ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶದ ನುಸುಳುಕೋರರಿಗೆ ಜೈಲು ಶಿಕ್ಷೆ

ಮನೆಗೆ ನುಗ್ಗಿ ದರೋಡೆ ಮಾಡಿದ್ದ ಅಪರಾಧಿಗಳು
Last Updated 28 ಜೂನ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ದೇಶದೊಳಗೆ ಅಕ್ರಮವಾಗಿ ನುಸುಳಿ ಬೆಂಗಳೂರಿನ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಿದ್ದ ಬಾಂಗ್ಲಾದೇಶದ ಪ್ರಜೆಗಳಿಬ್ಬರಿಗೆ 4 ವರ್ಷ 11 ತಿಂಗಳು ಜೈಲು ಶಿಕ್ಷೆ ವಿಧಿಸಿ ನಗರದ 66ನೇ ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಮೊಹಮ್ಮದ್ ಸಾಗರ್‌ ಹಾಗೂ ಖೋಕನ್ ಖಾನ್ ಶಿಕ್ಷೆಗೆ ಗುರಿಯಾದವರು. ಅವರ ವಿರುದ್ಧ ದರೋಡೆ (ಐಪಿಸಿ 397) ಹಾಗೂ ವಿದೇಶಿ ಕಾಯ್ದೆ ಅಡಿ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಬ್ಲಿಕ್‌ ಪ್ರಾಸಿಕ್ಯೂಟರ್ ಬಿ.ಎಸ್.ಪಾಟೀಲ ವಾದಿಸಿದ್ದರು.

‌ಅಪರಾಧಿಗಳು ಗಡಿ ಮೂಲಕ 2012ರಲ್ಲಿ ದೇಶದೊಳಗೆ ನುಸುಳಿದ್ದರು. ನಂತರ, ದೇಶದಾದ್ಯಂತ ಸುತ್ತಾಡಿ ದರೋಡೆ ಕೃತ್ಯ ಎಸಗಲಾರಂಭಿಸಿದ್ದರು. ಡಿಸೆಂಬರ್‌ 8ರಂದು ಬೆಂಗಳೂರಿಗೆ ಬಂದಿದ್ದ ಅಪರಾಧಿಗಳು, ಸುಬ್ರಮಣ್ಯಪುರದ ಪೈಪ್‌ಲೈನ್ ರಸ್ತೆಯಲ್ಲಿರುವ ಗಿರೀಶ್‌ ಎಂಬುವರ ಮನೆಯಲ್ಲಿ ದರೋಡೆ ಮಾಡಿದ್ದರು ಎಂದು ಪಾಟೀಲ ಹೇಳಿದರು.

ಮನೆಯ ಕಿಟಕಿಗಳ ಕಂಬಿಗಳನ್ನು ಕತ್ತರಿಸಿ ಒಳನುಗ್ಗಿದ್ದ ಅಪರಾಧಿಗಳು, ಗಿರೀಶ್‌ರ ತಲೆಗೆ ರಾಡಿನಿಂದ ಹೊಡೆದಿದ್ದರು. ನಂತರ, ಅವರ ಪತ್ನಿಯ ₹20 ಸಾವಿರ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದರು ಎಂದರು.

ಅದಾದ ನಂತರ, ದೆಹಲಿಯ ನೆಬ್‌ಸರಹಾ ಠಾಣೆ ವ್ಯಾಪ್ತಿಯಲ್ಲೂ ದರೋಡೆ ಎಸಗಿದ್ದರು. ಅವರಿಬ್ಬರನ್ನು ಬಂಧಿಸಿದ್ದ ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಬೆಂಗಳೂರಿನಲ್ಲೂ ಕೃತ್ಯ ಎಸಗಿದ್ದನ್ನು ಬಾಯ್ಬಿಟ್ಟಿದ್ದರು ಎಂದರು.

ದೆಹಲಿಗೆ ಹೋಗಿದ್ದ ಸುಬ್ರಮಣ್ಯಪುರ ಠಾಣೆಯ ಪೊಲೀಸರು, 2013ರ ಜುಲೈ 10ರಂದು ಅವರಿಬ್ಬರನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದರು. ನಂತರ, ಕದ್ದ ಚಿನ್ನಾಭರಣ ಜಪ್ತಿ ಮಾಡಿದ್ದರು. ಕೃತ್ಯದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯನ್, ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಪಾಟೀಲ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT