ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ನೆಡುವ ಕಾರ್ಯ ಜನಾಂದೋಲನವಾಗಲಿ

ಜಿ.ಪಂ ಸಿಇಒ ಕೆ.ಎಸ್.ಲತಾಕುಮಾರಿ ಆಶಯ
Last Updated 30 ಜೂನ್ 2018, 16:37 IST
ಅಕ್ಷರ ಗಾತ್ರ

ಕೋಲಾರ: ‘ಬರಪೀಡಿತ ಜಿಲ್ಲೆಯಲ್ಲಿ ಸಸಿ ನೆಡುವ ಕಾರ್ಯವು ಜನಾಂದೋಲನ ಮಾದರಿಯಲ್ಲಿ ನಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಆಶಿಸಿದರು.

ಅರಣ್ಯ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀಜದುಂಡೆ (ಸೀಡ್‌ ಬಾಲ್) ತಯಾರಿಕೆ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯ ಸರ್ಕಾರಿ ಜಾಗಗಳಲ್ಲಿ ದೊಡ್ಡ ಆಂದೋಲನದ ರೀತಿಯಲ್ಲಿ ಸಸಿ ನೆಡಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಮಳೆಗಾಲದಲ್ಲಿ ಬೆಟ್ಟ ಗುಡ್ಡಗಳಲ್ಲಿ ಬೀಜದುಂಡೆ ಹಾಕುವುದರಿಂದ ಅವು ಬೆಳೆಯಲು ಸಹಾಯವಾಗುತ್ತದೆ. ಬೀಜದುಂಡೆಯ ಪ್ರಸಾರವು ಅಭಿಯಾನದ ಮಾದರಿಯಲ್ಲಿ ರೂಪುಗೊಳ್ಳಬೇಕು. ವಿದ್ಯಾರ್ಥಿಗಳು ಪಾಠ ಪ್ರವಚನಕ್ಕೆ ಸೀಮಿತವಾಗದೆ ಸಮಾಜಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಠ ಒಂದು ಸಾವಿರ ಸಸಿ ಬೆಳೆಸುವ ಗುರಿ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ ಈ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ನರೇಗಾ ಯೋಜನೆ ಅನುದಾನವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ’ ಎಂದು ವಿವರಿಸಿದರು.

ಒಳ್ಳೆಯ ಪ್ರಯತ್ನ: ‘ಸಂಘ ಸಂಸ್ಥೆಗಳು ಅರಣ್ಯ ಇಲಾಖೆ ಸಹಯೋಗದಲ್ಲಿ ಶಾಲಾ ಮಕ್ಕಳಿಂದ ಬೀಜದುಂಡೆ ಸಿದ್ಧಪಡಿಸುತ್ತಿರುವುದು ಒಳ್ಳೆಯ ಪ್ರಯತ್ನ. ಇಂತಹ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಆಶಿಸಿದರು.

‘ಶಾಲಾ ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಅವರಲ್ಲಿ ಪರಿಸರ ಕಾಳಜಿ ಮೂಡುತ್ತದೆ. ಶಿಕ್ಷಣ ಇಲಾಖೆಯು ಪ್ರತಿ ಶಾಲಾ ಆವರಣದಲ್ಲಿ ಗಿಡ ಬೆಳೆಸುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿ ಹಸಿರು ಕ್ರಾಂತಿ ಸೃಷ್ಟಿಸಬಹುದು’ ಎಂದು ಕಿವಿಮಾತು ಹೇಳಿದರು.

ಸಸಿ ನೆಡಲು ಪ್ರೋತ್ಸಾಹ: ‘ಇಲಾಖೆಯಿಂದ ಸರ್ಕಾರಿ ಜಾಗಗಳು ಹಾಗೂ ಕೃಷಿ ಜಮೀನುಗಳಲ್ಲಿ ಸಸಿ ನೆಡಲು ಅಸಕ್ತಿಯಿರುವ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ರೈತರು ಸಸಿಗಳನ್ನು ಕೇಳಿದರೆ ವಿತರಣೆ ಮಾಡುತ್ತೇವೆ. ಇಲಾಖೆಯ ನರ್ಸರಿಗಳಲ್ಲಿ ಶ್ರೀಗಂಧ, ಬೇವು, ನೇರಳೆ, ಹೊಂಗೆ, ಆಲ, ಅರಳಿ, ನೆಲ್ಲಿ ಸೇರಿದಂತೆ ವಿವಿಧ ಸಸ್ಯಗಳ ಸುಮಾರು 2 ಟನ್‌ ಬೀಜ ಸಂಗ್ರಹಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ಶ್ರೀನಿವಾಸರಾವ್‌ ವಿವರಿಸಿದರು.

‘ಪ್ರಸಕ್ತ ವರ್ಷದಲ್ಲಿ ಶಾಲೆ, ಕಾಲೇಜು, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಜಿಲ್ಲೆಯ ಬೆಟ್ಟ ಗುಡ್ಡ, ಅರಣ್ಯ ಪ್ರದೇಶ, ಸರ್ಕಾರಿ ಭೂಮಿ ಹಾಗೂ ಕೆರೆ ಅಂಗಳದಲ್ಲಿ 5 ಲಕ್ಷ ಬೀಜದುಂಡೆ ಚೆಲ್ಲಲ್ಲು ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಾಲಿನಿ, ಸಹಾಯಕ ವಲಯ ಅರಣ್ಯಾಧಿಕಾರಿ ಮನೋಹರ್, ಭಾರತ ಸಂಸ್ಥೆ ಮುಖ್ಯಸ್ಥ ತ್ಯಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT