ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಕೈಬಿಟ್ಟ ರೈತರು ತರಕಾರಿ ಹಿಡಿದರು

Last Updated 6 ಫೆಬ್ರುವರಿ 2018, 9:59 IST
ಅಕ್ಷರ ಗಾತ್ರ

ದಾವಣಗೆರೆ: ಕಳೆದ ವರ್ಷದ ಬರಗಾಲದಿಂದ ಪಾಠ ಕಲಿತ ಜಿಲ್ಲೆಯ ರೈತರು ಅಡಿಕೆ ಕೃಷಿ ಬಿಟ್ಟು, ತರಕಾರಿ ಕೃಷಿಯತ್ತ ಮನಸ್ಸು ಬದಲಾಯಿಸಿದ್ದಾರೆ. ಅಡಿಕೆ, ಹೆಚ್ಚು ನೀರು ಬೇಡುವ ವಾಣಿಜ್ಯ ಬೆಳೆ. ತುಂಗಭದ್ರಾ ನದಿ ದಂಡೆಯಲ್ಲಿರುವ ದಾವಣಗೆರೆ ಜಿಲ್ಲೆಗೆ ನೀರಿನ ಮೂಲಗಳಿಲ್ಲದ್ದಿದ್ದರೂ ಇಲ್ಲಿನ ಜನರು ಕುಡಿಯುವುದಕ್ಕೆ ಹಾಗೂ ಕೃಷಿಗೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ತುಂಗಾ ಮತ್ತು ಭದ್ರಾ ನದಿಗಳನ್ನೇ ಆಶ್ರಯಿಸಿದ್ದಾರೆ.

ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅಡಿಕೆ ಬೆಳೆಯುವಂತಿಲ್ಲ ಎಂದು ಭದ್ರಾ ಕಾಡಾ ಪ್ರಾಧಿಕಾರ ಹಲವು ವರ್ಷಗಳಿಂದ ಎಚ್ಚರಿಕೆಗಳನ್ನು ನೀಡುತ್ತಾ ಬಂದಿದ್ದರೂ ರೈತರು ಮಾತ್ರ ಅಡಿಕೆ ಬೆಳೆ ವಿಸ್ತರಣೆಯಿಂದ ಹಿಂದಕ್ಕೆ ಸರಿದಿರಲಿಲ್ಲ. ವರ್ಷದಿಂದ ವರ್ಷಕ್ಕೆ ಅಡಿಕೆ ಕೃಷಿ ಹೆಚ್ಚುತ್ತಲೇ ಹೋಗುತ್ತಿತ್ತು. ಕಳೆದ ವರ್ಷದ ಮಳೆ ಕೊರತೆ ರೈತರ ಮನಸ್ಥಿತಿ ಬದಲಾಯಿಸಿದೆ.

ಕಳೆದ ವರ್ಷ ತುಂಗಭದ್ರಾ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ನದಿಗಳ ಅಣೆಕಟ್ಟೆಗಳು ಕಾಲು ಭಾಗದಷ್ಟೂ ತುಂಬಲಿಲ್ಲ. ಜಿಲ್ಲೆಯ ಕೆರೆ–ಕಟ್ಟೆಗಳು ಬತ್ತಿಹೋಗಿದ್ದವು. ಬೋರ್‌ವೆಲ್‌ಗಳು ಸಾಲು–ಸಾಲಾಗಿ ವಿಫಲಗೊಂಡಿದ್ದವು. ರೈತರು ಬೆಳೆ ಉಳಿಸಿಕೊಳ್ಳಲು ಹರ ಸಾಹಸ ಪಟ್ಟರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ಮೂಲಕವೂ ಬೆಳೆಗಳಿಗೆ ನೀರು ಪೂರೈಕೆ ಮಾಡಲು ಪ್ರಯತ್ನಿಸಿದರು. ಆದರೆ, ಅದು ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಯಿತು. ಬಹುತೇಕ ಎಲ್ಲಾ ಬೆಳೆಗಳು ನೀರು ಕಾಣದೆ ನಾಶವಾದವು. ನೀರಿನ ಕೊರತೆಯಿಂದ ಅತಿ ಹೆಚ್ಚು ನಷ್ಟವಾಗಿದ್ದು ಅಡಿಕೆ ಬೆಳೆ. ಜಿಲ್ಲೆಯಲ್ಲಿ ಸುಮಾರು 17 ಸಾವಿರ ಹೆಕ್ಟೇರ್‌ ಪ್ರದೇಶ ಅಡಿಕೆ ಬೆಳೆ ಸಂಪೂರ್ಣ ನಷ್ಟವಾಯಿತು.

ಈ ಮಧ್ಯೆ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲೂ ಅಲ್ಪ–ಸ್ವಲ್ಪ ಮಳೆಯಾಯಿತು. ಬೋರ್‌ವೆಲ್‌ ಗಳಲ್ಲಿ ಸ್ವಲ್ಪಮಟ್ಟಿನ ನೀರು ಕಾಣಿಸಿಕೊಂಡಿತು. ಇದನ್ನು ಅರಿತ ರೈತರು ಅಲ್ಪ ನೀರಿನಲ್ಲೇ ತರಕಾರಿ ಕೃಷಿ ಮಾಡಲು ಮುಂದಾದರು. ಈಗ ಇದು ವ್ಯಾಪಕವಾಗಿ ಹರಿಡಿದೆ.

ಹರಪನಹಳ್ಳಿ, ಮಾಯಕೊಂಡ, ಹೊನ್ನಾಳಿಯ ನ್ಯಾಮತಿ, ಚನ್ನಗಿರಿಯ ದೇವರಹಳ್ಳಿಗಳಲ್ಲಿ ತರಕಾರಿ ಬೆಳೆಯುವುದರಲ್ಲಿ ಕ್ರಾಂತಿಯೇ ನಡೆದಿದೆ. ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ, ಕೆಂಚಿಕೆರೆಗಳಲ್ಲಿ  ರೈತರು ತರಕಾರಿ ಬೀಜ ಉತ್ಪಾದನೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಕೈಗೊಂಡಿದ್ದಾರೆ. ಖಾಸಗಿ ಕಂಪನಿಗಳ ಸಹಯೋಗದಲ್ಲಿ ನೆರಳಿನ ಮನೆಯಲ್ಲಿ ಟೊಮೊಟೊ, ಬದನೆ, ಮೆಣಸಿನಕಾಯಿ, ಹಾಗಲು, ಹೀರೆಕಾರಿ, ಸೌತೆಕಾಯಿ ಹಾಗೂ ಬಳ್ಳಿ ತರಕಾರಿಗಳ ಬೀಜೋತ್ಪಾದನೆ ಕೃಷಿಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ಬೋರ್‌ವೆಲ್‌ನಲ್ಲಿ ಒಂದಿಂಚು ನೀರು ಇದ್ದರೂ ಸಾಕು ರೈತರು ತರಕಾರಿ ಬೆಳೆಯಲು ಮುಂದಾಗಿದ್ದಾರೆ ಎನ್ನುತ್ತಾರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಎಂ.ಜಿ.ಬಸವನಗೌಡ.

ಅಡಿಕೆ ಬೆಳೆ ವಿಸ್ತರಣೆಗೆ ಪ್ರೋತ್ಸಾಹಿಸುವುದನ್ನು ಇಲಾಖೆ ಕೈಬಿಟ್ಟು ಬಹಳ ವರ್ಷಗಳೇ ಆಗಿವೆ. ಈ ಮಧ್ಯೆ ಬರಗಾಲದಿಂದಾಗಿ ರೈತರು ಹಲವು ಕಡೆ ಅಡಿಕೆ ತೋಟಗಳನ್ನು ತೆರವುಗೊಳಿಸಿ, ಅದೇ ಜಾಗದಲ್ಲಿ ತರಕಾರಿ ಬೆಳೆದಿದ್ದಾರೆ. ತರಕಾರಿ ಬೆಳೆಯುವುದಕ್ಕಾಗಿಯೇ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ದಾವಣಗೆರೆ ಆನಗೋಡು, ಅಣಜಿ ಗ್ರಾಮಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮೊಟೊ ಬೆಳೆದಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಯತಿರಾಜ್.

* *

ರೈತರು ತರಕಾರಿ ಬೀಜೋತ್ಪಾದನೆ ಮಾಡಿ 10 ಗುಂಟೆ ಜಾಗದಲ್ಲಿ ಮೂರು ತಿಂಗಳಿನಲ್ಲಿ ₹ 1ಲಕ್ಷ ಸಂಪಾದಿಸುತ್ತಿದ್ದಾರೆ.
–ಡಾ.ಎಂ.ಜಿ.ಬಸವನಗೌಡ
ತೋಟಗಾರಿಕೆ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT