ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗೆ ಬಂದ ‘ಬಣ’ ರಾಜಕೀಯ

Last Updated 6 ಫೆಬ್ರುವರಿ 2018, 9:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸುಬ್ಬಾರೆಡ್ಡಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ವೇದಿಕೆ ಮೇಲೆ ಆಡಿದ ಮಾತು ಸದ್ಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ವಲಯದಲ್ಲೇ ಅಸಮಾಧಾನ ಮತ್ತು ‘ಬಣ’ ರಾಜಕೀಯಕ್ಕೆ ಎಡೆ ಮಾಡಿಕೊಟ್ಟಿದೆ.

ಡಿಸೆಂಬರ್ 29ರಂದು ಬಾಗೇಪಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದ ವೇದಿಕೆಯಲ್ಲಿ ಕೂಡ ಸಿದ್ದರಾಮಯ್ಯ ಅವರು, ‘ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಸುಬ್ಬಾರೆಡ್ಡಿ ಮತ್ತೊಮ್ಮೆ ಶಾಸಕರಾಗುವುದು ಅಷ್ಟೇ ಸತ್ಯ. ಅವರಿಗೆ ನೀವೆಲ್ಲ ಆರ್ಶೀವಾದ ಮಾಡಬೇಕು’ ಎಂದಿದ್ದರು. ಆಗಲೇ ಸ್ಥಳೀಯ ‘ಕೈ’ ಮುಖಂಡರ ನಡುವಿನ ಮುನಿಸು ಮತ್ತಷ್ಟು ಹೆಚ್ಚಿತ್ತು ಎನ್ನಲಾಗಿದೆ.

ಇತ್ತೀಚೆಗೆ ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಬಹಿರಂಗ ವೇದಿಕೆ ಮೇಲೆ ಸುಬ್ಬಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಎನ್ನುತ್ತಿದ್ದಂತೆ ಉಲ್ಭಣಗೊಂಡ ಮುನಿಸು ವೈಷಮ್ಯಕ್ಕೆ ತಿರುಗಿದೆ. ಇದೀಗ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಒಂದೆಡೆ ಶಾಸಕ ಸುಬ್ಬಾರೆಡ್ಡಿ, ಇನ್ನೊಂದೆಡೆ ಮಾಜಿ ಶಾಸಕ ಎನ್.ಸಂಪಂಗಿ ಅವರನ್ನು ಬೆನ್ನತ್ತಿ ಎರಡು ಗುಂಪುಗಳಲ್ಲಿ ಊರೂರು ತಿರುಗುತ್ತಿದ್ದಾರೆ. ಇದು ಪಕ್ಷ ನಿಷ್ಠ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಆಕ್ರೋಶ ಮೂಡಿಸಿದೆ ಎಂದು ಪಕ್ಷದ ಮೂಲಗಳು ತಿಳಿಸುತ್ತವೆ.

ಸದ್ಯ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಬೇರೆ ಪಕ್ಷದವರ ವಿರುದ್ಧ ಟೀಕೆ, ಆರೋಪ ಮಾಡುವುದಕ್ಕಿಂತಲೂ ಹೆಚ್ಚಾಗಿ ಸ್ವಪಕ್ಷೀಯರೇ ಪರಸ್ಪರ ಆರೋಪಗಳನ್ನು ಮಾಡುತ್ತ ಅನ್ಯ ಪಕ್ಷದವರಿಗೆ ‘ಮನರಂಜನೆ’ ನೀಡುತ್ತಿದ್ದಾರೆ. ಇದು ವಿಕೋಪಕ್ಕೆ ಹೋದರೆ ‘ಇಬ್ಬರ ಜಗಳ ಮೂರನೆಯವನಿಗೆ ಲಾಭ’ ಎನ್ನುವಂತಾಗುತ್ತದೆ. ದಿನೇ ದಿನೇ ಬೀದಿಗೆ ಬರುತ್ತಿರುವ ತೆರೆಮರೆಯ ಭಿನ್ನಮತಕ್ಕೆ ಸಣ್ಣದಿರುವಾಗಲೇ ಕಡಿವಾಣ ಹಾಕದೇ ಹೋದರೆ ಖಂಡಿತ ಪಕ್ಷಕ್ಕೆ ಹಾನಿ ಮಾಡುತ್ತದೆ ಎನ್ನುವ ಆತಂಕ ‘ಕೈ’ ಪಾಳೆಯ ಮುಖಂಡರಲ್ಲಿ ಮೂಡಿದೆ.

‘ಸಿದ್ದರಾಮಯ್ಯ ಅವರು ಒಬ್ಬರೇ ನಿರ್ಧಾರ ಮಾಡಿ ಟಿಕೆಟ್‌ ಕೊಟ್ಟು ಬಿಡುತ್ತೇನೆ ಎಂದು ಬಿಟ್ಟರೆ ಸಾಕೆ? ಹಾಗಾದರೆ ಹೈಕಮಾಂಡ್ ಆಗಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯೋಚನೆಯೇ ಮಾಡುವುದಿಲ್ಲವೆ? ಮುಖ್ಯಮಂತ್ರಿ ಅವರು ಆ ರೀತಿ ಹೇಳುವುದಕ್ಕೆ ಹಣವೋ, ಇನ್ನೊಂದೊ
ಪ್ರಭಾವ ಬೀರಿದೆಯೋ ಯಾರಿಗೆ ಗೊತ್ತು? ಮುಖ್ಯಮಂತ್ರಿ ಅವರು ಪದೇ ಪದೇ ಯಾಕೆ ಈ ರೀತಿ ಹೇಳುತ್ತಾರೋ ನನಗೆ ಅರ್ಥವಾಗುತ್ತಿಲ್ಲ’ ಎಂದು ಸಂಪಂಗಿ
ಹೇಳುತ್ತಾರೆ.

ಇತ್ತೀಚೆಗೆ ಚೇಳೂರಿನಲ್ಲಿ ಸಂಪಂಗಿ ಅವರು, ‘ನಾನು ಶಾಸಕನಾಗಿದ್ದ ಸಮಯದಲ್ಲಿ ಮಾಡಿರುವ ಜನಪರ ಕೆಲಸಗಳು ಜನರಿಗೆ ಚೆನ್ನಾಗಿ ತಿಳಿದಿವೆ. ಆದ್ದರಿಂದ ನನಗೆ ಯಾವುದೇ ರೀತಿಯಾದ ಪ್ರಚಾರಗಳು ಬೇಕಾಗಿಲ್ಲ. ನನ್ನ ಅವಧಿಯಲ್ಲಿ ಮಂಜೂರು ಆಗಿರುವ ಕಾಮಗಾರಿಗಳಿಗೆ ಹಾಲಿ ಶಾಸಕರು ನಾಮಫಲಕಗಳು ಹಾಕಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಗ್ಧ ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡಿ ಮತ ಪಡೆದು ಅಧಿಕಾರಕ್ಕೆ ಏರಿ ಮತದಾರರಿಗೆ ವಂಚನೆ ಮಾಡಿರುವುದು ಸಮಂಜಸವಲ್ಲ. ಓಟಿಗಾಗಿ ನೋಟು ಪಡೆದು ಐದು ವರ್ಷ ನೀರು, ರಸ್ತೆ, ಆರೋಗ್ಯವಿಲ್ಲದೆ ಪರಿತಪಿಸುತ್ತಿರುವ ಜನರ ಕಷ್ಟಗಳನ್ನು ದೇವರೇ ನೋಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿರುವುದು ‘ಕೈ’ ಕಾರ್ಯಕರ್ತರ ಬಾಯಿ ಕಟ್ಟಿ ಹಾಕಿದೆ.

ಇದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮಾಚನಪಲ್ಲಿ ಬಿ.ನಾರಾ ಯಣಸ್ವಾಮಿ, ‘ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವ ಶಾಸಕರು ಆರೋಪಿಗಳನ್ನು ಜತೆಗೆ ಕರೆದುಕೊಂಡು ತಿರುಗಾಡುತ್ತಿದ್ದಾರೆ. ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಬಣ್ಣದ ಮಾತನಾಡುವ ನಯವಂಚಕರಿಗೆ ಆದ್ಯತೆ ನೀಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗಷ್ಟೇ ಸುಬ್ಬಾರೆಡ್ಡಿ ಅವರು, ‘ಭಾಷಣ ಮಾಡುವವನು, ಬೇರೊಬ್ಬರೊಂದಿಗೆ ಜಗಳವಾಡುವ ಶಾಸಕ ನಾನಲ್ಲ. ನಾನು ಶಾಶ್ವತ ಅಭಿವೃದ್ಧಿ ಕೆಲಸ ಮಾಡುವ ಶಾಸಕನಾಗಿರುವೆ. ಅಭಿವೃದ್ಧಿ ಬಗ್ಗೆ ಮಾತನಾಡುವವರು ಬೀದಿಗೆ ಬರಲಿ. ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ ಎನ್ನುವ ಪಟ್ಟಿ ತೋರಿಸುತ್ತೇನೆ’ ಎಂದು ತಮ್ಮ ವಿರೋಧಿಗಳಿಗೆ ಸವಾಲು ಹಾಕುವ ಧಾಟಿಯಲ್ಲಿ ಮಾತನಾಡಿದ್ದಾರೆ.

ಈ ಎಲ್ಲ ಬೆಳವಣಿಗೆ ಗಮನಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಈ ಭಿನ್ನಮತ ಎಲ್ಲಿ ಹೋಗಿ ತಲುಪುತ್ತೋ? ಪಕ್ಷದ ವರಿಷ್ಠರು ಇದನ್ನೆಲ್ಲ ಹೇಗೆ ಬಗೆಹರಿಸುತ್ತಾರೆ ಎನ್ನುವ ಆತಂಕ ಕಾಣಿಸಿಕೊಂಡಿದೆ.

ಹೈಕಮಾಂಡ್‌ಗೆ ವರದಿ ಮಾಡುತ್ತೇನೆ

‘ಬಾಗೇಪಲ್ಲಿ ಕಾಂಗ್ರೆಸ್‌ ಮುಖಂಡರ ನಡುವಿನ ವೈಮನಸ್ಸು ನನ್ನ ಗಮನಕ್ಕೆ ಬಂದಿದೆ. ಸಂಪಂಗಿ ಅವರ ಮಾತುಗಳನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಸಂಪಂಗಿಯವರು ಟಿಕೆಟ್ ಆಕಾಂಕ್ಷಿಯಾಗಿದ್ದರೆ ಮುಖ್ಯಮಂತ್ರಿ ಅಥವಾ ವರಿಷ್ಠರನ್ನು ಭೇಟಿ ಮಾಡಿ ಅವರ ಅಹವಾಲು ಸಲ್ಲಿಸಲಿ. ಅದನ್ನು ಬಿಟ್ಟು ಬಹಿರಂಗವಾಗಿ ಮಾತನಾಡುವುದು ತಪ್ಪು. ಪಕ್ಷದಲ್ಲಿ ಎಲ್ಲೆಲ್ಲಿ ಭಿನ್ನಾಭಿಪ್ರಾಯ ಇದೆಯೋ ಅದನ್ನು ಸ್ಥಳೀಯವಾಗಿಯೇ ಬಗೆಹರಿಸಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಕೈ ಮೀರಿದ್ದನ್ನು ಹೈಕಮಾಂಡ್‌ಗೆ ವರದಿ ಮಾಡುತ್ತೇನೆ. ಇದರ ಬಗ್ಗೆ ಹೈಕಮಾಂಡ್‌ಗೆ ತಿಳಿಸಲು ವರಿಷ್ಠರನ್ನು ಭೇಟಿ ಮಾಡಲು ಸಮಯ ನಿಗದಿಯಾಗುತ್ತಿಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹೇಳಿದರು.

* * 

ಸಿದ್ದರಾಮಯ್ಯ ಅವರ ಘೋಷಣೆ ಸುಳ್ಳಾಗುತ್ತದೆ. ನಾನು ಕಣದಲ್ಲಿ ಇರುವುದಂತೂ ನೂರಕ್ಕೆ ನೂರು ಸತ್ಯ. ಹೈಕಮಾಂಡ್ ಟಿಕೆಟ್‌ ನೀಡುವ ಭರವಸೆ ಇದೆ
ಎನ್‌.ಸಂಪಂಗಿ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT