ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಕಾಳಿದಾಸನ ಪ್ರೇಮಮೀಮಾಂಸೆ

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹೆಣ್ಣು–ಗಂಡುಗಳ ಪರಸ್ಪರ ಪ್ರೇಮ ಇಂದು ನೆನ್ನೆಯದಲ್ಲ. ಸೃಷ್ಟಿಯ ಆರಂಭದಿಂದಲೂ ಈ ಸೆಳೆತ ಇದ್ದೇ ಇದೆ. ಪುರುಷ–ಪ್ರಕೃತಿಗಳ ಒಡನಾಟವೇ ಸೃಷ್ಟಿ ಎಂಬ ಎಣಿಕೆ ನಮ್ಮಲ್ಲಿದೆ. ಇದನ್ನೇ ಶಿವ–ಶಕ್ತಿಗಳ ಸಾಮರಸ್ಯವನ್ನಾಗಿಯೂ ಕಾಣಿಸಲಾಗಿದೆ. ಈ ಎಲ್ಲ ಕಲ್ಪನೆಗಳ ಹಿನ್ನೆಲೆಯಲ್ಲಿ ಸ್ತ್ರೀ–ಪುರುಷರ ಸಾಂಗತ್ಯವೇ ಇದೆಯೆನ್ನಿ!

ಗಂಡು–ಹೆಣ್ಣಿನ ದಾಂಪತ್ಯದ ರೂಪಕಗಳು ವೇದದಲ್ಲಿಯೇ ಸಮೃದ್ಧಿಯಾಗಿಬಂದಿವೆ. ಹೆಣ್ಣು–ಗಂಡಿನ ಪ್ರೇಮದಲ್ಲಿರುವ ಸಮರಸವೇ ಮಾತು–ಅರ್ಥಗಳ ನಂಟಿನಲ್ಲಿರುವುದು ಎನ್ನುತ್ತದೆ ವೇದ. ಸೂರ್ಯೋದಯವನ್ನೂ ಸತಿ–ಪತಿಯರ ಪ್ರೇಮದಾಟವನ್ನಾಗಿಯೇ ವೇದ ಹೇಳಿದೆ.

ರಾಮಾಯಣ–ಮಹಾಭಾರತಗಳ ಉದ್ದಕ್ಕೂ ಪ್ರೀತಿ–ಪ್ರೇಮಗಳ ಮೆರವಣಿಗೆಯನ್ನೇ ನೋಡುತ್ತೇವೆ. ಪ್ರೇಮೋತ್ಸವದಲ್ಲಿದ್ದ ಗಂಡು–ಹೆಣ್ಣುಹಕ್ಕಿಗಳಿಗೆ ಒದಗಿದ ವಿರಹವೇ ವಾಲ್ಮೀಕಿಗೆ ರಾಮಾಯಣರಚನೆಗೆ ಸ್ಫೂರ್ತಿಯಾಯಿತು. ರಾಮನಂಥ ರಾಮನೂ ಕೃಶನಾಗಿ ವಿಲಪಿಸಿದ್ದು ಕೂಡ ಅವನ ಪ್ರೀತಿಯ ಮಡದಿ ಕಣ್ಮರೆಯಾದಾಗಲೇ ಹೌದು.

ಪ್ರೀತಿ ಎಂಥ ಬಲಶಾಲಿಯನ್ನೂ ಬಗ್ಗಿಸುತ್ತದೆ ಎನ್ನುವುದಕ್ಕೆ ಮಹಾಭಾರತದ ಭೀಮ ಒಳ್ಳೆಯ ಉದಾಹರಣೆ; ಪ್ರೀತಿಗೂ ಕಾಮಕ್ಕೂ ಇರುವ ವ್ಯತ್ಯಾಸಕ್ಕೆ ರಾಮಾಯಣದ ರಾವಣನಂತೆ ಮಹಾಭಾರತದ ಕೀಚಕನ ಸಾವುಗಳು ನಿದರ್ಶನಗಳಾಗಿವೆ. ಕೃಷ್ಣ ಮತ್ತು ಗೋಪಿಕೆಯರ ಸರಸದಲ್ಲಿ ಭಾಗವತವು ಪ್ರೇಮದ ಆಧ್ಯಾತ್ಮಿಕ ಆಯಾಮ ಕಟ್ಟಿಕೊಟ್ಟಿದೆ. ಪ್ರೀತಿ–ಪ್ರೇಮಗಳ ಕಾಮನಬಿಲ್ಲು ಮೂಡದ ಯಾವ ಕಲಾಪ್ರಕಾರವನ್ನಾಗಲೀ ಜನಾಂಗವನ್ನಾಗಲೀ ಸಂಸ್ಕೃತಿಯನ್ನಾಗಲೀ ಕಾಣಲು ಸಾಧ್ಯವಿಲ್ಲವೆನ್ನಿ!

ಸ್ತ್ರೀ–ಪುರುಷಪ್ರೇಮದ ಹಲವು ಸೊಗಸುಗಳನ್ನೂ ಸೌರಭಗಳನ್ನೂ ಅಪೂರ್ವವಾಗಿ ಅಕ್ಷರಗಳಲ್ಲಿ ಕಂಡರಿಸಿದವನು ನಮ್ಮ ರಾಷ್ಟ್ರಕವಿ ಕಾಳಿದಾಸ. ಅವನ ಖಂಡಕಾವ್ಯಗಳಾಗಲೀ ನಾಟಕಗಳಾಗಲೀ ಮಹಾಕಾವ್ಯಗಳಾಗಲೀ ಪ್ರೀತಿ–ಪ್ರೇಮಗಳಿಗೆ ಬರೆದ ರಸಭಾಷ್ಯವೇ ಸರಿ. ಋತುಗಳ ವಿಲಾಸಕ್ಕೂ ಪ್ರೇಮಿಗಳ ಭಾವಭಂಗಿಗಳೂ ಇರುವ ಸಂಬಂಧವನ್ನು ಸೂಕ್ಷ್ಮವಾಗಿ ನಿರೂಪಿಸಿದ ಕೃತಿ ‘ಋತುಸಂಹಾರ’. ವಿರಹದಲ್ಲಿರುವವನು ಮೋಡವನ್ನೇ ದೂತನನ್ನಾಗಿಸಿಕೊಂಡು ತನ್ನ ಪ್ರಿಯತಮೆಗೆ ಸಂದೇಶವನ್ನು ಕಳುಹಿಸುವ ಅಪೂರ್ವ ಕಲ್ಪನೆಯೇ ‘ಮೇಘದೂತ’ದ ಪ್ರಧಾನ ವಸ್ತು. ವಿಶ್ವದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲಿ ಮೇಘದೂತವೂ ಒಂದು ಎನ್ನುವುದರಲ್ಲಿ ಯಾವುದೇ ಸಂಶಯವಿರದು. ‘ಮಾಲವಿಕಾಗ್ನಿಮಿತ್ರ’, ‘ವಿಕ್ರಮೋರ್ವಶೀಯಂ’ ನಾಟಕಗಳಲ್ಲೂ, ‘ರಘುವಂಶ’ ಮತ್ತು ‘ಕುಮಾರಸಂಭವ’ ಮಹಾಕಾವ್ಯದಲ್ಲೂ ಪ್ರೀತಿಯ ವಿಶ್ವರೂಪದರ್ಶನವಾಗುತ್ತದೆ.

ಆದರೆ ‘ಪ್ರೀತಿ’ ಎನ್ನುವುದು ಗಂಡು–ಹೆಣ್ಣುಗಳ ದೈಹಿಕ ಆಕರ್ಷಣೆಯಷ್ಟೆ ಎಂಬಂಥ ಅಪ್ರಬುದ್ಧ ತಿಳಿವಳಿಕೆಗೆ ಪಕ್ಕಾದವ ನಲ್ಲ ಕಾಳಿದಾಸ. ದೇಹದ ಸೆಳೆತದಲ್ಲಿ ಹುಟ್ಟುವ ಪ್ರೀತಿಯ ಏಳು–ಬೀಳುಗಳನ್ನು ಅನನ್ಯವಾಗಿ ಚಿತ್ರಿಸಿದ್ದಾನೆ ‘ಅಭಿಜ್ಞಾನ ಶಾಕುಂತಲ’ದಲ್ಲಿ. ದುಷ್ಯಂತ–ಶಕುಂತಲೆಯರ ಪ್ರೇಮವು ಬಾಹ್ಯಸೌಂದರ್ಯದಿಂದ ಅಂತರಂಗದ ಸೌಂದರ್ಯದ ಕಡೆಗೆ ಪಯಣಿಸುವ ಪರಿಯನ್ನು ಅವನು ಕಂಡರಿಸಿರುವ ರೀತಿ ಮನೋಜ್ಞವಾಗಿದೆ. ಮೇಲ್ನೋಟಕ್ಕೆ ಈ ನಾಟಕ ಶೃಂಗಾರಪ್ರಧಾನ ಎಂದೆನಿಸುವುದು ಸಹಜ. ಆದರೆ ಅವನು ಶೃಂಗಾರರಸದ ನೆರವಿನಿಂದ ಜೀವನ ಮೀಮಾಂಸೆಯನ್ನೇ ಮಾಡಿದ್ದಾನೆ. ಯಾವುದೇ ಕಟ್ಟುಪಾಡುಗಳಿಲ್ಲದೆ ಸ್ವಚ್ಛಂದವಾಗಿ ಕುಣಿದಾಡುವ ಪ್ರೇಮಕ್ಕಿಂತಲೂ ಹೊಣೆಗಾರಿಕೆಯಿಂದ ರೂಪಿಸಿಕೊಳ್ಳುವ ದಾಂಪತ್ಯಪ್ರೇಮದ ಹೆಚ್ಚುಗಾರಿಕೆಯನ್ನು ಅವನು ಪ್ರತಿಪಾದಿಸಿದ್ದಾನೆ.

‘ಕುಮಾರಸಂಭವ’ದಲ್ಲೂ ಅವನು ಇಂಥದೇ ಧ್ವನಿಯನ್ನು ಹೊರಡಿಸಿದ್ದಾನೆ. ಶಕುಂತಲೆಯ ಸೌಂದರ್ಯಾತಿಶಯ ವನ್ನು ಅದ್ಭುತವಾಗಿ ವರ್ಣಿಸುತ್ತಲೇ ದೇಹಸೌಂದರ್ಯದ ಮಿತಿಯನ್ನೂ ಅವನು ಸೂಚಿಸುತ್ತಾನೆ. ಈ ಅಂಶ ಕುಮಾರಸಂಭವದಲ್ಲಿ ಇನ್ನೂ ಸ್ಪಷ್ಟವಾಗಿ ಕಾಣುತ್ತದೆ. ಕೌಟುಂಬಿಕ ವ್ಯವಸ್ಥೆಯ ಹೆಚ್ಚುಗಾರಿಕೆಯನ್ನೇ ಅವನು ಎಲ್ಲ ಕೃತಿಗಳಲ್ಲೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರತಿಪಾದಿಸಿದ್ದಾನೆ ಎನ್ನುವುದು ಗಮನಾರ್ಹ.

ಶಕುಂತಲೆಯನ್ನು ಗಂಡನ ಮನೆಗೆ ಕಳುಹಿಸುವಾಗ ಕಣ್ವರ ಮನಸ್ಸಿನ ಉದ್ವೇಗವನ್ನು ನಿರೂಪಿಸಿರುವ ಅವನ ಮಾತುಗಳ ತುಂಬಾ ಆದರವನ್ನು ಸಂಪಾದಿಸಿಕೊಂಡಿವೆ. ಹೆಣ್ಣನ್ನು ಹೆತ್ತವರ ತೊಳಲಾಟದ ಪ್ರತಿಧ್ವನಿಯಂತಿರುವ ಈ ಮಾತುಗಳು ಗಂಡು–ಹೆಣ್ಣಿನ ಬಾಂಧವ್ಯಕ್ಕೆ ಇರಬೇಕಾದ ಸೂಕ್ಷ್ಮಸಂವೇದನೆಯ ಆವಶ್ಯಕತೆಯನ್ನು ನಯವಾಗಿಯೂ ಭಾವುಕವಾಗಿಯೂ ಎಚ್ಚರಿಸುವಂತಿವೆ. ಅಂತೆಯೇ ಮಕ್ಕಳಾಟದಲ್ಲಿ ನಲಿಯುವ ಹೆತ್ತವರ ಭಾಗ್ಯವನ್ನು ವರ್ಣಿಸುವ ದುಷ್ಯಂತನ ಮಾತುಗಳು ದಾಂಪತ್ಯದ ಸಾರ್ಥಕತೆಯನ್ನು ಸಾರಿಹೇಳುವಂಥವು.

ಒಟ್ಟಿನಲ್ಲಿ ಹೇಳುವುದಾದರೆ ಕಾಳಿದಾಸನು ಭಾರತೀಯ ಪ್ರೇಮಮೀಮಾಂಸೆಯ ರಸಋಷಿಯೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT