ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಟ್ ಫಿಶಿಂಗ್: ಮುಂದುವರಿದ ಗೊಂದಲ

Last Updated 7 ಫೆಬ್ರುವರಿ 2018, 9:12 IST
ಅಕ್ಷರ ಗಾತ್ರ

ಕಾರವಾರ: ದೇಶದ ಕರಾವಳಿಯಲ್ಲಿ ‘ಲೈಟ್ ಫಿಶಿಂಗ್’ ಮಾಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಷೇಧ ಹೇರಿದ್ದರೂ ಮುಂದುವರಿದಿದೆ. ಇದನ್ನು ತಡೆಯುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರಿಗೆ ಸಾಂಪ್ರದಾಯಿಕ ಮೀನುಗಾರರು ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಾಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಕೊಪ್ಪದ್, ‘ಅಕ್ರಮ ಎಸಗುವವರ ದೋಣಿಗಳಲ್ಲಿರುವ ಜನರೇಟರ್ ವಶಪಡಿಸಿಕೊಂಡು, ದಂಡ ವಿಧಿಸುತ್ತಿದ್ದೇವೆ. ಈ ಹಾವಳಿ ಇನ್ನೂ ಮುಂದುವರಿದರೆ ದೋಣಿಗಳ ಪರವಾನಗಿ ರದ್ದು ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಹೊರಗಿನವರ ಹಾವಳಿ: ‘ಈ ರೀತಿ ಮೀನುಗಾರಿಕೆ ಮಾಡುತ್ತಿರುವವರಲ್ಲಿ ಛತ್ತೀಸಗಡ, ಪಶ್ಚಿಮಬಂಗಾಳ, ಒಡಿಶಾದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಂದೊಂದು ದೋಣಿಗೂ ₹ 1.25 ಕೋಟಿಯವರೆಗೆ ಬಂಡವಾಳ ಹೂಡಿರುತ್ತಾರೆ. ಅದನ್ನು ವಾಪಸ್ ಪಡೆಯಲು ಈ ರೀತಿ ಲೂಟಿಗೆ ಇಳಿಯುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಮೀನುಗಾರರೊಬ್ಬರು ಆರೋಪಿಸುತ್ತಾರೆ.

‘ಲೈಟ್ ಫಿಶಿಂಗ್’ ಅಂದರೇನು?: 46 ಮಿ.ಮೀ. ಅಳತೆಯ ರಂಧ್ರಗಳುಳ್ಳ ಬಲೆ ಅಳವಡಿಸಿದ ಪರ್ಷಿಯನ್ ದೋಣಿಗಳಲ್ಲಿ ಆಳ ಸಮುದ್ರಕ್ಕೆ ರಾತ್ರಿ ತೆರಳಲಾಗುತ್ತದೆ. ದೋಣಿಗಳಲ್ಲಿ ಅಳವಡಿಸಿರುವ ಲೈಟ್‌ಗಳಿಂದ ಪ್ರಖರ ಬೆಳಕು ಹರಿಸಿ ಮೀನುಗಳನ್ನು ಆಕರ್ಷಿಸಲಾಗುತ್ತದೆ. ಆಗ ಬಲೆಯನ್ನು ನೀರಿಗೆ ಇಳಿಬಿಟ್ಟಾಗ ದೊಡ್ಡ ಮೀನುಗಳ ಜತೆಗೇ ಮರಿಗಳೂ ಸಿಲುಕಿಕೊಳ್ಳುತ್ತವೆ ಎಂಬ ಆರೋಪವಿದೆ.

ಇಲಾಖೆ ನಿಷ್ಕ್ರಿಯ–ಆರೋಪ: ‘ಮೀನುಗಾರಿಕೆ ಇಲಾಖೆ ಜಿಲ್ಲೆಯಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ, ದುಡ್ಡಿದ್ದವರಿಗೆ ಮಾರಾಟವಾಗಿದೆ’ ಎಂದು ಸಾಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ ಆರೋಪಿಸಿದ್ದಾರೆ.

‘ಅಧಿಕಾರಿಗಳು ಕೇವಲ ತೋರಿಕೆಗಾಗಿ ದೋಣಿಗಳನ್ನು ಹಿಡಿದು ಲೆಕ್ಕ ಕೊಡುತ್ತಾರೆ. ಲೈಟ್ ಫಿಶಿಂಗ್‌ಗೆ ಕುಮ್ಮಕ್ಕು ನೀಡುತ್ತಿರುವವರೇ ಇಲಾಖೆಯವರು. ಕಾನೂನು ಮೀರಿದವರ ವಿರುದ್ಧ ಗೋವಾದಲ್ಲಿ ಮಾಡುವ ರೀತಿ ನಮ್ಮ ರಾಜ್ಯದಲ್ಲೂ ಎಫ್‌ಐಆರ್ ಯಾಕೆ ಮಾಡುತ್ತಿಲ್ಲ’ ಎಂಬುದು ಅವರ ಪ್ರಶ್ನೆ.

‘ಈಚೆಗೆ ಬೆಂಗಳೂರಿಗೆ ತೆರಳಿದ್ದಾಗ ಮೀನುಗಾರಿಕೆ ಇಲಾಖೆಯ ನಿರ್ದೇಶಕ ಎಚ್.ಎಸ್.ವೀರಪ್ಪ ಗೌಡ ಅವರ ಬಳಿಯೂ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಅಧಿಕಾರಿಗಳು ಹೇಳುವಂತೆ ಬೇರೆ ರಾಜ್ಯದವರ ಹಾವಳಿ ಇಲ್ಲಿ ಇಲ್ಲ. ಅವರಿಗೆ ತಾಕತ್ತಿದ್ದರೆ ಅಂತಹವರನ್ನು ಹಿಡಿದು ಕ್ರಮ ಕೈಗೊಳ್ಳಲಿ. ಆಗ ನಾವು ಅಧಿಕಾರಿಗಳನ್ನು ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸುತ್ತಾರೆ.

‘ದಂಡ ವಿಧಿಸುವುದು ಸರಿಯಲ್ಲ’

ಲೈಟ್ ಫಿಶಿಂಗ್ ಮಾಡುವ ಮೀನುಗಾರರಿಗೆ ದಂಡ ವಿಧಿಸುತ್ತಿರುವುದು ಸರಿಯಲ್ಲ. ವರ್ಷದಲ್ಲಿ ಕನಿಷ್ಠ ಒಂದು ತಿಂಗಳಾದರೂ ಅವಕಾಶ ನೀಡಬೇಕು ಎಂಬುದು ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ಗಣಪತಿ ಮಾಂಗ್ರೆ ಅವರ ಬೇಡಿಕೆಯಾಗಿದೆ.

‘ನಮ್ಮ ಜಿಲ್ಲೆಯಲ್ಲಿ ಆಗಸ್ಟ್‌ನಿಂದ ನವೆಂಬರ್‌ ಅಂತ್ಯದವರೆಗೆ ಮೀನುಗಳು ಕಡಲತೀರಕ್ಕೆ ಬರುತ್ತವೆ. ಈ ನಾಲ್ಕು ತಿಂಗಳು ಲೈಟ್ ಫಿಶಿಂಗ್‌ ಸ್ಥಗಿತಗೊಳಿಸಲು ಸಿದ್ಧರಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ರೀತಿಯ ಮೀನುಗಾರಿಕೆಗೆ ಅನುಮತಿಯಿದೆ. ಅಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಏನೂ ತೊಂದರೆಯಾಗಿಲ್ಲ’ ಎಂಬ ವಾದ ಅವರದ್ದು.

ಈ ಪದ್ಧತಿಯ ಮೀನುಗಾರಿಕೆಯ ಮೇಲೆ ಬಂಡವಾಳ ಹೂಡಿರುವವರಿಗೆ ಸರ್ಕಾರದ ನೀತಿಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅದು ಭರ್ತಿಯಾದ ನಂತರ ನಿಷೇಧಿಸಲಿ ಎಂದು ಅವರು ಒತ್ತಾಯಿಸುತ್ತಾರೆ.

ಅಂಕಿ ಅಂಶಗಳು

ತಲಾ ₨ ೩೦ ಸಾವಿರ ದಂಡ ವಸೂಲಿ

ತಾಲ್ಲೂಕು ಪ್ರಕರಣಗಳು
ಹೊನ್ನಾವರ 1೩
ಕುಮಟಾ 13

ಕಾರವಾರ 9
ಭಟ್ಕಳ 8
ಅಂಕೋಲಾ 1

ಹೊರ ರಾಜ್ಯದವರಿಗೆ ದಂಡ
ಗೋವಾ 2
ತಮಿಳುನಾಡು 1

* * 

ಒಟ್ಟು 51 ಪ್ರಕರಣಗಳಲ್ಲಿ ದೋಣಿಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಕೆಲವರು ಸ್ವೀಕರಿಸಿಲ್ಲ. ಇನ್ನೂ ಹಲವರಿಗೆ ತಲುಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ
ಸಂತೋಷ ಕೊಪ್ಪದ್
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT