ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧ ಜೋಳದ ಬೆಳೆ ನಿರೀಕ್ಷೆ

Last Updated 8 ಫೆಬ್ರುವರಿ 2018, 9:16 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನಾದ್ಯಂತ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಉತ್ತಮ ಇಳುವರಿ ಬಂದಿದ್ದು, ಕಡಿಮೆ ಬೆಲೆಯಿಂದ ರೈತರ ಸಂತಸ ಕಡಿಮೆಯಾಗಿದೆ. ಆದರೆ ಹಿಂಗಾರು ಬೆಳೆ ಜೋಳ ತಾಲ್ಲೂಕಿನಾದ್ಯಂತ ಸಮೃದ್ಧವಾಗಿದ್ದು, ರೈತರಿಗೆ ಆಹಾರದ ಧಾನ್ಯದ ಜೊತೆಗೆ ಪ್ರಾಣಿಗಳಿಗೆ ಮೇವಾಗಲಿದೆ.

‘ಕೃಷಿ ಇಲಾಖೆಯ ಪ್ರಕಾರ ತಾಲ್ಲೂಕಿನ ಕೋಡ್ಲಾ-8500 ಹೆಕ್ಟೇರ್, ಮುಧೋಳ-7500 ಹೆಕ್ಟೇರ್, ಆಡಕಿ- 6500 ಹೆಕ್ಟೇರ್ ಮತ್ತು ಸೇಡಂ- 6500 ಹೆಕ್ಟೇರ್ ಸೇರಿದಂತೆ ಒಟ್ಟು ಸುಮಾರು 29 ಸಾವಿರ ಹೆಕ್ಟೇರ್ ಜೋಳ ಬಿತ್ತನೆ ಮಾಡಲಾಗಿದೆ. ಅತಿ ಹೆಚ್ಚು ಕೋಡ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಜೋಳ ಬಿತ್ತನೆಯಾದರೆ, ಸೇಡಂ ರೈತ ಸಂಪರ್ಕ ಕೇಂದ್ರದಲ್ಲಿ ಕಡಿಮೆ ಜೋಳ ಬಿತ್ತನೆಯಾಗಿದೆ.

ಕೃಷಿ ಇಲಾಖೆಯಿಂದ ಸುಮಾರು 21 ಕ್ವಿಂಟಲ್ ಜೋಳದ ಬೀಜ ವಿತರಣೆ ಮಾಡಲಾಗಿದೆ. ಉಳಿದಂತೆ ರೈತರು ಸಂಗ್ರಹಿಸಿದ ಜೋಳವನ್ನು ಬಿತ್ತನೆ ಮಾಡಿದ್ದಾರೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವೈ. ಹಂಪಣ್ಣ ತಿಳಿಸಿದರು.

ಜೋಳ ಈಗಾಗಲೇ ಕೆಲವು ಕಡೆಗಳಲ್ಲಿ ತೆನೆ ಕಟ್ಟಿದ್ದು ಉತ್ತಮ ಇಳುವರಿ ಬರುವ ಸಾಧ್ಯತೆ ಇದೆ. ಇನ್ನೂ ಕೆಲವು ಕಡೆಗಳಲ್ಲಿ ತೆನೆ ಕಟ್ಟುವ ಹಂತದಲ್ಲಿದೆ. ‘ತಾಲ್ಲೂಕಿನ ಸಂಗಾವಿ(ಎಂ) ತೊಟ್ನಳ್ಳಿ, ಮೀನಹಾಬಾಳ, ಕುಕ್ಕುಂದಾ, ಯಡಗಾ ಗ್ರಾಮದ ಕಡೆಗಳಲ್ಲಿ ಬೆಣ್ಣೆತೊರಾ ಎಡದಂತೆ ಕಾಲುವೆ ನೀರು ಹರಿದು ಬಂದಿರುವುದರಿಂದ ರೈತರು ಕಡಲೆ ಹಾಗೂ ಜೋಳದ ಬೆಳೆಗೆ ನೀರುಣಿಸಿದ್ದಾರೆ. ಈ ಭಾಗದಲ್ಲಿ ಕಡೆಗಳಲ್ಲಿ ಜೋಳ ಅಧಿಕ ಇಳುವರಿ ಬರುವ ಸಾಧ್ಯತೆ ಇದೆ’ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

‘ರಾತ್ರಿ ಸಮಯ ಹಂದಿಗಳು ಹಿಂಡುಹಿಂಡಾಗಿ ಬಂದು ಜೋಳವನ್ನು ಉರುಳಿಸಿ ತೆನೆ ತಿನ್ನುತ್ತಿರುವುದರಿಂದ ಹೊಲದ ಸುತ್ತಲೂ ಹಳೆ ಸೀರೆ ಕಟ್ಟಲಾಗಿದೆ. ಅಲ್ಲದೆ ಹಗಲಲ್ಲಿ ಪಕ್ಷಿಗಳ ತೆನೆ ತಿನ್ನುವುದನ್ನು ತಪ್ಪಿಸಲು ಮಂಚಿಗೆ ಮೇಲೆ ಕೂತು ತಮಟೆ ಸಪ್ಪಳ ಮಾಡಲಾಗುತ್ತಿದೆ. ರಾತ್ರಿ ಹೊಲದಲ್ಲಿ ಪಟಾಕಿ ಸಿಡಿಸಲಾಗುತ್ತಿದೆ’ ಎಂದು ರೈತ ಭೀಮರಾಯ ತಿಳಿಸುತ್ತಾರೆ.

* * 

ರೈತರು ಜೋಳದ ಬೆಳೆ ರಕ್ಷಣೆ ಮಾಡುವಲ್ಲಿ ಹಗಲಿರುಳು ಶ್ರಮಪಡುತ್ತಿದ್ದಾರೆ. ಹೆಚ್ಚು ತೇವಾಂಶ ಇರುವ ಕಡೆಗಳಲ್ಲಿ ಜೋಳದ ಬೆಳೆ ಅಧಿಕ ಇಳುವರಿ ಬರುವ ಸಾಧ್ಯತೆ ಇದೆ.
ವೈ. ಹಂಪಣ್ಣ ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT