ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಸೀಟ್‌ ಮೇಲೆ ‘ಕಿಡಿ’ಗೇಡಿಗಳ ಕಣ್ಣು

Last Updated 7 ಫೆಬ್ರುವರಿ 2018, 9:17 IST
ಅಕ್ಷರ ಗಾತ್ರ

ಮಡಿಕೇರಿ: ‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ...’ ಹೀಗೆ ಮಂಜೆಮಂಗೇಶರಾಯರು ಕೊಡಗಿನ ಸೌಂದರ್ಯ ಅದರಲ್ಲೂ ರಾಜಾಸೀಟ್‌ನಂತಹ ರಮಣೀಯ ತಾಣ ನೋಡಿಯೇ ಬರೆದಿದ್ದರು ಎನಿಸುತ್ತದೆ. ಆದರೆ, ಇಂದು ಅದೇ ರೀತಿಯ ನಿಸರ್ಗ ಸೌಂದರ್ಯ ಉಳಿದಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಹೌದು, ಗಿರಿಕಂದರಗಳ ಮೇಲಿರುವ ರಾಜಾಸೀಟ್‌ಗೆ ಸಾವಿರಾರು ಮಂದಿ ಪ್ರವಾಸಿಗರು ದಿನಂಪ್ರತಿ ಭೇಟಿ ನೀಡುತ್ತಿದ್ದರೂ, ಹಿಂದಿನ ಆಕರ್ಷಣೆ ಉಳಿದಿಲ್ಲ. ಅದರ ಮೇಲೆ ‘ಕಿಡಿ’ಗೇಡಿಗಳ ಕಣ್ಣುಬಿದ್ದಿದೆ. ಬಂದವರೂ ಅಲ್ಲಿನ ಪರಿಸರದ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಪದೇ ಪದೇ ಬೆಂಕಿ ಅವಘಡ ಸಂಭವಿಸುತ್ತಿರುವ ಕಾರಣ ಅದರ ಸೌಂದರ್ಯ ಕರಗುತ್ತಿದೆ. ಉದ್ಯಾನಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಬರೀ ಬೆಟ್ಟ ಮಾತ್ರ ಗೋಚರಿಸುತ್ತಿದೆ. ಉದ್ಯಾನದ ಸೊಬಗು ದಿನಂಪ್ರತಿ ಮಾಸುತ್ತಿದ್ದು, ಅದನ್ನು ‘ಪ್ರಜಾವಾಣಿ’ ದೃಶ್ಯಗಳ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದೆ.

ಸದ್ಯದಲ್ಲೇ ಅದೇ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದಕ್ಕಾಗಿಯೇ ತೋಟಗಾರಿಕೆಯಲ್ಲಿ ₨ 7 ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ. ಜಿಲ್ಲಾಧಿಕಾರಿ ಖಾತೆಯ ₨ 5 ಲಕ್ಷದಲ್ಲಿ ಪ್ರವೇಶ ದ್ವಾರ ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೂ, ಪಾಟ್‌ನಲ್ಲಿ ಹೂವಿನ ಗಿಡಗಳೂ ಕಾಣಿಸುತ್ತಿಲ್ಲ. ಸಂಗೀತ ಕಾರಂಜಿ ಕೆಟ್ಟು ನಿಂತು ಎರಡು ವರ್ಷ ಕಳೆದರೂ ದುರಸ್ತಿ ಭಾಗ್ಯ ಲಭಿಸಿಲ್ಲ!

ಅರಣ್ಯಕ್ಕೆ ಮುಕ್ತ ಪ್ರವೇಶ: ರಾಜಾಸೀಟ್‌ ಕೆಳಗಿರುವ ಅರಣ್ಯಕ್ಕೆ ಕಿಡಿಗೇಡಿಗಳಿಗೆ ಮುಕ್ತ ಪ್ರವೇಶವಿದೆ. ಪ್ರೇಮಿಗಳು ಅಲ್ಲಿಗೆ ತೆರಳಿ ತಾಸುಗಟ್ಟಲೇ ಹರಟೆ ಹೊಡೆಯುವ ಸ್ಥಿತಿಯಿದೆ. ಕಾವಲುಗಾರರು ಇದ್ದರೂ ಪ್ರಯೋಜನವಾಗುತ್ತಿಲ್ಲ. ಹಿಂದೆ ಬೆಳ್ಳಂಬೆಳಿಗ್ಗೆ ಉದ್ಯಾನದಲ್ಲಿ ವಾಕಿಂಗ್‌ಗೆ ತೆರಳುವುದೇ ಒಂದು ರೀತಿಯಲ್ಲಿ ಆನಂದವಾಗುತ್ತಿತ್ತು. ಆದರೆ, ಈಗ ಅಂತಹ ಸ್ಥಿತಿಯಿಲ್ಲ. ಪ್ರವಾಸಿಗರೂ ನಿರಾಸೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ನಗರದ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT