ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ವರ್ತೂರು ಪೈಪೋಟಿಯಲ್ಲ

Last Updated 6 ಫೆಬ್ರುವರಿ 2018, 9:00 IST
ಅಕ್ಷರ ಗಾತ್ರ

ಕೋಲಾರ: ಕ್ಷೇತ್ರದ ಶಾಸಕ ವರ್ತೂರು ಪ್ರಕಾಶ್‌ ಪಕ್ಷದ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿಯಲ್ಲ ಎಂದು ಕಾಂಗ್ರೆಸ್‌ನ ಜಿಲ್ಲಾ ವೀಕ್ಷಕ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್‌ ವ್ಯಂಗ್ಯವಾಡಿದರು.

ನಗರದಲ್ಲಿ ಸೋಮವಾರ ನಡೆದ ಕ್ಷೇತ್ರವಾರು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವರ್ತೂರು ಪ್ರಕಾಶ್‌ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿರುವ ಅವರಿಗೆ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಟೀಕಿಸಿದರು.

ನಮ್ಮ ಕಾಂಗ್ರೆಸ್‌ ಪಕ್ಷ ಸ್ಥಾಪಿಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿರುವ ವರ್ತೂರು ಪ್ರಕಾಶ್‌ ಈ ಬಾರಿಯ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಈ ಹಿಂದೆ ಹೊಸ ಪಕ್ಷ ಸ್ಥಾಪಿಸಿದವರ ಕತೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ವರ್ತೂರು ಪ್ರಕಾಶ್‌ ಕತೆಯೂ ಅಷ್ಟೇ. ವೈಯಕ್ತಿಕ ಕೆಲಸದಲ್ಲಿ ತೊಡಗಿಸಿಕೊಂಡು ಕ್ಷೇತ್ರವನ್ನು ಮರೆತಿರುವ ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ವರದಿ ಕಳುಹಿಸುತ್ತೇವೆ: ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರದಲ್ಲೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಾಗೂ ಸ್ಥಳೀಯ ಮುಖಂಡರ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲಾಗುವುದು. ಆ ಅಭಿಪ್ರಾಯ ಆಧರಿಸಿ ಕೆಪಿಸಿಸಿಗೆ ವರದಿ ಕಳುಹಿಸುತ್ತೇವೆ ಎಂದು ವಿವರಿಸಿದರು.

ಜಿಲ್ಲೆಯ 2 ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿದ್ದಾರೆ. ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್‌ ಸದಸ್ಯರಾಗಿ  ಗುರುತಿಸಿಕೊಂಡಿದ್ದಾರೆ. ವರಿಷ್ಠರು ಈಗಾಗಲೇ ಅವರನ್ನು ಅಭ್ಯರ್ಥಿ ಎಂದು ವರಿಷ್ಠರು ಘೋಷಿಸಿದ್ದಾರೆ. ಆದರೂ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಜನ ಬೇಸತ್ತಿದ್ದಾರೆ: ಕೆಜಿಎಫ್‌ನ ವೈ.ರಾಮಕ್ಕ ಹಾಗೂ ಅವರ ಮಗ ವೈ.ಸಂಪಂಗಿ ದಶಕದ ಕಾಲ ಶಾಸಕರಾಗಿ ಅಧಿಕಾರ ನಡೆಸಿದ್ದಾರೆ. ಕ್ಷೇತ್ರದ ಜನ ಅವರಿಬ್ಬರ ನಾಯಕತ್ವ ನೋಡಿ ಬೇಸತ್ತಿದ್ದಾರೆ. ಹೀಗಾಗಿ ಈ ಬಾರಿ ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಮನಾಗಿ ಯೋಜನೆ, ಅನುದಾನ ಹಂಚಿಕೆ ಮಾಡುತ್ತಾರೆ. ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಶಾಸಕರದ್ದು. ಆದರೆ ರಾಮಕ್ಕ ಮತ್ತು ಸಂಪಂಗಿ ಕೆಜಿಎಫ್‌ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಉದಾಸೀನತೆ ತೋರಿದ್ದಾರೆ ಎಂದು ದೂರಿದರು.

ಪಕ್ಷದ ಮತ್ತೊಬ್ಬ ಜಿಲ್ಲಾ ವೀಕ್ಷಕ ಹಸನಬ್ಬ, ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅನ್ಸಾರಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಗೋಕುಲ ನಾರಾಯಣಸ್ವಾಮಿ, ಸ್ವಾಗತ ಸಮಿತಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಎಸ್ಟಿ ಘಟಕದ ಅಧ್ಯಕ್ಷ ಕುಮಾರ್ ಹಾಜರಿದ್ದರು.

* * 

ಬಿಜೆಪಿ ಹಾಗೂ ಜೆಡಿಎಸ್ ಅನುಷ್ಠಾನಗೊಳಿಸದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಇದನ್ನು ಸಹಿಸದ ವಿಪಕ್ಷಗಳು ಷಡ್ಯಂತ್ರ ಮಾಡುತ್ತಿವೆ
ಪಿ.ಆರ್‌.ರಮೇಶ್‌ ಕಾಂಗ್ರೆಸ್‌ ಜಿಲ್ಲಾ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT