ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ‘ಅಂತರ’ ಪ್ರಮುಖ ಲೆಕ್ಕಾಚಾರ

Last Updated 10 ಫೆಬ್ರುವರಿ 2018, 8:38 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ‘ಗುರುಮಠಕಲ್‌’ ಮತಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ‘ಅಂತರ’ ಕುರಿತು ಲೆಕ್ಕಾಚಾರ ಶುರುವಾಗಿದೆ. ಹೋದ ವರ್ಷದ ಚುನಾವಣಾ ಫಲಿತಾಂಶ ನೆನೆಯುವ ಮತದಾರರು, ಈ ಬಾರಿಯ ಫಲಿತಾಂಶಕ್ಕೂ ಅತ್ಯಂತ ಕುತೂಹಲ ಮೂಡಿಸಿದೆ ಎನ್ನುತ್ತಾರೆ. ಹೋದ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಬಾಬುರಾವ ಚಿಂಚನಸೂರ ಕಡಿಮೆ ಅಂತರದಿಂದ ಗೆಲುವು ಪಡೆದಿದ್ದಾರೆ. ಸಮೀಪದ ಸ್ಪರ್ಧಿಯಾಗಿ ಜೆಡಿಎಸ್‌ನ ನಾಗನಗೌಡ ಕಂದಕೂರ 34,401 ಸಾವಿರ ಮತಗಳನ್ನು ಪಡೆದರೆ, ಬಾಬುರಾವ ಚಿಂಚನಸೂರ ಒಟ್ಟು 36,051 ಮತ ಪಡೆದಿದ್ದರು. ಕೇವಲ 1,651 ಮತಗಳ ಅಂತರದಿಂದ ಜೆಡಿಎಸ್ ಪಕ್ಷ ಕಾಂಗ್ರೆಸ್‌ ಎದುರು ಹಿನ್ನಡೆ ಅನುಭವಿಸಿತ್ತು. ಕೆಜೆಪಿಯ ವೆಂಕಟರಡ್ಡಿ ಮುದ್ನಾಳ 32,362 ಸಾವಿರ ಮತಗಳನ್ನು ಪಡೆದು ಹುಬ್ಬೇರುವಂತೆ ಮಾಡಿದ್ದರು. ಹಾಗಾಗಿ, ಈ ಬಾರಿಯ ಚುನಾವಣಾ ಫಲಿತಾಂಶ ಮತಕ್ಷೇತ್ರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ.

ಜೆಡಿಎಸ್‌ನ ನಾಗನಗೌಡ ಕಂದಕೂರು ಮತ್ತೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಮನೆಮನೆ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ಉಳಿದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವುದರ ಜತೆಗೆ ಮತ ಪ್ರಚಾರ ಕೂಡ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯ ಕೆಜೆಪಿ ಅಭ್ಯರ್ಥಿ ವೆಂಟಕರಡ್ಡಿ ಮುದ್ನಾಳ ಬಿಜೆಪಿಯ ಕಾಯಂ ಅಭ್ಯರ್ಥಿ ಎಂಬುದಾಗಿ ಹೇಳಲಾಗುತ್ತಿದೆ. ಹೋದ ಚುನಾವಣೆಯಲ್ಲೂ ಇದೇ ಮೂವರು ಅಭ್ಯರ್ಥಿಗಳ ಮಧ್ಯೆ ನಡೆದ ಸ್ಪರ್ಧೆಯಲ್ಲಿ ಫಲಿತಾಂಶ ಉಸಿರು ಬಿಗಿಹಿಡಿಯುವಂತೆ ಮಾಡಿತ್ತು. ಹಾಗಾಗಿ, ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶದ ‘ಅಂತರ’ ಪ್ರಮುಖವಾಗಿ ಚರ್ಚೆಯಾಗುತ್ತಿದೆ.

ಬಿಜೆಪಿಯಲ್ಲಿ ಹೊಸ ಆಕಾಂಕ್ಷಿಗಳು: ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಕಬ್ಬಲಿಗ ಸಮುದಾಯದ ಸಾಯಿಬಣ್ಣ ಬೋರಬಂಡಾ, ರೆಡ್ಡಿ ಲಿಂಗಾಯತ ಸಮುದಾಯದ ನಾಗರತ್ನಾ ಕುಪ್ಪಿ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿತರಾಗಿದ್ದಾರೆ. ‘ಹಿಂದುಳಿದ ಕಬ್ಬಲಿಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಮುದಾಯದ ನನಗೆ ಟಿಕೆಟ್ ಕೊಡಿ’ ಎಂಬುದಾಗಿ ಸಾಯಿಬಣ್ಣ ಬೋರಬಂಡಾ ಬೇಡಿಕೆ ಇಟ್ಟಿದ್ದಾರೆ. ‘ಮಹಿಳೆಯರನ್ನು ಕಡೆಗಣಿಸಲಾಗಿದೆ. ಗುರುಮಠಕಲ್‌ ಮತಕ್ಷೇತ್ರದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಿದರೆ ಬಿಜೆಪಿಗೆ ಗೆಲುವು ಖಚಿತ’ ಎಂಬುದಾಗಿ ನಾಗರತ್ನಾ ಕುಪ್ಪಿ ಒತ್ತಾಯಿಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರ ವಿಶ್ವಾಸ ಗಳಿಸಿರುವ ಹಿರಿಯ ಮುಖಂಡ ವೆಂಕಟರಡ್ಡಿ ಮುದ್ನಾಳ ಅವರಿಗೆ ಟಿಕೆಟ್ ಕಾಯಂ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.

ಗೆಲುವಿಗಾಗಿ ಪಾದಯಾತ್ರೆ: ಎರಡು ಬಾರಿ ಸೋತಿರುವ ಜೆಡಿಎಸ್‌ನ ನಾಗನಗೌಡ ಕಂದಕೂರು ಈ ಬಾರಿಯೂ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಅದಕ್ಕಾಗಿ, ಅವರ ಪುತ್ರ ಶರಣಗೌಡ ಕಂದಕೂರು ಕ್ಷೇತ್ರದಲ್ಲಿ 18 ದಿನಗಳ ಕಾಲ ಪಾದಯಾತ್ರೆ ನಡೆಸಿ ಜನರನ್ನು ಸಂಘಟಿಸಿದ್ದಾರೆ.

‘ಜೆಡಿಎಸ್‌ಗೆ ಯುವ ಮತದಾರರಿಂದ ಬೆಂಬಲ ವ್ಯಕ್ತವಾಗಿದೆ. ಗುರುಮಠಕಲ್‌ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿ ಯುವಕರು ಇದ್ದಾರೆ. ಈ ಬಾರಿ ಮತದಾರರ ಪಟ್ಟಿಗೆ ವಿಶೇಷ ಆಸಕ್ತಿ ವಹಿಸಿ ಪಕ್ಷದಿಂದ 5,200 ಯುವ ಮತದಾರರನ್ನು ನೋಂದಣಿ ಮಾಡಿಸಲಾಗಿದೆ’ ಎಂದು ಶರಣಗೌಡ ಕಂದಕೂರ ಹೇಳುತ್ತಾರೆ.

ಕುಗ್ಗದ ಖರ್ಗೆ ವರ್ಚಸ್ಸು!

ಎಂಟು ಬಾರಿ ಗುರುಮಠಕಲ್‌ ಕ್ಷೇತ್ರವನ್ನು ಪ್ರತಿನಿಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷೇತ್ರಬಿಟ್ಟು 10 ವರ್ಷ ಕಳೆದರೂ ಅವರ ವರ್ಚಸ್ಸು ಮಾತ್ರ ಕಡಿಮೆಯಾಗಿಲ್ಲ. ಖರ್ಗೆ ಬೆಂಬಲಿಗರು, ಹಿಂಬಾಲಕರು ಈಗಲೂ ಖರ್ಗೆ ಅವರ ನಿರ್ಧಾರಕ್ಕೆ ಬದ್ಧರಾಗಿ ಅವರು ಸೂಚಿಸಿದ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ. ಖರ್ಗೆ ಅವರ ವರ್ಚಸ್ಸು ಬಾಬುರಾವ ಚಿಂಚನಸೂರ ಅವರಿಗೆ ವರದಾನವಾಗಲಿದೆ ಎಂಬುದಾಗಿ ಕಾಂಗ್ರೆಸ್‌ ಮುಖಂಡರು ಅಭಿಪ್ರಾಯಪಡುತ್ತಾರೆ.

‘ಸ್ಥಳೀಯರಿಗೆ ಆದ್ಯತೆ ನೀಡಲಿ’

‘48 ವರ್ಷದ ರಾಜಕೀಯ ಇತಿಹಾಸದಲ್ಲಿ ಮತಕ್ಷೇತ್ರದಲ್ಲಿ ಹೊರಗಿನವರಿಗೆ ಆದ್ಯತೆ ನೀಡಲಾಗಿದೆ. ಸುಮಾರು 75 ಸಾವಿರ ಕಬ್ಬಲಿಗ ಮತದಾರರು ಕ್ಷೇತ್ರದಲ್ಲಿದ್ದಾರೆ. ಆದರೆ, ಯಾವ ಪಕ್ಷಗಳೂ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಈಗಿನ ಬಾಬುರಾವ ಚಿಂಚನಸೂರ ಕೂಡ ಈ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರಲ್ಲ. ಚುನಾವಣೆಯ ನಂತರ ಗೆದ್ದವರನ್ನು ಕಾಣಬೇಕು ಎಂದರೆ ಕಲಬುರ್ಗಿ ಇಲ್ಲವೇ ಬೆಂಗಳೂರಿಗೆ ಹುಡುಕಿಕೊಂಡು ಹೋಗಬೇಕು. ಯಾವುದೇ ಪಕ್ಷ ಇರಲಿ, ಈ ಕ್ಷೇತ್ರದಲ್ಲಿ ನೆಲೆಸಿರುವ ನಾಯಕರಿಗೆ ಟಿಕೆಟ್ ನೀಡಬೇಕು. ಅವರು ಸುಲಭವಾಗಿ ಜನರಿಗೆ ಸಿಗುವಂತಿರಬೇಕು’ ಎಂದು ಗುರುಮಠಕಲ್‌ ಮತಕ್ಷೇತ್ರದ ಶಾಂತಪ್ಪ ಪವಾರ, ಸಿದ್ಧಲಿಂಗಪ್ಪ ಕೊಂಕಲ್ ಹೇಳುತ್ತಾರೆ.

ಗುರುಮಠಕಲ್‌ ಮತಕ್ಷೇತ್ರದ ವಿವರ

2,35,314 ಮತಕ್ಷೇತ್ರದ ಒಟ್ಟು ಮತದಾರರು

1,17,534 ಒಟ್ಟು ಪುರಷ ಮತದಾರರು

1,17,756 ಒಟ್ಟು ಮಹಿಳಾ ಮತದಾರರು

24 ಇತರೆ ಮತದಾರರು

253 ಒಟ್ಟು ಮತಗಟ್ಟೆಗಳು

30 ಹೊಸ ಮತಗಟ್ಟೆಗಳು

5,274 ಹೊಸ ಮತದಾರರ ಸೇರ್ಪಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT