ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಗ್ಗಮ್ಮ ಜಾತ್ರೆಗೆ ಸಜ್ಜುಗೊಳ್ಳುತ್ತಿರುವ ದೇವಸ್ಥಾನ

Last Updated 8 ಫೆಬ್ರುವರಿ 2018, 10:07 IST
ಅಕ್ಷರ ಗಾತ್ರ

ದಾವಣಗೆರೆ: ನಗರ ದೇವತೆ ದುಗ್ಗಮ್ಮ ದೇವಿ ಜಾತ್ರೆಗೆ ದೇವಸ್ಥಾನ ಸಜ್ಜುಗೊಳ್ಳುತ್ತಿದೆ. ₹ 15 ಲಕ್ಷ ವೆಚ್ಚದಲ್ಲಿ ಮಂದಿರ ವಿನ್ಯಾಸದ ರಾಜಸ್ಥಾನ ಶೈಲಿ ಪೆಂಡಾಲ್ ನಿರ್ಮಾಣವಾಗುತ್ತಿದೆ.

ಪೆಂಡಾಲ್ ನಿರ್ಮಾಣ ಕಾರ್ಯ ಜನವರಿ 23ರಿಂದ ಆರಂಭವಾಗಿದ್ದು, ಫೆಬ್ರುವರಿ 20ರವರೆಗೆ ನಡೆಯಲಿದೆ. 18 ಜನ ಕಾರ್ಮಿಕರು ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಪೆಂಡಾಲ್‌ ನಿರ್ಮಾಣಕ್ಕೆ ನಾಲ್ಕು ಸಾವಿರ ಪೋಲ್‌ಗಳನ್ನು ಬಳಸಲಾಗುತ್ತಿದೆ.

30 ಸಾವಿರ ಅಡಿ ರೀಪರ್‌ಗಳನ್ನು ಉಪಯೋಗಿಸಲಾಗುತ್ತಿದೆ. ಹಗ್ಗದಲ್ಲಿ ಕಟ್ಟುವುದರಿಂದ ಭದ್ರವಾಗುವುದಿಲ್ಲ ಎಂಬ ಕಾರಣಕ್ಕೆ ಪೋಲು ಮತ್ತು ರೀಪರ್‌ಗಳನ್ನು ಸೇರಿಸಿ ಕಟ್ಟಲು 17 ಸಾವಿರ ಸೀರೆಗಳನ್ನು ಬಳಸಲಾಗುತ್ತಿದೆ ಎಂದು ಕೋಲ್ಕತ್ತದ ಗುತ್ತಿಗೆದಾರರ ಗೋಪಿಲಾಲ್‌  ಮಾಹಿತಿ ನೀಡಿದರು.

ದೇವಸ್ಥಾನದ ಸುತ್ತ ಈ ಪೆಂಡಾಲ್‌ ನಿರ್ಮಾಣವಾಗುತ್ತಿದ್ದು, ಒಳಭಾಗದಲ್ಲಿ ಥರ್ಮೊಕೋಲ್, ಮಿಂಚುವ ವಸ್ತುಗಳನ್ನು ಬಳಸಲಾಗುತ್ತಿದೆ. ಪೆಂಡಾಲ್‌ ಮುಖ್ಯದ್ವಾರದ ಮೇಲೆ ದುರ್ಗಾಂಬಿಕಾ ದೇವಿಯ ಮಾದರಿ ಮಣ್ಣಿನಲ್ಲಿ ರೂಪಿಸಿದ ಮೂರ್ತಿಯನ್ನು ಆಕರ್ಷಕವಾಗಿ ಸ್ಥಾಪಿಸಲಾಗುವುದು. ನಾಲ್ಕು ಕಡೆ ಯಲ್ಲಮ್ಮ ದೇವಿ ಚಿಕ್ಕಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಇದು ಮಂದಿರ ಮಾದರಿಯ ಪೆಂಡಾಲ್‌ ಎಂದು ಅವರು ತಿಳಿಸಿದರು.

ದೇವಸ್ಥಾನ ಒಳಾಂಗಣ, ಹೊರಾಂಗಣ, ಪ್ರಸಾದ ನಿಲಯ, ಗೋಪುರಕ್ಕೆ ಬಣ್ಣ ಹಾಗೂ ಸುಣ್ಣವನ್ನು ತಮಿಳುನಾಡಿನ ಕಾರ್ಮಿಕರು ಬಳಿಯುತ್ತಿದ್ದಾರೆ. ಭಕ್ತರು ಬಂದು ಹೋಗಲು ಸ್ಟೇರ್‌ ಕೇಸ್‌, ರ‍್ಯಾಂಪ್‌ಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ವಿದ್ಯುತ್‌ ಅಲಂಕಾರದ ವ್ಯವಸ್ಥೆ ಆಗಲಿದೆ ಎಂದು ದೇವಸ್ಥಾನದ ಉಸ್ತುವಾರಿ ಗೌಡ್ರ ಚನ್ನಬಸಪ್ಪ ಹೇಳಿದರು.

ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ: ಜಾತ್ರಾ ದಿನಗಳಲ್ಲಿ ಸುಗಮ ಸಂಚಾರಕ್ಕಾಗಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನು ದೇವಸ್ಥಾನದ ಟ್ರಸ್ಟ್‌ ಮಾಡಿದೆ. ಬೂದಾಳ್‌ ರಸ್ತೆಯಲ್ಲಿ ಸಿಬಾರದ ಬಳಿ ದೇವಸ್ಥಾನದ ಮೂರು ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಹೊಂಡದ ಸರ್ಕಲ್‌ ಬಳಿ ಶಾಲೆಯ ಎದುರಿಗೆ, ಹಗೆದಿಬ್ಬ ಸರ್ಕಲ್‌ ಸಮೀಪ ವಾಹನ ನಿಲುಗಡೆಗೆ ಅವಕಾಶ ಇದೆ ಎನ್ನುತ್ತಾರೆ ಅವರು. ಟ್ರಸ್ಟ್‌ಗೆ 17 ಧರ್ಮದರ್ಶಿಗಳನ್ನು ನೇಮಕ ಮಾಡಲಾಗಿದ್ದು, ಜಾತ್ರೆ ಮುಕ್ತಾಯವಾಗುತ್ತಿದ್ದಂತೆ ಕಾರ್ಯದರ್ಶಿ ನೇಮಕವಾಗಲಿದೆ ಎಂದರು.

ಡಿ.ಸಿ. ಭೇಟಿ: ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಅವರು ಕುಟುಂಬದೊಂದಿಗೆ ಗುರುವಾರ ದೇವಸ್ಥಾನಕ್ಕೆ ಆಗಮಿಸಿ, ಪೆಂಡಾಲ್‌ ನಿರ್ಮಾಣ ಕಾರ್ಯ ವೀಕ್ಷಿಸಿದರು. ಈ ಸಂದರ್ಭ, ಜಾತ್ರೆಯ ಸಿದ್ಧತೆಗಳನ್ನು ಯಾವುದೇ ಗೊಂದಲಕ್ಕೆ ಆಸ್ಪದ ಕೊಡದಂತೆ ಕೈಗೊಳ್ಳಬೇಕು. ಕೆಲಸಗಳನ್ನು ಇನ್ನಷ್ಟು ಚುರುಕಿನಿಂದ ಮುಗಿಸಬೇಕೆಂದು ಸೂಚಿಸಿದರು ಎಂದು ಗೌಡ್ರ ಚನ್ನಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT