ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಅಚ್ಚುಕಟ್ಟು: ಗರಿಗೆದರಿದ ಕೃಷಿ ಚಟುವಟಿಕೆ

Last Updated 8 ಫೆಬ್ರುವರಿ 2018, 10:11 IST
ಅಕ್ಷರ ಗಾತ್ರ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ಫೆಬ್ರುವರಿ ಮೊದಲ ವಾರದಲ್ಲಿ ಆರಂಭವಾಗಿದೆ.

ಭದ್ರಾ ನಾಲೆಗೆ ಲಕ್ಕವಳ್ಳಿ ಜಲಾಶಯದಿಂದ ನೀರು ಬಿಡುಗಡೆ ಮಾಡಿ ಒಂದು ತಿಂಗಳಾದ ನಂತರ ಭದ್ರಾ ಅಚ್ಚುಕಟ್ಟಿನ ಕೊನೆಭಾಗದೆಡೆಗೆ ನಾಲೆ ನೀರು ನಿಧಾನಗತಿಯಲ್ಲಿ ಹರಿದು ಬರುತ್ತಿರುವುದು ನಾಟಿ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ಕಾರಣ ಎನ್ನುತ್ತಾರೆ ಬೂದಿಹಾಳ್ ಗ್ರಾಮದ ಕೃಷಿಕ ಹಾಲೇಶಪ್ಪ.

ಈಗಾಗಲೇ ಮುಂಚಿತವಾಗಿ ಸಸಿಮಡಿ ತಯಾರಿಸಿಕೊಂಡಿದ್ದು, ಬಲಿಯುತ್ತಿವೆ. ನಂದೀಶ್ವರ ಕ್ಯಾಂಪ್, ಕಮಲಾಪುರ, ಹೊಳೆಸಿರಿಗೆರೆ, ಧೂಳೆಹೊಳೆ, ಭಾನುವಳ್ಳಿ ಭಾಗಕ್ಕೆ ನಾಲೆ ನೀರು ಇನ್ನೂ ತಲುಪಿಲ್ಲ. ನಾಟಿ ಕಾರ್ಯ ತಡವಾಗುತ್ತಿದೆ ಎಂದು ರೈತರಾದ ಹೊಳೆಸಿರಿಗೆರೆ ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.

ಈ ಬಾರಿ ದೇವರಬೆಳೆಕೆರೆ ಪಿಕಪ್ ಭರ್ತಿಯಾಗಿದ್ದು, ಭತ್ತದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೊಳವೆಬಾವಿ, ಕೃಷಿಹೊಂಡ, ತೆರೆದಬಾವಿಗಳಿಗೆ ಜೀವ ತುಂಬಿದೆ. ಅಣೆಕಟ್ಟೆ ವ್ಯಾಪ್ತಿಯ ಹಿನ್ನೀರ ಪ್ರದೇಶಗಳಾದ ಬೂದಿಹಾಳ್, ಗುಳದಹಳ್ಳಿ, ಮಲ್ಲನಾಯ್ಕನಹಳ್ಳಿ, ಸಂಕ್ಲೀಪುರ, ಭಾಗದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.

ಸಣ್ಣ ಭತ್ತಕ್ಕೆ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚು ಇರುವುದರಿಂದ ಸೋನಾ ಮಸೂರಿ, ಮಾಮೂಲ್ ಸೋನಾ, ಶ್ರೀರಾಮ್ ಸೋನಾ, ಜೆಜೆಎಲ್, ಆರ್‌ಎನ್ಆರ್ ಭತ್ತದ ಮಾದರಿ ಸಸಿಮಡಿ ಬಹುತೇಕ ಭಾಗಗಳಲ್ಲಿ ಸಿದ್ಧವಾಗಿವೆ.

ಎರಡು ಮೂರು ಕಡೆ ಏಕಕಾಲದಲ್ಲಿ ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್, ಕೂಲಿ ಕಾರ್ಮಿಕರನ್ನು ಹೊಂದಿಸುವುದು ಕಷ್ಟ ಎಂಬ ಮಾಹಿತಿಯನ್ನು ಕೃಷಿಕರಾದ ಚಂದ್ರಮ್ಮ ನೀಡಿದರು. ರೊಳ್ಳೆ ಹೊಡೆಯುವ ಟ್ರ್ಯಾಕ್ಟರ್‌ಗಳಿಗೆ ಕೂಡ ಬೇಡಿಕೆ ಹೆಚ್ಚಾಗಿದೆ. ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಬಾಡಿಗೆಯೂ ಏರಿದೆ. ಬೆಳ್ಳಕ್ಕಿ ಸಾಲು ಭತ್ತದಗದ್ದೆಗಳಲ್ಲಿ ಬೀಡು ಬಿಟ್ಟಿದ್ದು, ಹುಳುಹೆಕ್ಕುವ ಕಾರ್ಯದಲ್ಲಿ ನಿರತವಾಗಿದೆ.

ಕಾರ್ಮಿಕರಿಗೆ ಬೇಡಿಕೆ: ಒಂದೂವರೆ ವರ್ಷ ದುಡಿಯುವ ಕೈಗಳಿಗೆ ಕೆಲಸ ಇರಲಿಲ್ಲ. ಈ ಬಾರಿ ಕೃಷಿ ಕಾರ್ಯ ನಿಗದಿತ ಸಮಯದಲ್ಲಿ ಆರಂಭವಾಗಿದೆ. ಕಾರ್ಮಿಕರಿಗೆ ಮುಂಗಡ ಬೇಡಿಕೆ ಸೃಷ್ಟಿಸಿದೆ ಎಂದು ನಾಟಿ ಹಚ್ಚುವ ಗುತ್ತಿಗೆ ಕಾರ್ಮಿಕರಾದ ಮಲ್ಲನಾಯ್ಕನಹಳ್ಳಿ ಎಲ್ಲಮ್ಮ, ಶಾಂತಮ್ಮ, ನೀಲಮ್ಮ ಹರ್ಷ ವ್ಯಕ್ತಪಡಿಸಿದರು.

ಎಂ.ನಟರಾಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT