ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ಸ್ವಾಗತಕ್ಕೆ ಸಿದ್ಧಗೊಂಡ ಜಿಲ್ಲೆ

Last Updated 10 ಫೆಬ್ರುವರಿ 2018, 10:15 IST
ಅಕ್ಷರ ಗಾತ್ರ

ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆಗಮನಕ್ಕೆ ನಗರದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ನಗರದ ಸಾರ್ವಜನಿಕ ಮೈದಾನವನ್ನು ಪೂರ್ಣ ಪ್ರಮಾಣದಲ್ಲಿ ಸಮಾವೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 60 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಅಕ್ಬರ್‌ ಪಾಷಾ ತಿಳಿಸಿದ್ದಾರೆ.

ನಗರದಾದ್ಯಂತ ರಾಹುಲ್‌ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ ಫಲಕಗಳು, ಪತಾಕೆಗಳು ರಾರಾಜಿಸುತ್ತಿವೆ. ರಾಹುಲ್‌ ಭಾವಚಿತ್ರವಿರುವ ಬೆಲೂನುಗಳು ಎತ್ತರದಲ್ಲಿ ಹಾರಾಡುತ್ತಿವೆ. ಎತ್ತರದ ವೇದಿಕೆ ಮುಂಭಾಗ ಸಾವಿರಾರು ಕುರ್ಚಿಗಳನ್ನು ಹಾಕಲಾಗಿದೆ. ವಿಶೇಷ ಭದ್ರತಾ ತಂಡ ರಾಹುಲ್‌ ಯಾತ್ರೆ ಹೋಗುವ ಮಾರ್ಗದುದ್ದಕ್ಕೂ (ಹುಲಿಗಿಯಿಂದ - ಕುಕನೂರು - ಯಲಬುರ್ಗಾ - ಕುಷ್ಟಗಿ- ಕನಕಗಿರಿ- ಗಂಗಾವತಿ - ಕಾರಟಗಿ) ಪರಿಶೀಲನೆ ನಡೆಸಿದೆ.

'ರಾಜೀವ್‌ ನಹಿ ಸೋನಿಯಾಹಿ ನಹಿ ಭಾರತ್‌ ಕಾ ಬೇಟಾ ರಾಹುಲ್‌ ಹೈ'... ಎಂಬ ಹಾಡನ್ನು ಧ್ವನಿವರ್ಧಕದ ಮೂಲಕ ಮೊಳಗಿಸಿ ಪ್ರಚಾರ ನಡೆಸಲಾಗುತ್ತವೆ. ಸೋನಿಯಾ ಗಾಂಧಿ, ಸಿದ್ದರಾಮಯ್ಯ ಅವರನ್ನು ಸ್ತುತಿಸುವ ಭಜನೆ ಮಾದರಿಯ ಹಾಡುಗಳೂ ಪ್ರಚಾರ ಗೀತೆಗಳಲ್ಲಿವೆ.

ಭಾಗವಹಿಸುವವರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ವೀಕ್ಷಕ ಕೆ.ಸಿ. ವೇಣುಗೋಪಾಲ್‌ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್‌, ಎಚ್‌.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ, ಹಿರಿಯ ಮುಖಂಡ ವೀರಪ್ಪ ಮೊಯಿಲಿ ಇತರರು.

ಪೊಲೀಸ್‌ ಭದ್ರತೆ: ಸುಮಾರು 1,400ಕ್ಕೂ ಹೆಚ್ಚು ಸಿಬ್ಬಂದಿಉ, 50 ಸಬ್‌ಇನ್ಸ್‌ಪೆಕ್ಟರ್‌ಗಳು, 33 ಇನ್ಸ್‌ಪೆಕ್ಟರ್‌ಗಳು, 9 ಡಿವೈಎಸ್‌ಪಿಗಳು ಒಬ್ಬರು ಹೆಚ್ಚುವರಿ ಎಸ್‌ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕೆಎಸ್ಆರ್‌ಪಿ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಹುಲ್‌ ಜಿಲ್ಲೆ ಪ್ರವೇಶಿಸುತ್ತಿದ್ದಂತೆಯೇ ಹುಬ್ಬಳ್ಳಿ ಕಡೆಗೆ ಹೋಗುವ ವಾಹನಗಳನ್ನು ಅಭಯ್‌ ಸಾಲ್ವೆಂಟ್‌ ಕಂಪೆನಿ ಬಳಿಯ ಬೈಪಾಸ್‌ ರಸ್ತೆಯ ಮೂಲಕ ಹಾದು ಹೋಗಲು ಅನುವು ಮಾಡಿಕೊಡಲಾಗುವುದು. ಕಾರ್ಯಕ್ರಮ ಮುಗಿಯುವವರೆಗೆ ಈ ಬದಲಾವಣೆ ಇರುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಡಿವೈಎಸ್‌ಪಿ ಎಸ್‌.ಎಂ. ಸಂದಿಗವಾಡ ಅವರು ತಿಳಿಸಿದರು.

ರಾಯರಡ್ಡಿ ಹೇಳಿದ್ದು...

ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಪ್ರಚಾರ ಮಾಡಿದ ಪರಿಣಾಮ ಅಲ್ಲಿ ನಮ್ಮ ಸ್ಥಾನಗಳ ಸಂಖ್ಯೆ ಹೆಚ್ಚಿದೆ. ಜನರಿಗೆ ಸತ್ಯದ ಅರಿವಾಗಿದೆ. ಜನರು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಆರಿಸಿದ್ದಕ್ಕೆ ಪಶ್ಚಾತ್ತಾಪಪಡುತ್ತಿದ್ದಾರೆ. ಅತ್ಯಂತ ಕೆಟ್ಟ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತಂದಿದೆ. ಬೆಲೆ ಏರಿಕೆ, ನೋಟು ನಿಷೇಧದಂಥ ಸಮಸ್ಯೆಗಳು ಜನರಿಗೆ ಬೇಸರ ತಂದಿದೆ. ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತು ರಾಹುಲ್‌ ಗಾಂಧಿ ಅವರು ಫೆ. 10ರ ಬಹಿರಂಗ ಸಮಾವೇಶದಲ್ಲಿ ವಿಶ್ಲೇಷಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಶೇ 10ರ ಕಮಿಷನ್‌ ಸರ್ಕಾರ ಎಂದು ಪ್ರಧಾನಿ ಹೇಳಿರುವುದು ಖಂಡನೀಯ. ಅವರು ಅದನ್ನು ಸಾಬೀತುಪಡಿಸಲು ಸಾಧ್ಯವೇ? ಬೇಕಿದ್ದರೆ ಅದಕ್ಕೊಂದು ತನಿಖಾ ಸಮಿತಿ ರಚಿಸಲಿ ಎಂದು ಸವಾಲು ಹಾಕಿದರು.

ಮುಂದಿನ ತಿಂಗಳೇ ಎಂಜಿನಿಯರಿಂಗ್ ಕಾಲೇಜು ಉದ್ಘಾಟನೆ!

ಕಾಮಗಾರಿ ಪೂರ್ಣಗೊಳಿಸದೇ ಕುಕನೂರಿನ ಪರಿವೀಕ್ಷಣಾ ಮಂದಿರವನ್ನು ಉದ್ಘಾಟಿಸಿದ್ದೇಕೆ ಎಂಬ ಪ್ರಶ್ನೆಗೆ ರೇಗಿದ ಬಸವರಾಜ ರಾಯರಡ್ಡಿ ಮುಂದಿನ ತಿಂಗಳೇ ತಳಕಲ್‌ ಎಂಜಿನಿಯರಿಂಗ್‌ ಕಾಲೇಜನ್ನು ಉದ್ಘಾಟಿಸುತ್ತೇನೆ. ಅದರ ಕಾಮಗಾರಿ ಪೂರ್ಣಗೊಳ್ಳಲು ಮತ್ತೆ ಒಂದು ವರ್ಷ ಬೇಕು ಏನೀಗ? ಎಂದು ಮರು ಪ್ರಶ್ನಿಸಿದರು.

ರಾಹುಲ್‌ ಗಾಂಧಿಗೆ ಅಮೆರಿಕದ ಹಾಸಿಗೆ ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅಮೆರಿಕದ್ದಲ್ಲ. ಬೆಂಗಳೂರಿನಲ್ಲೇ ಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಿದರು. ಪ್ರವಾಸಿ ಮಂದಿರಗಳ ದುರಸ್ತಿ, ಅದಕ್ಕಾಗುವ ವೆಚ್ಚಗಳ ಬಗ್ಗೆ ಪ್ರಶ್ನಿಸಿದಾಗ 'ಇವೆಲ್ಲಾ ಪ್ರಶ್ನೆಗಳೇ ಅಲ್ಲ. ಹಾಗೇನಾದರೂ ಇದ್ದರೆ ದೂರು ಕೊಡಿ. ತನಿಖೆ ನಡೆಸೋಣ' ಎಂದರು.

ರಾಹುಲ್‌ ಕಾರ್ಯಕ್ರಮ

ಮಧ್ಯಾಹ್ನ 3.45 ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ

ಸಂಜೆ 4.15 ಜಿಲ್ಲಾಡಳಿತ ಭವನದ ಬಳಿ ಸ್ವಾಗತ, ಗವಿಮಠಕ್ಕೆ ಭೇಟಿ

ಸಂಜೆ 5ಕ್ಕೆ ಕೊಪ್ಪಳ ಸಾರ್ವಜನಿಕ ಮೈದಾನದಲ್ಲಿ ಬಹಿರಂಗ ಸಮಾವೇಶ

5.45ಕ್ಕೆ ಕುಕನೂರಿನತ್ತ ಪ್ರಯಾಣ

6.30ರಿಂದ 8 ಕುಕನೂರಿನಲ್ಲಿ ಬಹಿರಂಗ ಸಭೆ, ಪರಿವೀಕ್ಷಣಾ ಮಂದಿರದಲ್ಲಿ ವಾಸ್ತವ್ಯ

ಫೆ. 11 ಬೆಳಿಗ್ಗೆ 10ಕ್ಕೆ ಯಲಬುರ್ಗಾದಲ್ಲಿ ರೋಡ್‌ಷೋ

ಮುಂದೆ ಕುಷ್ಟಗಿ, ಕನಕಗಿರಿ, ಗಂಗಾವತಿಯಲ್ಲಿ ರೋಡ್‌ ಷೋ

ಸಂಜೆ 4ಕ್ಕೆ ಕಾರಟಗಿಯಲ್ಲಿ ಬಹಿರಂಗ ಸಭೆ, ಬಳಿಕ ಸಿಂಧನೂರಿಗೆ ಪ್ರಯಾಣ

* *

ಕೇಂದ್ರ ಸರ್ಕಾರದ ಎಲ್ಲ ವೈಫಲ್ಯಗಳ ಕುರಿತು ರಾಹುಲ್‌ ಗಾಂಧಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ.
ಬಸವರಾಜ ರಾಯರಡ್ಡಿ, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT