ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಮತ ಗಳಿಕೆಯ ವಿಷಯವಲ್ಲ

Last Updated 9 ಫೆಬ್ರುವರಿ 2018, 6:14 IST
ಅಕ್ಷರ ಗಾತ್ರ

ಪ್ರಜಾವಾಣಿ ಕೇಳಿದ ಐದು ಪ್ರಶ್ನೆಗಳು

* ಆರ್ಥಿಕ ನೀತಿ, ಧಾರ್ಮಿಕ ನೀತಿ, ಸಾಮಾಜಿಕ ನೀತಿಗಳನ್ನು ಚುನಾವಣೆ ಸಂದರ್ಭದಲ್ಲಿ ನೋಡುತ್ತಿದ್ದೇವೆ. ಸಾಂಸ್ಕೃತಿಕ ನೀತಿ ಎನ್ನುವುದೊಂದು ಇದೆಯೇ? ಇರಬೇಕೇ?
* ಕರ್ನಾಟಕದಲ್ಲಿರುವ ರಾಜಕೀಯ ಪಕ್ಷಗಳಿಗೆ ಸಾಂಸ್ಕೃತಿಕವಾಗಿ ಒಂದು ಸ್ಪಷ್ಟ ನಿಲುವು ಇದೆ ಎಂದು ನಿಮಗನ್ನಿಸುತ್ತಿದೆಯೇ?
* ಕರ್ನಾಟಕದ ಸಂದರ್ಭದಲ್ಲಿ ಸಂಸ್ಕೃತಿ- ಭಾಷೆಗೆ ಸಂಬಂಧಿಸಿದಂತೆ ಸ್ಪರ್ಧಿಗಳು/ ರಾಜಕೀಯ ಪಕ್ಷಗಳಿಂದ ಮತದಾರರು ಯಾವ ವಿಷಯಗಳನ್ನು ನಿರೀಕ್ಷಿಸಬೇಕು?
* ಸಾಂಸ್ಕೃತಿಕ ನೀತಿ ಎನ್ನುವುದು ಪ್ರಾದೇಶಿಕವಾಗಿ ಮತ್ತು ರಾಷ್ಟ್ರೀಯವಾಗಿ ಬೇರೆ ಬೇರೆ ಇರಬೇಕೇ? ಒಂದೇ ಆಗಿರಬೇಕೇ?
* ಸಾಂಸ್ಕೃತಿಕ ನೀತಿಯನ್ನು ನಿರ್ಧರಿಸುವುದು ಹೇಗೆ? ಯಾರು? ಇದರಲ್ಲಿ ಜನರ ಪಾತ್ರವೆಷ್ಟು? ರಾಜಕೀಯ ಪಕ್ಷಗಳ ಪಾತ್ರವೆಷ್ಟು?

*****

ಕಮ್ಯುನಿಸ್ಟ್ ಸರ್ಕಾರದಲ್ಲಿ ಸಾಮಾನ್ಯವಾಗಿ ಸಾಂಸ್ಕೃತಿಕ ನೀತಿ ಇರುತ್ತದೆ. ಕಲ್ಚರಲ್‌ ರೆವಲ್ಯೂಷನ್‌ ಎಂದು ದೊಡ್ಡ ಆಂದೋಲನವೇ ನಡೆದ ಉದಾಹರಣೆ ಇದೆ. ನಮ್ಮಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳಿಗೆ ಅಧಿಕೃತವಾದ ಸಾಂಸ್ಕೃತಿಕ ನೀತಿ ಇಲ್ಲ.

ಸಾಂಸ್ಕೃತಿಕ ನೀತಿಗೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಾಕಷ್ಟು ಅಧ್ಯಯನ ನಡೆಸಿ, ಪ್ರಾಯೋಗಿಕವಾಗಿ ಸರಿಯಾದ ವರದಿಯನ್ನೇ ಸಿದ್ಧಪಡಿಸಿತ್ತು. ಸರ್ಕಾರ ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದೆ ಸಚಿವ ಎಚ್‌.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್‌ ಉಪ ಸಮಿತಿ ರಚಿಸಿ ಮರುಪರಿಶೀಲನೆಗೆ ಒಡ್ಡಿತು. ಬರಗೂರು ಸಲಹೆ ಕುರಿತು ಏನನ್ನೂ ಹೇಳದೆ ಕೈಬಿಡಲಾಯಿತು.

ಸರ್ಕಾರ ಬದಲಾದಾಗ ಅಕಾಡೆಮಿ, ಪ್ರತಿಷ್ಠಾನಗಳ ಅಧ್ಯಕ್ಷ ಹಾಗೂ ಸದಸ್ಯರನ್ನು ಬದಲಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಸಮಿತಿ ಸಲಹೆ ನೀಡಿತ್ತು. ಜಿ.ಎಸ್‌. ಶಿವರುದ್ರಪ್ಪ ಅಧ್ಯಕ್ಷರಾಗಿದ್ದಾಗಲೂ, ಸರ್ಕಾರ ಬದಲಾದಾಗ ರಾಜೀನಾಮೆ ನೀಡಬೇಕು ಎಂಬ ಒತ್ತಡ ಬಂತು. ‘ಮೂರು ವರ್ಷಕ್ಕೆ ನೇಮಕಗೊಂಡಿರುವ ನಾನು ಅವಧಿ ಪೂರ್ವದಲ್ಲಿ ರಾಜೀನಾಮೆ ನೀಡುವುದಿಲ್ಲ’ ಎಂದು ಜಿ.ಎಸ್‍.ಎಸ್‍. ಗಟ್ಟಿಯಾಗಿ ಹೇಳಿದರು. ಸರ್ಕಾರವೂ ಸುಮ್ಮನಾಯಿತು.

ಹೊಸ ಸರ್ಕಾರ ರಚಿಸಿದವರ ಬಳಿ ಹೋಗುವ ಅಧಿಕಾರಿಗಳು ‘ರಾಜೀನಾಮೆ ಕೇಳೋಣವೇ?’ ಎಂದು ಒತ್ತಡ ಹಾಕುತ್ತಾರೆ. ವಾಸ್ತವದಲ್ಲಿ ಅಕಾಡೆ
ಮಿಗಳ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಒಂದು ಚಾರ್ಟರ್‌ ಇದೆ. ಅದರಲ್ಲಿ ಸರ್ಕಾರ ಬದಲಾದಾಗ ರಾಜೀನಾಮೆ ನೀಡಬೇಕು ಎಂದು ಹೇಳಿಲ್ಲ. ಆಯಾ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅಕಾಡೆಮಿಗಳಿಗೆ ಅವುಗಳ ಬೆಂಬಲಿಗರನ್ನೇ ನೇಮಿಸುತ್ತಿರುವುದು ಕಾಣುತ್ತಿದೆ.

ಸಾಂಸ್ಕೃತಿಕವಾಗಿ ಒಂದು ಸ್ಪಷ್ಟ ನಿಲುವು ರಾಜ್ಯದ ಯಾವ ಪಕ್ಷಕ್ಕೂ ಇಲ್ಲ. ಕೇಂದ್ರ ಸರ್ಕಾರಕ್ಕೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪಕ್ಷಕ್ಕೂ ತನ್ನದೇ ಆದ ನೀತಿಯನ್ನು ಅಳವಡಿಸಿಕೊಳ್ಳುವ ಹಕ್ಕು ಇರುವಾಗ, ಕಾಯಂ ನೀತಿ ಇರಬೇಕಾಗಿಲ್ಲ.

ಯಾವುದೇ ಪಕ್ಷದ ಸರ್ಕಾರ ಬರಲಿ, ಪ್ರಾದೇಶಿಕ ಭಾಷೆ ಕುರಿತು ಬದ್ಧತೆ ತೋರಿ
ಸುತ್ತದೆ. ಇದು ಮತದಾರರನ್ನು ಸೆಳೆಯುವ ಪ್ರಯತ್ನವಷ್ಟೆ. ಸಂಸ್ಕೃತಿ- ಭಾಷೆಗೆ ಸಂಬಂಧಿಸಿದಂತೆ 'ನೀವು ಅಧಿಕಾರಕ್ಕೆ ಬಂದರೆ ತೆಗೆದುಕೊಳ್ಳುವ ನಿಲುವೇನು' ಎನ್ನುವುದನ್ನು ಮತದಾರರು ಸ್ಪಷ್ಟಪಡಿಸಿಕೊಳ್ಳಬೇಕು.

ಭಾಷಾ ಮಾಧ್ಯಮ ಕುರಿತು ಕರ್ನಾಟಕ ಮಾತ್ರವಲ್ಲ, ಇತರ ರಾಜ್ಯಗಳೂ ಒಂದು ಸ್ಪಷ್ಟ ನಿರ್ಣಯ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ಹಿಂದಿಯನ್ನು ಹೇರಲು ಪ್ರಯತ್ನಿಸುತ್ತದೆ. ಮತ್ತೊಂದು ಸರ್ಕಾರ ಬಂದಾಗ ಅದನ್ನು ಬದಲಿಸುವ ಪ್ರಯತ್ನ ಇದ್ದದ್ದೇ. ಇಂಥ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳು ಅಲ್ಲಿನ ಭಾಷೆಯನ್ನು ಎತ್ತಿಹಿಡಿಯುತ್ತವೆ. ನಮ್ಮಲ್ಲಿನ ಕನ್ನಡಪರ ಸಂಘಟನೆಗಳು ಸಾಕಷ್ಟು ಕನ್ನಡಪರ ಹೋರಾಟ ನಡೆಸಿವೆ. ಒಂದು ಕಾಲದಲ್ಲಿ ಬಿಹಾರದಿಂದ ವಿಶೇಷ ರೈಲು ಕಳುಹಿಸಿ, ಪರೀಕ್ಷೆ ಬರೆಯುವವರನ್ನು ಅಲ್ಲಿಂದ ಇಲ್ಲಿಗೆ ಕಳುಹಿಸಿದ್ದನ್ನು ವಿರೋಧಿಸಿ ಹಿಂದಕ್ಕೆ ಕಳುಹಿಸಿದ ಘಟನೆಗಳೂ ನಡೆದಿವೆ.

ಇತ್ತೀಚೆಗೆ ತಮಿಳುನಾಡಿನ ಸರ್ಕಾರ ತಮಿಳನ್ನು ಪ್ರಥಮ ಭಾಷೆಯಾಗಿ ಎಲ್ಲಾ ಶಾಲೆಗಳಲ್ಲೂ ಕಲಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ. ಕರ್ನಾಟಕದಲ್ಲೂ ಇಂಥದ್ದೊಂದು ಆದೇಶ 17 ವರ್ಷಗಳ ಹಿಂದೆಯೇ ಆಗಿದೆ, ಐಎಎಸ್‌ ಅಧಿಕಾರಿಯೊಬ್ಬ ಮುಚ್ಚಿಟ್ಟಿದ್ದರಿಂದಾಗಿ ಅದು ಬೆಳಕಿಗೆ ಬಾರದಂತಾಯಿತು. ಅದನ್ನು ಬರುವ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದಾರೆ.

ಕೇಂದ್ರ ಏನೇ ಮಾಡಿದರೂ ಪ್ರಾದೇಶಿಕವಾಗಿ ಒಂದು ಸಾಂಸ್ಕೃತಿಕ ನೀತಿ ಅನಿವಾರ್ಯ.

ಶಾಸಕರು ಹಾಗೂ ರಾಜಕೀಯ ವ್ಯಕ್ತಿಗಳಲ್ಲಿ ಬಹುತೇಕರು ಇಂಗ್ಲಿಷ್ ಮಾಧ್ಯಮ ಶಾಲೆ ಹೊಂದಿದ್ದಾರೆ. ಕನ್ನಡ ಮಾಧ್ಯಮ ಶಾಲೆ ಉಳಿಸುವ ಆಸಕ್ತಿ ಅವರಿಗಿಲ್ಲ. ಇದರಲ್ಲಿ ಜನರ ತಪ್ಪೂ ಇದೆ. ಇಂಗ್ಲಿಷ್ ಮಾಧ್ಯಮವೇ ಬೇಕು ಎಂದು ಎಷ್ಟು ಹಣ ಕೊಟ್ಟಾದರೂ ಮಕ್ಕಳನ್ನು ಸೇರಿಸುತ್ತಿರುವುದರಿಂದ ಸರ್ಕಾರ ಏನು ಮಾಡಲು ಸಾಧ್ಯ?

ಭಾಷೆ, ಧ್ವಜ, ಸಾಹಿತ್ಯ ಸಮ್ಮೇಳನಗಳು ಜನರನ್ನು ಭಾವನಾತ್ಮಕವಾಗಿ ಸೆಳೆಯುವ ವಿಷಯಗಳು. ಅಕಾಡೆಮಿ, ಪ್ರತಿಷ್ಠಾನ ಕುರಿತು ಜನ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.

-ಗಿರಡ್ಡಿ ಗೋವಿಂದರಾಜ, ವಿಮರ್ಶಕ

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT