ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದದ್ದನ್ನು ಸ್ವೀಕರಿಸಿ...

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅನಿರೀಕ್ಷಿತವಾಗಿ ಕಷ್ಟ ಬಂದಾಗ ಗಲಿಬಿಲಿಗೊಳ್ಳುತ್ತೇವೆ; ಆರೋಗ್ಯ ಹದಗೆಟ್ಟಾಗ ಗಾಬರಿಯಾಗುತ್ತೇವೆ. ಎಲ್ಲ ಸಂಕಷ್ಟಗಳಿಂದ ಬೇಗನೇ ಪಾರು ಮಾಡೆಂದು ನಂಬಿದ ದೇವರನ್ನು ಪ್ರಾರ್ಥಿಸುತ್ತೇವೆ. ಗೆಳೆಯರಿಂದ, ಪರಿಚಯದವರಿಂದ ಸಹಾಯವನ್ನು ಯಾಚಿಸುತ್ತೇವೆ. ನಿರೀಕ್ಷಿಸಿದಂತೆ ಸಹಾಯ ಸಿಗದಿದ್ದಾಗ ಮತ್ತಷ್ಟು ಕುಗ್ಗುತ್ತೇವೆ. ಮನುಷ್ಯ ಸಂಬಂಧಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ. ನಮ್ಮಿಂದ ಸಹಾಯವನ್ನು ಪಡೆದುಕೊಂಡವರೂ ನಮ್ಮ ಕಷ್ಟಕಾಲದಲ್ಲಿ ನಮ್ಮನ್ನು ಕಡೆಗಣಿಸುವುದನ್ನು ಕಾಣುತ್ತೇವೆ. ಇನ್ನಷ್ಟು ಜರ್ಝರಿತರಾಗುತ್ತೇವೆ. ಹೊರಗಿನ ಜಗತ್ತಿನ ಸಂಪರ್ಕವನ್ನು ಕಡಿಮೆ ಮಾಡಲಿಕ್ಕೆ ಶುರುಮಾಡುತ್ತೇವೆ. ಮಾನಸಿಕವಾಗಿ ದುರ್ಬಲರಾಗುತ್ತೇವೆ. ದಿನ ಕಳೆದಂತೆ ದೈಹಿಕವಾಗಿಯೂ ಅಶಕ್ತರಾಗುತ್ತೇವೆ. ಮುಂದಿನ ಜೀವನ ಹೇಗಪ್ಪಾ ಎಂದು ಚಿಂತಿತರಾಗುತ್ತೇವೆ. ಕಷ್ಟ ಕರಗುವ ಮೊದಲೇ ಕಂಗಾಲಾಗಿ ಬಿಡುತ್ತೇವೆ. ಇಂತಹ ಸಂದರ್ಭಗಳಲ್ಲಿ ಬಹಳ ಅಶಕ್ತ ಮನಸ್ಸಿನವರು ಅನಾಹುತಗಳನ್ನೂ ಮಾಡಿಕೊಂಡುಬಿಡುತ್ತಾರೆ.

ಮಾನಸಿಕವಾಗಲೀ ದೈಹಿಕವಾಗಲೀ ತೊಂದರೆಯಾಗುತ್ತಿರುವ ಸೂಚನೆ ತಿಳಿಯುತ್ತಿದ್ದಂತೆಯೇ ಮೊದಲ ಹಂತವಾಗಿ ನಮ್ಮ ಹಿತೈಷಿಯನ್ನು ಕಂಡು ನಮ್ಮ ಸಮಸ್ಯೆಯ ಬಗ್ಗೆ ಮಾತನಾಡಬೇಕು; ಸೂಕ್ತ ವೈದ್ಯರನ್ನು ಕಾಣಬೇಕು. ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ಸಮಸ್ಯೆ ಪರಿಹಾರವಾದರೆ ಒಳ್ಳೆಯದು. ಆಗದಿದ್ದರೆ ಮತ್ತೆ ಅವರನ್ನೇ ಸಂಪರ್ಕಿಸಬೇಕು. ಅವರ ತಿಳಿವಳಿಕೆಯ ಸಹಾಯದಿಂದ ಮುಂದುವರೆಯಬೇಕು. ಬೇರೆ ವೈದ್ಯರನ್ನು ಕಾಣಬೇಕು. ಯಾವುದೇ ಕಾರಣಕ್ಕೂ ಆರೋಗ್ಯ ತಪ್ಪಿದಾಗ ಗಾಬರಿಯಾಗಬಾರದು. ಯಾವುದೇ ರೋಗ ಬಂದರೂ ಅಧೀರರಾಗಬಾರದು. ‘ಅಯ್ಯೋ, ನನಗೆ ಹೀಗಾಗಿ ಹೋಯಿತೇ?’ ಎಂದು ಕೊರಗಬಾರದು. ಮನಸ್ಸನ್ನು ಧೈರ್ಯವಾಗಿರುವಂತೆ ಹಸನುಗೊಳಿಸಬೇಕು. ಮನಸ್ಸು ಧೈರ್ಯವನ್ನು ಕಳೆದುಕೊಂಡರೆ ದೇಹವೂ ಹೆದರುತ್ತದೆ. ಯಾವಾಗಲೂ ನಮ್ಮ ಮನಸ್ಸು ನಮ್ಮ ದೇಹವನ್ನು ನಿಯಂತ್ರಿಸುತ್ತಿರುತ್ತದೆ. ದೇಹವು ಎಂದಿಗೂ ಮನಸ್ಸನ್ನು ನಿಯಂತ್ರಿಸಲಿಕ್ಕೆ ಸಾಧ್ಯವಿಲ್ಲ. ಮನಸ್ಸು ಹೇಳಿದಂತೆಯೇ ದೇಹ ಕೇಳುತ್ತದೆ. ಯಾವಾಗ ಬೇಕಾದರೂ ಮನಸ್ಸು ತನಗೆ ಬೇಕಾದ ಹಾಗೆ ದೇಹವನ್ನು ಮಾರ್ಪಡಿಸಿಕೊಳ್ಳುತ್ತದೆ.

ಹಗಲಿರುಳುಗಳು ಒಂದಾದ ನಂತರ ಒಂದರಂತೆ ಬದಲಾಗುತ್ತವೆ. ಹಾಗೆಯೇ ಕಾಲಚಕ್ರವು ಮುಂದುವರೆಯುತ್ತದೆ. ಹಗಲಾಗಲೀ ರಾತ್ರಿಯಾಗಲೀ ಸ್ಥಿರವಾಗಿ ನಿಂತಿರಲಿಕ್ಕೆ ಸಾಧ್ಯವಿಲ್ಲ. ಅದು ಜಗದ ನಿಯಮವಲ್ಲ. ಹಾಗೆಯೇ ನಮಗೆ ಬಂದೆರಗಿರುವ ಸುಖ ದುಃಖಗಳೂ ಬದಲಾಗುತ್ತಿರುತ್ತವೆ. ಸದಾಕಾಲ ನಮ್ಮ ಜೀವನದಲ್ಲಿ ಸುಖವು ಹೇಗೆ ನಿಂತಿರುವುದಿಲ್ಲವೋ ಹಾಗೆಯೇ ಕಷ್ಟವೂ ಕೂಡ ನಿಂತಿರಲಿಕ್ಕೆ ಸಾಧ್ಯವಿಲ್ಲ. ಅದು ಹೋಗಬೇಕು, ಹೋಗುತ್ತದೆ. ಅದಕ್ಕೊಂದಿಷ್ಟು ಸಮಯವನ್ನು ಕೊಡಬೇಕು. ಮತ್ತೆ ನೆಮ್ಮದಿಯ ಸಮಯ ಬರುವ ತನಕ ಕಾಯುವ ಸಹನೆ ನಮಗಿರಬೇಕು.

ಆರೋಗ್ಯ ಕೆಡುವ ಮೊದಲು ನಾವು ಆರೋಗ್ಯವಾಗಿಯೇ ಇದ್ದೆವಲ್ಲ. ಯಾವುದೋ ಕಾರಣದಿಂದ ರೋಗ ಬಂದಿದೆ. ಬಂದಿದ್ದು ಸೂಕ್ತ ಚಿಕಿತ್ಸೆಯಿಂದ ಕಡಿಮೆಯಾಗುತ್ತದೆ. ಮತ್ತೆ ಆರೋಗ್ಯವು ಬರುತ್ತದೆ. ರಾತ್ರಿ ಕಳೆದು ಬೆಳಗಾದಂತೆ. ನಮಗೆ ಇಷ್ಟು ಮಾತ್ರದ ನಂಬಿಕೆ ಇರಬೇಕು.

‘ನನಗೇಕೆ ಆರೋಗ್ಯ ಹದಗೆಟ್ಟಿತು?’ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು. ಹಾಗೆ ಮಾಡಿದರೆ ನಮಗೆ ಉತ್ತರ ಸಿಗುತ್ತದೆ. ನಮಗೇಕೆ ಕಷ್ಟ ಬಂದಿದೆ ಎಂದು ನಾವೇ ವಿಚಾರ ಮಾಡಿದರೆ ಕಾರಣ ತಿಳಿಯುತ್ತದೆ. ಆ ಕಾರಣವು ಸತ್ಯವು ಹೌದೋ ಅಲ್ಲವೋ ಎನ್ನುವುದು ತಿಳಿಯುತ್ತದೆ. ಅದನ್ನು ಒಪ್ಪಿಕೊಳ್ಳಬೇಕು. ಆ ಕಾರಣಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಂಡಾಗ ಕಷ್ಟ ನಷ್ಟವನ್ನು ಕಡಿಮೆ ಮಾಡುತ್ತದೆ.

ಸುಖ ಬಂದಾಗ, ‘ಅಯ್ಯೋ! ದೇವರೆ ನನಗೇಕೆ ಇಷ್ಟೆಲ್ಲಾ ಸುಖವನ್ನು ಕೊಟ್ಟೆ?’ ಎಂದು ನಾವು ಕೇಳಿದ್ದಿದೆಯಾ? ಎಲ್ಲವೂ ನಿನ್ನ ದಯೆ ಭಗವಂತ ಎಂದು ಅವನಿಗೆ ಶರಣಾಗಿದ್ದಿದೆಯಾ? ಖಂಡಿತ ಇಲ್ಲ. ಬಂದಿರುವ ಭಾಗ್ಯವನ್ನು ನಮ್ಮದೇ ಸಾಧನೆಯ ಫಲವೋ, ನಮ್ಮ ಪುಣ್ಯದ ಫಲವೋ ಎನ್ನುವಂತೆ ಅನುಭವಿಸುತ್ತೇವೆ. ಹಿಗ್ಗುತ್ತೇವೆ. ಸಂಭ್ರಮಿಸುತ್ತೇವೆ.

ಅದೇ ಕಷ್ಟ ಬಂದಾಗ ಮಾತ್ರ ‘ವೆಂಕಟರಮಣಾ, ನೀನೇ ಗತಿ’ ಎಂದು ಹಲಬುತ್ತೇವೆ. ಯಾಕಪ್ಪಾ ನನಗೆ ಇಷ್ಟೆಲ್ಲ ಕಷ್ಟ ಕೊಟ್ಟಿರುವೆ? ಹೇಗಾದರೂ ಮಾಡಿ ನನ್ನನ್ನು ಪಾರುಮಾಡು ಎಂದು ಕಣ್ಣೀರಿಡುತ್ತೇವೆ. ಇದೇನು ದುರ್ವಿಧಿ ಎಂದು ಹಲುಬುತ್ತೇವೆ. ಹೇಗಿದೆ ನೋಡಿ ನಮ್ಮ ಮನಸ್ಸಿನ ಇಬ್ಬಗೆ ವರ್ತನೆ!

ನಮಗೆ ಸುಖ ಇರಲಿ, ಕಷ್ಟವೇ ಬರಲಿ – ಎಲ್ಲವೂ ಬದುಕಿನ ಒಂದೊಂದು ಅನುಭವ ಎನ್ನುವ ಹಾಗೆ ಬಂದಿದ್ದನ್ನು ಅನುಭವಿಸುವುದನ್ನು ರೂಢಿಸಿಕೊಳ್ಳಬೇಕು. ಹಗಲು–ರಾತ್ರಿಗಳಂತೆ, ಸುಖ–ದುಃಖ, ಮಾನ–ಅಪಮಾನಗಳೂ ಬಂದು ಹೋಗುತ್ತಿರುತ್ತವೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವೂ ಬದಲಾಗುತ್ತಿರುತ್ತವೆ. ಬದಲಾವಣೆಯೊಂದೇ ಇಲ್ಲಿ ಶಾಶ್ವತ!

ಇದ್ದದ್ದನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳಬೇಕು. ಬಂದಿದ್ದನ್ನು ಬಂದ ಹಾಗೆಯೇ ಅನುಭವಿಸಬೇಕು. ಆಗ ಬದುಕು ಸಹನೀಯವಾಗುತ್ತದೆ. ನಮ್ಮ ಜೊತೆಗಿರುವವರಿಗೂ ನಮ್ಮಿಂದ ಸಹಾಯವಾಗುತ್ತದೆ. ಇಂತಹ ಮನಃಸ್ಥಿತಿಯ ಮನುಷ್ಯರು ಎಂಥೆಂತಹ ಭಯಾನಕ ರೋಗಗಳನ್ನು ಎದುರಿಸಿ ಬದುಕಿ ಬಂದಿದ್ದಾರೆ. ಜೀವನದಲ್ಲಿ ಸಾಧನೆಯನ್ನು ಮಾಡುತ್ತಲೇ ಇದ್ದಾರೆ. ಇತ್ತೀಚೆಗಂತೂ ಕ್ಯಾನ್ಸರ್‍ಗೂ ಕ್ಯಾರೇ ಎನ್ನದೇ ಅದನ್ನು ಸೋಲಿಸಿ ಬದುಕನ್ನು ಹಸನುಗೊಳಿಸಿಕೊಂಡವರು ನಮ್ಮ ಸುತ್ತಮುತ್ತಲೂ ಉದಾಹರಣೆಯಾಗಿ ಬದುಕಿ ತೋರಿಸುತ್ತಿದ್ದಾರೆ. ಅವರ ಧೈರ್ಯಕ್ಕೆ, ಧನಾತ್ಮಕ ಮನಃಸ್ಥಿತಿಗೆ, ಅವರೆಲ್ಲರ ಜೀವನ ಪ್ರೀತಿಗೆ ಒಂದು ಸಲಾಮ್! ರೋಗದಿಂದ ಸಾಯುವವರಿಗಿಂತಲೂ ರೋಗದ ಭಯದಿಂದ ಸಾಯುವವರೇ ಅಧಿಕ ಎಂದಿದ್ದಾರೆ ಪ್ರಾಜ್ಞರು.

ಅನಾರೋಗ್ಯವಾಗಲೀ ಕಷ್ಟ–ನಷ್ಟವೇ ಆಗಲೀ, ಅದೂ ಒಂದು ಅನುಭವ. ಕುಗ್ಗದೇ, ಸಿಡುಕದೇ, ಹೆದರದೇ – ಅದನ್ನು ಕೂಡ ಸಂಪೂರ್ಣವಾಗಿ ಅನುಭವಿಸಬೇಕು. ಅದನ್ನು ಒಂದು ಅನಿವಾರ್ಯ ಅವಕಾಶ ಎಂದುಕೊಂಡು ಅನುಭವಿಸುತ್ತಿದ್ದರೆ, ಸಮಯ ಸರಿಯುತ್ತಿದ್ದಂತೆಯೇ ಸಮಸ್ಯೆಯ ಕಲ್ಲು ಕರಗಲಿಕ್ಕೆ ಶುರುವಾಗುತ್ತದೆ. ಅದರ ಪರಿಹಾರಕ್ಕೆ ದಾರಿಯು ತೆರೆದುಕೊಳ್ಳುತ್ತದೆ. ಬದಲಾವಣೆಯೇ ಜಗದ ನಿಯಮ. ಅದನ್ನು ಒಪ್ಪಿಕೊಳ್ಳಬೇಕು. ಕಷ್ಟದ ಭಯದಿಂದ, ಸೋಲಿನ ಭಯದಿಂದ, ರೋಗದ ಭಯದಿಂದ ಮನಸ್ಸನ್ನು ಮಲೀನಗೊಳಿಸಿಕೊಳ್ಳಬಾರದು. ಯಾವಾಗಲೂ ನಮಗೇನು ಬೇಕಾಗಿದೆ ಎನ್ನುವುದರ ಬಗ್ಗೆಯೇ ಆಲೋಚಿಸುತ್ತ ಇರಬೇಕು. ಮನಸ್ಸನ್ನು ಸಮಾಧಾನದಿಂದ, ನೆಮ್ಮದಿಯಿಂದ ಇರುವಂತೆ ಹದಗೊಳಿಸಬೇಕು. ಸಮಸ್ಥಿತಿಯ ಮನಸ್ಸಿನ ಮನುಷ್ಯರಿಗೆ ಜೀವನದಲ್ಲಿ ಏರುಪೇರುಗಳ ಅಬ್ಬರ ಕಡಿಮೆ ಇರುತ್ತದೆ. ಎಂಥದ್ದೇ ಅಬ್ಬರವಾದರೂ ಅವನ್ನು ಸಮಾಧಾನದಿಂದ ಎದುರಿಸುವ ಕಲೆ ಅವರಿಗೆ ರೂಢಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT