ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಯಾಗೆ ಹಾರ್ಲಿಕ್ಸ್‌, ಫೀಡಿಂಗ್‌ ಬಾಟಲ್‌ ರವಾನೆ

Last Updated 6 ಫೆಬ್ರುವರಿ 2018, 9:30 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆ ರಮ್ಯಾ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ವಿರುದ್ಧ ನಗರದಲ್ಲಿ ಸೋಮವಾರ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಯಿತು.

ಮುಖ್ಯ ಅಂಚೆಕಚೇರಿಯ ಮುಂಭಾಗ ಸಮಾವೇಶಕೊಂಡ ಕಾರ್ಯಕರ್ತರು, ರಮ್ಯಾ ಹಾಗೂ ರಾಮಲಿಂಗಾರೆಡ್ಡಿ ಅವರ ವಿರುದ್ಧ ಘೋಷಣೆ ಕೂಗಿದರು. ರಮ್ಯಾ ಅವರ ವಿಳಾಸಕ್ಕೆ ಜೂನಿಯರ್ ಹಾರ್ಲಿಕ್ಸ್‌ ಪೊಟ್ಟಣ, ಫೀಡಿಂಗ್ ಬಾಟಲ್‌, ನಶ್ಯದ ಡಬ್ಬಿ ಮತ್ತು ರಾಮಲಿಂಗಾರೆಡ್ಡಿ ಅವರಿಗೆ ಸ್ಕ್ರೂಡ್ರೈವರ್‌ಅನ್ನು ರವಾನಿಸುವುದರ ಮೂಲಕ ಅಣಕವಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನಶೆಯಲ್ಲಿರುವ ವ್ಯಕ್ತಿ’ ಎಂದು ರಮ್ಯಾ ಅವರು ಟ್ವೀಟ್‌ ಮಾಡುವ ಮೂಲಕ ತಮ್ಮ ಕೆಟ್ಟ ಬುದ್ಧಿಯನ್ನು ಪ್ರದರ್ಶನ ಮಾಡಿದ್ದಾರೆ ಎಂದು ದೂರಿದರು.

ಪ್ರಧಾನಿ ವಿರುದ್ಧ ಮಾತನಾಡುವಾಗ ರಮ್ಯಾ ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ಪ್ರಚಾರಕ್ಕಾಗಿ ಈ ರೀತಿ ವರ್ತಿಸುವುದು ಸರಿಯಲ್ಲ. ವಿದೇಶಗಳಿಗೆ ಹೋಗಿ ಮೋಜು, ಮಸ್ತಿ ಮಾಡುವ ರಮ್ಯಾ ಅವರಿಗೆ ಪ್ರಧಾನಿ ವಿರುದ್ಧ ಮಾತನಾಡುವ ನೈತಿಕತೆಯಿಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ ಹತ್ಯೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗರೆಡ್ಡಿ ಅವರು ಅಪರಾಧಿಗಳು ಸ್ಕ್ರೂಡ್ರೈವರ್‌ನಲ್ಲಿ ಚುಚ್ಚಿದ್ದಾರೆಯೇ ಹೊರತು ಕೊಲೆ ಮಾಡಿಲ್ಲ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಗಮನಿಸಿದರೆ ಸಚಿವರ ದೇಹದಲ್ಲಿ ಯಾವುದೋ ಸ್ಕ್ರೂ ಸಡಿಲವಾಗಿದೆ ಅನಿಸುತ್ತದೆ. ಅದನ್ನು ಸರಿಪಡಿಸಿಕೊಳ್ಳಲು ಯುವ ಮೋರ್ಚಾದಿಂದ ಸ್ಕ್ರೂಡ್ರೈವರ್‌ ಅನ್ನು ಅವರಿಗೆ ರವಾನೆ ಮಾಡುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಂ. ನಾಗೇಂದ್ರ, ಕಾರ್ಯದರ್ಶಿ ನವೀನ್‌, ಯುವ ಮೋರ್ಚಾದ ಅಧ್ಯಕ್ಷ ಪ್ರಣಯ್‌, ಗ್ರಾಮ ಮಂಡಲದ ಅಧ್ಯಕ್ಷ ಶಿವರುದ್ರ, ಕಾರ್ಯಕರ್ತರಾದ ಆನಂದ, ಭಗೀರಥ, ಕಾರ್ತಿಕ್‌, ಚಂದ್ರಶೇಖರ್‌, ಸುಬ್ಬಣ್ಣ, ರಂಗಸ್ವಾಮಿ, ಪ್ರಕಾಶ್‌, ಚಂದ್ರು, ಎನ್‌. ಮಂಜುನಾಥ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT