ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಭಯ ಹೋಗಲಾಡಿಸಲು ಕೇಂದ್ರಗಳ ಭೇಟಿ

Last Updated 7 ಫೆಬ್ರುವರಿ 2018, 10:04 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ತಾಲ್ಲೂಕಿನ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಭೇಟಿ ಮಾಡಿಸುವ ಮೂಲಕ ಅವರಲ್ಲಿರುವ ಭಯ ಹೋಗಲಾಡಿಸಲು ಮುಂದಾಗಿದ್ದೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ತಿಳಿಸಿದರು.

ಇಲ್ಲಿನ ವಾಸವಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ಉತ್ತಮವಾಗಿ ಅಭ್ಯಾಸ ಮಾಡಿದರೂ ಪರೀಕ್ಷಾ ಕೇಂದ್ರಗಳಿಗೆ ಬಂದೊಡನೆ ಗಾಬರಿಯಾಗುತ್ತಾರೆ. ಅದಕ್ಕಾಗಿ ತಾಲ್ಲೂಕಿನಲ್ಲಿ ಫೆ. 6ರಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಪ್ರಕ್ರಿಯೆಯೂ ಪ್ರಾರಂಭವಾಗಿದ್ದು, 15 ದಿನಗಳವರೆಗೆ ಇದು ಮುಂದುವರಿಯಲಿದೆ ಎಂದು
ಅವರು ತಿಳಿಸಿದರು.

ಪರೀಕ್ಷೆ ಸಮೀಪಿಸುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳಲ್ಲಿ ಭಯ ಉಂಟಾಗುತ್ತದೆ. ಪರೀಕ್ಷೆ ಹೇಗೆ ಎದುರಿಸಬೇಕು? ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಅದರಿಂದಾಚೆಗೆ ಬರಲು ಸಂವಾದ, ರಸಪ್ರಶ್ನೆ ಇತರೆ ಕಾರ್ಯಕ್ರಮಗಳನ್ನು ಇಲಾಖೆ ಆಯೋಜಿಸುತ್ತಿದೆ ಎಂದರು.

ಪರೀಕ್ಷೆ ಎಂದೊಡನೆ ವಿದ್ಯಾರ್ಥಿ ಸಮೂಹ ಭಯಪಡುವ ಅಗತ್ಯವಿಲ್ಲ. ಈಗ ಉಳಿದಿರುವ ಸಮಯವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅಭ್ಯಾಸದಲ್ಲಿ ತೊಡಗಿದರೆ ಸುಲಭವಾಗಿ ಪರೀಕ್ಷೆ ಎದುರಿಸಬಹುದು ಎಂದು ಸಲಹೆ ನೀಡಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿನ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬೇಕು. ರಾಜ್ಯದಲ್ಲಿ ಚಿತ್ರದುರ್ಗದ ಹೆಸರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು. ಅದು ನಿಮ್ಮಿಂದಲೇ ಆಗಬೇಕು. ಮನಸ್ಸು ಮಾಡಿದರೆ, ಅಸಾಧ್ಯವಾದುದು ಯಾವುದೂ ಇಲ್ಲ’ ಎಂದು ತಿಳಿಸಿದರು.

ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ‘ಕಳೆದ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಿದ್ದು, ಈ ಬಾರಿ ಅದನ್ನು ಹೆಚ್ಚಿಸುವ ಉದ್ದೇಶವಿದೆ. ಈಗಾಗಲೇ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಅನುಷ್ಠಾನ ಮಾಡಲಾಗುತ್ತಿದೆ. ತಾಲ್ಲೂಕಿನ 119 ಶಾಲೆಗಳ 24 ಪರೀಕ್ಷಾ ಕೇಂದ್ರಗಳಲ್ಲಿಯೂ ಈ ರೀತಿಯಾದ ಕಾರ್ಯಕ್ರಮ ರೂಪಿಸಲಾಗಿದೆ. ಅದರಲ್ಲಿ 6,058 ಮಕ್ಕಳು ಭಾಗವಹಿಸಲಿದ್ದಾರೆ’ ಎಂದರು.

ಶಿಕ್ಷಣ ಸಂಯೋಜಕರಾದ ಪದ್ಮಜಾ, ಶಶಿಕಲಾ, ಜಾಕೀರ್, ಏಕನಾಥ್, ವಾಸವಿ ಆಂಗ್ಲ ಪೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಎಫ್.ಶಶಿಕಲಾ, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಶ್ ರಾಜು, ಕಾರ್ಯದರ್ಶಿ ರಾಮಲಿಂಗಾ ಶ್ರೇಷ್ಠಿ, ಪರೀಕ್ಷಾ ಮುಖ್ಯ ಅಧೀಕ್ಷಕ ತಿಮ್ಮಯ್ಯ ಇದ್ದರು.

ಅಶೋಕ ಸ್ವಾಗತಿಸಿದರು. ಶಿಲ್ಪಾ ನಿರೂಪಿಸಿದರು. ಮಹೇಶ್ ವಂದಿಸಿದರು. ಇದೇ ಸಂದರ್ಭದಲ್ಲಿ ಪಾರ್ಶ್ವನಾಥ, ವಾಸವಿ, ಮದಕರಿ ನಾಯಕ ಆಂಗ್ಲ ಪ್ರೌಢಶಾಲೆ ಮತ್ತು ವಿಶ್ವಭಾರತಿ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪರೀಕ್ಷೆ ಹಬ್ಬ’

ಪರೀಕ್ಷೆಯನ್ನು ಭಯವಾಗಿ ಸ್ವೀಕರಿಸದೇ, ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕಿದೆ. ಅದರ ಜತೆಯಲ್ಲಿ ಪ್ರಶ್ನೆಪತ್ರಿಕೆಯಲ್ಲಿ ಕೊಟ್ಟಿರುವ ಪ್ರಶ್ನೆಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಳ್ಳಬೇಕು. ಅವನ್ನು ಅರ್ಥ ಮಾಡಿಕೊಂಡು ಸಮರ್ಪಕವಾದ ಉತ್ತರ ಬರೆಯಿರಿ. ವಿನಾಕಾರಣ ಗೊಂದಲಕ್ಕೆ ಒಳಗಾಗಬೇಡಿ ಎಂದು ತಿಪ್ಪೇಸ್ವಾಮಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT