ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ತಯಾರಿಕೆಗೆ ತ್ಯಾಜ್ಯ ಬಳಕೆ

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಗರ ಪ್ರದೇಶ ವಿಸ್ತಾರವಾಗುತ್ತ ಹೋದಂತೆ ತ್ಯಾಜ್ಯದ ರಾಶಿ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಇದರ ವಿಲೇವಾರಿಯೇ ಬಲುದೊಡ್ಡ ಸವಾಲು. ಕಸ ವಿಲೇವಾರಿಗೆ ಡಂಪಿಂಗ್ ಯಾರ್ಡ್ ಬಳಕೆಯಿದ್ದರೂ, ಭವಿಷ್ಯದಲ್ಲಿ ನಗರ ವ್ಯಾಪ್ತಿಯ ಕಸ ವಿಲೇವಾರಿಯು ದೊಡ್ಡ ಸಂಕಷ್ಟ  ತಂದೊಡ್ಡಲಿದೆ ಎನ್ನುವ ಆತಂಕ ಎದುರಾಗಿದೆ. ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ  ಹೆಬ್ಬಳ್ಳಿಯ ಗ್ರಾಮ ಪಂಚಾಯ್ತಿಯು  ಕಸದಿಂದ ರಸ ತೆಗೆಯುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.

ಮನೆಯ ಕಸ ಮುಸುರೆಯ ತ್ಯಾಜ್ಯ ಬಳಸಿ  ಅಡುಗೆ ಅನಿಲ ಉತ್ಪಾದಿಸಲು ಇಲ್ಲಿ ಚಾಲನೆ ನೀಡಲಾಗಿದೆ.  ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಹೆಚ್ಚು ಬಾಳಿಕೆ ಬರುತ್ತದೆ. ಇದನ್ನು ಮೊದಲು ಶಿವಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಅಂಗನವಾಡಿಯ ಅಡುಗೆ ತಯಾರಿಕೆಗೆ ಬಳಸಿಕೊಳ್ಳಲಾಗಿತ್ತು. ಆದರೆ, ಅಲ್ಲಿ ಸಮರ್ಪಕವಾಗಿ ಉಪಯೋಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಯಂತ್ರವೇ ದುರಸ್ತಿಗೆ ಬಂದಿದ್ದರಿಂದ ಅಡುಗೆ ಅನಿಲ ತಯಾರಿಕೆಯನ್ನೇ ಸ್ಥಗಿತಗೊಳಿಸಲಾಗಿತ್ತು. ಸರಿಯಾಗಿ ಬಳಸಿದ್ದರೆ ಅಂಗನವಾಡಿಯ 40 ಮಕ್ಕಳಿಗೆ ಆಹಾರ ಸಿದ್ಧ ಪಡಿಸಲು ಉಪಯೋಗ ವಾಗುತ್ತಿತ್ತು.

ಇಲ್ಲಿ ಇಂಧನ ತಯಾರಿಕೆಗೆ ಬೇಕಾಗಿರುವುದು ಅಡುಗೆ ಮನೆಯ ತ್ಯಾಜ್ಯ ಮಾತ್ರ. ಅದಕ್ಕೆ 50 ಕೆ.ಜಿಯಷ್ಟು ಸಗಣಿ ನೀರನ್ನು ಬೆರಸಿ ಅದರ ಜೊತೆಗೆ ಸುಮಾರು ಅರ್ಧ ಕೆಜಿಯಿಂದ 5 ಕೆ.ಜಿವರೆಗೆ ಬಾಳೆಹಣ್ಣಿನ ಸಿಪ್ಪೆ, ತರಕಾರಿಗಳ ಸಿಪ್ಪೆ ಹಾಗೂ ಮನೆಯ ಮುಸುರೆ ಪದಾರ್ಥಗಳನ್ನು ಕಲಸಿ ಹಾಕಬೇಕು. ಮುಸುರೆ ಪದಾರ್ಥದಲ್ಲಿ ಯಾವ ಕಾರಣಕ್ಕೂ ಉಪ್ಪಿನಕಾಯಿ ಹಾಗೂ ಕಾರದ ಪದಾರ್ಥಗಳನ್ನು ಸೇರಿಸಬಾರದು. 1,000 ಲೀಟರ್ ಸಾಮರ್ಥ್ಯದ ಸಿಂಟೆಕ್ ಟ್ಯಾಂಕ್ ಹಾಗೂ 750 ಲೀಟರ್ ಸಿಂಟೆಕ್ ಟ್ಯಾಂಕ್ ಮುಚ್ಚುವುದಕ್ಕೆ ಬಳಸಬೇಕು. ಇದರಿಂದ ಉತ್ಪತ್ತಿಯಾಗುವ ಇಂಧನವನ್ನು ಮುಚ್ಚಳದ ಮೇಲೆ ಅಳವಡಿಸಲಾಗಿರುವ ಕೊಳವೆ ಮುಖಾಂತರ ಒಲೆಗೆ ಪೈಪ್ ಅಳವಡಿಸಿದರೆ ಸಾಕು. ಇದಕ್ಕೆ ರೆಗುಲೇಟರ್ ಅವಶ್ಯಕತೆ ಇಲ್ಲ, ಈ ಕಸದ ಮಿಶ್ರಣದಿಂದಲೇ ಇಂಧನ ಉತ್ಪಾದನೆಯಾಗಿ ಒಲೆ ಉರಿಯುತ್ತದೆ. ಇದರಿಂದ ಸುಮಾರು 4 ಗಂಟೆಗಳ ಕಾಲ ಒಲೆ ಉರಿಸಿ ಆಹಾರ ತಯಾರಿಸಬಹುದು. ‘ಈ ಬಗೆಯಲ್ಲಿ ಅಡುಗೆ ಅನಿಲ ತಯಾರಿಕೆಗೆ ₹ 10,000 ಖರ್ಚಾಗುತ್ತದೆ. ಗ್ಯಾಸ್ ಸ್ಟವ್ ಖರೀದಿಗೆ ಪ್ರತ್ಯೇಕ ವೆಚ್ಚ ತಗಲುತ್ತದೆ’ ಎಂದು ಪಿ,ಡಿ,ಓ ಚವರೆಡ್ಡಿ ಅವರು ಹೇಳುತ್ತಾರೆ.

ಇದಲ್ಲದೆ ಮಾನವನ ತ್ಯಾಜ್ಯ ಹಾಗೂ ಹಸಿ-ಒಣ ಕಸಗಳನ್ನು ಕೂಡ ಬಳಸಿದರೆ ಇದರಿಂದ ಉತ್ಪಾದನೆಯಾಗುವ  ಅನಿಲವನ್ನು ವಿದ್ಯುತ್‍ ಶಕ್ತಿಗೆ ಪರಿವರ್ತಿಸಬಹುದು. ಮನೆಯಲ್ಲಿ ನಾವು ಹೊರ ಚೆಲ್ಲುವ ಮುಸುರೆ ಪದಾರ್ಥಗಳಿಂದ ತಂತ್ರಜ್ಞಾನದ ಸಹಾಯದಿಂದ ಮನೆಗೆ ವಿದ್ಯುತ್ ಹಾಗೂ ಅಡುಗೆ ಅನಿಲ ಉತ್ಪಾದಿಸಬಹುದು.

‘ಸರ್ಕಾರ ಕೊಡುವ ಅಡುಗೆ ಅನಿಲ (ಎಲ್‌ಪಿಜಿ) ದುಬಾರಿಯಾಗುತ್ತಿದೆ. ವಿದ್ಯುತ್ ಬಿಲ್ ಕೂಡ ಹೆಚ್ಚುತ್ತಿದೆ. ಇವೆಲ್ಲವನ್ನು ಗಮನಿಸಿ ಪ್ರತಿಯೊಬ್ಬರು ತಮ್ಮ ತಮ್ಮ   ಮನೆಯ ಆವರಣದಲ್ಲಿ ಹಾಗೂ ಅಂಗನವಾಡಿ ಶಾಲೆಗಳಲ್ಲಿ ಇಂತಹ ಉಪಕರಣಗಳನ್ನು ಬಳಸಿ ತಾವೇ ಸ್ವತಃ ಅಡುಗೆ ಅನಿಲ ಉತ್ಪಾದಿಸಿದರೆ ಸಾಕಷ್ಟು ಹಣವನ್ನೂ ಉಳಿಸಬಹುದು’ ಎಂದು ಗ್ರಾಮಪಂಚಾಯ್ತಿ ಅಧ್ಯಕ್ಷೆ ರತ್ನವ್ವ ಮಾರುತಿ ಸುಣಗಾರ ಹೇಳುತ್ತಾರೆ.

‘ಇದಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು. ಪ್ರತಿಯೊಂದು ಮನೆಗಳಲ್ಲಿನ ತ್ಯಾಜ್ಯ ಶೇಖರಿಸಿ ಸಣ್ಣ ಪ್ರಮಾಣದಲ್ಲಿ ಅಡುಗೆ ಅನಿಲ ಉತ್ಪಾದಿಸಲು ಪ್ರತಿಯೊಬ್ಬರಿಗೂ ಶೇ 40 ರಷ್ಟು ಹಣ ಸಹಾಯ ಮಾಡಲಾಗುತ್ತದೆ. ಇದಕ್ಕೆ ತಗಲುವ ವೆಚ್ಚ ಕೂಡ ಬಹಳ ಕಡಿಮೆ ಇದೆ. ತಂತ್ರಜ್ಞರ ನೆರವಿನಿಂದ ಗ್ರಾಮದ ಜನರಿಗೆ ಮನವರಿಕೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಪಂಚಾಯಿತಿ ಸಿ.ಇ.ಓ ಸ್ನೇಹಲ್ ಹೇಳುತ್ತಾರೆ.
ಚಿತ್ರ-ಲೇಖನ-ಎಂ.ಆರ್.ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT