ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕೃತ ಅಭ್ಯರ್ಥಿ ಸೋಲು, ಜೆಡಿಎಸ್‌ಗೆ ಮುಖಭಂಗ

Last Updated 10 ಫೆಬ್ರುವರಿ 2018, 7:12 IST
ಅಕ್ಷರ ಗಾತ್ರ

ನಾಗಮಂಗಲ: ತೀವ್ರ ಕುತೂಹಲ ಕೆರಳಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಜೆಡಿಎಸ್‌ ಬಂಡಾಯ ಶಾಸಕ ಎನ್.ಚಲುವರಾಯಸ್ವಾಮಿ ಬಣದ ಮೇಲುಗೈ ಸಾಧಿಸಿದೆ.

ಜೆಡಿಎಸ್‌ ಪಕ್ಷ ತನ್ನ ಪಕ್ಷದ ಸದಸ್ಯರಿಗೆ ವಿಪ್‌ ನೀಡಿದ್ದರೂ, ಪಕ್ಷದ ಅಧಿಕೃತ ಅಭ್ಯರ್ಥಿ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಶಾಸಕ ಚಲುವರಾಯಸ್ವಾಮಿ ಬೆಂಬಲಿಗ, ಹರದನಹಳ್ಳಿ ಕ್ಷೇತ್ರದ ಸದಸ್ಯ ದಾಸೇಗೌಡ ಆಯ್ಕೆಯಾದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣೆ ನಡೆದಿದ್ದು, ತಾಲ್ಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಪಾಂಡವಪುರ ಉಪವಿಭಾಗಾಧಿಕಾರಿ ಯಶೋದಾ ಚುನಾವಣಾಧಿಕಾರಿ ಆಗಿದ್ದರು.

ಬೆಳಿಗ್ಗೆ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ದೇವಲಾಪುರ ಕ್ಷೇತ್ರದ ಎಸ್.ಕೆ.ಹೇಮರಾಜು ಮತ್ತು ಶಾಸಕ ಎನ್. ಚಲುವರಾಯಸ್ವಾಮಿ ಬಣದಿಂದ ಅವರ ಬೆಂಬಲಿಗ ದಾಸೇಗೌಡ ನಾಮಪತ್ರ ಸಲ್ಲಿಸಿದರು. ಎಸ್.ಕೆ.ಹೇಮರಾಜು ಪರವಾಗಿ ಕಾಂಗ್ರೆಸ್‌ ಸದಸ್ಯರಾದ ವಿದ್ಯಾಶ್ರೀ, ಮೈತ್ರಿ ಅವರ ಎರಡು ಮತ್ತು ಜೆಡಿಎಸ್ ಪಕ್ಷದ ರೇಖಾ ಸೇರಿ 4 ಮತಗಳು ಬಿದ್ದವು.

ದಾಸೇಗೌಡ ಅವರ ಪರವಾಗಿ 14 ಮತಗಳು ಬಿದ್ದವು. ಕೈ ಎತ್ತುವ ಮೂಲಕ ಮತದಾನ ನಡೆಯಿತು. ಮತದಾನಕ್ಕೂ ಮೊದಲು ಚುನಾವಣಾಧಿಕಾರಿ ಜೊತೆ ನಾವು ಕಳೆದ ಚುನಾವಣೆಯಲ್ಲಿಯೇ ಪ್ರತ್ಯೇಕ ಆಸನಕ್ಕಾಗಿ ಬೇಡಿಕೆ ಇಟ್ಟಿದ್ದೇವು ಎಂದು ಶಾಸಕರ ಬಣದ ಸದಸ್ಯರು ವಿಷಯ ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಸ್.ಕೆ. ಹೇಮರಾಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಪಕ್ಷ ವಿಪ್ ನೀಡಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಚುನಾವಣಾಧಿಕಾರಿ ಇದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಚುನಾವಣೆ ನಂತರ ಮಾತನಾಡಿದ ನೂತನ ಅಧ್ಯಕ್ಷ ದಾಸೇಗೌಡ ಅವರು ನಮಗೆ ಯಾರೂ ನೀಡಿಲ್ಲ, ನಮಗೆ ಈಗಲೂ ಜೆಡಿಎಸ್ ಅಧ್ಯಕ್ಷ ಕೊಣನೂರು ಹನುಮಂತಯ್ಯ ಅವರೇ ಎಂದು ವಾದಿಸಿದ್ದಲ್ಲದೆ.

‘ಜೆಡಿಎಸ್ ಅಧ್ಯಕ್ಷ ಎನ್ನಲಾದ ಜವರೇಗೌಡ ಯಾರು ಎಂಬುದೇ ನಮಗೆ ಗೊತ್ತಿಲ್ಲ. ನಮ್ಮಗಳ ಮನೆ ಬಾಗಿಲಿಗೆ ಗೂಂಡಾಗಳನ್ನು ಕರೆದೊಯ್ದು ವಿಪ್ ಅನ್ನು ಅಂಟಿಸಿ ಬಂದಿದ್ದಾರೆ. ನಾವು ಅದನ್ನು ನ್ಯಾಯಾಲಯದಲ್ಲಿ ಎದುರಿಸುತ್ತೇವೆ. ನಮ್ಮ ನಾಯಕರು ಅಭಿವೃದ್ಧಿಯ ಹರಿಕಾರ ಶಾಸಕ ಚಲುವರಾಯಸ್ವಾಮಿ. ಅವರು ಎಲ್ಲಿರುತ್ತಾರೋ ನಾವು ಅಲ್ಲಿರುತ್ತೇವೆ’ ಎಂದರು.

ಅವರೊಂದಿಗೆ ಉಪಾಧ್ಯಕ್ಷೆ ಜಯಲಕ್ಷಮ್ಮ, ಸದಸ್ಯರುಗಳಾದ ಆರ್. ಕೃಷ್ಣೇಗೌಡ, ಕೆ.ಎನ್. ನವೀನ್ ಕುಮಾರ್, ಗಿರೀಶ್, ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಮೋಹನ್ ಕುಮಾರ್, ಜಯಕುಮಾರಿ, ರೂಪಾ, ಜಯಲಕ್ಷಮ್ಮ, ರಾಜು, ನೀಲಮ್ಮ , ಭಾರತಿ ಇದ್ದರು.

ಫಲಿತಾಂಶದ ನಂತರ ಶಾಸಕ ಎನ್. ಚಲುವರಾಯಸ್ವಾಮಿ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ತಾಲ್ಲೂಕು ಪಂಚಾಯಿತಿ ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT