ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಗೆದ್ದರೆ ಮಡಿವಾಳರು ಎಸ್‌ಸಿಗೆ

Last Updated 9 ಫೆಬ್ರುವರಿ 2018, 6:47 IST
ಅಕ್ಷರ ಗಾತ್ರ

ಮಂಡ್ಯ: ‘ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಅವರು ಜೆಡಿಎಸ್‌ ಹಿಂದುಳಿದ ವರ್ಗಗಳ ಘಟಕ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಡಿವಾಳರ ರಾಜ್ಯಮಟ್ಟದ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜೆಡಿಎಸ್‌ ಪಕ್ಷಕ್ಕೆ ಸಣ್ಣ ಸಮುದಾಯಗಳ ಬೇಡಿಕೆ ಈಡೇರಿಸುವ ಬದ್ಧತೆ ಇದೆ. ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿ ಬಡವರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದ್ದು ಜೆಡಿಎಸ್‌ ಸರ್ಕಾರ ಮಾತ್ರ ಈ ಬೇಡಿಕೆ ಈಡೇರಿಸುತ್ತದೆ. ಮಡಿವಾಳ ಸಮುದಾಯದ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವರ ಅಧ್ಯಯನ ಪೀಠ ಸ್ಥಾಪನೆಗೂ ಶ್ರಮ ವಹಿಸಲಾಗುವುದು’ ಎಂದರು.

‘ಮಡಿವಾಳರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರ್ಪಡೆಯಾದರೆ ಇತರ ಎಸ್‌ಸಿ ಸಮುದಾಯ ಆತಂಕ ಪಡಬೇಕಾಗಿಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಸದಾಶಿವ ವರದಿ ಜಾರಿಯ ಬಗ್ಗೆ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕೆಲವು ಸಮುದಾಯಗಳ ಜನರು ವರದಿ ಜಾರಿ ಬೇಕು ಎಂದರೆ ಇನ್ನು ಕೆಲ ಜನರು ಬೇಡ ಎಂದು ವಾದ ಮಾಡುತ್ತಿದ್ದಾರೆ. ಸಂವಿಧಾನ ನೀಡಿರುವ ಮೀಸಲಾತಿ ಸೌಲಭ್ಯಕ್ಕಾಗಿ ಈ ಗೊಂದಲ ಏರ್ಪಟ್ಟಿದೆ. ಆದರೆ ಮೀಸಲಾತಿ ಚಿಂತನೆಯಿಂದ ಒಂದು ಹೆಜ್ಜೆ ಮುಂದಕ್ಕೆ ಹೋಗಬೇಕು’ ಎಂದು ಸಲಹೆ ನೀಡಿದರು.

‘ಮೀಸಲಾತಿ ನಿಮ್ಮ ಹಕ್ಕು, ಅದನ್ನು ಕೇಳುವುದರಲ್ಲಿ ಯಾವ ದೋಷವೂ ಇಲ್ಲ. ಆದರೆ ಅದಕ್ಕೂ ಮಿಗಿಲಾದ ಮತದಾನದ ಹಕ್ಕನ್ನು ಸದುಪಯೋಗ ಮಾಡಿಕೊಳ್ಳಬೇಕು. ಕೇವಲ ಮತದಾನ ಮಾಡುವುದರಿಂದ ಮಾತ್ರ ಜನರು ಕರ್ತವ್ಯ ಮುಗಿಯುವುದಿಲ್ಲ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಜನರು ಮಾಡಬೇಕು. ಸರ್ಕಾರಕ್ಕೆ ಸಲಹೆ, ಸೂಚನೆ ನೀಡಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಬೇಕು. ಮುಖ್ಯಮಂತ್ರಿ, ಪ್ರಧಾನಮಂತ್ರಿ ಯಾರೂ ದೊಡ್ಡವರಲ್ಲ, ಜನರು ದೊಡ್ಡವರು. ಅವರೇ ಶಾಶ್ವತ’ ಎಂದು ಹೇಳಿದರು.

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರ ಬೇಡಿಕೆ ಈಡೇರಿಸಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಪರಿಹಾರ ನೀಡಿಲ್ಲ. ಬೆಳೆ ಹಾನಿಯಾಗಿದ್ದರೂ ಪರಿಹಾರ ನೀಡುವ ಕೆಲಸ ಮಾಡಿಲ್ಲ. ಸಣ್ಣ ಸಮುದಾಯಗಳ ಯುವಕರು ಎಚ್ಚೆತ್ತುಕೊಳ್ಳಬೇಕು. ಶಿಕ್ಷಣ ಪಡೆಯಲು ಪ್ರೇರಣಾ ಶಕ್ತಿಯಾಗಿ ನಿಲ್ಲಬೇಕು. ಸರ್ಕಾರಗಳ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು. ನ್ಯಾಯಯುತ ಬೇಡಿಕೆ ಅನುಷ್ಠಾನಕ್ಕೆ ತಮ್ಮದೇ ಆದ ಕೆಲಸ ಮಾಡಬೇಕು. ಬಡವರ, ಗ್ರಾಮೀಣ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಬೇಕು’ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ ‘ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಜಾತಿಗಳ ಸಮಾವೇಶ ಮಾಡಿ ಅವರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದೆ. ಆದರೆ ಭರವಸೆಗಳೂ ಈಡೇರಿಲ್ಲ. ಮಡಿವಾಳ ಸಮುದಾಯದ ಜನರಲ್ಲಿ ಆಕ್ರೋಶವಿದೆ. ನಾವು ಬಡತನದಿಂದ ಬೆಳೆದವರು. ಬಡವರ ಬಗ್ಗೆ ಕಾಳಜಿ ಇರಬೇಕು. ರಾಜಕಾರಣಿಗಳಿಗೆ ಧಿಮಾಕು, ಗರ್ವ, ಅಹಂಕಾರ ಇರಬಾರದು’ ಎಂದು ಹೇಳಿದರು.

ಸರ್ಕಾರದ ಕೊಳಕು ತೊಳೆಯಿರಿ: ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌, ‘ಮಡಿವಾಳರು ವಸ್ತ್ರಗಳನ್ನು ಸ್ವಚ್ಛಗೊಳಿಸುತ್ತಾರೆ. ಈಗ ನಿಮ್ಮ ಕೈಗೆ ಶಕ್ತಿ ಬಂದಿದ್ದು ರಾಜ್ಯ ಸರ್ಕಾರದ ಕೊಳಕು ತೊಳೆಯುವ ಕೆಲಸ ಮಾಡಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುತ್ತಾರೆ. . ಯಾವುದೇ ಸರ್ಕಾರ ಸಣ್ಣ ಸಮುದಾಯಗಳನ್ನು ಗುರುತಿಸಬೇಕು’ ಎಂದು ಹೇಳಿದರು.

ಮಧು ಬಂಗಾರಪ್ಪ ಮಾತನಾಡಿ ‘ಮಡಿವಾಳ ಸಮುದಾಯ ನಮ್ಮ ಈಡಿಗ ಸಮುದಾಯಕ್ಕೆ ಸಹೋದರ ಇದ್ದಂತೆ. ನಮ್ಮ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಮುಖ ಹುದ್ದೆಗಳನ್ನು ಮಡಿವಾಳ ಮುಖಂಡರಿಗೆ ನೀಡಿದ್ದೇವೆ. ಮುಂದೆ ಜೆಡಿಎಸ್‌ ಸರ್ಕಾರ ರಚನೆಯಾದರೆ ಸಮುದಾಯಕ್ಕೆ ಸೂಕ್ತ ಸ್ಥಾನ ನೀಡಲಾಗುವುದು’ ಎಂದರು.

ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಉಪ ಸಭಾಪತಿ ಮರಿತಿಬ್ಬೇಗೌಡ, ಸಂಸದ ಸಿ.ಎಸ್‌.ಪುಟ್ಟರಾಜು, ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ಅಮರನಾಥ, ಜೆಡಿಎಸ್‌ ಮುಖಂಡರಾದ ಪಿ.ಜಿ.ಆರ್‌. ಸಿಂಧ್ಯಾ, ಬಂಡೆಪ್ಪ ಕಾಶೆಂಪೂರ್‌, ಬಿ.ಎಂ.ಫಾರುಖ್‌, ಡಿ.ಸಿ.ತಮ್ಮಣ್ಣ, ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್‌, ಕೆ.ಕೆ.ರಾಧಾಕೃಷ್ಣ ಹಾಜರಿದ್ದರು.

ವೈಭವದ ಮೆರವಣಿಗೆ

ಸಮಾವೇಶದ ಅಂಗವಾಗಿ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಗರದ ವಿವಿಧೆಡೆ ಅದ್ಧೂರಿಯಿಂದ ನಡೆಯಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜಾನಪದ ಕಲಾತಂಡಗಳ ನೃತ್ಯ ಗಮನ ಸೆಳೆಯಿತು. ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಿಂದ ಆರಂಭವಾಗಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಆರ್‌.ಪಿ.ರಸ್ತೆಯ ಮೂಲಕ ಕ್ರೀಡಾಂಗಣ ತಲುಪಿತು. ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

22ರಂದು ವಿಧಾನಸೌಧಕ್ಕೆ ಮುತ್ತಿಗೆ

ಮಡಿವಾಳರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ನಂಜಪ್ಪ ಮಾತನಾಡಿ ‘ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಒತ್ತಾಯಿಸಿ ಫೆ.22ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಲಕ್ಷಾಂತರ ಮಡಿವಾಳರು ರಾಜಧಾನಿಯಲ್ಲಿ ಹೋರಾಟ ನಡೆಸುವರು. ರಾಜ್ಯ ವಿಧಾನಸಭಾ ಅಧಿವೇಶನ ನಡೆಯುವ ಸಂದರ್ಭದಲ್ಲಿ ನಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ಸೀಟ್‌ಗಾಗಿ ಜಿ.ಪಂ. ಅಧ್ಯಕ್ಷೆ ಪರದಾಟ

ಜಿ.ಪಂ ಪ್ರಭಾರ ಅಧ್ಯಕ್ಷೆ ಗಾಯತ್ರಿ ರೇವಣ್ಣ ಆಸನಕ್ಕಾಗಿ ಪರದಾಡಿದರು. ಆರಂಭದಲ್ಲಿ ಸೀಟ್‌ ಸಿಗದ ಕಾರಣ ಅವರು ವೇದಿಕೆ ಮುಂಭಾಗದ ಆಸನದಲ್ಲಿ ಕುಳಿತಿದ್ದರು. ಸಂಘಟಕರು ಅವರನ್ನು ವೇದಿಕೆಯ ಮೇಲೆ ಕರೆದೊಯ್ದರು. ಆದರೆ ಸೀಟ್‌ ಸಿಗದ ಕಾರಣ ಅವರು ವೇದಿಕೆಯ ಮೇಲೆಯೇ ಕೆಲಕಾಲ ನಿಂತಿದ್ದರು. ನಂತರ ಅವರಿಗೆ ಆಸನ ವ್ಯವಸ್ಥೆ ಮಾಡಲಾಯಿತು.

ವೇದಿಕೆ ಮೇಲೇ ವಾಗ್ವಾದ

ಕಾರ್ಯಕ್ರಮದ ವೇದಿಕೆಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಜನರು ಸೇರಿದ್ದರು. ಆಯೋಜಕರು ಕೆಳಗೆ ಇಳಿಯುವಂತೆ ಸೂಚನೆ ನೀಡಿದರೂ ಪಾಲಿಸಲಿಲ್ಲ. ಕೆಲ ಮುಖಂಡರು ಸಂಘಟಕರೊಂದಿಗೆ ಜಗಳಕ್ಕೂ ಇಳಿದರು. ಮುಖಂಡರ ಜೊತೆ ಮಾತಿನ ಚಕಮಕಿಯೂ ನಡೆಯಿತು. ವಾಗ್ವಾದ ನಡೆಸುತ್ತಿದ್ದವರನ್ನು ಪೊಲೀಸರು ಹೊರಗೆ ಕರೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT