದು ಕಿ.ಮೀ ದೂರದಲ್ಲಿ ಕಕ್ಕಬ್ಬೆ ಹಾಗೂ ಭಾಗಮಂಡಲ ಕೂಡುರಸ್ತೆಯಲ್ಲಿ ಚಿಕ್ಕಪೇಟೆ ಇದ್ದು ಅದನ್ನು ‘ಹಳೆತಾಲ್ಲೂಕು’ ಎಂದೇ ಕರೆಯಲಾಗುತ್ತಿದೆ. ಹಿಂದೆ ಇಲ್ಲಿ ಶಾನುಭೋಗರ ಕಚೇರಿಯಿತ್ತು. ಅದರಲ್ಲಿ ಪಾರುಪತ್ತೆಗಾರರು, ನಾಡು ಗುಮಾಸ್ತರು ಇದ್ದು ಈ ವಿಭಾಗದ ಜನರ ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿತ್ತು. ಕ್ರಮೇಣ ಇದು ನಾಪೋಕ್ಲು ಪೇಟೆಯ ಮಧ್ಯಕ್ಕೆ ವರ್ಗಾಯಿಸಿ ಈಗಿರುವ ಕಚೇರಿ ಪೇಟೆಗೆ ಬಂತು. ಕಾಲಕ್ರಮೇಣ ಕಂದಾಯ ಇಲಾಖೆಯವರು ಇದನ್ನು ನಾಪೋಕ್ಲು ನಾಡು ಎಂದು ವಿಸ್ತರಿಸಿದರು ಎಂದು ವಿವರಿಸುತ್ತಾರೆ ಪೇರೂರು ಗ್ರಾಮದ ಬೊಟ್ಟೋಳಂಡ ಮಿಟ್ಟು ಪೂಣಚ್ಚ.

‘ಸುಮಾರು 80 ವರ್ಷಗಳ ಹಿಂದೆ ನಾಪೋಕ್ಲು ಪುಟ್ಟ ಪೇಟೆಯಾಗಿತ್ತು. ಮಡಿಕೇರಿಯಿಂದ ಮೂರ್ನಾಡಿಗಾಗಿ ನಾಪೋಕ್ಲು, ಹಳೆತಾಲ್ಲೂಕು, ನೆಲಜಿ, ಕಕ್ಕಬ್ಬೆ ಗ್ರಾಮಗಳ ಮೂಲಕ ವಿರಾಜಪೇಟೆಗೆ ಒಂದು ಜಲ್ಲಿ ಹಾಕಿದ ರಸ್ತೆ ಇತ್ತು. ಬೆರಳೆಣಿಕೆಯ ಬಸ್‌ಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದವು. ಮಳೆಗಾಲದಲ್ಲಿ ನಾಪೋಕ್ಲು ಪಟ್ಟಣ ದ್ವೀಪವಾಗುತ್ತಿತ್ತು. ಕೊಟ್ಟಮುಡಿಯಲ್ಲಿದ್ದ ತಾತ್ಕಾಲಿಕ ಸೇತುವೆ ಮಳೆಗಾಲದಲ್ಲಿ ಕೊಚ್ಚಿ ಹೋದರೆ ಮಡಿಕೇರಿಗೆ ತೆರಳುವವರು ಕೊಟ್ಟಮುಡಿಯವರೆಗೆ ನಡೆದು ಕಾವೇರಿ ನದಿಯನ್ನು ದೋಣಿಯಲ್ಲಿ ದಾಟಿ ಬಸ್‌ ಹಿಡಿಯುತ್ತಿದ್ದರು. ಪಾರಾಣೆ ಗ್ರಾಮಕ್ಕೆ ತೆರಳಬೇಕಾದರೆ ಎತ್ತುಕಡು ಹೊಳೆಯಲ್ಲೂ ದೋಣಿ ವಿಹಾರ ಮಾಡುವ ದಿನಗಳಿದ್ದವು’ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಹಿರಿಯರಾದ ಲಕ್ಷ್ಮಿವೈದ್ಯ.

ಹಳೆತಾಲ್ಲೂಕಿನಲ್ಲಿ ಆಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇತ್ತು. ನಾಲ್ಕುನಾಡು, ಪಾಡಿನಾಡು, ನೆಲಜಿನಾಡು, ಬಲ್ಲತ್ತನಾಡು ಮತ್ತು ನೂರಂಬಡ ನಾಡುಗಳಿಂದ ಸೇರಿದ ವಿಭಾಗಕ್ಕೆ ಹಳೆತಾಲ್ಲೂಕು ಒಂದು ಭಾಗವಾಗಿತ್ತು ಎನ್ನುತ್ತಾರೆ ಇಲ್ಲಿನ ನಿವಾಸಿ ಬೊಪ್ಪೇರ ಕಾವೇರಪ್ಪ.

ನಾಪೋಕ್ಲು ಪಟ್ಟಣ ಕ್ರಿ.ಶ. 1841ರಲ್ಲಿ ನಿರ್ಮಾಣಗೊಂಡಿತು. ನಾಡಕಚೇರಿ, ತಾಲ್ಲೂಕು ಕಚೇರಿ, ಸುಬೇದಾರರು ಆರಕ್ಷಕ ಠಾಣೆ, ಅಂಚೆಕಚೇರಿ, ಒಳಗೊಂಡು ಒಂದು ಪಟ್ಟಣವಾಗಿ ಬೆಳೆಯಿತು. 1870ರಲ್ಲಿ ಸರ್ಕಾರ ಮಾಡೆಲ್‌ ಶಾಲೆಯನ್ನು ಸ್ಥಾಪಿಸಿತು. ಅದಕ್ಕೂ ಮೊದಲು ಹಳೆತಾಲ್ಲೂಕು, ಒಂದೆಡೆ ನಾಪೋಕ್ಲು, ಮತ್ತೊಂದೆಡೆ ಕಕ್ಕಬ್ಬೆ ಹಾಗೂ ಇನ್ನೊಂದೆಡೆ ಭಾಗಮಂಡಲಕ್ಕೆ ಸಂಪರ್ಕಿಸುವ ಸ್ಥಳವಾಗಿತ್ತು. ಈಗ ಪಟ್ಟಣ ಬೆಳೆದಿದೆ. ಹಳೆತಾಲ್ಲೂಕಿಗೆ ಹೊಸತನ ಬಂದಿದೆ. ವ್ಯಾಪಾರ ವಹಿವಾಟಿನಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ.

ಶಾಲೆಗಳು, ದೇವಾಲಯಗಳು ವಾಣಿಜ್ಯ ಸಂಕೀರ್ಣಗಳು ತಲೆಯೆತ್ತಿವೆ. ವಾಹನಗಳ, ಬಸ್‌ಗಳ ಸಂಚಾರ ಹೆಚ್ಚಿದೆ. ಈಗ ನಾಪೋಕ್ಲು ಹೋಬಳಿಗೆ ಏಳು ಗ್ರಾಮ ಪಂಚಾಯಿತಿಗಳು, ಇಪ್ಪತ್ತಮೂರು ಗ್ರಾಮಗಳಿದ್ದು ಮಡಿಕೇರಿ ತಾಲ್ಲೂಕಿನ ಅತಿದೊಡ್ಡ ಪಟ್ಟಣ ಎನಿಸಿದ್ದರೂ ಅನತಿ ದೂರದ ಪುಟ್ಟಪೇಟೆ ಹಳೆ ತಾಲ್ಲೂಕು, ಹಳೆ ತಾಲ್ಲೂಕು ಆಗಿಯೇ ಉಳಿದಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT