ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಜೊತೆ ರಾಜಿಗೆ ನಿಸರ್ಗ ಒಪ್ಪುವುದೇ?

ಅಕ್ಷರ ಗಾತ್ರ

‘ಡೇ ಜೀರೊ’. ಈ ಪದಗಳು ಹಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರವೊಂದರ ಹೆಸರಿನಂತೆಯೇ ಕೇಳಿಸಬಹುದು. ಆದರೆ, ಈ ಬಾರಿಯ ಏಪ್ರಿಲ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ದೇಶದ ಕೇಪ್‌ಟೌನ್‌ ನಗರವನ್ನು ‘ಡೇ ಜೀರೊ’ (ಶೂನ್ಯ ದಿನ) ಆವರಿಸಿಕೊಳ್ಳಲಿದೆ. ಇದು ಪ್ರತಿ ವ್ಯಕ್ತಿಗೂ ಒಂದು ಎಚ್ಚರಿಕೆಯ ಸಂದೇಶ.

ಎರಡನೆಯ ವಿಶ್ವಯುದ್ಧದ ಸಂದರ್ಭ ಹಾಗೂ 2001ರ ಸೆಪ್ಟೆಂಬರ್‌ 11ರಂದು ಅಮೆರಿಕದ ನ್ಯೂಯಾರ್ಕ್‌ ನಗರದ ಮೇಲೆ ನಡೆದ ದಾಳಿ ವೇಳೆ ನಗರವಾಸಿಗಳು ಎದುರಿಸಿದ ಭೀತಿಗಿಂತಲೂ ‘ಶೂನ್ಯ ದಿನ’ದ ಭೀತಿಯ ತೀವ್ರತೆ ಹೆಚ್ಚಿರುತ್ತದೆ ಎಂದು ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಮಾಮೂಲಿ ದಿನಗಳಲ್ಲಿ ಇರುವಂತಹ ಪೊಲೀಸ್ ವ್ಯವಸ್ಥೆಯು ಆ ದಿನ ಯಾವುದಕ್ಕೂ ಸಾಕಾಗುವುದಿಲ್ಲ. ಹಾಗಾಗಿ, ದಕ್ಷಿಣ ಆಫ್ರಿಕಾ ಪೊಲೀಸ್ ಅಧಿಕಾರಿಗಳ ಜೊತೆ ಈಗಾಗಲೇ ಮಾತುಕತೆ ನಡೆಯುತ್ತಿದೆ. ಭೀತಿಗೆ ಒಳಗಾಗಿರುವ ಈ ನಗರದ ನಿವಾಸಿಗಳು ಎದುರಾಗಲಿರುವ ಗೊಂದಲಮಯ ಪರಿಸ್ಥಿತಿ ಬಗ್ಗೆ ಗುಸುಗುಸು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ.

ಈ ಎಚ್ಚರಿಕೆಯ ಗಂಟೆಯ ಹಿಂದಿರುವ ಕಾರಣ ಸರಳವಾಗಿದೆ: ಈ ನಗರಕ್ಕೆ ನೀರು ಪೂರೈಸುವ ಮೂಲವು ಬರಿದಾಗುವ ಅಪಾಯ ಎದುರಿಸುತ್ತಿದೆ.

ಜಲಮಟ್ಟದ ಕುಸಿತ ಮುಂದುವರಿದರೆ ಇನ್ನು ಮೂರು ತಿಂಗಳಿಗೆ ಮುನ್ನವೇ ಕೇಪ್‌ಟೌನ್‌ ನಗರವು ‘ಶೂನ್ಯ ದಿನ’ ಘೋಷಿಸಲಿದೆ. ಮನೆಗಳು ಹಾಗೂ ಉದ್ಯಮಸಂಸ್ಥೆಗಳಿಗೆ ಕಲ್ಪಿಸಿರುವ ಕೊಳವೆ ಮೂಲಕ ನೀರಿನ ಸರಬರಾಜು ವ್ಯವಸ್ಥೆಯನ್ನು ಮತ್ತೆ ಮಳೆ ಬರುವವರೆಗೆ ಸ್ಥಗಿತಗೊಳಿಸಲಾಗುತ್ತದೆ. ಈ ನಗರದ 40 ಲಕ್ಷ ನಿವಾಸಿಗಳು ನೀರಿಗಾಗಿ ಸಾಲುಗಟ್ಟಿ ನಿಲ್ಲಬೇಕು, ನೀರನ್ನು ಪಡಿತರ ಪಡೆಯುವಂತೆ ಪಡೆದುಕೊಳ್ಳಬೇಕು. ನೀರು ಪಡೆದುಕೊಳ್ಳಲು 200 ಸ್ಥಳಗಳನ್ನು ಗುರುತಿಸಲಾಗಿದೆ. ನೀರಿನ ಅಲಭ್ಯತೆಯು ಜನರ ಆರೋಗ್ಯ ಹಾಗೂ ಸಾಮಾಜಿಕ ಸುವ್ಯವಸ್ಥೆಯ ಮೇಲೆ ಉಂಟುಮಾಡುವ ಪರಿಣಾಮ ಎದುರಿಸಲು ನಗರ ಸಿದ್ಧವಾಗುತ್ತಿದೆ.

‘ಶೂನ್ಯ ದಿನ ಬಂದಾಗ ಪರಿಸ್ಥಿತಿ ನಿಭಾಯಿಸಲು ಸೇನೆಯನ್ನೇ ಕರೆಸಬೇಕಾಗುತ್ತದೆ’ ಎನ್ನುತ್ತಾರೆ ಫಾಲ್ಡಿ ರಾಂಕ್ವೆಸ್ಟ್. ಇವರು ನೈಸರ್ಗಿಕ ಬುಗ್ಗೆಯೊಂದರಿಂದ ನೀರನ್ನು ಹಿಡಿದು ತಮ್ಮ ವಾಹನದಲ್ಲಿದ್ದ ದೊಡ್ಡ ಪಾತ್ರೆಗಳಿಗೆ ತುಂಬಿಸಿಕೊಳ್ಳುತ್ತಿದ್ದರು. ಅಲ್ಲಿ ಜನ ನೀರಿಗಾಗಿ ಸಾಲುಗಟ್ಟಿ ನಿಂತಿದ್ದರು. ಜನರಲ್ಲಿ ಆತಂಕ ಇತ್ತು.

ಪರಿಸರಕ್ಕೆ ಪೂರಕವಾಗಿರುವ ಬಲಿಷ್ಠ ನೀತಿಗಳಿಗೆ ಹೆಸರಾಗಿರುವ ಕೇಪ್‌ಟೌನ್‌ ನಗರಕ್ಕೆ ಇಂತಹ ಸ್ಥಿತಿ ಬರಬಾರದಾಗಿತ್ತು. ಈ ನಗರ ಇರುವ ಭೂಭಾಗವು ಕಾಲಕಳೆದಂತೆ ಒಣಭೂಮಿಯಾಗಿ ಪರಿವರ್ತನೆ ಕಾಣುತ್ತಿದ್ದರೂ, ಇಲ್ಲಿ ಅತ್ಯಂತ ಜಾಗರೂಕತೆಯಿಂದ ನೀರಿನ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಮೂರು ವರ್ಷಗಳ ಸತತ ಬರಗಾಲದ ಪರಿಣಾಮವಾಗಿ ಮನೆಗಳಿಗೆ ಹಾಗೂ ಉದ್ಯಮಗಳಿಗೆ ಕೊಳವೆ ನೀರಿನ ಪೂರೈಕೆ ಇಲ್ಲದ ವಿಶ್ವದ ಕೆಲವೇ ಕೆಲವು ಪ್ರಮುಖ ನಗರಗಳ ಪಟ್ಟಿಗೆ ಕೇಪ್‌ಟೌನ್‌ ಕೂಡ ಸೇರುವ ಅಪಾಯ ಎದುರಾಗಿದೆ ಎಂದು ದಕ್ಷಿಣ ಆಫ್ರಿಕಾದ ಅಧಿಕಾರಿಗಳು ಹೇಳುತ್ತಿದ್ದಾರೆ. ನಗರ ಈಗ ಎದುರಿಸುತ್ತಿರುವುದು ನೂರು ವರ್ಷಗಳ ಅವಧಿಯಲ್ಲಿ ಕಂಡ ಅತ್ಯಂತ ತೀವ್ರವಾದ ಬರಗಾಲ ಎಂದು ಪರಿಗಣಿಸಲಾಗಿದೆ.

ಆಸ್ಪತ್ರೆಗಳು, ಶಾಲೆಗಳು ಮತ್ತು ಈ ರೀತಿಯ ಇತರ ಪ್ರಮುಖ ಸಂಸ್ಥೆಗಳಿಗೆ ನೀರಿನ ಪೂರೈಕೆ ಇರುತ್ತದೆ. ಆದರೆ, ನಗರದಲ್ಲಿ ನೀರಿನ ಪೂರೈಕೆ ಸ್ಥಗಿತಗೊಳ್ಳಲಿರುವ ಪ್ರಮಾಣ ತೀವ್ರವಾಗಿರುತ್ತದೆ ಎನ್ನುತ್ತಿದ್ದಾರೆ ನಗರದ ಅಧಿಕಾರಿಗಳು.

ಕೇಪ್‌ಟೌನ್‌ ನಗರಕ್ಕೆ ಎದುರಾಗಿರುವ ತೊಂದರೆಯು ಹವಾಮಾನ ಬದಲಾವಣೆಯ ಅತಿದೊಡ್ಡ ಅಪಾಯಗಳಲ್ಲಿ ಒಂದನ್ನು ತೋರಿಸಿಕೊಡುತ್ತಿದೆ. ಮತ್ತೆ ಮತ್ತೆ ಎರಗುವ ಬರಗಾಲದ ಶಕ್ತಿಯನ್ನು ಇದು ತೋರಿಸುತ್ತಿದೆ. ಹವಾಮಾನ ಬದಲಾವಣೆಯ ಸಮಸ್ಯೆಗಳಿಗೆ ಆಫ್ರಿಕಾ ಖಂಡ ಈಡಾಗುವ ಸಾಧ್ಯತೆಗಳು ಹೆಚ್ಚಾಗಿಯೇ ಇವೆ. ಕೇಪ್‌ಟೌನ್‌ ನಗರಕ್ಕೆ ಎದುರಾಗಿರುವ ಸಮಸ್ಯೆಯು ಈ ನಗರ ಹೊಂದಿರುವಂತಹ ಸೌಲಭ್ಯಗಳು ಇಲ್ಲದ, ಬದಲಾದ ಸಂದರ್ಭಕ್ಕೆ ಹೊಂದಿಕೊಳ್ಳಲು ಹೆಚ್ಚಿನದೇನನ್ನೂ ಮಾಡಿರದ ಇತರ ನಗರಗಳ ಆಡಳಿತ ಸಂಸ್ಥೆಗಳಿಗೆ ಒಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸುತ್ತದೆ.

ಈಗ ಇಲ್ಲಿನ ರಾಜಕೀಯ ಮುಖಂಡರು ‘ಶೂನ್ಯ ದಿನವನ್ನು ಸೋಲಿಸಲು’ ತಾವೆಲ್ಲ ಒಗ್ಗೂಡಿ ಕೆಲಸ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ. ನಗರಕ್ಕೆ ನೀರು ಪೂರೈಕೆ ಮಾಡುವ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಈ ಹೊತ್ತಿನಲ್ಲಿ, ಉಪ್ಪು ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಘಟಕಗಳ ನಿರ್ಮಾಣ ಪೂರ್ಣಗೊಳಿಸಲು, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೇಪ್‌ಟೌನ್‌ ಪರದಾಡುತ್ತಿದೆ. ನಗರದ ಜನ ತಮಗೆ ನಿಗದಿ ಮಾಡಿರುವ ಮಿತಿಗಿಂತ ಹೆಚ್ಚಿನ ನೀರು ಬಳಸಿದರೆ ಅವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಕೆಲಸ ಈ ತಿಂಗಳಲ್ಲಿ ಆರಂಭವಾಗಿದೆ. ಒಬ್ಬ ವ್ಯಕ್ತಿ ಒಂದು ದಿನಕ್ಕೆ 87 ಲೀಟರ್‌ ನೀರು ಬಳಸಲು ಅವಕಾಶವಿತ್ತು. ಅದನ್ನು ಈಗ ದಿನವೊಂದಕ್ಕೆ 50 ಲೀಟರ್‌ಗಳಿಗೆ ಇಳಿಕೆ ಮಾಡಲಾಗುತ್ತದೆ.

ಎರಡು ವರ್ಷಗಳ ಹಿಂದೆ ಇಲ್ಲಿನ ಚಿತ್ರಣ ಬೇರೆಯದೇ ಆಗಿತ್ತು. ವರ್ಷಗಳಿಂದ ಚೆನ್ನಾಗಿ ಮಳೆ ಬರುತ್ತಿದ್ದ ಕಾರಣ 2014ರಲ್ಲಿ ಅಣೆಕಟ್ಟುಗಳು ಭರ್ತಿಯಾಗಿದ್ದವು. ಹವಾಮಾನ ಬದಲಾವಣೆ ವಿಚಾರದಲ್ಲಿ ಒಂದಾಗಿರುವ ವಿಶ್ವದ ವಿವಿಧ ಭಾಗಗಳ 40 ನಗರಗಳ ಗುಂಪು, ನೀರಿನ ನಿರ್ವಹಣೆಗಾಗಿ ಕೇಪ್‌ಟೌನ್‌ ನಗರಕ್ಕೆ 2015ರಲ್ಲಿ ಪ್ರಶಸ್ತಿ ನೀಡಿತು. ವಿಶ್ವದ ಅತ್ಯುತ್ತಮ ‘ಪರಿಸರ ಸ್ನೇಹಿ’ ನಗರಗಳ ಪೈಕಿ ಕೇಪ್‌ಟೌನ್‌ ಕೂಡ ಒಂದು ಎಂದು ಬಣ್ಣಿಸಲಾಯಿತು. 2006ರಿಂದಲೂ ಕೇಪ್‌ಟೌನ್‌ನಲ್ಲಿ ಅಧಿಕಾರದಲ್ಲಿರುವ ಪ್ರಜಾಸತ್ತಾತ್ಮಕ ಮೈತ್ರಿಕೂಟ ಪಕ್ಷವು ಸುಸ್ಥಿರ ಬೆಳವಣಿಗೆ ಹಾಗೂ ಪರಿಸರ ಸಂರಕ್ಷಣೆಗೆ ತಾನು ನೀಡುತ್ತಿರುವ ಆದ್ಯತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿತ್ತು.

ಈ ನಗರಕ್ಕೆ ದೊರೆತ ಹೊಗಳಿಕೆಗಳು ಹಾಗೂ ಪ್ರಶಸ್ತಿಗಳು ನಗರವು ನೀರಿನ ಸಂರಕ್ಷಣೆಯಲ್ಲಿ ಸಾಧಿಸಿದ ಯಶಸ್ಸನ್ನು ಗುರುತಿಸಿದವು. 2000ನೇ ಇಸವಿಯ ಆರಂಭದ ದಿನಗಳಿಗೆ ಹೋಲಿಕೆ ಮಾಡಿದರೆ ನಗರದ ಜನಸಂಖ್ಯೆಯಲ್ಲಿ ಶೇಕಡ 30ರಷ್ಟು ಹೆಚ್ಚಳ ಆಗಿದ್ದರೂ, ನೀರಿನ ಒಟ್ಟು ಬಳಕೆಯು ಹೆಚ್ಚಾಗಿರಲಿಲ್ಲ. ಈ ನಗರಕ್ಕೆ ಬಂದವರಲ್ಲಿ ಹಲವರು ನೀರನ್ನು ಕಡಿಮೆ ಪ್ರಮಾಣದಲ್ಲಿ ಬಳಸುವ, ಬಡವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡರು. ಆ ಮೂಲಕ ತಲಾವಾರು ನೀರಿನ ಬಳಕೆ ಪ್ರಮಾಣವನ್ನು ತಗ್ಗಿಸುವಲ್ಲಿ ನೆರವಾದರು.

ಇವೆಲ್ಲವುಗಳ ನಡುವೆಯೇ, ಹಳೆಯ ಕೊಳವೆಗಳನ್ನು ಸರಿಪಡಿಸಿ ನೀರು ಸೋರುವುದನ್ನು ತಡೆದಿದ್ದು, ನೀರು ಬಳಕೆ ಅಳೆಯಲು ಮೀಟರ್‌ ಅಳವಡಿಸಿದ್ದು, ನೀರಿನ ದರ ಹೊಂದಾಣಿಕೆ ಮಾಡಿದ್ದು ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಅಪಾರ ಪರಿಣಾಮ ಉಂಟುಮಾಡಿದವು. ಈ ನಗರ ಅದೆಷ್ಟು ಪ್ರಮಾಣದಲ್ಲಿ ನೀರು ಸಂರಕ್ಷಿಸಲು ಆರಂಭಿಸಿತೆಂದರೆ, ನಗರಕ್ಕೆ ನೀರಿನ ಹೊಸ ಮೂಲಗಳನ್ನು ಗುರುತಿಸುವ ಕೆಲಸವನ್ನು ಮುಂದೂಡಲಾಯಿತು!

ನಗರಕ್ಕೆ ಪೂರೈಕೆಯಾಗುವ ನೀರಿನ ಪ್ರಮಾಣ ಹೆಚ್ಚಾಗಬೇಕು, ನೀರಿನ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ಕೇಪ್‌ಟೌನ್‌ ನಗರಕ್ಕೆ ವರ್ಷಗಳಿಂದಲೂ ನೀಡಲಾಗುತ್ತಿತ್ತು. ಈ ನಗರಕ್ಕೆ ಬಹುಪಾಲು ನೀರು ಪೂರೈಕೆ ಆಗುವುದು ಮಳೆಯನ್ನೇ ನೆಚ್ಚಿಕೊಂಡಿರುವ ಆರು ಅಣೆಕಟ್ಟುಗಳಿಂದ. ಹವಾಮಾನ ಬದಲಾವಣೆ ಆಗುತ್ತಿರುವ ಕಾಲಘಟ್ಟದಲ್ಲಿ ಶುಷ್ಕ ಪ್ರದೇಶಗಳ ನಗರಗಳು ಸೀಮಿತ ಜಲಮೂಲಗಳನ್ನು ನೆಚ್ಚಿಕೊಳ್ಳುವುದು ಒಂದು ಅಪಾಯಕಾರಿ ಸಾಹಸವೂ ಹೌದು. ಕೆಲವೇ ಕೆಲವು ವರ್ಷಗಳ ಹಿಂದೆ ಭರ್ತಿಯಾಗಿದ್ದ ಅಣೆಕಟ್ಟುಗಳಲ್ಲಿ ಈಗ ಅವುಗಳ ಪೂರ್ಣ ಸಾಮರ್ಥ್ಯದ ಶೇಕಡ 26ರಷ್ಟು ನೀರು ಮಾತ್ರವೇ ಉಳಿದಿದೆ ಎನ್ನುತ್ತಾರೆ ಅಧಿಕಾರಿಗಳು.

ಕೇಪ್‌ಟೌನ್‌ ನಗರವು ಈಚಿನ ವರ್ಷಗಳಲ್ಲಿ ತಾಪಮಾನದಲ್ಲಿ ಹೆಚ್ಚಳ ಕಾಣುತ್ತಿದೆ, ಇಲ್ಲಿನ ವಾತಾವರಣ ಶುಷ್ಕ ಆಗುತ್ತಿದೆ ಎನ್ನುತ್ತಾರೆ ಕೇಪ್‌ಟೌನ್‌ ವಿಶ್ವವಿದ್ಯಾಲಯದಲ್ಲಿ ಜಲತಜ್ಞರಾಗಿ ಕೆಲಸ ಮಾಡುತ್ತಿರುವ ಪಿಯೋಟರ್‌ ವೊಲ್ಸ್ಕಿ. ಇವರು 20ನೆಯ ಶತಮಾನದ ನಂತರದ ಸರಾಸರಿ ಮಳೆಯ ಪ್ರಮಾಣವನ್ನು ಲೆಕ್ಕಹಾಕಿದ್ದಾರೆ. ಮುಂಬರುವ ದಶಕಗಳಲ್ಲಿ ಮಳೆ ಯಾವಾಗ ಸುರಿಯುತ್ತದೆ ಎಂಬುದನ್ನು ಊಹಿಸುವುದು ಹೆಚ್ಚು ಕಷ್ಟವಾಗಲಿದೆ. ಹಾಗಾಗಿ ಕೇಪ್‌ಟೌನ್‌ ನಗರವು ಇನ್ನಷ್ಟು ಶುಷ್ಕವಾಗುವುದು ಬಹುತೇಕ ಖಚಿತ.

‘ಶುಷ್ಕ ಹವೆಯ ವರ್ಷಗಳು ಮೊದಲಿನ ಶುಷ್ಕ ವರ್ಷಗಳಿಗಿಂತ ತೀವ್ರವಾಗಿರುತ್ತವೆ. ಹಾಗೆಯೇ ಮೊದಲಿನಷ್ಟು ಮಳೆ ಬರುವ ಸಾಧ್ಯತೆಗಳು ಕಡಿಮೆ’ ಎನ್ನುತ್ತಾರೆ ವೊಲ್ಸ್ಕಿ.

ಅಂತರ್ಜಲ ಬಳಸಿ ಹಾಗೂ ಉಪ್ಪು ನೀರನ್ನು ಸಿಹಿಗೊಳಿಸುವ ಘಟಕಗಳ ಮೂಲಕ ನಗರಕ್ಕೆ ನೀರಿನ ಪೂರೈಕೆ ಹೆಚ್ಚಿಸುವ ಬಗ್ಗೆ ಆಲೋಚಿಸಬೇಕು ಎಂದು ದಕ್ಷಿಣ ಆಫ್ರಿಕಾದ ನೀರಿನ ವ್ಯವಹಾರಗಳ ಇಲಾಖೆಯು 2007ರಲ್ಲೇ ಎಚ್ಚರಿಕೆಯ ಮಾತುಗಳನ್ನು ಹೇಳಿತ್ತು. ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಆಲೋಚನೆ ನಡೆಸಿ ಇಲಾಖೆ ಹೀಗೆ ಹೇಳಿತ್ತು. ‘ಹೊಸ ಮೂಲಗಳನ್ನು ಹುಡುಕಿಕೊಳ್ಳದ ಜಲಸಂರಕ್ಷಣಾ ಮಾದರಿಯು ನಗರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರಮುಖ ಕಾರಣ’ ಎನ್ನುತ್ತಾರೆ ಮೈಕ್ ಮುಲ್ಲರ್. ಇವರು 1997ರಿಂದ 2005ರವರೆಗೆ ಇಲಾಖೆಯ ನಿರ್ದೇಶಕ ಆಗಿದ್ದವರು.

‘ಮನುಷ್ಯನ ಜೊತೆ ರಾಜಿ ಮಾಡಿಕೊಳ್ಳಲು ನಿಸರ್ಗ ಒಪ್ಪುತ್ತಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಜಲಕ್ಷಾಮ ಎದುರಾಗಲಿದೆ. ಇದಕ್ಕೆ ಸಿದ್ಧರಾಗದಿದ್ದರೆ, ಪೆಟ್ಟು ತಿನ್ನುವುದು ಖಚಿತ’ ಎಂದು ಮುಲ್ಲರ್ ಹೇಳುತ್ತಾರೆ.

ನೀರಿನ ಹೊಸ ಮೂಲಗಳನ್ನು ಕಂಡುಕೊಳ್ಳುವುದು ನಗರದ ಯೋಜನೆಗಳ ಭಾಗ ಆಗಿದ್ದವು. ಆದರೆ ಹೊಸ ಮೂಲಗಳು ಇಷ್ಟು ಬೇಗ ಬೇಕಾಗುತ್ತವೆ ಎಂದು ಅಂದಾಜಿಸಿರಲಿಲ್ಲ ಎನ್ನುವುದು ನಗರದ ಉಪ ಮೇಯರ್ ಇಯಾನ್ ನೀಲ್ಸನ್ ಅವರ ಮಾತು.

ಪ್ರಪಂಚದ ಬೇರೆ ನಗರಗಳೂ ನೀರಿನ ತೀವ್ರ ಕೊರತೆಯನ್ನು ಎದುರಿಸಿವೆ. ಬ್ರೆಜಿಲ್‌ ದೇಶದ ಲಕ್ಷಾಂತರ ಜನ ದೀರ್ಘಾವಧಿಯ ಬರದ ಬೇಗೆಗೆ ಸಿಲುಕಿ, ಪಡಿತರ ವಸ್ತುಗಳನ್ನು ಪಡೆವ ಮಾದರಿಯಲ್ಲೇ ನೀರನ್ನು ಪಡೆದುಕೊಂಡಿದ್ದಾರೆ. ಬ್ರೆಜಿಲ್ ದೇಶದ ರಾಜಧಾನಿ ಬ್ರೆಸಿಲಿಯಾದಲ್ಲಿ ಒಂದು ವರ್ಷದ ಹಿಂದೆ ತುರ್ತು ಸ್ಥಿತಿ ಘೋಷಿಸಲಾಗಿತ್ತು. ಬ್ರೆಜಿಲ್‌ ಎದುರಿಸಿದ ಜಲಕ್ಷಾಮದ ಮೂಲ ಇರುವುದು ಹವಾಮಾನ ಬದಲಾವಣೆ, ಕೃಷಿ ಚಟುವಟಿಕೆಗಳ ತೀವ್ರಗತಿಯ ವಿಸ್ತರಣೆ, ಕೆಟ್ಟ ಸ್ಥಿತಿಯಲ್ಲಿರುವ ಮೂಲಸೌಕರ್ಯಗಳು ಹಾಗೂ ಯೋಜನೆ ರೂಪಿಸುವುದು ಸರಿಯಾಗಿ ಇಲ್ಲದಿರುವುದು ಎಂದು ತಜ್ಞರು ಹೇಳುತ್ತಾರೆ.

ಕೇಪ್‌ಟೌನ್‌ ಎದುರಿಸುತ್ತಿರುವ ನೀರಿನ ಕೊರತೆಯು ರಾಜಕೀಯದ ಒಡಕುಗಳನ್ನು ಇನ್ನಷ್ಟು ತೀವ್ರಗೊಳಿಸಿದೆ. ಏಕೆಂದರೆ, ನೀರಿನ ಪೂರೈಕೆಗೆ ಸಂಬಂಧಿಸಿದ ಮೂಲಸೌಕರ್ಯವನ್ನು ನಿರ್ಮಿಸುವ ಹೆಚ್ಚಿನ ಜವಾಬ್ದಾರಿಗಳು ಇರುವುದು ಅಲ್ಲಿನ ಕೇಂದ್ರ ಸರ್ಕಾರದ ಮೇಲೆ. ಕೇಂದ್ರದಲ್ಲಿ ಸರ್ಕಾರ ರಚಿಸಿರುವುದು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ.

‘ಕೇಂದ್ರ ಸರ್ಕಾರವು ವಿಳಂಬ ಧೋರಣೆ ಅನುಸರಿಸಿದೆ’ ಎನ್ನುತ್ತಾರೆ ಡೇವಿಡ್ ಆಲಿವಿಯರ್. ಇವರು ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಕೇಪ್‌ಟೌನ್‌ ಮತ್ತು ಇತರ ನಗರ ಪಾಲಿಕೆಗಳಿಗೆ ಆಗುವ ನೀರಿನ ಪೂರೈಕೆ ಮೇಲೆ ನಿಯಂತ್ರಣ ಇರುವುದು ಕೇಂದ್ರ ಸರ್ಕಾರಕ್ಕೆ. ಬರಗಾಲದ ಮೊದಲ ಎರಡು ವರ್ಷಗಳಲ್ಲಿ ರೈತರಿಗೆ ಆಗುತ್ತಿದ್ದ ನೀರಿನ ಪೂರೈಕೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ವಿಫಲವಾಯಿತು. ಇದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿತು ಎಂದು ತಜ್ಞರು ಹೇಳುತ್ತಾರೆ.

ಆದರೆ, ಈ ನಗರ ಕೂಡ ತಪ್ಪು ಮಾಡಿತು. ಅಂತರ್ಜಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬದಲು ನಗರವು ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ತಾತ್ಕಾಲಿಕ ಘಟಕಗಳ ಸ್ಥಾಪನೆಗೆ ಹೆಚ್ಚಿನ ಗಮನ ನೀಡಿತು ಎನ್ನುವುದು ಕೇಪ್‌ಟೌನ್‌ ವಿಶ್ವವಿದ್ಯಾಲಯದ ‘ಫ್ಯೂಚರ್‌ ವಾಟರ್‌ ಇನ್‌ಸ್ಟಿಟ್ಯೂಟ್‌’ನಲ್ಲಿ ಜಲತಜ್ಞ ಆಗಿರುವ ಕೆವಿನ್ ವಿಂಟರ್‌ ಅವರ ಆರೋಪ.

‘ಉಪ್ಪು ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಘಟಕಗಳನ್ನು ಸ್ಥಾಪಿಸಲು ಬಹಳ ಕಾಲ ಬೇಕು. ಮೂರರಿಂದ ಐದು ವರ್ಷಗಳು ಇದಕ್ಕೆ ಬೇಕಾಗಬಹುದು. ಇದಕ್ಕೆ ಆಗುವ ವೆಚ್ಚವೂ ಜಾಸ್ತಿ’ ಎಂದು ವಿಂಟರ್ ಹೇಳುತ್ತಾರೆ. ‘ಅದರಲ್ಲೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಈ ಘಟಕಗಳ ನಿರ್ಮಾಣ ವೆಚ್ಚ ಹೆಚ್ಚಾಗುತ್ತದೆ’ ಎಂಬುದು ವಿಂಟರ್ ಅಭಿಮತ. ಸಮಯ ವ್ಯರ್ಥವಾಯಿತು ಎಂಬುದನ್ನು ಉಪಮೇಯರ್ ನೀಲ್ಸನ್‌ ಒಪ್ಪಿಕೊಳ್ಳುತ್ತಾರೆ.

ನೀರಿನ ಬಳಕೆಯನ್ನು ಮಿತಿಗೊಳಿಸುವ ಪ್ರಯತ್ನಗಳನ್ನು ನಗರ ಹೆಚ್ಚಿಸುತ್ತಿದೆ. ‘ಜನರಲ್ಲಿ ಭೀತಿ ಮೂಡಿಸದೆಯೇ, ನೀರಿನ ಬಳಕೆಯ ವಿಚಾರದಲ್ಲಿ ಅವರ ಧೋರಣೆ ಬದಲಾಯಿಸುವ ಅಗತ್ಯದ ಬಗ್ಗೆ ನಮಗೆ ತೀವ್ರವಾದ ಅರಿವು ಇದೆ’ ಎನ್ನುತ್ತಾರೆ ನೀಲ್ಸನ್.

ದಕ್ಷಿಣ ಆಫ್ರಿಕಾದ ಪಶ್ಚಿಮ ಕೇಪ್‌ ಪ್ರಾಂತ್ಯದ ಸರ್ಕಾರದ ಮುಖ್ಯಸ್ಥೆ ಹೆಲನ್ ಜಿಲ್ಲಿ ಅವರು ಕಳೆದ ವಾರ ‘ದಿ ಡೈಲಿ ಮಾವೆರಿಕ್’ ಪತ್ರಿಕೆಗೆ ಒಂದು ಲೇಖನ ಬರೆದಿದ್ದರು. ಕೊಳವೆ ಮೂಲಕ ನೀರಿನ ಪೂರೈಕೆ ಸ್ಥಗಿತಗೊಳಿಸುವುದು ಅನಿವಾರ್ಯ ಎಂದು ಅದರಲ್ಲಿ ಅವರು ಹೇಳಿದ್ದಾರೆ. ಆದರೆ, ‘ಕೊಳವೆ ಮೂಲಕ ನೀರಿನ ಪೂರೈಕೆ ಸ್ಥಗಿತವಾಗುವ ದಿನ, ಅರಾಜಕತೆ ಸೃಷ್ಟಿಯಾಗದಂತೆ ನೋಡಿಕೊಂಡು, ಜನರಿಗೆ ನೀರು ಸಿಗುವಂತೆ ಮಾಡುವುದು ಹೇಗೆ ಎಂಬುದು ಈಗಿರುವ ಪ್ರಶ್ನೆ’ ಎಂದು ಹೇಳಿದ್ದಾರೆ.

(ಪೂರಕ ಮಾಹಿತಿ: ಕೇಪ್‌ಟೌನ್‌ನಿಂದ ಕೈಮನ್ ಡೆ ಗ್ರೀಫ್ ಹಾಗೂ ರಿಯೊ ಡಿ ಜನೈರೊದಿಂದ ಅರ್ನೆಸ್ಟೊ ಲಂಡೊನೊ)

–ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT