ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಗೆದ್ದರೆ ರಾಜಕೀಯ ಚಿತ್ರಣ ಬದಲು

Last Updated 8 ಫೆಬ್ರುವರಿ 2018, 9:30 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಕಾರ್ಯಕರ್ತರದು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಜನರ ವಿಶ್ವಾಸ ಗಳಿಸಿದೆ ಎಂದರು.

ರಾಜ್ಯ ವಿಧಾನಸಭೆ ಚುನಾವಣೆಯು ಪಕ್ಷಕ್ಕೆ ನಿರ್ಣಾಯಕ. ಈ ಚುನಾವಣೆಯಲ್ಲಿ ಪಕ್ಷ ಗೆದ್ದರೆ ದೇಶದ ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಹಾಗೂ ಮುಖಂಡರು ಶಕ್ತಿಮೀರಿ ಪ್ರಯತ್ನಿಸಬೇಕು. ಹೊಸ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕು. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು
ತಿಳಿಸಿದರು.

ರಾಜ್ಯ ಹಾಗೂ ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಇದಕ್ಕೆ ತಕ್ಕಂತೆ ಜನ ಬದಲಾವಣೆ ಬಯಸುತ್ತಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪಣ ತೊಡಬೇಕು: ‘ಕ್ಷೇತ್ರದಲ್ಲಿ 10 ವರ್ಷದಿಂದ ಆಗಿರುವ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಿರುವ ಜನ ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿ ಪಕ್ಷದಿಂದ ನಮ್ಮ ಜಿಲ್ಲೆಯವರು ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವ ಪಣ ತೊಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್‌ಕುಮಾರ್ ಹೇಳಿದರು.

ರಾಜ್ಯ ರಾಜಕಾರಣದಲ್ಲಿ ಜಿಲ್ಲೆಗೆ ಭವ್ಯ ಇತಿಹಾಸವಿದೆ. ಕೋಲಾರ ತಾಲ್ಲೂಕಿನ ಜನ ಪಕ್ಷ, ಜಾತಿ, ವರ್ಗದ ಮೇಲೆ ನಿಂತ ಮತದಾರರಲ್ಲ. ಎಲ್ಲಾ ಜಾತಿ, ವರ್ಗ, ಸಮುದಾಯಗಳ ಮತಗಳಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಗೌರವದಿಂದ ನಡೆದುಕೊಳ್ಳಬೇಕು. ಆದರೆ, ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ವರ್ತೂರ್ ಪ್ರಕಾಶ್ ಅಹಿಂದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದು ಬೆಂಬಲಿಗರನ್ನೇ ವಂಚಿಸಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಹಾಗೂ ಪರಿಶಿಷ್ಟ ಸಮುದಾಯಕ್ಕೆ ಸಾಕಷ್ಟು ಯೋಜನೆ ನೀಡಿರುವುದರಿಂದ ಮತದಾರರಲ್ಲಿ ಕಾಂಗ್ರೆಸ್‌ ಬಗ್ಗೆ ವಿಶ್ವಾಸ ಮೂಡಿದೆ. ಸರ್ಕಾರವು ಅವಿಭಜಿತ ಕೋಲಾರ ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಚುನಾವಣೆಯಲ್ಲಿ ಪಕ್ಷವು ಅವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೆಲುವಿಗೆ ಶ್ರಮಿಸಬೇಕು: ‘ಪಕ್ಷದ ಗತ ವೈಭವ ಮರುಕಳಿಸಿದೆ. ಕ್ಷೇತ್ರದಲ್ಲಿ ಈ ಬಾರಿ ಪಕ್ಷದಿಂದ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಾಕಷ್ಟು ಮಂದಿ ಪಕ್ಷದಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ. ಹೈಕಮಾಂಡ್‌ ಯಾವುದೇ ಅಭ್ಯರ್ಥಿಗೆ ಟಿಕೆಟ್‌ ನೀಡಿದರೂ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸಬೇಕು’ ಎಂದು ಮಾಜಿ ಸಚಿವ ನಿಸಾರ್‌ ಅಹಮ್ಮದ್‌ ಕಿವಿಮಾತು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟಪತೆಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ವಿನೋದ್‌ಕುಮಾರ್, ನಗರಸಭೆ ಸದಸ್ಯರಾದ ರೌತ್ ಶಂಕರಪ್ಪ, ಸಲ್ಲಾವುದ್ದೀನ್ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT