ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

Last Updated 8 ಫೆಬ್ರುವರಿ 2018, 9:47 IST
ಅಕ್ಷರ ಗಾತ್ರ

ಹನೂರು: ಕಚೇರಿಗೆ ಸರಿಯಾಗಿ ಹಾಜರಾಗದೆ, ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ಪಿಡಿಒ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಜನಪ‌್ರತಿನಿಧಿಗಳು ಎರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಬುಧವಾರ ಅಂತ್ಯಗೊಂಡಿತು.

ಕೊಂಗರಹಳ್ಳಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಾಜಮಣಿ ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಇದನ್ನು ಪ್ರಶ್ನಿಸಲು ಹೋದರೆ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಭಾಗ್ಯಾ ಮತ್ತು ಸದಸ್ಯರು ಮಂಗಳವಾರ ಕಚೇರಿಗೆ ಬಂದ ಪಿಡಿಒ ಅವರನ್ನು ಹೊರಗೆ ನಿಲ್ಲಿಸಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರು.

ಪಿಡಿಒ ನಿರ್ಲಕ್ಷ್ಯದಿಂದಾಗಿ ಎರಡು ವರ್ಷದಿಂದ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವಲ್ಲಿಯೂ ಅವರು ವಿಫರಾಗಿದ್ದಾರೆ. ಅವರ ಬೇಜವಾಬ್ದಾರಿತನದಿಂದ ನರೇಗಾ ಕೆಲಸಗಳು ಸಹ ನನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.

ಗ್ರಾಮಪಂಚಾಯಿತಿಯಲ್ಲಿನ ಇ-ಸ್ವತ್ತು ವಿಚಾರದಲ್ಲೂ ನಿರ್ಲಕ್ಷ್ಯ ವಹಿಸಿದ್ದಾರೆ. ಕಚೇರಿಗೆ ಸರಿಯಾಗಿ ಬಾರದ ಕಾರಣ ಗ್ರಾಮಸ್ಥರು ತಮ್ಮ ದಿನನಿತ್ಯದ ಸಾರ್ವಜನಿಕ ಕೆಲಸಕಾರ್ಯಗಳಿಗಾಗಿ ಅಲೆಯುವಂತಾಗಿದೆ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಮೊದಲನೆ ದಿನ ಪ್ರತಿಭಟನೆ ನಡೆಸಿದರೂ, ಯಾವ ಅಧಿಕಾರಿಯೂ ಸ್ಥಳಕ್ಕೆ ಬಾರದಿದ್ದರಿಂದ ಬುಧವಾರ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಕೆಗೆ ಮುಂದಾದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಮನವಿ ಸ್ವೀಕರಿಸಿದರು. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಯನ್ನು ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

* * 

ಕರ್ತವ್ಯ ಲೋಪ ಎಸಗಿರುವ ಪಿಡಿಓ ರಾಜಮಣಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಕೊಂಗರಹಳ್ಳಿ ಗ್ರಾಮಪಂಚಾಯಿತಿಗೆ ಸಿದ್ದಯ್ಯನಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲಕೃಷ್ಣ ಅವರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ
– ಪ್ರಕಾಶ್
ತಾ.ಪಂ. ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT