ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತಿ ಅರ್ಥಪೂರ್ಣವಾಗಿ ಆಚರಿಸಿ

Last Updated 8 ಫೆಬ್ರುವರಿ 2018, 9:32 IST
ಅಕ್ಷರ ಗಾತ್ರ

ಕೋಲಾರ: ‘ಸೇವಾಲಾಲ್ ಜಯಂತಿ, ಶಿವಾಜಿ ಜಯಂತಿ ಹಾಗೂ ಸರ್ವಜ್ಞ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೇವಾಲಾಲ್, ಶಿವಾಜಿ ಮತ್ತು ಸರ್ವಜ್ಞ ಜಯಂತಿ ಆಚರಣೆ ಸಂಬಂಧ ನಗರದಲ್ಲಿ ಬುಧವಾರ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರದ ವತಿಯಿಂದ 35ಕ್ಕೂ ಹೆಚ್ಚು ಜಯಂತಿ ಆಚರಿಸಲಾಗುತ್ತದೆ. ಈ ಆಚರಣೆಯ ಮಹತ್ವ ಅರಿಯಬೇಕು ಎಂದರು.

ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಫೆ.15ರಂದು ಸೇವಾಲಾಲ್ ಜಯಂತಿ ಆಚರಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಸರ್ಕಾರದಿಂದ ಸುಮಾರು ₹ 75 ಸಾವಿರ ಅನುದಾನ ಸಿಗಲಿದ್ದು, ಈ ಹಣವನ್ನು ಸಂಪನ್ಮೂಲ ವ್ಯಕ್ತಿಗಳು, ಕಲಾವಿದರ ಗೌರವಧನ ಮತ್ತು ಪ್ರತಿಭಾ ಪುರಸ್ಕಾರಕ್ಕೆ ವಿನಿಯೋಗಿಸಲಾಗುವುದು. ಜತೆಗೆ ಕಾರ್ಯಕ್ರಮದಕ್ಕೆ ಬಂದವರಿಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಕೆಜಿಎಫ್, ಮಾಲೂರು, ಶ್ರೀನಿವಾಸಪುರ ಮತ್ತು ಮುಳಬಾಗಿಲು ಭಾಗದಲ್ಲಿ ಲಂಬಾಣಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವಿವರಿಸಿದರು. ಬಂಜಾರ ಸಮುದಾಯದ ಮುಖಂಡರಾದ ಪರಮೇಶಪ್ಪ, ಶಂಕರ್‌ನಾಯಕ್‌, ಹಾಲನಾಯಕ್, ವೆಂಕಟರಮಣ ನಾಯಕ್, ಉಮೇಶ್‌ ನಾಯಕ್‌ ಭಾಗವಹಿಸಿದ್ದರು.

ಆದೇಶ ಹೊರಡಿಸಬೇಕು: ‘ಫೆ.19ರಂದು ಶಿವಾಜಿ ಜಯಂತಿ ನಡೆಯುತ್ತದೆ. ಆ ದಿನ ಮೆರವಣಿಗೆಗೆ ಅವಕಾಶ ನೀಡಬೇಕು. ಕಲಾ ತಂಡಗಳ ವ್ಯವಸ್ಥೆ ಮಾಡಬೇಕು. ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಶಿವಾಜಿಯ ಭಾವಚಿತ್ರವಿರಿಸಿ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸುವಂತೆ ಆದೇಶ ಹೊರಡಿಸಬೇಕು’ ಎಂದು ಕ್ಷತ್ರಿಯ ಮರಾಠ ಸಮುದಾಯದ ಮುಖಂಡರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ವಿದ್ಯಾಕುಮಾರಿ, ರಂಗಮಂದಿರದಲ್ಲಿ ಸರಳವಾಗಿ ಜಯಂತಿ ಆಚರಿಸಿ, ಸಂಜೆ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗುವುದು. ಮೆರವಣಿಗೆ ಮಾರ್ಗದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪರೀಕ್ಷಾ ಸಮಯವಾದ ಕಾರಣ ಶಾಲೆ, ಕಾಲೇಜುಗಳಲ್ಲಿ ಜಯಂತಿ ಆಚರಿಸುವುದು ಕಷ್ಟ ಎಂದರು.

ಸರ್ಕಾರದ ವತಿಯಿಂದ ಆಚರಿಸುವ ಜಯಂತಿಯಲ್ಲಿ ಅಧಿಕಾರಿಗಳು ಭಾಗವಹಿಸುವುದರಿಂದ ಕಚೇರಿಗಳಲ್ಲಿ ಪ್ರತ್ಯೇಕ ಆಚರಣೆ ಸಾಧ್ಯವಾಗದಿರಬಹುದು. ಆದರೂ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ತಾಲ್ಲೂಕು ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ ಎಂದು ವಿವರಿಸಿದರು.

ವಿಳಂಬ ಮಾಡಬಾರದು: ಸರ್ವಜ್ಞ ಜಯಂತಿ ದಿನ ಮೆರವಣಿಗೆ ಬೇಗನೆ ಆರಂಭವಾಗಬೇಕು. ಮಧ್ಯಾಹ್ನ 12ರ ವೇಳೆಗೆ ಮೆರವಣಿಗೆ ರಂಗಮಂದಿರ ಪ್ರವೇಶಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ವಿದ್ಯಾಕುಮಾರಿ ವಿದ್ಯಾಕುಮಾರಿ ಸೂಚಿಸಿದರು.

ಜಯಂತಿಯಲ್ಲಿ ಅತಿಥಿಗಳಿಗೆ ಸನ್ಮಾನ ಮಾಡಬೇಕೆಂದು ಕುಂಬಾರ ಸಮುದಾಯದ ಮುಖಂಡರು ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ಹಾರ, ತುರಾಯಿ ಹಾಕಿ ಸನ್ಮಾನ ಮಾಡುವುದರಿಂದ ಪ್ರಯೋಜನವಿಲ್ಲ. ಗಣ್ಯರಿಗೆ ಸರ್ವಜ್ಞರ ಕುರಿತ ಪುಸ್ತಕಗಳನ್ನು ನೀಡಿ. ಜತೆಗೆ ವಚನ ಗಾಯನ ಕಾರ್ಯಕ್ರಮ ಏರ್ಪಡಿಸಿ ಎಂದು ಸಲಹೆ ನೀಡಿದರು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಡಿವೈಎಸ್ಪಿ ಅಬ್ದುಲ್ ಸತ್ತಾರ್ ಹಾಜರಿದ್ದರು.

ಅನುಮತಿಗೆ ಮನವಿ

ಮಾಲೂರು ತಾಲ್ಲೂಕಿನ ಚನ್ನಕಲ್ಲು ಗ್ರಾಮದ ಬಳಿ ಸಮುದಾಯ ಭವನ ಮತ್ತು ವಿದ್ಯಾ ಸಂಸ್ಥೆ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ಕಾರದಿಂದ ಸಮುದಾಯಕ್ಕೆ ಯಾವುದೇ ಸವಲತ್ತು ಸಿಗುತ್ತಿಲ್ಲ. ಪರಿಷತ್ ವತಿಯಿಂದ ಸಮುದಾಯ ಭವನ ಮತ್ತು ವಿದ್ಯಾ ಸಂಸ್ಥೆ ಸ್ಥಾಪಿಸಲು ಮುಂದಾಗಿದ್ದು, ಪರಿಷತ್‌ನ ಕೋಲಾರ ತಾಲ್ಲೂಕು ಘಟಕಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT